ಹೊಸ ಆದಾಯ ತೆರಿಗೆ ಮಸೂದೆ ಯಾವಾಗ ಬರುತ್ತದೆ? ಏನಿದೆ ಅದರಲ್ಲಿ? ಇಲ್ಲಿದೆ ಡೀಟೇಲ್ಸ್

New income tax bill in Parliament: ಕೇಂದ್ರ ಸರ್ಕಾರ ಹೊಸ ಆದಾಯ ತೆರಿಗೆ ಕಾಯ್ದೆ ತರಲು ಹೊರಟಿದೆ. ಹೊಸ ಮಸೂದೆಗೆ ಕೇಂದ್ರ ಸಂಪುಟ ಫೆ. 8ರಂದು ಒಪ್ಪಿಗೆ ಕೊಟ್ಟಿದೆ. ಫೆ. 10ರಂದು ಲೋಕಸಭೆಯಲ್ಲಿ ಮಸೂದೆ ಮಂಡನೆ ಆಗಬಹುದು. ಎರಡೂ ಸದನಗಳಲ್ಲಿ ಮಸೂದೆಗೆ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ. ಈಗಿನ ಆದಾಯ ತೆರಿಗೆಯ ಸಂಕೀರ್ಣ ಅಂಶಗಳನ್ನು ತೊಡೆದು ಹಾಕಿ ಸರಳಗೊಳಿಸುವ ಪ್ರಯತ್ನ ನಡೆದಿದೆ ಎಂದು ಹೇಳಲಾಗುತ್ತಿದೆ.

ಹೊಸ ಆದಾಯ ತೆರಿಗೆ ಮಸೂದೆ ಯಾವಾಗ ಬರುತ್ತದೆ? ಏನಿದೆ ಅದರಲ್ಲಿ? ಇಲ್ಲಿದೆ ಡೀಟೇಲ್ಸ್
ಆದಾಯ ತೆರಿಗೆ

Updated on: Feb 09, 2025 | 11:16 AM

ನವದೆಹಲಿ, ಫೆಬ್ರುವರಿ 9: ಕೇಂದ್ರ ಸಂಪುಟದಿಂದ ನಿನ್ನೆ ಶನಿವಾರ ಹೊಸ ಆದಾಯ ತೆರಿಗೆ ಮಸೂದೆಗೆ ಅನುಮೋದನೆ ಸಿಕ್ಕಿದೆ. ಬಜೆಟ್​ನಲ್ಲಿ ಸರ್ಕಾರ ಆದಾಯ ತೆರಿಗೆ ದರಗಳನ್ನು ಪರಿಷ್ಕರಿಸಿದ ಹಿನ್ನೆಲೆಯಲ್ಲಿ ಹೊಸ ಆದಾಯ ತೆರಿಗೆ ಕಾನೂನಿನ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ. ಮಸೂದೆಯನ್ನು ಈಗ ಚಾಲ್ತಿಯಲ್ಲಿರುವ ಬಜೆಟ್ ಅಧಿವೇಶನದಲ್ಲೇ ಸಂಸತ್​ನಲ್ಲಿ ಮಂಡಿಸುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ನಾಳೆ ಸೋಮವಾರವೇ ಹೊಸ ಆದಾಯ ತೆರಿಗೆ ಮಸೂದೆಯನ್ನು ಲೋಕಸಭೆಯಲ್ಲಿ ಪ್ರಸ್ತುತಪಡಿಸಬಹುದು ಎನ್ನಲಾಗಿದೆ.

ಆದಾಯ ತೆರಿಗೆ ಮಸೂದೆಯಲ್ಲಿ ಏನಿದೆ?

ಹೊಸ ಆದಾಯ ತೆರಿಗೆ ಮಸೂದೆಯಲ್ಲಿರುವ ಅಂಶಗಳೇನು ಎಂಬುದು ಸ್ಪಷ್ಟವಾಗಿ ಇನ್ನೂ ಬಹಿರಂಗಗೊಂಡಿಲ್ಲ. ನಾಳೆ ಈ ಮಾಹಿತಿ ಸಿಗಲಿದೆ. 1961ರ ಆದಾಯ ತೆರಿಗೆ ಕಾಯ್ದೆಗೆ ಬದಲಿಯಾಗಿ ಹೊಸ ಕಾಯ್ದೆ ತರುವುದು ಈ ಮಸೂದೆಯ ಉದ್ದೇಶ. ತೆರಿಗೆ ವ್ಯವಸ್ಥೆಯ ಸಂಕೀರ್ಣತೆಯನ್ನು ನೀಗಿಸಿ, ಸರಳಗೊಳಿಸುವುದು ಈ ಮಸೂದೆಯ ಉದ್ದೇಶ ಎನ್ನಲಾಗಿದೆ.

ಇದನ್ನೂ ಓದಿ: ಷೇರು ಮಾರುಕಟ್ಟೆಯ ‘ಲೇಡಿ ವುಲ್ಫ್’ಗೆ ಸೆಬಿ ಮೂಗುದಾರ; ಆಪ್ಷನ್ಸ್ ಕ್ವೀನ್ ಅಸ್ಮಿತಾಗೆ ನಿಷೇಧ ಮತ್ತು ದಂಡ

ಅಪರಾಧ ದಂಡ ಸಂಹಿತೆ ಬದಲು ನ್ಯಾಯ ಸಂಹಿತೆ ರಚಿಸಿದ ರೀತಿಯಲ್ಲಿ ಹೊಸ ಆದಾಯ ತೆರಿಗೆ ಕಾಯ್ದೆಯನ್ನು ರೂಪಿಸಲಾಗಿದೆ. ಸದ್ಯ ಇರುವ ಆದಾಯ ತೆರಿಗೆ ಕಾನೂನುಗಳು ಬಹಳ ಸಂಕೀರ್ಣವಾಗಿದ್ದು, ವಿವಿಧ ಅಂಶಗಳು ಒಂದಕ್ಕೊಂದು ಘರ್ಷಣೆ ರೀತಿಯಲ್ಲಿ ಅಡಕವಾಗಿದ್ದು, ಅದನ್ನು ಅರ್ಥ ಮಾಡಿಕೊಳ್ಳಲು ಸಾಮಾನ್ಯರಿಂದ ಆಗದ ಮಾತು. ತಜ್ಞರ ಸಮಾಲೋಚನೆ ಇಲ್ಲದೇ ಸಾಂದರ್ಭಿಕ ಆದಾಯ ತೆರಿಗೆ ನಿಯಮಗಳನ್ನು ಅರಿಯುವುದು ಕಷ್ಟದ ಮಾತು. ಉದ್ಯಮ ವ್ಯವಹಾರಸ್ಥರಿಗೆ ಈ ಕಾನೂನುಗಳು ಅಗಿಯಲು ಆಗದ, ನುಂಗಲೂ ಆಗದ ರೀತಿಯಂತಿವೆ ಎನ್ನುವ ಅಳಲು ಸಾಕಷ್ಟು ಕೇಳಿಬರುತ್ತವೆ. ಈ ಹಿನ್ನೆಲೆಯಲ್ಲಿ ಹೊಸ ಆದಾಯ ತೆರಿಗೆಯ ರಚನೆಯನ್ನು ಸಂಪೂರ್ಣ ಸರಳಗೊಳಿಸುವ ಪ್ರಯತ್ನವಾಗಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತಿವೆ.

ಹೊಸ ಕಾಯ್ದೆಯಲ್ಲಿ ಪಠ್ಯದ ಪ್ರಮಾಣ ಅರ್ಧದಷ್ಟು ಕಡಿಮೆಗೊಳಿಸಲಾಗಿದೆ. ಕಾನೂನು ಹೇಳಿಕೆಯಲ್ಲಿ ಸ್ಪಷ್ಟತೆ ಹೆಚ್ಚು ಇದೆ. ಇದರಿಂದ ತೆರಿಗೆ ಕಾನೂನುಗಳನ್ನು ಸ್ಪಷ್ಟವಾಗಿ ಅರಿತುಕೊಳ್ಳಬಹುದು. ಕಾನೂನು ವ್ಯಾಜ್ಯಗಳು ಹೆಚ್ಚು ತಲೆದೋರದಂತೆ ನಿಯಂತ್ರಣವಾಗಬಹುದು. ತೆರಿಗೆ ನಿಯಮಗಳಿಗೆ ತಾಳೆಯಾಗುವುದು ಸುಲಭವಾಗುತ್ತದೆ. ಹಾಗೆಯೇ, ಹೊಸ ಕಾಯ್ದೆಯು ವಿಶ್ವಾಸಾಧಾರಿತವಾದ ಟ್ಯಾಕ್ಸ್ ಸಿಸ್ಟಂಗೆ ಉತ್ತೇಜಿಸುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಸೈಬರ್ ವಂಚನೆ ತಡೆಯಲು ಆರ್​ಬಿಐ ಕ್ರಮ; ಬ್ಯಾಂಕುಗಳಿಗೆ ಬೇರೆ ಡೊಮೇನ್, ಅಂತಾರಾಷ್ಟ್ರೀಯ ಪಾವತಿಗೆ ಹೆಚ್ಚುವರಿ ಸೆಕ್ಯುರಿಟಿ

ಹೊಸ ಆದಾಯ ತೆರಿಗೆ ಕಾಯ್ದೆಯಲ್ಲಿ ತೆರಿಗೆ ದರಗಳನ್ನು ಘೋಷಿಸಲಾಗುವುದಿಲ್ಲ. ತೆರಿಗೆ ಕಾನೂನುಗಳನ್ನು ಕಾಣಬಹುದು. ಐಟಿ ರಿಟರ್ನ್ ಸಲ್ಲಿಕೆಯ ಕ್ರಮ ಮತ್ತಷ್ಟು ಸರಳಗೊಳ್ಳಬಹುದು. ಉದ್ಯಮಗಳಿಗೆ ಸ್ಪಷ್ಟ ಟ್ಯಾಕ್ಸ್ ಕೋಡ್ ಸಿಗಲಿದ್ದು, ಇದರಿಂದ ಕಾನೂನು ವ್ಯಾಜ್ಯಗಳು ಕಡಿಮೆಗೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ