ಭೂತಾನ್ ರಾಜ ಮತ್ತು ಪ್ರಧಾನಿ ಭೇಟಿ ಮಾಡಿದ ಗೌತಮ್ ಅದಾನಿ; 570 ಮೆವ್ಯಾ ಗ್ರೀನ್ ಹೈಡ್ರೋ ಯೋಜನೆಗೆ ಸಹಿ
Gautam Adani meets Bhutan King and PM: ಗೌತಮ್ ಅದಾನಿ ಅವರು ಭೂತಾನ್ನಲ್ಲಿ 570 ಮೆಗಾವ್ಯಾಟ್ ಸಾಮರ್ಥ್ಯದ ಗ್ರೀನ್ ಹೈಡ್ರೋ ವಿದ್ಯುತ್ ಯೋಜನೆಯ ಗುತ್ತಿಗೆ ಪಡೆದಿದ್ದಾರೆ. ಭೂತಾನ್ಗೆ ಭೇಟಿ ನೀಡಿರುವ ಅವರು ಮೊನ್ನೆ ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಭೂತಾನ್ನಲ್ಲಿ ಅವರು ಅಲ್ಲಿನ ದೊರೆ ಮತ್ತು ಪ್ರಧಾನಿಯವರನ್ನು ಭೇಟಿ ಮಾಡಿದ್ದಾರೆ.
ನವದೆಹಲಿ, ಜೂನ್ 18: ಭಾರತದ ಎರಡನೇ ಅತಿಶ್ರೀಮಂತ ಉದ್ಯಮಿ ಗೌತಮ್ ಅದಾನಿ ಅವರು ಭೂತಾನ್ ದೆಶದಲ್ಲಿ 570 ಮೆಗಾವ್ಯಾಟ್ ಗ್ರೀನ್ ಹೈಡ್ರೋ ಪವರ್ ಸ್ಟೇಷನ್ ನಿರ್ಮಿಸುವ ಯೋಜನೆ ಗಿಟ್ಟಿಸಿದ್ದಾರೆ. ಭೂತಾನ್ ದೇಶಕ್ಕೆ ಭೇಟಿ ನೀಡಿ ಅಲ್ಲಿನ ಪ್ರಧಾನಿ ಮತ್ತು ರಾಜರನ್ನು ಭೇಟಿಯಾಗಿರುವ ಅದಾನಿ, ಜಲವಿದ್ಯುತ್ ಘಟನ ಸ್ಥಾಪಿಸುವ ಯೋಜನೆಗೆ ಸಹಿಹಾಕಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಭೂತಾನ್ ರಾಜಧಾನಿ ನಗರಿ ಥಿಂಫುದಲ್ಲಿ ದೊರೆ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್ಚುಕ್ (Bhutan King Jigme Khesar Namgyel Wangchuck) ಮತ್ತು ಪ್ರಧಾನಿ ದಶೋ ಶೆರಿಂಗ್ ಟೋಬ್ಗೇ (Dasho Tshering Tobgay) ಅವರನ್ನು ಮೊನ್ನೆ ಭಾನುವಾರ ಅದಾನಿ ಭೇಟಿಯಾಗಿ ಮಾತನಾಡಿದ ಬಳಿಕ ಯೋಜನೆಗೆ ಸಹಿ ಹಾಕಿದ ವಿಚಾರ ಪ್ರಕಟಿಸಿದ್ದಾರೆ.
‘ಭೂತಾನ್ ಮಹಾರಾಜರಾದ ಜಿಗ್ಮೆ ಖೇಸರ್ ನಾಮ್ಗ್ಯೇಲ್ ವಾಂಗ್ಚುಕ್ ಅವರನ್ನು ಭೇಟಿ ಮಾಡಲಾಯಿತು. ಗೆಲೆಫು ಮೈಂಡ್ಫುಲ್ ಸಿಟಿಯನ್ನು ಪರಿಸರಸ್ನೇಹಿಯಾಗಿ ನಿರ್ಮಿಸುವ ಅವರ ದೃಷ್ಟಿಕೋನದಿಂದ ಸ್ಫೂರ್ತಿ ಸಿಕ್ಕಿದೆ. ಇಂಥ ಪರಿವರ್ತನಾತ್ಮಕವಾದ ಯೋಜನೆಗಳಲ್ಲಿ ಸಹಭಾಗಿಯಾಗಲು ಖುಷಿಯಾಗುತ್ತಿದೆ,’ ಎಂದು ಗೌತಮ್ ಅದಾನಿ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಬರೆದಿದ್ದಾರೆ.
Honoured to meet His Majesty King Jigme Khesar Namgyel Wangchuck of Bhutan. Inspired by his vision for Bhutan and the ambitious ecofriendly masterplan for Gelephu Mindfulness City, including large computing centers and data facilities. Excited to collaborate on these… pic.twitter.com/YlTNJEZwfD
— Gautam Adani (@gautam_adani) June 16, 2024
ಇದನ್ನೂ ಓದಿ: ಬೋಯಿಂಗ್ ವಿಮಾನ ಸಂಸ್ಥೆಗೆ ಸಿಗುತ್ತಿಲ್ಲ ಹೊಸ ಸಿಇಒ; ಚುಕ್ಕಾಣಿ ಹಿಡಿಯಲು ಒಲ್ಲೆ ಎನ್ನುತ್ತಿರುವುದ್ಯಾಕೆ?
ಇಲ್ಲಿ ಭೂತಾನ್ನ ಗೆಲೆಫುನಲ್ಲಿ ವಿಶ್ವದ ಮೊದಲ ಮೈಂಡ್ಫುಲ್ ನಗರ ನಿರ್ಮಾಣ ಆಗುತ್ತಿದೆ. ದೇಶದ ಪ್ರಾಚೀನ ಪರಂಪರೆ, ಆಧುನಿಕತೆ, ಪರಿಸರಪೂರಕ ಯೋಜನೆ, ವಿಶೇಷ ಆರ್ಥಿಕ ವಲಯ ಹೀಗೆ ವಿವಿಧ ಅಂಶಗಳು ಮತ್ತು ವಿಶೇಷತೆಗಳು ಈ ಮೈಂಡ್ಫುಲ್ ಸಿಟಿಯಲ್ಲಿ ಇರಲಿವೆ. ಜನರು ಸಂತೋಷ, ಸಹಭಾಳ್ವೆಯಿಂದ ಬಾಳುವಂತಹ ವಾತಾವರಣ ಈ ಕನಸಿನ ನಗರದಲ್ಲಿ ಇರಲಿದೆ. ಈ ಕನಸನ್ನು ನನಸು ಮಾಡಲು ಭೂತಾನ್ ಹೊರಟಿದೆ. ಗೌತಮ್ ಅದಾನಿ ಇದರ ಭಾಗ ಆಗಿರುವುದು ಭಾರತೀಯರಿಗೂ ಕುತೂಹಲದ ಸಂಗತಿ.
ಈ ಕ್ರಾಂತಿಕಾರಕ ಮಹಾಯೋಜನೆಯ ಭಾಗವಾಗಿ ಚುಖಾ ಪ್ರಾಂತ್ಯದಲ್ಲಿ 570 ಮೆಗಾವ್ಯಾಟ್ ಗ್ರೀನ್ ಹೈಡ್ರೋ ಪ್ರಾಜೆಕ್ಟ್ ಗುತ್ತಿಗೆಯನ್ನು ಅದಾನಿ ಗ್ರೂಪ್ ಪಡೆದಿದೆ. ಭೂತಾನ್ ಮಹಾರಾಜರನ್ನು ಭೇಟಿ ಮಾಡಿದ ದಿನವೇ ಅವರು ಪ್ರಧಾನಿ ತೋಗ್ಬೇ ಅವರನ್ನೂ ಭೇಟಿ ಮಾಡಿದ್ದಾರೆ. ಪ್ರಧಾನಿ ಜೊತೆಗಿನ ಭೇಟಿಯ ಫೋಟೋವನ್ನು ಅವರು ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ವರ್ಷದ ನವೆಂಬರ್ನಲ್ಲೂ ಭೂತಾನ್ ದೊರೆಯನ್ನು ಅದಾನಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:28 pm, Tue, 18 June 24