Sensex: 1000ಕ್ಕೂ ಹೆಚ್ಚು ಪಾಯಿಂಟ್ಸ್​ ಕುಸಿದ ಸೆನ್ಸೆಕ್ಸ್, ಜಾಗತಿಕ ತಲ್ಲಣದ ಪ್ರಭಾವದಿಂದ ಭಾರತದಲ್ಲೂ ಅಲ್ಲೋಲ ಕಲ್ಲೋಲ

ಜಾಗತಿಕ ನಕಾರಾತ್ಮಕ ಅಂಶಗಳು ಭಾರತದ ದೇಶೀ ಷೇರು ಮಾರುಕಟ್ಟೆಯ ಮೇಲೂ ಆಗಿದ್ದು, ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕವು ಮೇ 19, 2022ರಂದು ಭಾರೀ ಪ್ರಮಾಣದಲ್ಲಿ ಇಳಿಕೆ ಆಗಿದೆ.

Sensex: 1000ಕ್ಕೂ ಹೆಚ್ಚು ಪಾಯಿಂಟ್ಸ್​ ಕುಸಿದ ಸೆನ್ಸೆಕ್ಸ್, ಜಾಗತಿಕ ತಲ್ಲಣದ ಪ್ರಭಾವದಿಂದ ಭಾರತದಲ್ಲೂ ಅಲ್ಲೋಲ ಕಲ್ಲೋಲ
ಸಾಂದರ್ಭಿಕ ಚಿತ್ರ
Edited By:

Updated on: May 19, 2022 | 10:45 AM

ಭಾರತೀಯ ಷೇರು ಮಾರುಕಟ್ಟೆ (stock market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಮೇ 19ನೇ ತಾರೀಕಿನ ಗುರುವಾರದಂದು ಭಾರೀ ಪ್ರಮಾಣದಲ್ಲಿ ಕುಸಿದಿವೆ. ಜಾಗತಿಕ ಮಾರುಕಟ್ಟೆ ತಲ್ಲಣವನ್ನು ಅನುಸರಿಸಿ, ಭಾರತದಲ್ಲೂ ಈ ಬೆಳವಣಿಗೆ ಆಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಸಭೆಯಲ್ಲಿ ಚರ್ಚೆಯಾದ ಅಂಶಗಳನ್ನು ಬುಧವಾರ ಬಿಡುಗಡೆ ಮಾಡಲಾಗಿತ್ತು, ಅದರಲ್ಲಿ ವ್ಯಕ್ತವಾದ ಆತಂಕದಿಂದ ಸೆನ್ಸೆಕ್ಸ್ 900ಕ್ಕೂ ಹೆಚ್ಚು ಪಾಯಿಂಟ್ಸ್ ಮತ್ತು ನಿಫ್ಟಿ 300 ಪಾಯಿಂಟ್ಸ್​ನಷ್ಟು ಕುಸಿದಿವೆ. ಚೀನಾ ಹಾಗೂ ಜಪಾನ್ ಟೆಕ್ನಾಲಜಿ ಷೇರುಗಳಲ್ಲಿ ಆದ ನಷ್ಟ ಕಾರಣಕ್ಕೆ ಏಷ್ಯಾ ಪೆಸಿಫಿಕ್ ಈಕ್ವಿಟಿ ಸೂಚ್ಯಂಕಗಳು ಶೇ 2ರಷ್ಟು ನೆಲ ಕಚ್ಚಿದವು. ಇನ್ನು ಅಮೆರಿಕ ಮತ್ತು ಯುರೋಪಿಯನ್ ಫ್ಯೂಚರ್ಸ್ ಸಹ ಭಾರೀ ಇಳಿಕೆ ಕಂಡಿತು. ಇದಕ್ಕೆ ಮುನ್ನ ಎಸ್​ ಅಂಡ್ ಪಿ 500 ಸೂಚ್ಯಂಕ ಶೇ 4ರಷ್ಟು ಇಳಿಯಿತು. ಈ ಮೂಲಕ ಎರಡು ವರ್ಷದಲ್ಲೇ ಒಂದು ದಿನದ ವಹಿವಾಟಿನಲ್ಲಿ ಕಂಡ ಅತಿ ದೊಡ್ಡ ನಷ್ಟ ಇದು ಎನಿಸಿಕೊಂಡಿತು.

ಮುಂಬರುವ ದಿನಗಳಲ್ಲಿ ಭಾರತದ ಆರ್ಥಿಕತೆಗೆ ಇನ್ನಷ್ಟು ಕಷ್ಟದ ದಿನಗಳಿವೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ. “ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿದ್ದು, ಕಠಿಣವಾದ ಅಮೆರಿಕದ ಕೇಂದ್ರೀಯ ಬ್ಯಾಂಕ್ ಹಣಕಾಸು ನೀತಿ ಮತ್ತು ಫಾರಿನ್​ ಪೋರ್ಟ್​ಫೋಲಿಯೋ ಹೂಡಕೆದಾರರಿಂದ ನಿರಂತರವಾದ ಮಾರಾಟವು ಸಮೀಪ ಕಾಲದಲ್ಲಿ ಆರ್ಥಿಕ ಪರಿಣಾಮ ಉಂಟುಮಾಡಲಿದೆ. ಹೆಚ್ಚುತ್ತಿರುವ ಹಣದುಬ್ಬರದ ಕಾರಣಕ್ಕೆ ಅಮೆರಿಕದ ಕೇಂದ್ರ ಬ್ಯಾಂಕ್ ಒಳಗೊಂಡಂತೆ ವಿಶ್ವದ ನಾನಾ ಕೇಂದ್ರ ಬ್ಯಾಂಕ್​ಗಳು ಮುಂಬರುವ ತಿಂಗಳುಗಳಲ್ಲಿ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆ ಇದೆ. ಈ ಕಾರಣಕ್ಕೆ ಆರ್ಥಿಕ ಕುಸಿತ ಉಂಟಾಗಬಹುದು ಎಂಬ ಆತಂಕ ಹೂಡಿಕೆದಾರರಲ್ಲಿದೆ. ಕುಸಿಯುತ್ತಿರುವ ರೂಪಾಯಿ ಮೌಲ್ಯ ಮತ್ತು ದರ ಏರಿಕೆಯು ಕಾರ್ಯ ನಿರ್ವಹಣೆ ಮಾರ್ಜಿನ್​​ಗಳು ಮತ್ತು ಲಾಭದ ಮೇಲೆ ಹೊಡೆತ ನೀಡುತ್ತದೆ,” ಎನ್ನುತ್ತಾರೆ ವಿಶ್ಲೇಷಕರು.

ಇದನ್ನೂ ಓದಿ: Stock Market Investment Tips: ಷೇರು ಮಾರುಕಟ್ಟೆ ಹೂಡಿಕೆಯ ಆರಂಭ ಹಂತದಲ್ಲಿ ಇರುವವರಿಗೆ 5 ಟಿಪ್ಸ್

ಈ ವರದಿ ಸಿದ್ಧವಾಗುವ ಹೊತ್ತಿಗೆ ಬಿಎಸ್​ಇ ಸೆನ್ಸೆಕ್ಸ್ 1018.36 ಪಾಯಿಂಟ್ಸ್ ಅಥವಾ ಶೇ 1.88ರಷ್ಟು ನೆಲ ಕಚ್ಚಿ, 53,190.17 ಪಾಯಿಂಟ್ಸ್​​ನಲ್ಲಿ ವ್ಯವಹಾರ ನಡೆಸುತ್ತಿದ್ದರೆ, ನಿನಿಫ್ಟಿ ಸೂಚ್ಯಂಕವು 306.90 ಪಾಯಿಂಟ್ಸ್ ಅಥವಾ ಶೇ 1.89ರಷ್ಟು ಇಳಿಕೆ ದಾಖಲಿಸಿ, 15,933.40 ಪಾಯಿಂಟ್ಸ್​ನಲ್ಲಿ ವಹಿವಾಟು ಆಗುತ್ತಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:45 am, Thu, 19 May 22