ದಾಖಲೆ ಬರೆದ ಮಾರ್ಚ್ ತಿಂಗಳ ಜಿಎಸ್ಟಿ ಸಂಗ್ರಹ; ಒಂದೇ ತಿಂಗಳಲ್ಲಿ ಸಂಗ್ರಹವಾದ ಮೊತ್ತ ₹ 1.24 ಲಕ್ಷ
GST Goods Service Tax Revenue collection: ಜಿಎಸ್ಟಿ ಜಾರಿಗೆ ಬಂದ ನಂತರ ಅತ್ಯಧಿಕ ಮೊತ್ತದ ಜಿಎಸ್ಟಿ ಸಂಗ್ರಹ ಮಾರ್ಚ್ 2021ರಲ್ಲಿ ಆಗಿದೆ. ಕಳೆದ 5 ತಿಂಗಳಿನಿಂದೀಚೆಗೆ ಜಿಎಸ್ಟಿ ಸಂಗ್ರಹ ಪ್ರಮಾಣವೂ ನಿಯಮಿತವಾಗಿ ಹೆಚ್ಚಾಗುತ್ತಿದೆ.
ದೆಹಲಿ: ಮಾರ್ಚ್ 2021ರಲ್ಲಿ ಸಂಗ್ರಹವಾದ ಸರಕು ಸೇವಾ ಸುಂಕದ (Goods and Service Tax -GST) ಮೊತ್ತವು ಹೊಸ ದಾಖಲೆ ಬರೆದಿದೆ. ಮಾರ್ಚ್ ತಿಂಗಳಲ್ಲಿ ಒಟ್ಟು ₹ 1,23,902 ಕೋಟಿ ಜಿಎಸ್ಟಿ ಸಂಗ್ರಹವಾಗಿದೆ. ಈ ಪೈಕಿ ಸಿಜಿಎಸ್ಟಿ ₹ 22,973 ಕೋಟಿ, ಎಸ್ಜಿಎಸ್ಟಿ ₹ 29,329 ಮತ್ತು ₹ 62,842 ಕೋಟಿ ಐಜಿಎಸ್ಟಿ ಮತ್ತು ₹ 8757 ಕೋಟಿ ಸೆಸ್ ಸಂಗ್ರಹಿಸಲಾಗಿದೆ. ಐಜಿಎಸ್ಟಿ ಮೊತ್ತದಲ್ಲಿ ಸರಕುಗಳ ಆಮದು ಮೇಲೆ ಸಂಗ್ರಹಿಸಿದ ಸುಂಕ ₹ 31,097 ಕೋಟಿ ಸಹ ಸೇರಿದೆ.
ಐಜಿಎಸ್ಟಿಯಿಂದ ಸಂಗ್ರಹಿಸಿದ ಜಿಎಸ್ಟಿ ಮೊತ್ತದ ಪೈಕಿ ₹ 21,879 ಕೋಟಿಯನ್ನು ಕೇಂದ್ರದ ಪಾಲಿಗೆ ಮತ್ತು ₹ 17,230 ಕೋಟಿಯನ್ನು ರಾಜ್ಯದ ಪಾಲಿಗೆ ಹಂಚಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರವು ₹ 28,000 ಕೋಟಿ ಮೊತ್ತವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಾತ್ಪೂರ್ತಿಕ ಹಂಚಿಕೆ ಮಾಡಿದೆ. ರಾಜ್ಯಗಳಿಗೆ ₹ 30,000 ಕೋಟಿ ಪರಿಹಾರವನ್ನೂ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿದೆ.
ಜಿಎಸ್ಟಿ ಜಾರಿಗೆ ಬಂದ ನಂತರ ಅತ್ಯಧಿಕ ಮೊತ್ತದ ಜಿಎಸ್ಟಿ ಸಂಗ್ರಹ ಮಾರ್ಚ್ 2021ರಲ್ಲಿ ಆಗಿದೆ. ಕಳೆದ 5 ತಿಂಗಳಿನಿಂದೀಚೆಗೆ ಜಿಎಸ್ಟಿ ಸಂಗ್ರಹ ಪ್ರಮಾಣವೂ ನಿಯಮಿತವಾಗಿ ಹೆಚ್ಚಾಗುತ್ತಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಪ್ರಮಾಣವು ಶೇ 27ರಷ್ಟು ಹೆಚ್ಚಾಗಿದೆ ಎಂಬುದು ಗಮನಾರ್ಹ ಸಂಗತಿ.
ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಆಮದು ಪ್ರಮಾಣವೂ ಹೆಚ್ಚಾಗಿರುವುದನ್ನು ಈ ಅಂಕಿಅಂಶಗಳು ಸೂಚಿಸುತ್ತವೆ. ಸರಕುಗಳ ಆಮದು ಮೇಲೆ ವಿಧಿಸುವ ಸುಂಕದಿಂದ ಬಂದಿರುವ ಆದಾಯವು ಶೇ 70 ಮತ್ತು ಆಂತರಿಕ ಬಳಕೆಯ ಉತ್ಪಾದನೆಯ ಮೇಲೆ ಸಂಗ್ರಹಿಸಿರುವ ಸುಂಕವು ಶೇ 17ರಷ್ಟು ಹೆಚ್ಚಾಗಿದೆ. ಜಿಎಸ್ಟಿ ಆದಾಯವು 2020-21ರ ಮೊದಲ ತ್ರೈಮಾಸಿಕದಲ್ಲಿ ಶೇ -41, 2ನೇ ತ್ರೈಮಾಸಿಕದಲ್ಲಿ ಶೇ -8, 3ನೇ ತ್ರೈಮಾಸಿಕದಲ್ಲಿ ಶೇ 8 ಮತ್ತು 3ನೇ ತ್ರೈಮಾಸಿಕದಲ್ಲಿ ಶೇ 14ರಷ್ಟು ಹೆಚ್ಚಾಗಿತ್ತು. ದೇಶದ ಒಟ್ಟಾರೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿರುವುದನ್ನು ಜಿಎಸ್ಟಿ ಸಂಗ್ರಹದಲ್ಲಿನ ಹೆಚ್ಚಳವು ಸೂಚಿಸುತ್ತದೆ.
ಕಳೆದ 6 ತಿಂಗಳಿಂದೀಚೆಗೆ ಜಿಎಸ್ಟಿ ಸಂಗ್ರಹದ ಪ್ರಮಾಣವು ₹ 1 ಲಕ್ಷ ಕೋಟಿಯನ್ನು ಮೀರಿದೆ. ಕೊರೊನಾ ಪಿಡುಗಿನಿಂದ ಸ್ಥಗಿತಗೊಂಡಿದ್ದ ಆರ್ಥಿಕ ಚಟುವಟಿಕೆಗಳು ಮತ್ತೆ ಗರಿಗೆದರುತ್ತಿರುವುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ಬಿಲ್ಲಿಂಗ್ ವೇಳೆ ನಡೆಯುವ ಕಳ್ಳಾಟಗಳಿಗೆ ಕಡಿವಾಣ ಹಾಕುವುದು, ದತ್ತಾಂಶಗಳ ಸೂಕ್ಷ್ಮ ವಿಶ್ಲೇಷಣೆ, ಜಿಎಸ್ಟಿ, ಆದಾಯ ತೆರಿಗೆ, ಅಬಕಾರಿ ಸುಂಕ ಮತ್ತು ತೆರಿಗೆ ಆಡಳಿತದಲ್ಲಿ ಸುಧಾರಣೆಗಳನ್ನು ಜಾರಿ ಮಾಡಿದ್ದರಿಂದ ತೆರಿಗೆ ಸಂಗ್ರಹವು ಹೆಚ್ಚಾಗಿದೆ ಎಂದು ವಾಣಿಜ್ಯ ಸುದ್ದಿಗಳನ್ನು ನಿಯಮಿತವಾಗಿ ವರದಿ ಮಾಡುವ ಜಾಲತಾಣಗಳು ವಿಶ್ಲೇಷಿಸಿವೆ.
GST revenue collection for March 2021 sets new record with a gross collection of ₹1,23,902 crore@FinMinIndia @cbic_india
Read: https://t.co/RYZEdcGCDD pic.twitter.com/Lq7lP0Blmg
— PIB India (@PIB_India) April 1, 2021
ಇದನ್ನೂ ಓದಿ: ಜಿಎಸ್ಟಿ ವಂಚನೆಯ ₹ 20,124 ಕೋಟಿ ಕೇಂದ್ರ ಸರ್ಕಾರದಿಂದ ಪತ್ತೆ: ನಿರ್ಮಲಾ ಸೀತಾರಾಮನ್
ಇದನ್ನೂ ಓದಿ: ಫೆಬ್ರವರಿ ತಿಂಗಳಲ್ಲಿ 1.13 ಲಕ್ಷ ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹ
GST Goods Service Tax Revenue collection for March 21 sets new record
Published On - 6:06 pm, Thu, 1 April 21