ದೇಶದ ಬಹುತೇಕ ಭಾಗಗಳಲ್ಲಿ ಕಠಿಣ ಲಾಕ್ಡೌನ್ ಹೇರಲಾಗಿದೆ. ಮೂಡೀಸ್ ಇನ್ವೆಸ್ಟರ್ಸ್ ಸರ್ವೀಸ್ ಹೇಳಿರುವಂತೆ, ಭಾರತದ ಆರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದ ಕೊನೆಯ 2022ರ ಮಾರ್ಚ್ಗೆ ಹಳಿಗೆ ಮರಳುತ್ತದೆ ಮತ್ತು ಶೇ 9.3ರಷ್ಟು ಬೆಳವಣಿಗೆ ಸಾಧಿಸುತ್ತದೆ. ಈ ಮಧ್ಯೆ ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು 2021- 22ನೇ ಸಾಲಿನ ಹಣಕಾಸು ವರ್ಷದ ಬೆಳವಣಿಗೆ ಅಂದಾಜನ್ನು ಇಳಿಕೆ ಮಾಡಿದೆ.
ಇನ್ನು ಕೊರೆನಾದ ಮೂರನೇ ಅಲೆಯ ಬಗ್ಗೆ ಮುಖ್ಯ ಆರ್ಥಿಕ ಸಲಹೆಗಾರರು ಉತ್ತರಿಸಿದ್ದು, ಸದ್ಯಕ್ಕೆ ನಡೆಯುತ್ತಿರುವ ಲಸಿಕೆ ಅಭಿಯಾನ ಕೊರೊನಾ ಬಿಕ್ಕಟ್ಟಿನ ಪರಿಣಾಮವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಹೆಚ್ಚು ಜನರು ಲಸಿಕೆ ಹಾಕಿಸಿಕೊಂಡಷ್ಟೂ ಮೂರನೇ ಅಲೆಯ ಪರಿಣಾಮ ಕಡಿಮೆ ಆಗುತ್ತದೆ. ನಿರೀಕ್ಷೆ ಮಾಡಿದಷ್ಟು ಹಾನಿ ತರುವುದಿಲ್ಲ ಎಂದಿದ್ದಾರೆ. ಕೊರೊನಾವೈರಸ್ ನಮ್ಮ ವಿತ್ತೀಯ ಕೊರತೆ ಹಾಗೂ ಬಂಡವಾಳ ಹಿಂತೆಗೆತ ಗುರಿಯ ಮೇಲೆ ಪರಿಣಾಮ ಮಾಡುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಂದಹಾಗೆ 2021- 22ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಶೇ 6.8ರಷ್ಟು ವಿತ್ತೀಯ ಕೊರತೆ ಹಾಗೂ 1.75 ಲಕ್ಷ ಕೋಟಿ ರೂಪಾಯಿ ಬಂಡವಾಳ ಹಿಂತೆಗೆತದ ಗುರಿಯನ್ನು ಇರಿಸಿಕೊಳ್ಳಲಾಗಿದೆ.
ಸರ್ಕಾರದಿಂದ ಉತ್ತೇಜನಾ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆಯಾ ಎಂಬ ಪ್ರಶ್ನೆಗೆ ಸುಬ್ರಮಣಿಯನ್ ಉತ್ತರಿಸಿ, ಕಳೆದ ವರ್ಷದ ಬಜೆಟ್ನಲ್ಲಿ ಕೊರೊನಾ ಬಿಕ್ಕಟ್ಟಿಗೆ ಯಾವುದೇ ಮೀಸಲಿಟ್ಟಿರಲಿಲ್ಲ. ಕಳೆದ ವರ್ಷದ ಬಜೆಟ್ ನಂತರ ಕೊರೊನಾ ಎದುರಾಯಿತು. ಈ ವರ್ಷದ ಬಜೆಟ್ನಲ್ಲಿ ಕೊರೊನಾಗೆ ಮೀಸಲಿರಿಸಲಾಗಿದೆ. ಮೂಲಸೌಕರ್ಯ ಹಾಗೂ ನಿರ್ಮಾಣ ವಲಯದ ವೆಚ್ಚದಲ್ಲಿ ಬಜೆಟ್ ಮೀಸಲಿರಿಸಲಾಗಿದೆ. ಕೊರೊನಾ ಮಧ್ಯೆ ಮೂಲಸೌಕರ್ಯ ಮತ್ತು ನಿರ್ಮಾಣಕ್ಕಾಗಿ ಹೆಚ್ಚು ವೆಚ್ಚ ಮಾಡಿಲ್ಲ. ಸನ್ನಿವೇಶ ಸುಧಾರಿಸುತ್ತಿದ್ದಂತೆಯೇ ಬಜೆಟ್ನಲ್ಲಿ ಮೀಸಲಿಟ್ಟಂತೆಯೇ ಖರ್ಚು ಮಾಡುತ್ತೇವೆ. ಸರ್ಕಾರ ಕೂಡ ಸನ್ನಿವೇಶದ ಮೌಲ್ಯಮಾಪನ ಮಾಡುತ್ತಿದೆ. ಅಗತ್ಯ ಬಿದ್ದಲ್ಲಿ ಕೇಂದ್ರ ಸರ್ಕಾರವು ಹಾಗೆ ಮಾಡಲು ಸಿದ್ಧ ಎಂದು ಹೇಳಿದ್ದಾರೆ.
ದೇಶದ ಷೇರು ಮಾರುಕಟ್ಟೆ ಬಗ್ಗೆ ಮಾತನಾಡಿದ ಅವರು, ಷೇರು ಮಾರುಕಟ್ಟೆ ದಾಖಲೆ ಮಟ್ಟದಲ್ಲಿದೆ. ಭಾರತದ ಆರ್ಥಿಕತೆ ಉತ್ತಮವಾಗಿ ಕಾರ್ಯ ನಿರ್ವಹಿಸಲಿದೆ ಎಂಬ ನಂಬಿಕೆ ಹೂಡಿಕೆದಾರರಲ್ಲಿದೆ. ಉತ್ತಮ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿ ಹೊಂದಿದ ದೇಶಗಳು ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿರುವುದರಿಂದ ದಾಖಲೆಯ ಎತ್ತರಕ್ಕೆ ಏರಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತ ಮುಳುಗಿಹೋಗಿಲ್ಲ; ಕಾಂಗ್ರೆಸ್ ನಾಯಕ ಚಿದಂಬರಂ ಬೆವರಿಳಿಯುವಂತೆ ಬಿಜೆಪಿ ಸಾಧನೆ ತೆರೆದಿಟ್ಟ ಅನುರಾಗ್ ಠಾಕೂರ್
(Chief Economic Advisor KV Subramanian speaks about corona third wave to govt stimulus package and share market)