ನವದೆಹಲಿ, ಸೆಪ್ಟೆಂಬರ್ 2: ಆಗಸ್ಟ್ ತಿಂಗಳಲ್ಲಿ ಒಟ್ಟು 1,74,962 ಕೋಟಿ ರೂನಷ್ಟು ಜಿಎಸ್ಟಿ ಸಂಗ್ರಹ ಆಗಿದೆ ಎಂದು ಸರ್ಕಾರ ನಿನ್ನೆ ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶದಿಂದ ತಿಳಿದುಬಂದಿದೆ. ಹಿಂದಿನ ವರ್ಷದ ಆಗಸ್ಟ್ ತಿಂಗಳಲ್ಲಿ 1.59 ಲಕ್ಷ ಕೋಟಿ ರೂನಷ್ಟು ಜಿಎಸ್ಟಿ ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ತೆರಿಗೆ ಸಂಗ್ರಹದಲ್ಲಿ ಶೇ. 10ರಷ್ಟು ಹೆಚ್ಚಳವಾಗಿದೆ. ಆದರೆ, ಆಗಸ್ಟ್ಗೆ ಪೂರ್ವ ತಿಂಗಳು, ಅಂದರೆ ಜುಲೈನಲ್ಲಿ ಜಿಎಸ್ಟಿ ಸಂಗ್ರಹ 1,82,075 ಕೋಟಿ ರೂ ಇತ್ತು. ಅದಕ್ಕೆ ಹೋಲಿಸಿದರೆ ಜಿಎಸ್ಟಿ ಸಂಗ್ರಹದಲ್ಲಿ ತುಸು ಇಳಿಕೆ ಆಗಿದೆ.
ಒಂದು ತಿಂಗಳಲ್ಲಿ 2.10 ಲಕ್ಷ ಕೋಟಿ ರೂ ತೆರಿಗೆ ಸಂಗ್ರಹವಾಗಿದ್ದು ಈವರೆಗಿನ ದಾಖಲೆಯಾಗಿದೆ. ಇದು ಆಗಿದ್ದು 2024ರ ಏಪ್ರಿಲ್ ತಿಂಗಳಲ್ಲಿ. ಈ ವರ್ಷ ಜನವರಿಯಿಂದ ಆಗಸ್ಟ್ವರೆಗೂ ಸಂಗ್ರಹಣೆಗೊಂಡ ಜಿಎಸ್ಟಿ ತೆರಿಗೆ ಮೊತ್ತ 9.13 ಲಕ್ಷ ಕೋಟಿ ರೂ ಆಗಿದೆ. 2023ರ ಇದೇ ಅವಧಿಯಲ್ಲಿ 8.29 ಲಕ್ಷ ಕೋಟಿ ರೂನಷ್ಟು ಟ್ಯಾಕ್ಸ್ ಕಲೆಕ್ಷನ್ಸ್ ಆಗಿತ್ತು.
ಇದನ್ನೂ ಓದಿ: ಇವತ್ತಿನ ಒಂದು ಕೋಟಿ ರೂ ಹಣದ ನಿಜ ಮೌಲ್ಯ 30 ವರ್ಷದ ಬಳಿಕ ಎಷ್ಟಾಗಬಹುದು? ಭವಿಷ್ಯದ ಭದ್ರತೆಗೆ ಇದು ಬಹಳ ಮುಖ್ಯ
ಆಗಸ್ಟ್ ತಿಂಗಳಲ್ಲಿ ರೀಫಂಡ್ಗಳಾಗಿರುವ ಮೊತ್ತ 24,460 ರೂ ಇದೆ. ಹಿಂದಿನ ವರ್ಷದ ಆಗಸ್ಟ್ಗೆ ಹೋಲಿಸಿದರೆ ರೀಫಂಡ್ನಲ್ಲಿ ಶೇ. 38ರಷ್ಟು ಹೆಚ್ಚಳವಾಗಿದೆ. ಒಟ್ಟಾರೆ ತೆರಿಗೆ ಸಂಗ್ರಣೆಯಲ್ಲಿ ರೀಫಂಡ್ ಅನ್ನು ಕಳೆದು ಉಳಿಯುವ ನಿವ್ವಳ ಜಿಎಸ್ಟಿ ಕಲೆಕ್ಷನ್ಸ್ 1.5 ಲಕ್ಷ ಕೋಟಿ ರೂ ಆಗುತ್ತದೆ. ಹಿಂದಿನ ವರ್ಷದಕ್ಕೆ ಹೋಲಿಸಿದರೆ ಈ ನೆಟ್ ಕಲೆಕ್ಷನ್ನಲ್ಲಿ ಶೇ. 6.5ರಷ್ಟು ಕಡಿಮೆ ಆಗಿರುವುದು ಕಂಡು ಬರುತ್ತದೆ.
ಆಗಸ್ಟ್ ತಿಂಗಳಲ್ಲಿ ಒಟ್ಟಾರೆ ಬಂದಿರುವ 1.74 ಲಕ್ಷ ಕೋಟಿ ರೂ ಮೊತ್ತದ ತೆರಿಗೆಯಲ್ಲಿ ಆಂತರಿಕ ವ್ಯವಹಾರಗಳಿಂದ ಸಿಕ್ಕಿದ್ದು 1.25 ಲಕ್ಷ ಕೋಟಿ ರೂ. ಈ ತೆರಿಗೆ ಸಂಗ್ರಹಣೆಯಲ್ಲಿ ಶೇ 9.2ರಷ್ಟು ಹೆಚ್ಚಳವಾಗಿದೆ. ಇನ್ನು, ಆಮದುಗೊಂಡ ಸರಕುಗಳಿಂದ ಬಂದ ತೆರಿಗೆ 49,976 ಕೋಟಿ ರೂ ಆಗಿದೆ. ಇದರಲ್ಲಿ ಶೇ. 12.1ರಷ್ಟು ಹೆಚ್ಚಳವಾಗಿದೆ.
ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್ನಲ್ಲಿ ಒಮ್ಮೆ ಹೂಡಿಕೆ ಮಾಡಿ, ಮಾಸಿಕ 20,000 ರೂ ಪಡೆಯಿರಿ
ಪ್ರತೀ ತಿಂಗಳು ರಾಜ್ಯವಾರು ಜಿಎಸ್ಟಿ ಸಂಗ್ರಹದ ವಿವರ ನೀಡಲಾಗುತ್ತಿತ್ತು. ಈ ಬಾರಿ ಅದು ಬಿಡುಗಡೆ ಆಗಿಲ್ಲ. ಮಹಾರಾಷ್ಟ್ರ ರಾಜ್ಯದಲ್ಲಿ ಅತಿಹೆಚ್ಚು ಜಿಎಸ್ಟಿ ಸಂಗ್ರಹ ಆಗುತ್ತದೆ. ನಂತರದ ಸ್ಥಾನ ಕರ್ನಾಟಕದ್ದು. ತಮಿಳುನಾಡು, ಗುಜರಾತ್ ರಾಜ್ಯಗಳಲ್ಲೂ ಅಧಿಕ ತೆರಿಗೆ ಸಂಗ್ರಹಣೆ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ