AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World’s Richest Person: ಇಲಾನ್ ಮಸ್ಕ್ ಈಗ ವಿಶ್ವದ ಅತಿಶ್ರೀಮಂತ ಅಲ್ಲ, ಮೂರನೇ ಸ್ಥಾನಕ್ಕೆ ತಳ್ಳಲ್ಪಡುವ ಕಷ್ಟದಲ್ಲಿ ಟೆಸ್ಲಾ ಮುಖ್ಯಸ್ಥ

Bloomberg and forbes Billionaires' Lists: ಇಲಾನ್ ಮಸ್ಕ್ ವಿಶ್ವದ ಅತಿಶ್ರೀಮಂತನೆಂಬ ಪಟ್ಟ ಕಳೆದುಕೊಂಡಿದ್ದಾರೆ. ಬ್ಲೂಮ್​ಬರ್ಗ್ ಮತ್ತು ಫೋರ್ಬ್ಸ್ ಎರಡೂ ಪಟ್ಟಿಗಳಲ್ಲಿ ಮಸ್ಕ್ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್​ನಲ್ಲಿ ಜೆಫ್ ಬೇಜೋಸ್ ಅಗ್ರಸ್ಥಾನ ಪಡೆದಿದ್ದಾರೆ. ಫೋರ್ಬ್ಸ್ ಬಿಲಿಯನೇರ್ಸ್ ಪಟ್ಟಿಯಲ್ಲಿ ಫ್ರೆಂಚ್ ಉದ್ಯಮಿ ಬರ್ನಾರ್ಡ್ ಆರ್ನಾಲ್ಟ್ ಮೊದಲ ಸ್ಥಾನ ಪಡೆದಿದ್ದಾರೆ. ಈ ಎರಡೂ ಪಟ್ಟಿಗಳಲ್ಲಿ ಮಸ್ಕ್ ಮೂರನೇ ಸ್ಥಾನಕ್ಕೆ ಕುಸಿಯುವ ಭೀತಿಯಲ್ಲಿದ್ದಾರೆ.

World's Richest Person: ಇಲಾನ್ ಮಸ್ಕ್ ಈಗ ವಿಶ್ವದ ಅತಿಶ್ರೀಮಂತ ಅಲ್ಲ, ಮೂರನೇ ಸ್ಥಾನಕ್ಕೆ ತಳ್ಳಲ್ಪಡುವ ಕಷ್ಟದಲ್ಲಿ ಟೆಸ್ಲಾ ಮುಖ್ಯಸ್ಥ
ಇಲಾನ್ ಮಸ್ಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 05, 2024 | 11:23 AM

Share

2024 ಮಾರ್ಚ್ 5: ಸ್ಪೇಸ್ ಎಕ್ಸ್, ಟೆಸ್ಲಾ ಮೊದಲಾ ಸಂಸ್ಥೆಗಳ ಮುಖ್ಯಸ್ಥ ಇಲಾನ್ ಮಸ್ಕ್ (Elon Musk) ಅವರ ದೀರ್ಘಕಾಲದ ವಿಶ್ವ ಶ್ರೀಮಂತನೆಂಬ ಪಟ್ಟ ಕೈ ತಪ್ಪಿಹೋಗಿದೆ. ಬ್ಲೂಮ್​​ಬರ್ಗ್ ಮತ್ತು ಫೋರ್ಬ್ಸ್ (Forbes Billioners List) ಎರಡೂ ಪಟ್ಟಿಗಳಲ್ಲಿ ಇಲಾನ್ ಮಸ್ಕ್ ನಂಬರ್ ಒನ್ ಸ್ಥಾನ ಕಳೆದುಕೊಂಡಿದ್ದಾರೆ. ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್​ನಲ್ಲಿ (Bloomber Billionaires Index) ಇಲಾನ್ ಮಸ್ಕ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಟೆಸ್ಲಾ ಷೇರುಗಳು ಕಳೆದ ಎರಡು ದಿನಗಳಿಂದ ಭಾರೀ ಕುಸಿತ ಕಂಡಿರುವುದರಿಂದ ಮಸ್ಕ್ ಅವರ ಷೇರುಸಂಪತ್ತು ಬಹಳಷ್ಟು ಕರಗಿದೆ. ಅದೇ ವೇಳೆ, ಅಮೇಜಾನ್ ಸಂಸ್ಥಾಪಕ ಜೆಫ್ ಬೇಜೋಸ್ ಅವರು ವಿಶ್ವದ ಅತಿಶ್ರೀಮಂತನ ಸ್ಥಾನ ಗಿಟ್ಟಿಸಿದ್ದಾರೆ. ಮಸ್ಕ್ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಫ್ರೆಂಚ್ ಉದ್ಯಮಿ ಬರ್ನಾರ್ಡ್ ಆರ್ನಾಲ್ಟ್ ಮೂರನೇ ಸ್ಥಾನದಲ್ಲಿ ಬಹಳ ಸಮೀಪ ಇದ್ದಾರೆ. ಮಸ್ಕ್ ಮತ್ತು ಆರ್ನಾಲ್ಟ್ ಮಧ್ಯೆ ಒಂದು ಬಿಲಿಯನ್ ಡಾಲರ್​ಷ್ಟು ಮಾತ್ರವೇ ವ್ಯತ್ಯಾಸ ಇರುವುದು. ಇವತ್ತೂ ಕೂಡ ಟೆಸ್ಲಾ ಷೇರು ಕುಸಿತ ಹೆಚ್ಚಾಗಿ ಹೋದರೆ ಮಸ್ಕ್ ಮೂರನೇ ಸ್ಥಾನಕ್ಕೆ ತಳ್ಳಲ್ಪಡುವುದು ನಿಶ್ಚಿತ ಎಂಬಂತಿದೆ.

ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್​ನಲ್ಲಿ ಜೆಫ್ ಬೇಜೋಸ್ ಷೇರುಸಂಪತ್ತು 200 ಬಿಲಿಯನ್ ಡಾಲರ್ ಇದೆ. ಇಲಾನ್ ಮಸ್ಕ್ ಮತ್ತು ಬರ್ನಾರ್ಡ್ ಆರ್ನಾಲ್ಟ್ ಅವರ ಷೇರುಸಂಪತ್ತು ಕ್ರಮವಾಗಿ 198 ಮತ್ತು 197 ಬಿಲಿಯನ್ ಡಾಲರ್ ಇದೆ. ಈ ಪಟ್ಟಿಯಲ್ಲಿ ಭಾರತದ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ 115 ಮತ್ತು 104 ಬಿಲಿಯನ್ ಡಾಲರ್​ನೊಂದಿಗೆ ಕ್ರಮವಾಗಿ 11 ಮತ್ತು 12ನೇ ಸ್ಥಾನದಲ್ಲಿದ್ದಾರೆ.

ಫೋರ್ಬ್ಸ್ ಪಟ್ಟಿಯಲ್ಲಿ ಆರ್ನಾಲ್ಟ್ ನಂಬರ್ ಒನ್

ಬ್ಲೂಮ್​ಬರ್ಗ್ ಬಿಲಿಯನೇರ್ ಇಂಡೆಕ್ಸ್ ಪ್ರಕಾರ ಜೆಫ್ ಬೇಜೋಸ್ ವಿಶ್ವದ ಅತಿಶ್ರೀಮಂತನಾದರೆ, ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಬರ್ನಾರ್ಡ್ ಆರ್ನಾಲ್ಟ್ ಮತ್ತು ಕುಟುಂಬ ಅಗ್ರಸ್ಥಾನದಲ್ಲಿದೆ. ಇಲ್ಲಿ ಬ್ಲೂಮ್​ಬರ್ಗ್​ನವರು ಆರ್ನಾಲ್ಟ್ ಅವರ ವೈಯಕ್ತಿಕ ಸಂಪತ್ತನ್ನು ಪರಿಗಣಿಸಿದರೆ, ಫೋರ್ಬ್ಸ್​ನಲ್ಲಿ ಆರ್ನಾಲ್ಟ್ ಮತ್ತು ಅವರ ಕುಟುಂಬದ ಇತರ ಸದಸ್ಯರ ಒಟ್ಟಾರೆ ಸಂಪತ್ತನ್ನು ಪರಿಗಣಿಸಿದಂತಿದೆ. ಫ್ರಾನ್ಸ್ ದೇಶದ ಈ ಉದ್ಯಮಿಯ ಒಟ್ಟು ಷೇರುಸಂಪತ್ತು 228 ಬಿಲಿಯನ್ ಡಾಲರ್.

ಇದನ್ನೂ ಓದಿ: ಟಾಟಾ ಮೋಟಾರ್ಸ್ ವಿಭಜನೆ; ಕಮರ್ಷಿಯಲ್ ವಾಹನಗಳ ವ್ಯವಹಾರವೇ ಪ್ರತ್ಯೇಕ; ಷೇರುದಾರರಿಗೆ ಎರಡರಲ್ಲೂ ಪಾಲು

ಇಲಾನ್ ಮಸ್ಕ್ 202 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತಿನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಬ್ಲೂಮ್​ಬರ್ಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಜೆಫ್ ಬೇಜೋಸ್ ಫೋರ್ಬ್ಸ್ ಪಟ್ಟಿಯಲ್ಲಿ 198 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.

ಈ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಟಾಪ್ 10ನಲ್ಲಿದ್ದಾರೆ. 116 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತಿನೊಂದಿಗೆ ವಿಶ್ವದ 9ನೇ ಅತಿಶ್ರೀಮಂತ ಎನಿಸಿದ್ದಾರೆ. ಗೌತಮ್ ಅದಾನಿ ಷೇರು ಸಂಪತ್ತು 85 ಬಿಲಿಯನ್ ಡಾಲರ್​ಗಿಂತ ಕಡಿಮೆ ತೋರಿಸಲಾಗಿದೆ. ಇವರು ವಿಶ್ವದ 17ನೇ ಅತಿಶ್ರೀಮಂತ ಎನಿಸಿದ್ದಾರೆ.

ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್

  1. ಜೆಫ್ ಬೇಜೋಸ್: 200 ಬಿಲಿಯನ್ ಡಾಲರ್
  2. ಇಲಾನ್ ಮಸ್ಕ್: 198 ಬಿಲಿಯನ್ ಡಾಲರ್
  3. ಬರ್ನಾರ್ಡ್ ಆರ್ನಾಲ್ಟ್: 197 ಬಿಲಿಯನ್ ಡಾಲರ್
  4. ಮಾರ್ಕ್ ಜುಕರ್ಬರ್ಗ್: 179 ಬಿಲಿಯನ್ ಡಾಲರ್
  5. ಬಿಲ್ ಗೇಟ್ಸ್: 150 ಬಿಲಿಯನ್ ಡಾಲರ್
  6. ಸ್ಟೀವ್ ಬಾಲ್ಮರ್: 143 ಬಿಲಿಯನ್ ಡಾಲರ್
  7. ವಾರನ್ ಬಫೆಟ್: 133 ಬಿಲಿಯನ್ ಡಾಲರ್
  8. ಲ್ಯಾರಿ ಎಲಿಸನ್: 129 ಬಿಲಿಯನ್ ಡಾಲರ್
  9. ಲ್ಯಾರಿ ಪೇಜ್: 122 ಬಿಲಿಯನ್ ಡಾಲರ್
  10. ಸೆರ್ಗೇ ಬ್ರಿನ್: 116 ಬಿಲಿಯನ್ ಡಾಲರ್
  11. ಮುಕೇಶ್ ಅಂಬಾನಿ: 115 ಬಿಲಿಯನ್ ಡಾಲರ್

ಇದನ್ನೂ ಓದಿ: ಉದ್ಯೋಗಿಗಳಿಗೆ ಸಂಬಳ ಕೊಡಲು ಹಣ ಇಲ್ಲ; ಫಂಡಿಂಗ್ ಪಡೆಯಲೂ ಬಿಡುತ್ತಿಲ್ಲ: ಹೂಡಿಕೆದಾರರ ಮೇಲೆ ಬೈಜುಸ್ ಮಾಲೀಕರ ಅಸಮಾಧಾನ

ಫೋರ್ಬ್ಸ್ ಬಿಲಿಯನೇರ್ಸ್ ಪಟ್ಟಿ

  • ಬರ್ನಾರ್ಡ್ ಆರ್ನಾಲ್ಟ್ ಮತ್ತು ಕುಟುಂಬ: 228.8 ಬಿಲಿಯನ್ ಡಾಲರ್
  • ಇಲಾನ್ ಮಸ್ಕ್: 202.3 ಬಿಲಿಯನ್ ಡಾಲರ್
  • ಜೆಫ್ ಬೇಜೋಸ್: 198.5 ಬಿಲಿಯನ್ ಡಾಲರ್
  • ಮಾರ್ಕ್ ಜುಕರ್ಬರ್ಗ್: 174.7 ಬಿಲಿಯನ್ ಡಾಲರ್
  • ಲ್ಯಾರಿ ಎಲಿಸನ್: 141.8 ಬಿಲಿಯನ್ ಡಾಲರ್
  • ವಾರನ್ ಬಫೆಟ್: 132.9 ಬಿಲಿಯನ್ ಡಾಲರ್
  • ಬಿಲ್ ಗೇಟ್ಸ್: 128.3 ಬಿಲಿಯನ್ ಡಾಲರ್
  • ಸ್ಟೀವ್ ಬಾಲ್ಮರ್: 123.1 ಬಿಲಿಯನ್ ಡಾಲರ್
  • ಮುಕೇಶ್ ಅಂಬಾನಿ: 116.6 ಬಿಲಿಯನ್ ಡಾಲರ್
  • ಲ್ಯಾರಿ ಪೇಜ್: 112.1 ಬಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ