ನವದೆಹಲಿ: ತನಿಖಾ ಸಂಸ್ಥೆಗಳು ಈ ವರ್ಷ ದೇಶದಾದ್ಯಂತ ಬರೋಬ್ಬರಿ 3,083 ಕೆಜಿ ಚಿನ್ನವನ್ನು ಮುಟ್ಟುಗೋಲು (Gold Seizure) ಹಾಕಿಕೊಂಡಿವೆ. ಈ ಪೈಕಿ ಕೇರಳದಲ್ಲೇ ಅತಿಹೆಚ್ಚು ಚಿನ್ನ ಜಪ್ತಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 2021ರಲ್ಲಿ 2,383 ಕೆಜಿ, 2020ರಲ್ಲಿ 2,154, 2019ರಲ್ಲಿ 3,673 ಕೆಜಿ ಚಿನ್ನ ಜಪ್ತಿ ಮಾಡಲಾಗಿತ್ತು. ಈ ವರ್ಷ ನವೆಂಬರ್ ವರೆಗೆ 3,083.61 ಕೆಜಿ ಚಿನ್ನ ಜಪ್ತಿ ಮಾಡಲಾಗಿದ್ದು, 3,588 ಪ್ರಕರಣಗಳನ್ನು (Gold Smuggling) ದಾಖಲಿಸಿಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಕೇರಳದಲ್ಲಿ 690 ಕೆಜಿ ಹಳದಿ ಲೋಹ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 2021ರಲ್ಲಿ 587 ಕೆಜಿ, 2020ರಲ್ಲಿ 406 ಕೆಜಿ ಹಾಗೂ 2019ರಲ್ಲಿ 725 ಕೆಜಿ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು ಎಂದು ಹಣಕಾಸು ಇಲಾಖೆಯ ರಾಜ್ಯ ಖಾತೆ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Gold: ವಿದೇಶದಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು? ಆ ಚಿನ್ನಕ್ಕೆ ಎಷ್ಟು ಸುಂಕ ಕಟ್ಟಬೇಕಾಗುತ್ತದೆ?
ಕೇರಳ ಹೊರತುಪಡಿಸಿ ಮಹಾರಾಷ್ಟ್ರದಲ್ಲಿ 474 ಕೆಜಿ, ತಮಿಳುನಾಡಿನಲ್ಲಿ 440 ಕೆಜಿ ಹಾಗೂ ಪಶ್ಚಿಮ ಬಂಗಾಳದಲ್ಲಿ 369 ಕೆಜಿ ಚಿನ್ನ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಚಿನ್ನ ಕಳ್ಳ ಸಾಗಣೆ ತಡೆಗೆ ಕ್ರಮ
ಚಿನ್ನ ಕಳ್ಳ ಸಾಗಣೆ ತಡೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಸ್ಮಗ್ಲಿಂಗ್ ಪತ್ತೆಗೆ ಕಾರ್ಯಾಚರಣೆ ಹೆಚ್ಚಿಸಲಾಗಿದ್ದು, ನೀತಿಯಲ್ಲಿಯೂ ಸುಧಾರಣೆಯನ್ನು ತರಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ರಾಷ್ಟ್ರೀಯ ತನಿಖಾ ದಳ ಕೂಡ ಚಿನ್ನ ಕಳ್ಳ ಸಾಗಣೆಯ ಮೂರು ಪ್ರಕರಣಗಳ ತನಿಖೆ ನಡೆಸುತ್ತಿದ್ದು, ಚಾರ್ಜ್ಶೀಟ್ ಸಲ್ಲಿಸಿದೆ ಎಂದು ಅವರು ಹೇಳಿದ್ದಾರೆ.
ಚಿನ್ನ ಸ್ಮಗ್ಲಿಂಗ್ ತಡೆಯಲು ಕಸ್ಟಮ್ಸ್ ಸಂರಚನೆಯಲ್ಲಿ ಸುಧಾರಣೆ ತರಲಾಗಿದೆ. ಆದಾಯ ಗುಪ್ತಚರ ನಿರ್ದೇಶನಾಲಯ ಕೂಡ (ಡಿಆರ್ಐ) ಸೂಕ್ಷ್ಮವಾಗಿ ನಿಗಾ ಇಟ್ಟಿದ್ದು, ಕಾರ್ಯಾಚರಣೆ ನಡೆಸುತ್ತಿದೆ. ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಹೆಚ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Duplicate gold: ನಕಲಿ ಚಿನ್ನದಿಂದ ಜನರನ್ನು ವಂಚಿಸಲೆಂದೇ ಆ ಗ್ಯಾಂಗ್ ಯುವಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತದಂತೆ!
ವಿದೇಶದಿಂದ ಭಾರತಕ್ಕೆ ಹೆಚ್ಚಾಗಿ ವಾಯು ಮಾರ್ಗದ ಮೂಲಕ ಅಕ್ರಮವಾಗಿ ಚಿನ್ನ ತರಲಾಗುತ್ತಿದೆ. ಹೀಗಾಗಿ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ನಿಗಾ ಇರಿಸಲಾಗುತ್ತಿದೆ. ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕರ ಚಲನವಲನಗಳ ಮೇಲೆ, ವಿದೇಶದಿಂದ ಬರುವವರ ಲಗೇಜುಗಳ ಮೇಲೆ ಹೆಚ್ಚಿನ ನಿಗಾ ಇರಿಸಲಾಗುತ್ತಿದೆ. ಇಷ್ಟಾಗಿಯೂ ಕಳೆದ ಕೆಲವು ವರ್ಷಗಳಿಂದ ಕೇರಳದಲ್ಲಿ ಅತಿಹೆಚ್ಚು ಚಿನ್ನ ಕಳ್ಳಸಾಗಣೆ ಪ್ರಕರಣಗಳು ವರದಿಯಾಗಿವೆ. ಚಿನ್ನ ಸ್ಮಗ್ಲಿಂಗ್ ಸಂಬಂಧಿತ ಪ್ರಮುಖ ಪ್ರಕರಣವೊಂದರಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಆರೋಪ ಕೇಳಿ ಬಂದಿದ್ದು ರಾಜಕೀಯವಾಗಿ ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ