ಮುಂಬೈ: ಕಳೆದ ಹಲವು ದಿನಗಳಿಂದ ತೀವ್ರ ಕುಸಿತ ಕಾಣುತ್ತಿದ್ದ ರೂಪಾಯಿ ಮೌಲ್ಯ (Rupee Value) ಗುರುವಾರ ಬೆಳಿಗ್ಗೆ ಉತ್ತಮ ಚೇತರಿಕೆ ಕಂಡಿದ್ದು ಭರವಸೆ ಮೂಡಿಸಿದೆ. ಬೆಳಿಗ್ಗೆ 10 ಗಂಟೆ ವೇಳೆಗೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ (US dollar) ಎದುರು ರೂಪಾಯಿ 67 ಪೈಸೆ ವೃದ್ಧಿಯಾಗಿ 82.14ರಲ್ಲಿ ವಹಿವಾಟು ನಡೆಸಿತು. ಮಂಗಳವಾರದ ವಹಿವಾಟಿನ ಕೊನೆಯಲ್ಲಿ ರೂಪಾಯಿ ಮೌಲ್ಯ 7 ಪೈಸೆ ವೃದ್ಧಿಯಾಗಿ 82.81 ಆಗಿತ್ತು. ಬುಧವಾರ ಬಲಿಪಾಡ್ಯಮಿ ನಿಮಿತ್ತ ವಿದೇಶಿ ವಿನಿಮಯ ಮಾರುಕಟ್ಟೆ ಕಾರ್ಯಚರಣೆ ಮಾಡಿರಲಿಲ್ಲ.
ಡಾಲರ್ ಸೂಚ್ಯಂಕ 110ಕ್ಕಿಂತ ಕೆಳಮಟ್ಟಕ್ಕೆ ಕುಸಿದಾಗ ರೂಪಾಯಿ ಬಲಗೊಳ್ಳಲಾರಂಭಿಸಿತು ಎಂದು ಫಾರೆಕ್ಸ್ ಟ್ರೆಷರಿ ಅಡೈಸರ್ಸ್ ಮುಖ್ಯಸ್ಥ ಅನಿಲ್ ಕುಮಾರ್ ಬನ್ಸಾಲಿ ತಿಳಿಸಿದರು.
ಗುರುವಾರ ಸಂಜೆ 3 ಗಂಟೆ ವೇಳೆಗೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ 31 ಪೈಸೆ ವೃದ್ಧಿಯಾಗುವ ಮೂಲಕ ರೂಪಾಯಿ ಮೌಲ್ಯ 82.50 ತಲುಪಿತು.
‘ಅಮೆರಿಕದಲ್ಲಿ ಹಣದುಬ್ಬರ ಮತ್ತಷ್ಟು ಏರಿಕೆಯಾಗಿರುವುದು, ರೆಪೊ ದರ ಹೆಚ್ಚಳದಲ್ಲಿ ವಿಳಂಬ ನೀತಿ ಅನುಸರಿಸಿರುವುದು ಡಾಲರ್ ಸೂಚ್ಯಂಕ ಕುಸಿತಕ್ಕೆ ಕಾರಣವಿರಬಹುದು’ ಎಂದು ಬನ್ಸಾಲಿ ಹೇಳಿದ್ದಾರೆ. ಡಾಲರ್ ಸೂಚ್ಯಂಕವು ವಿಶ್ವದ ಇತರ ಪ್ರಮುಖ ಆರು ಕರೆನ್ಸಿಗಳ ವಿರುದ್ಧ ಡಾಲರ್ ಮೌಲ್ಯವನ್ನು ಅಳೆಹಯುವ ಮಾಪನವಾಗಿದೆ. ಸೂಚ್ಯಂಕವು ಸದ್ಯ ಶೇಕಡಾ 0.06 ವೃದ್ಧಿಯಾಗಿ 109.76ರಲ್ಲಿ ವಹಿವಾಟು ನಡೆಸುತ್ತಿದೆ.
ಇದನ್ನೂ ಓದಿ: Rupee Value: ಮತ್ತೆ ಪಾತಾಳಕ್ಕೆ ಕುಸಿದ ರೂಪಾಯಿ, ಡಾಲರ್ ವಿರುದ್ಧ 83.06ಕ್ಕೆ ಇಳಿಕೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 90 ಡಾಲರ್ ಇದ್ದುದು ಇದೀಗ 94 ಡಾಲರ್ಗೆ ಏರಿಕೆಯಾಗಿದೆ. ಇದೂ ಸಹ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ಭಾರತದ ರೂಪಾಯಿ ಬಲಗೊಳ್ಳಲು ಕಾರಣವೆನ್ನಲಾಗಿದೆ. ತೈಲ ಕಂಪನಿಗಳು ಮತ್ತು ಆಮದುದಾರರು ಈ ಅವಕಾಶವನ್ನು ಬಳಸಿಕೊಂಡು ಡಾಲರ್ ಅನ್ನು ಕಡಿಮೆ ದರಕ್ಕೆ ಖರೀದಿ ಮಾಡಬಹುದು ಎಂದು ಅವರು ಬನ್ಸಾಲಿ ಹೇಳಿದ್ದಾರೆ.
ಬ್ರೆಂಟ್ ಕಚ್ಚಾ ತೈಲದ ದರ ಕೂಡ ಪ್ರತಿ ಬ್ಯಾರೆಲ್ಗೆ ಶೇಕಡಾ 0.26ರಷ್ಟು ಹೆಚ್ಚಾಗಿ 95.94 ಡಾಲರ್ ಆಗಿದೆ.
ಕೆಲವು ದಿನಗಳ ಹಿಂದಷ್ಟೇ ಪಾತಾಳದತ್ತ ಕುಸಿಯುತ್ತಿದ್ದ ರೂಪಾಯಿ ಮೌಲ್ಯ ಒಂದು ಹಂತದಲ್ಲಿ 83.06ರ ವರೆಗೂ ಕುಸಿತ ಕಂಡಿತ್ತು. ಸಾರ್ವಕಾಲಿಕ ಗರಿಷ್ಠ ಕುಸಿತ ದಾಖಲಿಸಿದ್ದ ರೂಪಾಯಿ ಮುಂದಿನ ಕೆಲವು ದಿನಗಳಲ್ಲಿ 83.50ರ ವರೆಗೂ ಕುಸಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದರು. ಆದರೆ, ಇತ್ತೀಚಿನ ಟ್ರೆಂಡ್ನಲ್ಲಿ ತುಸು ಬಲವರ್ಧನೆಯಾಗುವ ಮೂಲಕ ರೂಪಾಯಿ ಮೌಲ್ಯವು ಇನ್ನಷ್ಟು ಚೇತರಿಕೆ ಕಾಣುವ ಭರವಸೆ ಮೂಡಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:46 am, Thu, 27 October 22