ನವದೆಹಲಿ, ಜನವರಿ 11: ವರ್ಷದ ಹಿಂದೆ ಸಾವಿರಾರು ಮಂದಿಯನ್ನು ಕೆಲಸದಿಂದ ತೆಗೆದುಹಾಕಿದ್ದ ಗೂಗಲ್ ಸಂಸ್ಥೆ 2024ರ ಆರಂಭದಲ್ಲಿ ನೂರಾರು ಮಂದಿಯನ್ನು ಲೇ ಆಫ್ (Layoffs) ಮಾಡಿರುವುದು ವರದಿಯಾಗಿದೆ. ವೆಚ್ಚ ಕಡಿತದ (cost cutting) ಭಾಗವಾಗಿ ಗೂಗಲ್ ಈ ಕ್ರಮ ಕೈಗೊಂಡಿದೆ. ಹಿಂದೆ ಗೂಗಲ್ ಖರೀದಿ ಮಾಡಿದ್ದ ಫಿಟ್ಬಿಟ್ (FitBit) ಸಂಸ್ಥೆಯ ಇಬ್ಬರೂ ಸಹ-ಸಂಸ್ಥಾಪಕರೂ ಗೂಗಲ್ನಿಂದ ನಿರ್ಗಮಿಸಿದ್ದಾರೆ. ಜೇಮ್ಸ್ ಪಾರ್ಕ್ ಮತ್ತು ಎರಿಕ್ ಫ್ರೈಡ್ಮ್ಯಾನ್ ಅವರು ಗೂಗಲ್ ಬಿಡುತ್ತಿದ್ದಾರೆ ಎಂದು ಗೂಗಲ್ನ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾಗಿ ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಗೂಗಲ್ನ ವಿವಿಧ ತಂಡಗಳಲ್ಲಿ ಸಿಬ್ಬಂದಿಕಡಿತ ಆಗುತ್ತಿದೆ. ವಾಯ್ಸ್ ಅಸಿಸ್ಟೆಂಟ್ ಯೂನಿಟ್ನಿಂದ ಹಲವರನ್ನು ತೆಗೆಯಲಾಗಿದೆ. ಗೂಗಲ್ನ ಪಿಕ್ಸೆಲ್, ನೆಸ್ಟ್, ಫಿಟ್ಬಿಟ್ ತಂಡಗಳ ಹಾರ್ಡ್ವೇರ್ ಸಿಬ್ಬಂದಿಯಲ್ಲಿ ಹಲವರನ್ನು ಮನೆಗೆ ಕಳುಹಿಸಲಾಗುತ್ತಿದೆ. ಅದರಲ್ಲೂ ಗೂಗಲ್ನ ಆಗ್ಮೆಂಟೆಡ್ ರಿಯಾಲಿಟಿ ಅಥವಾ ಎಆರ್ ತಂಡದ ಹೆಚ್ಚಿನ ಜನರು ಕೆಲಸ ಕಳೆದುಕೊಂಡಿದ್ದಾರೆ. ಹೊಸ ವರ್ಷದ ಲೇ ಆಫ್ನಲ್ಲಿ ಹೆಚ್ಚು ಬಾಧಿತರಾಗಿರುವುದು ಸೆಂಟ್ರಲ್ ಎಂಜಿನಿಯರಿಂಗ್ ಟೀಮ್ನವರು.
ಇದನ್ನೂ ಓದಿ: Powerful Passports: ವಿಶ್ವದ ಅತ್ಯಂತ ಪ್ರಬಲ ಪಾಸ್ಪೋರ್ಟ್ಗಳ ದೇಶಗಳ್ಯಾವುವು? ಭಾರತದ ಪಾಸ್ಪೋರ್ಟ್ ಪ್ರಭಾವ ಎಷ್ಟು?
‘2023ರ ಎರಡನೇ ಭಾಗದುದ್ದಕ್ಕೂ ನಮ್ಮ ಹಲವು ತಂಡಗಳು ಹೆಚ್ಚು ಕ್ಷಮತೆ ಸಾಧ್ಯವಾಗುವ ನಿಟ್ಟಿನಲ್ಲಿ ಬದಲಾವಣೆ ಮಾಡಿಕೊಂಡಿವೆ. ಆದ್ಯತೆಯ ಉತ್ಪನ್ನಗಳಿಗೆ ಸಂಪನ್ಮೂಲಗಳು ಕೇಂದ್ರಿತವಾಗುವಂತೆ ಮಾಡಿವೆ. ಈಗಲೂ ಕೂಡ ಕೆಲ ತಂಡಗಳು ಲೇ ಆಫ್ ಸೇರಿದಂತೆ ಒಂದಷ್ಟು ಬದಲಾವಣೆಗಳಲ್ಲಿ ನಿರತವಾಗಿವೆ’ ಎಂದು ಗೂಗಲ್ನ ವಕ್ತಾರರು ತಿಳಿಸಿದ್ದಾರೆ.
ಆದರೆ, ಒಟ್ಟಾರೆಯಾಗಿ ಎಷ್ಟು ಮಂದಿ ಗೂಗಲ್ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರೆ ಎಂಬುದು ನಿಖರವಾಗಿ ಗೊತ್ತಾಗಿಲ್ಲ. ಸಾವಿರದ ಆಸುಪಾಸು ಇರಬಹುದು ಎಂದು ವರದಿ ಸುಳಿವು ನೀಡುತ್ತಿದೆ.
ಇದನ್ನೂ ಓದಿ: Narendra Modi: ಸ್ವಾತಂತ್ರ್ಯ ಶತಮಾನೋತ್ಸವದ ವೇಳೆ ಮುಂದುವರಿದ ದೇಶವನ್ನಾಗಿಸುವ ಗುರಿ: ನರೇಂದ್ರ ಮೋದಿ
2023ರ ಜನವರಿ ತಿಂಗಳಲ್ಲಿ ಗೂಗಲ್ನ ಮಾಲಕ ಸಂಸ್ಥೆ ಆಲ್ಫಬೆಟ್ 12,000 ಮಂದಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿರುವುದಾಗಿ ಘೋಷಣೆ ಮಾಡಿತ್ತು. ಎರಡು ಲಕ್ಷ ಸಂಖ್ಯೆಗೆ ಸಮೀಪದಷ್ಟು ಉದ್ಯೋಗಿಗಳನ್ನು ಗೂಗಲ್ ಹೊಂದಿದೆ. ಕಳೆದ ವರ್ಷ ಶೇ. 6ರಷ್ಟು ಗೂಗಲ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ