ಇನ್ಷೂರೆನ್ಸ್ ಮೇಲೆ ಜಿಎಸ್​ಟಿ ಎಷ್ಟಿರಬೇಕು? 13 ಸಚಿವರ ಸಮಿತಿ ರಚನೆ; ಅ. 30ಕ್ಕೆ ವರದಿ ಸಲ್ಲಿಕೆ

|

Updated on: Sep 16, 2024 | 12:41 PM

Insurance GST rate revision: ಲೈಫ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್ ಪ್ಲಾನ್​ಗಳ ಪ್ರೀಮಿಯಮ್ ಹಣಕ್ಕೆ ವಿಧಿಸಲಾಗುತ್ತಿರುವ ಜಿಎಸ್​​ಟಿ ತೆರಿಗೆ ದರ ಪರಿಷ್ಕರಿಸಲು ಸರ್ಕಾರ ಮುಂದಾಗಿದೆ. ಜಿಎಸ್​ಟಿ ಮಂಡಳಿ ಸೆ. 15ರಂದು 13 ರಾಜ್ಯಗಳ ಗ್ರೂಪ್ ಆಫ್ ಮಿನಿಸ್ಟರ್ಸ್ ಒಳಗೊಂಡ ಸಮಿತಿಯೊಂದನ್ನು ರಚಿಸಿದೆ. ಅಕ್ಟೋಬರ್ 30ರೊಳಗೆ ಈ ಜಿಒಎಂ ತನ್ನ ವರದಿಯನ್ನು ಸಲ್ಲಿಸಲಿದೆ. ಇದರ ಶಿಫಾರಸುಗಳ ಆಧಾರದ ಮೇಲೆ ನವೆಂಬರ್​ನಲ್ಲಿ ಜಿಎಸ್​ಟಿ ಮಂಡಳಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ.

ಇನ್ಷೂರೆನ್ಸ್ ಮೇಲೆ ಜಿಎಸ್​ಟಿ ಎಷ್ಟಿರಬೇಕು? 13 ಸಚಿವರ ಸಮಿತಿ ರಚನೆ; ಅ. 30ಕ್ಕೆ ವರದಿ ಸಲ್ಲಿಕೆ
ಇನ್ಷೂರೆನ್ಸ್
Follow us on

ನವದೆಹಲಿ, ಸೆಪ್ಟೆಂಬರ್ 16: ಆರೋಗ್ಯ ವಿಮೆ ಮತ್ತು ಜೀವ ವಿಮೆಗಳ ಪ್ರೀಮಿಯಮ್ ಹಣದ ಮೇಲೆ ಶೇ. 18ರಷ್ಟಿರುವ ಜಿಎಸ್​ಟಿ ದರವನ್ನು ತೆಗೆದುಹಾಕಬೇಕು ಅಥವಾ ಕಡಿಮೆ ಮಾಡಬೇಕು ಎನ್ನುವ ಒತ್ತಾಯ ಎಲ್ಲೆಡೆ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಗಾಗಿ ಸಮಿತಿಯೊಂದನ್ನು ರಚಿಸಲಾಗಿದೆ. ನಿನ್ನೆ ಭಾನುವಾರ ಜಿಎಸ್​ಟಿ ಕೌನ್ಸಿಲ್ 13 ಸಚಿವರ ಸಮಿತಿಯೊಂದನ್ನು (ಜಿಒಎಂ) ರಚಿಸಿದೆ. ಈ ಸಮಿತಿಯು ಸರಕು ಮತ್ತು ಸೇವಾ ತೆರಿಗೆ ಮಂಡಳಿಗೆ ತನ್ನ ವರದಿಯನ್ನು ಅಕ್ಟೋಬರ್ 30ರೊಳಗೆ ಸಲ್ಲಿಸುವ ನಿರೀಕ್ಷೆ ಇದೆ. ಸೆಪ್ಟೆಂಬರ್ 9ರಂದು ನಡೆದ 65ನೇ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಇನ್ಷೂರೆನ್ಸ್ ಪ್ರೀಮಿಯಮ್ ಮೇಲಿನ ಜಿಎಸ್​ಟಿ ದರವನ್ನು ಪರಿಶೀಲಿಸಿ ಪರಿಷ್ಕರಣೆ ನಡೆಸಲು ಗ್ರೂಪ್ ಆಫ್ ಮಿನಿಸ್ಟರ್ಸ್ ಅನ್ನು ಸ್ಥಾಪಿಸಲು ನಿರ್ಧರಿಸಲಾಗಿತ್ತು.

ಅ. 30ಕ್ಕೆ ಈ ಸಚಿವರ ಸಮಿತಿ ತನ್ನ ಶಿಫಾರಸುಗಳನ್ನು ಸಲ್ಲಿಸುವ ನಿರೀಕ್ಷೆ ಇದೆ. ಈ ಜಿಒಎಂ ವರದಿಯಲ್ಲಿನ ಅಂಶಗಳ ಆಧಾರದ ಮೇಲೆ ಜಿಎಸ್​ಟಿ ಮಂಡಳಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ. ನವೆಂಬರ್​ನಲ್ಲಿ ಜಿಎಸ್​ಟಿ ಮಂಡಳಿಯ 55ನೇ ಸಭೆ ನಡೆಯಲಿದೆ.

ಇದನ್ನೂ ಓದಿ: UPI Transaction Limit: ಕೆಲ ಯುಪಿಐ ಪಾವತಿ ಮಿತಿ 5 ಲಕ್ಷ ರೂಗೆ ಹೆಚ್ಚಳ; ಇವತ್ತಿನಿಂದ ಅಪ್​ಡೇಟೆಡ್ ಸೌಲಭ್ಯ ಜಾರಿ

ಕರ್ನಾಟಕದ ಸದಸ್ಯರಿದ್ದಾರೆ ಜಿಒಎಂನಲ್ಲಿ

ಇನ್ಷೂರೆನ್ಸ್ ಮೇಲಿನ ಜಿಎಸ್​ಟಿಯನ್ನು ಪರಿಶೀಲಿಸಲು ರಚಿಸಲಾಗಿರುವ ಸಚಿವರ ಸಮಿತಿಯಲ್ಲಿ 13 ರಾಜ್ಯಗಳ ಪ್ರತಿನಿಧಿಗಳಿದ್ದಾರೆ. ಕರ್ನಾಟಕ, ಬಿಹಾರ, ಉತ್ತರಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಕೇರಳ, ಆಂಧ್ರಪ್ರದೇಶ, ಗೋವಾ, ಗುಜರಾತ್, ಮೇಘಾಲಯ, ಪಂಜಾಬ್, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ಸದಸ್ಯರು ಈ ಸಮಿತಿಯಲ್ಲಿದ್ದಾರೆ. ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಜಿಒಎಂನ ಸಂಚಾಲಕರಾಗಿದ್ದಾರೆ.

ಹಿರಿಯ ನಾಗರಿಕರು, ಮಧ್ಯಮ ವರ್ಗದವರು, ಮಾನಸಿ ಅಸ್ವಸ್ಥರು ಇತ್ಯಾದಿ ಬೇರೆ ಬೇರೆ ವಿಭಾಗಗಳಲ್ಲಿ ವಿವಿಧ ಇನ್ಷೂರೆನ್ಸ್ ಪ್ಲಾನ್​ಗಳ ಪ್ರೀಮಿಯಮ್​ಗಳಿಗೆ ಎಷ್ಟು ಜಿಎಸ್​ಟಿ ಇರಬೇಕು, ಅಥವಾ ಪೂರ್ಣವಾಗಿ ಜಿಎಸ್​ಟಿಯೇ ಇರಬಾರದಾ ಎಂಬಿತ್ಯಾದಿ ಅಂಶಗಳನ್ನು ಅಮೂಲಾಗ್ರವಾಗಿ ಅವಲೋಕಿಸಲಿರುವ ಈ ಸಮಿತಿಯು ಅಕ್ಟೋಬರ್ ಅಂತ್ಯದೊಳಗೆ ವರದಿ ಸಲ್ಲಿಸಲು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಗಾಂಧಿನಗರದಲ್ಲಿ ಜಾಗತಿಕ ಮರುಬಳಕೆ ಇಂಧನ ಸಭೆ ಮತ್ತು ಎಕ್ಸ್​ಪೋ ಕಾರ್ಯಕ್ರಮ ಇಂದು ಆರಂಭ

54ನೇ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಫಿಟ್ಮೆಂಟ್ ಕಮಿಟಿಯು ಇನ್ಷೂರೆನ್ಸ್ ಪ್ರೀಮಿಯಮ್​ಗೆ ಜಿಎಸ್​ಟಿ ಕಡಿಮೆ ಮಾಡುವುದರಿಂದ ಅಥವಾ ತೆಗೆದುಹಾಕುವುದರಿಂದ ಆಗಬಹುದಾದ ನಷ್ಟವನ್ನು ಮನದಟ್ಟು ಮಾಡಿಕೊಡಲು ಯತ್ನಿಸಿತ್ತು. ಜಿಎಸ್​ಟಿ ಸಂಗ್ರಹದಲ್ಲಿ ಹೆಚ್ಚಿನ ಪಾಲು ರಾಜ್ಯಗಳಿಗೆ ಹೋಗುತ್ತವೆ. ಆದ್ದರಿಂದ ರಾಜ್ಯಗಳಿಗೂ ತೆರಿಗೆ ಸಂಗ್ರಹ ಕಡಿಮೆ ಆಗಬಹುದು ಎನ್ನುವ ಅಂಶವನ್ನು ಸಭೆಯಲ್ಲಿ ತಿಳಿಸಲಾಯಿತು ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ