ಭಾರತದ ಫಾರೆಕ್ಸ್ ಮೀಸಲು ನಿಧಿಯಲ್ಲಿ ಭಾರೀ ಇಳಿಕೆ; 600 ಬಿಲಿಯನ್ ಡಾಲರ್ ಮಟ್ಟಕ್ಕಿಂತ ಕಡಿಮೆ
India forex reserves on August 18 Week: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ ಭಾರೀ ಕುಸಿತ ಕಂಡಿದ್ದು, ಆಗಸ್ಟ್ 18ರಂದು ಅಂತ್ಯಗೊಂಡ ವಾರದಲ್ಲಿ 594.888 ಬಿಲಿಯನ್ ಡಾಲರ್ಗೆ ಇಳಿದಿದೆ. 2021ರ ಅಕ್ಟೋಬರ್ನಲ್ಲಿ ಫಾರೆಕ್ಸ್ ರಿಸರ್ವ್ಸ್ 645 ಬಿಲಿಯನ್ ಡಾಲರ್ನಷ್ಟು ಇತ್ತು. ಅದಾದ ಬಳಿಕ ಫಾರೆಕ್ಸ್ ಮೀಸಲು ನಿಧಿ ಬಹುತೇಕ ಸತತವಾಗಿ ಕುಸಿಯುತ್ತಾ ಬಂದಿದೆ.
ನವದೆಹಲಿ, ಆಗಸ್ಟ್ 27: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ (Forex Reserves) ಆಗಸ್ಟ್ 18ರಂದು ಅಂತ್ಯಗೊಂಡ ವಾರದಲ್ಲಿ 7.273 ಬಿಲಿಯನ್ ಡಾಲರ್ನಷ್ಟು ಭಾರೀ ಪ್ರಮಾಣದಲ್ಲಿ ಕಡಿಮೆ ಆಗಿದೆ. ಅಂದರೆ 60,000 ಕೋಟಿ ರೂನಷ್ಟು ಬೃಹತ್ ಪ್ರಮಾಣದಲ್ಲಿ ಫಾರೆಕ್ಸ್ ರಿಸರ್ವ್ಸ್ ಕುಸಿತ ಕಂಡಿದೆ. ಇದರೊಂದಿಗೆ ಭಾರತದ ಒಟ್ಟಾರೆ ಫಾರೆಕ್ಸ್ ರಿಸರ್ವ್ಸ್ 600 ಬಿಲಿಯನ್ ಡಾಲರ್ ಮಟ್ಟಕ್ಕಿಂತ ಕಡಿಮೆಗೆ ಬಂದಿದೆ. ಈ 7.273 ಬಿಲಿಯನ್ ಡಾಲರ್ ಇಳಿಕೆಯೊಂದಿಗೆ ಭಾರತದ ಫಾರೆಕ್ಸ್ ರಿಸರ್ವ್ಸ್ 594.888 ಬಿಲಿಯನ್ ಡಾಲರ್ಗೆ (ಸುಮಾರು 49.11 ಲಕ್ಷ ಕೋಟಿ ರೂ) ಬಂದು ನಿಂತಿದೆ.
ಫಾರೆಕ್ಸ್ ರಿಸರ್ವ್ಸ್ ಪೈಕಿ ಪ್ರಮುಖ ಅಂಶವಾಗಿರುವ ವಿದೇಶೀ ಕರೆನ್ಸಿ ಆಸ್ತಿಯೇ ಅತಿಹೆಚ್ಚು ಕಡಿಮೆ ಆಗಿರುವುದು. ಫಾರೀನ್ ಕರೆನ್ಸಿ ಆಸ್ತಿಯೇ 6.613 ಬಿಲಿಯನ್ ಡಾಲರ್ನಷ್ಟು ಕಡಿಮೆ ಆಗಿದೆ. ಆರ್ಬಿಐ ಬಿಡುಗಡೆ ಮಾಡಿದ ವಾರದ ಅಂಕಿ ಅಂಶಗಳ ವರದಿಯಲ್ಲಿ ಇದನ್ನು ಬಹಿರಂಗಪಡಿಸಲಾಗಿದೆ.
ಡಾಲರ್ ಬಲವೃದ್ಧಿಯು ಫಾರೀನ್ ಕರೆನ್ಸಿ ಆಸ್ತಿ ಮೌಲ್ಯ ಇಳಿಕೆಗೆ ಕಾರಣವಾಗಿದೆ. ಭಾರತದ ವಿದೇಶೀ ವಿನಿಮಯ ಮೀಸಲು ನಿಧಿಯಲ್ಲಿ ಒಳಗೊಳ್ಳಲಾಗಿರುವ ಡಾಲರ್ಯೇತರ ಕರೆನ್ಸಿಗಳಾದ ಯೂರೋ, ಪೌಂಡ್ ಮತ್ತು ಯೆನ್ಗಳ ಮೌಲ್ಯದ ಮೇಲೆ ಫಾರೀನ್ ಕರೆನ್ಸಿ ಆಸ್ತಿಮೌಲ್ಯ ಅವಲಂಬಿತವಾಗಿರುತ್ತದೆ.
ಇದನ್ನೂ ಓದಿ: ಮಾಮೂಲಿ ಅಕ್ಕಿ ಜೊತೆಗೆ ಬಾಸ್ಮತಿ ಅಕ್ಕಿ ರಫ್ತಿಗೂ ಕೇಂದ್ರದಿಂದ ನಿರ್ಬಂಧ; ಇಲ್ಲಿದೆ ಡೀಟೇಲ್ಸ್
ಇನ್ನು, ಫಾರೆಕ್ಸ್ ರಿಸರ್ವ್ಸ್ನ ಇನ್ನೊಂದು ಭಾಗವಾಗಿರುವ ಚಿನ್ನದ ಮೀಸಲು ಕೂಡ 515 ಮಿಲಿಯನ್ ಡಾಲರ್ನಷ್ಟು ಕಡಿಮೆ ಆಗಿದೆ. ಸದ್ಯ ಗೋಲ್ಡ್ ರಿಸರ್ವ್ಸ್ ಮೊತ್ತ 43.824 ಬಿಲಿಯನ್ ಡಾಲರ್ ಇದೆ. ಎಸ್ಡಿಆರ್ಗಳು 119 ಮಿಲಿಯನ್ ಡಾಲರ್ ಕಡಿಮೆ ಆಗಿ 18.205 ಬಿಲಿಯನ್ ಡಾಲರ್ ಮಟ್ಟ ಮುಟ್ಟಿದೆ. ಹಾಗೆಯೇ, ಐಎಂಎಫ್ ಜೊತೆಗಿನ ಮೀಸಲು ಸ್ಥಾನವು 25 ಬಿಲಿಯನ್ ಡಾಲರ್ನಷ್ಟು ಕಡಿಮೆ ಆಗಿ 5.072 ಬಿಲಿಯನ್ ಡಾಲರ್ ತಲುಪಿದೆ.
ಆಗಸ್ಟ್ 18ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ಮೀಸಲು ನಿಧಿ ವಿವರ
ಒಟ್ಟು ಫಾರೆಕ್ಸ್ ರಿಸರ್ವ್ಸ್ ಮೊತ್ತ: 594.888 ಬಿಲಿಯನ್ ಡಾಲರ್
- ಫಾರೀನ್ ಕರೆನ್ಸಿ ಆಸ್ತಿ: 527.786 ಬಿಲಿಯನ್ ಡಾಲರ್
- ಗೋಲ್ಡ್ ರಿಸರ್ವ್ಸ್: 43.824 ಬಿಲಿಯನ್ ಡಾಲರ್
- ಎಸ್ಡಿಆರ್: 18.205 ಬಿಲಿಯನ್ ಡಾಲರ್
- ಐಎಂಫ್ ಜೊತೆಗಿನ ರಿಸರ್ವ್ ಪೊಸಿಶನ್: 5.072 ಬಿಲಿಯನ್ ಡಾಲರ್.
ಇದನ್ನೂ ಓದಿ: ಗಾಬರಿ ಬೇಡ, ಎಐ ಟೆಕ್ನಾಲಜಿ ನಮ್ಮ ಉದ್ಯೋಗ ಕಸಿಯಲ್ಲ; ಹೆಚ್ಚು ಕೆಲಸ ಸೃಷ್ಟಿಸುತ್ತೆ: ಟಾಟಾ ಸನ್ಸ್ ಛೇರ್ಮನ್ ಅನಿಸಿಕೆ
ಭಾರತದ ಫಾರೆಕ್ಸ್ ಮೀಸಲು ನಿಧಿ ಕಳೆದ ವರ್ಷ ಉಚ್ಛ್ರಾಯ ಮಟ್ಟ ಮುಟ್ಟಿತ್ತು. 2021ರ ಅಕ್ಟೋಬರ್ನಲ್ಲಿ ಫಾರೆಕ್ಸ್ ರಿಸರ್ವಸ್ ಮೊತ್ತ 645 ಬಿಲಿಯನ್ ಡಾಲರ್ಗೆ ಏರಿತ್ತು. ಅದು ಸದ್ಯ ಸಾರ್ವಕಾಲಿಕ ಗರಿಷ್ಠ ಮೊತ್ತ ಎನಿಸಿದೆ. ಅದಾದ ಬಳಿಕ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯುವುದನ್ನು ತಡೆಯಲು ಆರ್ಬಿಐ ಕೈಗೊಂಡ ಕ್ರಮಗಳ ಪರಿಣಾಮವಾಗಿ ಫಾರೆಕ್ಸ್ ನಿಧಿ ಸಂಕುಚಿತಗೊಳ್ಳುತ್ತಾ ಬಂದಿದೆ. ಆದರೂ, ವಿಶ್ವದಲ್ಲಿ ಅತಿಹೆಚ್ಚು ಹೆಚ್ಚು ಫಾರೆಕ್ಸ್ ರಿಸರ್ವ್ಸ್ ಇರುವ ದೇಶಗಳಲ್ಲಿ ಭಾರತವೂ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ