ನವದೆಹಲಿ, ಅಕ್ಟೋಬರ್ 25: ತೆರಿಗೆ ಕಳ್ಳತನ ಮಾಡಲಾಗಿದೆ ಎಂದು ವಿವಿಧ ಆನ್ಲೈನ್ ಗೇಮಿಂಗ್ ಕಂಪನಿಗಳ ವಿರುದ್ಧ ಜಿಎಸ್ಟಿ ಅಧಿಕಾರಿಗಳು ಶೋಕಾಸ್ ನೋಟೀಸ್ (show cause notice) ನೀಡಿದ್ದಾರೆ. ಈ ಕಂಪನಿಗಳಿಂದ ಆಗಿರುವ ತೆರಿಗೆ ವಂಚನೆಯ ಒಟ್ಟು ಮೊತ್ತ 1 ಲಕ್ಷಕೋಟಿ ರೂ ಎಂದೆನ್ನಲಾಗಿದೆ. ವಿವಿಧ ಅವಧಿಗಳಲ್ಲಿ ಈ ಸಂಸ್ಥೆಗಳಿಗೆ ಶೋಕಾಸ್ ನೋಟೀಸ್ ನೀಡಲಾಗಿದೆ. ಒಂದು ವರ್ಷದ ಹಿಂದೆ, 2022ರ ಸೆಪ್ಟೆಂಬರ್ನಲ್ಲಿ ಗೇಮ್ಸ್ಕ್ರಾಫ್ಟ್ ಎಂಬ ಕಂಪನಿ 21,000 ಕೋಟಿ ರೂ ಜಿಎಸ್ಟಿ ತೆರಿಗೆ ಕಟ್ಟಿಲ್ಲವೆಂದು ಆರೋಪಿಸಿ ನೋಟೀಸ್ ಕೊಡಲಾಗಿತ್ತು. ಆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಗೇಮ್ಸ್ಕ್ರಾಫ್ಟ್ ಪರವಾಗಿ ತಿರ್ಪು ನೀಡಿತ್ತಾದರೂ ಕೇಂದ್ರ ಸರ್ಕಾರ ಸುಪ್ರೀಮ್ ಕೋರ್ಟ್ನಲ್ಲಿ ಸ್ಪೆಷಲ್ ಲೀವ್ ಪೆಟಿಶನ್ ಹಾಕಿದೆ.
ಗೇಮ್ಸ್ಕ್ರಾಫ್ಟ್ ಮಾತ್ರವಲ್ಲದೇ ಡ್ರೀಮ್11 ಮೊದಲಾದ ಆನ್ಲೈನ್ ಗೇಮಿಂಗ್ ಕಂಪನಿಗಳು, ಡೆಲ್ಟಾ ಕಾರ್ಟ್ ಇತ್ಯಾದಿ ಕ್ಯಾಸಿನೋ ಆಪರೇಟಿಂಗ್ ಕಂಪನಿಗಳಿಗೆ ಇದೇ ಸೆಪ್ಟೆಂಬರ್ ತಿಂಗಳಲ್ಲಿ ಜಿಎಸ್ಟಿ ಇಲಾಖೆಯಿಂದ ಶೋಕಾಸ್ ನೋಟೀಸ್ ಜಾರಿ ಮಾಡಲಾಗಿದೆ.
‘ಇಲ್ಲಿಯವರೆಗೆ 1 ಲಕ್ಷ ಕೋಟಿ ರೂ ಮೊತ್ತದ ತೆರಿಗೆ ವಂಚನೆ ಬಗ್ಗೆ ಆನ್ಲೈನ್ ಗೇಮಿಂಗ್ ಕಂಪನಿಗಳಿಗೆ ನೋಟೀಸ್ ಸಲ್ಲಿಸಲಾಗಿದೆ,’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ ವಿವಿಧ ಮಾಧ್ಯಮಗಳು ಉಲ್ಲೇಖಿಸಿ ವರದಿ ಮಾಡಿವೆ.
ವಿದೇಶದ ಆನ್ಲೈನ್ ಗೇಮಿಂಗ್ ಕಂಪನಿಗಳು ಭಾರತದಲ್ಲಿ ನೊಂದಣಿ ಆಗಬೇಕೆಂದು ಕಡ್ಡಾಯಪಡಿಸಿ ಜಿಎಸ್ಟಿ ಕಾನೂನು ತಿದ್ದುಪಡಿ ಮಾಡಲಾಗಿದೆ. ಅಕ್ಟೋಬರ್ 1ರಿಂದ ಈ ನಿಯಮ ಜಾರಿಯಲ್ಲಿದೆ. ಆದರೆ, ಇಲ್ಲಿಯವರೆಗೆ ಯಾವ್ಯಾವ ವಿದೇಶೀ ಗೇಮಿಂಗ್ ಕಂಪನಿಗಳು ಭಾರತದಲ್ಲಿ ನೊಂದಣಿ ಮಾಡಿಕೊಂಡಿವೆ ಎಂಬ ಮಾಹಿತಿ ಸದ್ಯಕ್ಕೆ ದೊರೆತಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ