New ITR Form: ಐಟಿ ರಿಟರ್ನ್ ಸಲ್ಲಿಕೆ ಇನ್ನಷ್ಟು ಸರಳ; ಒಂದೇ ಅರ್ಜಿ ನಮೂನೆಗೆ ಸಿಬಿಡಿಟಿ ಪ್ರಸ್ತಾವನೆ
Common ITR Form; ಎಲ್ಲ ತೆರಿಗೆದಾರರಿಗೂ ಒಂದೇ ರೀತಿಯ ‘ಸಾಮಾನ್ಯ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಅರ್ಜಿ’ಯನ್ನು ಪರಿಚಯಿಸುವ ಬಗ್ಗೆ ಹಣಕಾಸು ಸಚಿವಾಲಯ ಪ್ರಸ್ತಾವನೆ ಸಲ್ಲಿಸಿದೆ.
ನವದೆಹಲಿ: ಎಲ್ಲ ತೆರಿಗೆದಾರರಿಗೂ ಒಂದೇ ರೀತಿಯ ‘ಸಾಮಾನ್ಯ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆ ಅರ್ಜಿ’ಯನ್ನು ಪರಿಚಯಿಸುವ ಬಗ್ಗೆ ಹಣಕಾಸು ಸಚಿವಾಲಯ (Finance Ministry) ಪ್ರಸ್ತಾವನೆ ಸಲ್ಲಿಸಿದೆ. ಪ್ರಸ್ತುತ ವಿವಿಧ ರೀತಿಯ ತೆರಿಗೆ ಪಾವತಿದಾರರು ಐಟಿಆರ್ ಸಲ್ಲಿಸಲು 7 ನಮೂನೆಯ ಅರ್ಜಿಗಳು ಲಭ್ಯವಿವೆ. ಹಣಕಾಸು ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (CBDT) ಮಂಗಳವಾರ ‘ಸಾಮಾನ್ಯ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಅರ್ಜಿ’ಯ ಕರಡು ಪ್ರತಿಯನ್ನು ಬಿಡುಗಡೆ ಮಾಡಿದೆ. ಈ ವಿಚಾರವಾಗಿ ಉದ್ದಿಮೆದಾರರಿಂದ ಡಿಸೆಂಬರ್ 15ರ ಒಳಗಾಗಿ ಪ್ರತಿಕ್ರಿಯೆ ಕೋರಲಾಗಿದೆ.
ಈ ಹೊಸ ಅರ್ಜಿ ನಮೂನೆಯಲ್ಲಿ ಲಾಭರಹಿತ ಸಂಘಟನೆಗಳು ಮತ್ತು ಟ್ರಸ್ಟ್ಗಳನ್ನು ಹೊರತುಪಡಿಸಿ ಇತರ ಎಲ್ಲ ತೆರಿಗೆದಾರರು ಐಟಿಆರ್ ಸಲ್ಲಿಸಬಹುದಾಗಿದೆ.
ಪ್ರಸ್ತುತ ಐಟಿಆರ್ ಅರ್ಜಿ 1 (Sahaj) ಮತ್ತು ಐಟಿಆರ್ ಅರ್ಜಿ 4 (Sugam) ನಮೂನೆಗಳು ಸರಳ ಅರ್ಜಿ ನಮೂನೆಗಳಾಗಿದ್ದು ಹೆಚ್ಚಿನ ಸಣ್ಣ ಮತ್ತು ಮಧ್ಯಮ ಗಾತ್ರದ ತೆರಿಗೆದಾರರು ಈ ಅರ್ಜಿಗಳಲ್ಲೇ ವಿವರ ಸಲ್ಲಿಸುತ್ತಿದ್ದಾರೆ. 50 ಲಕ್ಷ ರೂ.ವರೆಗೆ ವೇತನ ಆದಾಯ, ಮನೆ ಆಸ್ತಿ ಅಥವಾ ಇತರ ಮೂಲಗಳಿಂದ ಆದಾಯ ಇರುವ ವ್ಯಕ್ತಿಗಳು ಸಹಜ್ ಅರ್ಜಿ ನಮೂನೆಯಲ್ಲಿ ಐಟಿಆರ್ ಸಲ್ಲಿಸುತ್ತಿದ್ದಾರೆ. ‘ಐಟಿಆರ್ ಅರ್ಜಿ 4’ರಲ್ಲಿ ವೈಯಕ್ತಿಕ, ಹಿಂದೂ ಅವಿಭಕ್ತ ಕುಟುಂಬಗಳು ಮತ್ತು ಉದ್ದಿಮೆ ಹಾಗೂ ವೃತ್ತಿಯಿಂದ 50 ಲಕ್ಷ ರೂ.ವರೆಗಿನ ಆದಾಯ ಇರುವವರು ತೆರಿಗೆ ಮಾಹಿತಿ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: ITR Filing: ದಂಡವಿಲ್ಲದೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬಹುದು; ನೀವು ತಿಳಿದಿರಲೇಬೇಕಾದ ಅಂಶಗಳು ಇಲ್ಲಿವೆ
ಗೃಹ ಆಸ್ತಿಯಿಂದ ಆದಾಯ ಗಳಿಸುವವರು ಐಟಿಆರ್-2ರಲ್ಲಿ, ಉದ್ದಿಮೆಯಿಂದ ಆದಾಯ ಗಳಿಸುವವರು ಐಟಿಆರ್-3, ಎಲ್ಎಲ್ಪಿಗಳು ಹಾಗೂ ಉದ್ದಿಮೆಗಳಿಂದ ಆದಾಯ ಗಳಿಸುವವರು ಐಟಿಆರ್-5 ಮತ್ತು 6ರಲ್ಲಿ ವಿವರ ಸಲ್ಲಿಸುತ್ತಿದ್ದಾರೆ. ಐಟಿಆರ್-7ರಲ್ಲಿ ಟ್ರಸ್ಟ್ಗಳು ತೆರಿಗೆ ವಿವರ ಸಲ್ಲಿಸುತ್ತವೆ.
ನೂತನ ಅರ್ಜಿ ನಮೂನೆಯನ್ನು ಪರಿಚಯಿಸಿದ ಬಳಿಕವೂ ಐಟಿಆರ್-1 ಮತ್ತು 4 ಮುಂದುವರಿಯಲಿವೆ ಎಂದು ಸಿಬಿಡಿಟಿ ತಿಳಿಸಿದೆ. ಆದರೆ ವೈಯಕ್ತಿಕ ಆದಾಯಕ್ಕೆ ಸಾಮಾನ್ಯ ಅರ್ಜಿ ನಮೂನೆ ಬಳಸಿ ತೆರಿಗೆ ವಿವರ ಸಲ್ಲಿಸಬಹುದಾಗಿದೆ ಎಂದು ಸಿಬಿಡಿಟಿ ಹೇಳಿದೆ.
ತೆರಿಗೆ ವಿವರ ಸಲ್ಲಿಕೆ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ವೈಯಕ್ತಿಕ ಆದಾಯ, ಉದ್ದಿಮೆಯೇತರ ಆದಾಯ ಗಳಿಸವವರಿಗೆ ಐಟಿಆರ್ ಸಲ್ಲಿಕೆ ಪ್ರಕ್ರಿಯೆ ಇನ್ನಷ್ಟು ಸುಲಭವಾಗಲಿದೆ ಎಂದು ಸಿಬಿಡಿಟಿ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ