LPG Price Hike: ಗೃಹ ಬಳಕೆ ಸಿಲಿಂಡರ್ ಬೆಲೆ ರೂ 3.50 ಹೆಚ್ಚಳ: ಹಣದುಬ್ಬರದ ಬಿಸಿ ಹೆಚ್ಚಿಸಿದ ಬೆಲೆ ಏರಿಕೆ ನಿರ್ಧಾರ

ಒಂದು ವರ್ಷದ ಅವಧಿಯಲ್ಲಿ ಗೃಹ ಬಳಕೆ ಅಡುಗೆ ಅನಿಲದ ಬೆಲೆಯು ಸುಮಾರು 200 ರೂಪಾಯಿಯಷ್ಟು ಹೆಚ್ಚಾಗಿದೆ.

LPG Price Hike: ಗೃಹ ಬಳಕೆ ಸಿಲಿಂಡರ್ ಬೆಲೆ ರೂ 3.50 ಹೆಚ್ಚಳ: ಹಣದುಬ್ಬರದ ಬಿಸಿ ಹೆಚ್ಚಿಸಿದ ಬೆಲೆ ಏರಿಕೆ ನಿರ್ಧಾರ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 19, 2022 | 9:06 AM

ಬೆಂಗಳೂರು: ವಿಶ್ವ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಳಿತಕ್ಕೆ ಅನುಗುಣವಾಗಿ ಭಾರತ ಸರ್ಕಾರವೂ ನಿರ್ಧಾರ ತೆಗೆದುಕೊಂಡಿದ್ದು, 14.2 ಕೆಜಿ ತೂಕದ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ₹ 3.50 ಹೆಚ್ಚಿಸಲಾಗಿದೆ (Domestic Cylinder Price Hike). ಮತ್ತೊಂದೆಡೆ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯನ್ನು 8 ರೂಪಾಯಿ ಹೆಚ್ಚಿಸಲಾಗಿದೆ. ಒಂದು ವರ್ಷದ ಅವಧಿಯಲ್ಲಿ ಅಡುಗೆ ಅನಿಲದ ಬೆಲೆಯು ಸುಮಾರು 200 ರೂಪಾಯಿಯಷ್ಟು ಹೆಚ್ಚಾಗಿದೆ.

ಮೇ ತಿಂಗಳಲ್ಲಿ ಅಡುಗೆ ಅನಿಲದ ಎರಡನೇ ಏರಿಕೆ ಇದು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಾದ ಹಿನ್ನೆಲೆಯಲ್ಲಿ ಭಾರತ ಸರ್ಕಾರವೂ ಬೆಲೆ ಹೆಚ್ಚಿಸಲು ನಿರ್ಧರಿಸಿದೆ. ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್​ ಬೆಲೆಯು ₹ 1,000 ದಾಟಿದೆ. ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಸಿಲಿಂಡರ್ ಬೆಲೆ ₹ 1,000ಕ್ಕೂ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಪ್ರಸ್ತುತ ಗೃಹಬಳಕೆ ಸಿಲಿಂಡರ್ 1,006 ರೂಪಾಯಿಗೆ ಮಾರಾಟವಾಗುತ್ತಿದೆ. ಕೊಲ್ಕತ್ತಾದಲ್ಲಿ ₹ 1,029, ಚೆನ್ನೈನಲ್ಲಿ ₹ 1,058ಕ್ಕೆ ಮಾರಾಟವಾಗುತ್ತಿದೆ. ಈ ಹಿಂದೆ ಮೇ 7ರಂದು ಎಲ್​ಪಿಜಿ ಸಿಲಿಂಡರ್​ ಬೆಲೆಯನ್ನು ₹ 50 ಹೆಚ್ಚಿಸಲಾಗಿತ್ತು.

ಹಲವು ನಗರಗಳಲ್ಲಿ ಎಲ್​ಪಿಜಿ ಸಿಲಿಂಡರ್​ಗಳಿಗೆ ಯಾವುದೇ ಸಬ್ಸಿಡಿ ಸಿಗುತ್ತಿಲ್ಲ. ಬಹುಚರ್ಚಿತ ಉಜ್ವಲ ಯೋಜನೆಯ ಫಲಾನುಭವಿಗಳು ಎಲ್​ಪಿಜಿ ಬಳಕೆಯಿಂದ ದೂರ ಸರಿಯುತ್ತಿದ್ದಾರೆ. ಸಬ್ಸಿಡಿ ಕಡಿತದ ನಂತರ ವಿಶ್ವಮಾರುಕಟ್ಟೆಯ ಬೆಲೆ ಏರಿಕೆಯ ಪರಿಣಾಮ ನೇರವಾಗಿ ಗ್ರಾಹಕರಿಗೆ ವರ್ಗಾವಣೆಯಾಗುತ್ತಿದೆ. ಹೊಟೆಲ್, ರೆಸ್ಟೊರೆಂಟ್​ಗಳಲ್ಲಿ ಬಳಕೆಯಾಗುವ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಮೇ 1ರಂದು ₹ 102.50 ಹೆಚ್ಚಿಸಲಾಗಿತ್ತು. ಪ್ರಸ್ತುತ ವಾಣಿಜ್ಯ ಬಳಕೆ ಸಿಲಿಂಡರ್​ಗಳು ₹ 2,355.50 ಗೆ ಮಾರಾಟವಾಗುತ್ತಿವೆ.

ರಷ್ಯಾ ಉಕ್ರೇನ್ ಯುದ್ಧದ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಒಂದೇ ಸಮನೆ ಹೆಚ್ಚಾಗುತ್ತಿದೆ. ಕಳೆದ ಮಾರ್ಚ್ ತಿಂಗಳಲ್ಲಿ ತೈಲೋತ್ಪನ್ನಗಳ ಬೆಲೆ 13 ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಭಾರತದ ಕರೆನ್ಸಿ ರೂಪಾಯಿ ಡಾಲರ್ ಎದುರು ಮೌಲ್ಯ ಕಳೆದುಕೊಂಡಿದ್ದು ಬಿಕ್ಕಟ್ಟು ಉಲ್ಬಣಿಸಲು ಮತ್ತೊಂದು ಮುಖ್ಯ ಕಾರಣ. ಪ್ರಸ್ತುತ ಒಂದು ಅಮೆರಿಕನ್ ಡಾಲರ್​ಗೆ ₹ 77 ಇದೆ. ಭಾರತವು ದೇಶೀಯ ಬಳಕೆಯ ಶೇ 85ರಷ್ಟು ಪ್ರಮಾಣವನ್ನು ಆಮದು ಮಾಡಿಕೊಳ್ಳುತ್ತಿದೆ. ವಿಶ್ವ ಮಾರುಕಟ್ಟೆಯಲ್ಲಿ ಆಗುವ ಯಾವುದೇ ಬೆಳವಣಿಗೆಯ ನೇರ ಪರಿಣಾಮ ಭಾರತದ ಮೇಲೆ ತಕ್ಷಣ ಆಗುತ್ತದೆ.

Published On - 9:04 am, Thu, 19 May 22