ಸಾವಿರ ಕೋಟಿ ರೂ ಕಾಂಪೆನ್ಸೇಶನ್ ಕೊಟ್ಟಿಲ್ಲ; ಇಲಾನ್ ಮಸ್ಕ್ ವಿರುದ್ಧ ಮಾಜಿ ಟ್ವಿಟ್ಟರ್ ಎಕ್ಸಿಕ್ಯೂಟಿವ್​​ಗಳಿಂದ ಮೊಕದ್ದಮೆ

|

Updated on: Mar 05, 2024 | 2:53 PM

ಪರಾಗ್ ಅಗರ್ವಾಲ್ ಸೇರಿದಂತೆ ಟ್ವಿಟ್ಟರ್​ನ ಮಾಜಿ ಟಾಪ್ ಎಕ್ಸಿಕ್ಯೂಟಿವ್​ಗಳು ಇಲಾನ್ ಮಸ್ಕ್ ವಿರುದ್ಧ ಕೋರ್ಟ್​ನಲ್ಲಿ ದಾವೆ ಹೂಡಿದ್ದಾರೆ. ಕೆಲಸದಿಂದ ತೆಗೆದಾಗ ನೀಡಬೇಕಿದ್ದ ಪರಿಹಾರವನ್ನು ಕೊಟ್ಟಿಲ್ಲ. ಒಂದು ಸಾವಿರ ಕೋಟಿ ರೂಗೂ ಹೆಚ್ಚು ಪರಿಹಾರ ಕೊಟ್ಟಿಲ್ಲ ಎಂದು ಮಾಜಿ ಸಿಇಒ, ಮಾಜಿ ಸಿಎಫ್​ಒ, ಮಾಜಿ ಸಿಎಲ್​ಒ ಮೊದಲಾದವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಸಾವಿರ ಕೋಟಿ ರೂ ಕಾಂಪೆನ್ಸೇಶನ್ ಕೊಟ್ಟಿಲ್ಲ; ಇಲಾನ್ ಮಸ್ಕ್ ವಿರುದ್ಧ ಮಾಜಿ ಟ್ವಿಟ್ಟರ್ ಎಕ್ಸಿಕ್ಯೂಟಿವ್​​ಗಳಿಂದ ಮೊಕದ್ದಮೆ
ಪರಾಗ್ ಅಗರ್ವಾಲ್
Follow us on

ಸ್ಯಾನ್ ಫ್ರಾನ್ಸಿಸ್ಕೋ, ಮಾರ್ಚ್ 5: ಟ್ವಿಟ್ಟರ್​ನ ಮಾಜಿ ಸಿಇಒ ಸೇರಿದಂತೆ ಹಿಂದಿನ ಟಾಪ್ ಎಕ್ಸಿಕ್ಯೂಟಿವ್​ಗಳು ಈಗ ಇಲಾನ್ ಮಸ್ಕ್ ವಿರುದ್ಧ ದಾವೆ (lawsuit) ಹೂಡಿದ್ದಾರೆ. ಕೆಲಸದಿಂದ ತೆಗೆದಾಗ ನೀಡಬೇಕಿದ್ದ ಪರಿಹಾರ ಪ್ಯಾಕೇಜ್​ಗಳನ್ನು ತಮಗೆ ಕೊಡದೇ ವಂಚಿಸಿದ್ದಾರೆ ಎಂದು ಇವರು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಫೆಡರಲ್ ಕೋರ್ಟ್​ನಲ್ಲಿ ಕಾನೂನು ಮೊಕದ್ದಮೆ ಹಾಕಿದ್ದಾರೆ. ಟ್ವಿಟ್ಟರ್​ನ ಮಾಜಿ ಸಿಇಒ ಪರಾಗ್ ಅಗರ್ವಾಲ್, ಮಾಜಿ ಸಿಎಫ್​ಒ ನೆಡ್ ಸೆಗಲ್, ಚೀಫ್ ಲೀಗಲ್ ಆಫೀಸರ್ ವಿಜಯಾ ಗದ್ದೆ, ಮಾಜಿ ಜನರಲ್ ಕೌನ್ಸಲ್ ಶಾನ್ ಎಡ್ಗೆಟ್ (Sean Edgett) ಅವರೆಲ್ಲರೂ ಸೇರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇವರೆಲ್ಲರಿಗೂ ಒಟ್ಟು ಸೇರಿ 128 ಬಿಲಿಯನ್ ಡಾಲರ್, ಅಂದರೆ ಸುಮಾರು 1,060 ಕೋಟಿ ರೂನಷ್ಟು ಪರಿಹಾರ ಕೊಡಲಾಗಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

2022ರ ಅಕ್ಟೋಬರ್ ತಿಂಗಳಲ್ಲಿ ಇಲಾನ್ ಮಸ್ಕ್ ಅವರು ಟ್ವಿಟ್ಟರ್ ಅನ್ನು ಖರೀದಿ ಮಾಡಿದ್ದರು. ಅವರು ಮಾಡಿದ ಮೊದಲ ಕ್ರಮಗಳಲ್ಲಿ ಅಂದಿನ ಸಿಇಒ ಪರಾಗ್ ಅಗರ್ವಾಲ್ ಸೇರಿದಂತೆ ಕೆಲ ಟಾಪ್ ಎಕ್ಸಿಕ್ಯೂಟಿವ್​ಗಳನ್ನು ಕೆಲಸದಿಂದ ತೆಗೆದುಹಾಕಿದ್ದೂ ಇದೆ.

ಟ್ವಿಟ್ಟರ್ ಅನ್ನು ಖರೀದಿಸುವುದಾಗಿ ಹೇಳಿ, ಕೊನೆಗೆ ಹಿಂದಕ್ಕೆ ಸರಿಯಲು ಇಲಾನ್ ಮಸ್ಕ್ ಪ್ರಯತ್ನಿಸಿದ್ದರು. ಆಗ ಸಿಇಒ ಪರಾಗ್ ಅಗರ್ವಾಲ್ ಮೊದಲಾದವರು ಸೇರಿ ಇಲಾನ್ ಮಸ್ಕ್ ವಿರುದ್ಧ ಕಾನೂನು ಮೊಕದ್ದಮೆ ಹೂಡಿದ್ದರು. ಬಳಿಕ ಮಸ್ಕ್ ಟ್ವಿಟ್ಟರ್ ಖರೀದಿಸಿದರು. ಹೀಗಾಗಿ, ಟ್ವಿಟ್ಟರ್ ಪ್ರವೇಶಿಸುತ್ತಲೇ, ಈ ಎಕ್ಸಿಕ್ಯೂಟಿವ್​ಗಳನ್ನು ಕೆಲಸದಿಂದ ತೆಗೆದ್ದು ಮಸ್ಕ್ ಅವರ ಮೊದಲ ಕ್ರಮಗಳಲ್ಲಿ ಒಂದಾಗಿತ್ತು.

ಇದನ್ನೂ ಓದಿ: ಇಲಾನ್ ಮಸ್ಕ್ ಈಗ ವಿಶ್ವದ ಅತಿಶ್ರೀಮಂತ ಅಲ್ಲ, ಮೂರನೇ ಸ್ಥಾನಕ್ಕೆ ತಳ್ಳಲ್ಪಡುವ ಕಷ್ಟದಲ್ಲಿ ಟೆಸ್ಲಾ ಮುಖ್ಯಸ್ಥ

ಎಕ್ಸಿಕ್ಯೂಟಿವ್​ಗಳನ್ನು ಕೆಲಸದಿಂದ ತೆಗೆದರೆ ಒಂದು ವರ್ಷದ ಸಂಬಳವನ್ನು ಪರಿಹಾರವಾಗಿ ಕೊಡಬೇಕಾಗುತ್ತದೆ. ಸಾವಿರಾರು ಷೇರುಗಳನ್ನು ನೀಡಬೇಕಾಗುತ್ತದೆ. ಇವ್ಯಾವುದನ್ನೂ ಮಸ್ಕ್ ನೀಡಿಲ್ಲ. ಈ ರೀತಿಯಾಗಿ ಒಟ್ಟು 128 ಮಿಲಿಯನ್ ಡಾಲರ್ ಮೊತ್ತದ ಹಣವನ್ನು ಅವರು ನೀಡಬೇಕಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಈ ಟಾಪ್ ಎಕ್ಸಿಕ್ಯೂಟಿವ್ಸ್ ಮಾತ್ರವಲ್ಲ, ಇಲಾನ್ ಮಸ್ಕ್ ಟ್ವಿಟ್ಟರ್ ಪಡೆಯುತ್ತಲೇ ಶೇ. 60ಕ್ಕಿಂತಲೂ ಹೆಚ್ಚು ಉದ್ಯೋಗಿಗಳನ್ನು ಲೇ ಆಫ್ ಮಾಡಿದ್ದರು. ಆ ಸಂಬಂಧವೂ ಟ್ವಿಟ್ಟರ್ ಮೇಲೆ ಕೋರ್ಟ್​ನಲ್ಲಿ ಪ್ರಕರಣ ದಾಖಲಾಗಿತ್ತು. 500 ಮಿಲಿಯನ್ ಡಾಲರ್​ಗೂ ಹೆಚ್ಚು ಮೊತ್ತದ ಪರಿಹಾರ ಹಣ ಕೊಡಬೇಕು ಎಂದು ಎರಡು ಮೊಕದ್ದಮೆಗಳನ್ನು ಹಾಕಲಾಗಿತ್ತು. ಅದಾದ ಬಳಿಕ ಆರು ಮಂದಿ ಹಿರಿಯ ಅಧಿಕಾರಿಗಳೂ ಕೂಡ ಒಂದು ಮೊಕದ್ದಮೆ ಹಾಕಿದ್ದರು.

ಇದನ್ನೂ ಓದಿ: ಗೂಗಲ್​ನಿಂದ 41 ಕೋಟಿ ರೂ ಬಹುಮಾನ ಗೆಲ್ಲಿರಿ; ಆದರೆ ದಯವಿಟ್ಟು ಕ್ವಾಂಟಂ ಕಂಪ್ಯೂಟರ್​ಗಳ ನೈಜ ಉಪಯೋಗ ಕಂಡುಹಿಡಿಯಿರಿ

ಇಷ್ಟು ಮಾತ್ರವಲ್ಲ, ಟ್ವಿಟ್ಟರ್​ನ ಮಾಜಿ ಪಬ್ಲಿಕ್ ರಿಲೇಶನ್ ಸಂಸ್ಥೆ, ಭೂಮಾಲೀಕರು, ವೆಂಡರ್​ಗಳು, ಕನ್ಸಲ್ಟೆಂಟ್​ಗಳು ಕೂಡ ತಮಗೆ ಬರಬೇಕಿದ್ದ ಹಣ ಬಂದಿಲ್ಲ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದು ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ