Tomato Price: ಸರ್ಕಾರದಿಂದ ಟೊಮೆಟೋಗೆ ಸಬ್ಸಿಡಿ ಇನ್ನಷ್ಟು ಹೆಚ್ಚಳ; ಕಿಲೋಗೆ 70 ರೂನಂತೆ ಮಾರಾಟ
Subsidized Price of Tomato: ಟೊಮೆಟೋ ಬೆಲೆ ಗಗನಕ್ಕೇರಿದ್ದು ಅದರ ಬಿಸಿ ಜನಸಾಮಾನ್ಯರಿಗೆ ಹೆಚ್ಚು ತಾಕದಿರಲೆಂದು ಸರ್ಕಾರ ಸಬ್ಸಿಡಿ ದರದಲ್ಲಿ ಟೊಮೆಟೋ ಮಾರುತ್ತಿದೆ. 70 ರೂಗೆ ಟೊಮೆಟೋ ಮಾರಲಾಗುತ್ತಿದೆ.
ನವದೆಹಲಿ: ಟೊಮೆಟೋ ಬೆಲೆ ಏರಿಕೆಗೆ ಕಡಿವಾಣ ಹಾಕಲು ಸಬ್ಸಿಡಿ ದರದಲ್ಲಿ ಮಾರಾಟ ನಡೆಸುತ್ತಿರುವ ಕೇಂದ್ರ ಸರ್ಕಾರ ಇದೀಗ ಟೊಮೆಟೋ ಸಬ್ಸಿಡಿಯನ್ನು (Tomato Subsidy) ಇನ್ನಷ್ಟು ಹೆಚ್ಚಿಸಿದೆ. ಇದೀಗ ಕಿಲೋಗೆ 70 ರುಪಾಯಿಯಂತೆ ಸರ್ಕಾರದ ವತಿಯಿಂದ ಟೊಮೆಟೋ ಮಾರಾಟವಾಗುತ್ತಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ನಿರ್ದೇಶನದ ಮೇರೆಗೆ ರಾಷ್ಟ್ರೀಯ ಕೃಷಿ ಸಹಕಾರಿ ಮಾರಾಟ ಒಕ್ಕೂಟ (NAFED) ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ಸಂಸ್ಥೆಗಳ ರೀಟೇಲ್ ಔಟ್ಲೆಟ್ಗಳ ಮೂಲಕ ಮತ್ತು ಮೊಬೈಲ್ ವ್ಯಾನ್ಗಳ ಮೂಲಕ ಟೊಮೆಟೋವನ್ನು ಸಬ್ಸಿಡಿ ದರದಲ್ಲಿ ಮಾರಲಾಗುತ್ತಿದೆ. ಬೆಲೆ ಏರಿಕೆ ಹೆಚ್ಚು ಇರುವ ಕಡೆ ಸಬ್ಸಿಡಿ ಟೊಮೆಟೋ ಮಾರಾಟ ಹೆಚ್ಚು ಮಾಡಲಾಗಿದೆ.
ಭಾರತದಲ್ಲಿ ಟೊಮೆಟೋ ರೀಟೇಲ್ ಮಾರುಕಟ್ಟೆಯ ಸರಾಸರಿ ಬೆಲೆ ಕಿಲೋಗೆ 120 ರೂ ಇದೆ. ಕೆಲವೆಡೆ ಅದರ ಬೆಲೆ 200 ರೂ ಮೇಲೆಯೇ ಇದೆ. ಕೋಲಾರದಲ್ಲಿ ಟೊಮೆಟೋ ಅತಿಹೆಚ್ಚು ಬೆಳೆಯಲಾಗುತ್ತಿದ್ದರೂ ನೆರೆಯ ಬೆಂಗಳೂರಿನಲ್ಲಿ ಟೊಮೆಟೋದ ರೀಟೇಲ್ ದರ 100 ರೂಗಿಂತ ಕಡಿಮೆಗೆ ಇಳಿಯುತ್ತಲೇ ಇಲ್ಲ. ಬೆಂಗಳೂರಿನಂತಹ ಸ್ಥಿತಿಯ ಮುಂಬೈಗೂ ಇದೆ. ಮಹಾರಾಷ್ಟ್ರದಲ್ಲೂ ಟೊಮೆಟೋ ಹೆಚ್ಚು ಬೆಳೆಯಲಾಗುತ್ತಿದ್ದರೂ ಮುಂಬೈನಲ್ಲಿ ಟೊಮೆಟೋದ ರೀಟೇಲದ್ ದರ 150 ರೂ ಮೇಲೆಯೇ ಇದೆ.
ಇದನ್ನೂ ಓದಿ: Tomato: ಕೋಲಾರದಲ್ಲಿ ಹೆಚ್ಚಿನ ಬೆಲೆ ತೆತ್ತು ಟೊಮೆಟೋ ಸಾಗಿಸುತ್ತಿರುವ ಉತ್ತರಭಾರತೀಯ ವರ್ತಕರು; ಬೆಂಗಳೂರಿಗೆ ಕಡಿಮೆ ಪೂರೈಕೆ
ಜುಲೈ 14ರಿಂದ ಸರ್ಕಾರ ಟೊಮೆಟೋವನ್ನು ಸಬ್ಸಿಡಿ ದರದಲ್ಲಿ ಮಾರಲು ತೊಡಗಿತು. ಆರಂಭದ ದಿನ ಕಿಲೋಗೆ 90 ರೂನಂತೆ ಮಾರಿತು. ಬಳಿಕ 80 ರೂಗೆ ಬೆಲೆ ಇಳಿಸಿತು. ಈಗ ಸಬ್ಸಿಡಿ ದರ ಹೆಚ್ಚಿಸಿದ ಪರಿಣಾಮ ಟೊಮೆಟೋವನ್ನು 70 ರೂಗೆ ಇಳಿಸಿ ಮಾರಲಾಗುತ್ತಿದೆ.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಈ ಸೀಸನ್ನಲ್ಲಿ ಟೊಮೆಟೋ ಹೆಚ್ಚು ಬೆಳೆಯಲಾಗುತ್ತಿದೆ. ಸರ್ಕಾರದಎನ್ಸಿಸಿಎಫ್ ಮತ್ತು ಎನ್ಎಎಫ್ಇಡಿ ಸಂಸ್ಥೆಗಳು ಈ ರಾಜ್ಯಗಳ ವಿವಿಧ ಮಂಡಿಗಳಿಂದ ಟೊಮೆಟೋ ಖರೀದಿಸಿ ತಮ್ಮ ರೀಟೇಲ್ ಔಟ್ಲೆಟ್ಗಳಲ್ಲಿ ಸಬ್ಸಿಡಿ ದರದಲ್ಲಿ ಮಾರುತ್ತಿವೆ.
ಇದನ್ನೂ ಓದಿ: Tomato: ಕರ್ನಾಟಕದಲ್ಲಿ ಟೊಮ್ಯಾಟೊ ಬೆಲೆ ಏರಿಕೆ ಕಾರಣವೇನು ? ಇಲ್ಲಿದೆ ಮಾಹಿತಿ
ಅಕ್ಟೋಬರ್ವರೆಗೂ ದೇಶಾದ್ಯಂತ ಟೊಮೆಟೋ ಬೆಲೆ ತುಸು ಹೆಚ್ಚಿನ ಮಟ್ಟದಲ್ಲೇ ಇರಲಿದೆ. ಅದಾದ ಬಳಿಕ ಟೊಮೆಟೋ ಸರಬರಾಜು ಹೆಚ್ಚುವುದರಿಂದ ಬೆಲೆ ಸಹಜವಾಗಿ ಇಳಿಕೆಯಾಗುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:50 am, Fri, 21 July 23