Gautam Adani: ಮುಕೇಶ್​ ಅಂಬಾನಿಯನ್ನು ಪಕ್ಕಕ್ಕೆ ಸರಿಸಿ ಭಾರತದ, ಏಷ್ಯಾದ ನಂಬರ್ 1 ಶ್ರೀಮಂತ ಆದ ಗೌತಮ್ ಅದಾನಿ

ಅದಾನಿ ಸಮೂಹದ ಗೌತಮ್ ಅದಾನಿ ಮುಕೇಶ್ ಅಂಬಾನಿ ಅವರನ್ನೂ ಮೀರಿಸಿ ಭಾರತದ, ಏಷ್ಯಾದ ನಂಬರ್ ಒನ್ ಶ್ರೀಮಂತ ಎನಿಸಿಕೊಂಡಿದ್ದಾರೆ.

Gautam Adani: ಮುಕೇಶ್​ ಅಂಬಾನಿಯನ್ನು ಪಕ್ಕಕ್ಕೆ ಸರಿಸಿ ಭಾರತದ, ಏಷ್ಯಾದ ನಂಬರ್ 1 ಶ್ರೀಮಂತ ಆದ ಗೌತಮ್ ಅದಾನಿ
ಗೌತಮ್ ಅದಾನಿ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Nov 24, 2021 | 6:57 PM

ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಅಧ್ಯಕ್ಷ ಮುಕೇಶ್ ಅಂಬಾನಿ ಅವರನ್ನು ಮೊದಲ ಬಾರಿಗೆ ಹಿಂದಿಕ್ಕಿ, ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಸದ್ಯಕ್ಕೆ, ಅದಾನಿ ಸಮೂಹವು ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್ ಮತ್ತು ಎಸ್‌ಇಜೆಡ್, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಟೋಟಲ್ ಗ್ಯಾಸ್ ಮತ್ತು ಅದಾನಿ ಪವರ್ ಸೇರಿದಂತೆ ಹಲವಾರು ಕಂಪೆನಿಗಳನ್ನು ನಿರ್ವಹಿಸುತ್ತಿದೆ. ಗೌತಮ್ ಅದಾನಿ ಅವರ ಸಂಪತ್ತು ಇತ್ತೀಚೆಗೆ ಹೆಚ್ಚಿದೆ, ಅದರಲ್ಲೂ ವಿಶೇಷವಾಗಿ ಕೊರೊನಾ ಸಾಂಕ್ರಾಮಿಕ ರೋಗದ ನಂತರ ಸಿಕ್ಕಾಪಟ್ಟೆ ಜಾಸ್ತಿ ಆಗಿದೆ. ಉದಾಹರಣೆಗೆ, ಮಾರ್ಚ್ 18, 2020ರಂದು ಅವರ ಒಟ್ಟು ಸಂಪತ್ತು ಸುಮಾರು 4.91 ಶತಕೋಟಿ ಅಮೆರಿಕನ್ ಡಾಲರ್​ನಷ್ಟಿತ್ತು. ಈಗ ಅವರ ನಿವ್ವಳ ಸಂಪತ್ತು ಸುಮಾರು 90 ಶತಕೋಟಿ ಡಾಲರ್ ಮುಟ್ಟಿದೆ – ಅಂದರೆ ಶೇ 1800ಕ್ಕಿಂತ ಹೆಚ್ಚು ಏರಿಕೆಯಾಗಿದೆ.

ಮತ್ತೊಂದೆಡೆ, ರಿಲಯನ್ಸ್ ಇಂಡಸ್ಟ್ರೀಸ್ ಸೌದಿ ಅರೇಬಿಯಾದ ಸಾರ್ವಜನಿಕ ಪೆಟ್ರೋಲಿಯಂ ಮತ್ತು ನೈಸರ್ಗಿಲ ಅನಿಲ ಕಂಪೆನಿಯಾದ ಧಹ್ರಾನ್‌ನಲ್ಲಿರುವ ಅರಾಮ್ಕೊ ಜತೆಗಿನ ಒಪ್ಪಂದವನ್ನು ರದ್ದುಗೊಳಿಸಿದ ನಂತರ ಮುಕೇಶ್ ಅಂಬಾನಿ ಅವರ ನಿವ್ವಳ ಸಂಪತ್ತಿಗೆ ಸ್ವಲ್ಪ ಮಟ್ಟಿಗೆ ಹೊಡೆತ ಬಿದ್ದಿದೆ.

ಆದರೂ ಅದೃಷ್ಟದ ಬದಲಾವಣೆಯು ಶೀಘ್ರದಲ್ಲೇ ಸಂಭವಿಸಬಹುದು ಎಂದು ನಿರೀಕ್ಷಿಸಲಾಗಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಮಂಗಳವಾರ (ನವೆಂಬರ್ 23) ಅದಾನಿ ಅವರ ಸಂಪತ್ತು 88.8 ಬಿಲಿಯನ್ ಡಾಲರ್‌ಗಳಷ್ಟಿತ್ತು. ಮತ್ತೊಂದೆಡೆ, ಮುಕೇಶ್ ಅಂಬಾನಿಯ ನಿವ್ವಳ ಸಂಪತ್ತು 91 ಬಿಲಿಯನ್ ಡಾಲರ್ ಆಗಿತ್ತು. ಆದರೆ ಬುಧವಾರ (ನವೆಂಬರ್ 24) ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಷೇರುಗಳು ಶೇ 1.77ರಷ್ಟು ಕುಸಿದರೆ, ಅದಾನಿ ಷೇರುಗಳು ಶೇ 2.34ರಷ್ಟು ಜಿಗಿದವು. ಅದಾನಿ ಮತ್ತು ಅಂಬಾನಿಯ ನಿವ್ವಳ ಸಂಪತ್ತಿನ ನಡುವಿನ ವ್ಯತ್ಯಾಸವನ್ನು ತೊಡೆದುಹಾಕಿದವು.

ಇದನ್ನೂ ಓದಿ: Reliance Industries O2C: ಪ್ರಸ್ತಾವಿತ O2C ಮಾರಾಟ ಮರು ಮೌಲ್ಯಮಾಪನಕ್ಕೆ ರಿಲಯನ್ಸ್, ಸೌದಿ ಅರಾಮ್ಕೊ ನಿರ್ಧಾರ​