ಬೆಂಗಳೂರು, ಸೆಪ್ಟೆಂಬರ್ 13: ಭಾರತದ ಸರ್ಕಾರಿ ಸಂಸ್ಥೆಗಳ ಪೈಕಿ ನವರತ್ನಗಳಲ್ಲಿ ಒಂದಾಗಿರುವ ಎಚ್ಎಎಲ್ಗೆ ಈ ವರ್ಷಾಂತ್ಯದೊಳಗೆ ಮಹಾರತ್ನ ಸ್ಥಾನಮಾನ ಸಿಗಲಿದೆ. ಇದರೊಂದಿಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಸಂಸ್ಥೆ ಹೆಚ್ಚು ಸ್ವಾಯತ್ತತೆ ಗಳಿಸಲಿದೆ. ಸರ್ಕಾರದ ಅನುಮೋದನೆ ಇಲ್ಲದೇ ಹೆಚ್ಚು ಮೊತ್ತದ ಹೂಡಿಕೆ ಮಾಡಲು ಅವಕಾಶ ಸಿಗುತ್ತದೆ. ಸದ್ಯ ಎಚ್ಎಎಲ್ ಸಂಸ್ಥೆ ದೇಶದ 25 ನವರತ್ನ ಪಿಎಸ್ಯುಗಳಲ್ಲಿ ಒಂದಾಗಿದೆ. ಮಹಾರತ್ನ ಸ್ಥಾನಮಾನ ಹೊಂದಿರುವ 13 ಕಂಪನಿಗಳ ಪಟ್ಟಿಗೆ ಎಚ್ಎಎಲ್ ಸೇರ್ಪಡೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.
ಮಹಾರತ್ನ ಸ್ಥಾನಮಾನ ಪಡೆದರೆ ಎಚ್ಎಎಲ್ ಆಡಳಿತ ಮಂಡಳಿ ಹೆಚ್ಚು ಸ್ವಾಯತ್ತ ಅಧಿಕಾರ ಹೊಂದಿರುತ್ತದೆ. ಸರ್ಕಾರದ ಅನುಮೋದನೆ ಇಲ್ಲದೇ 5,000 ಕೋಟಿ ರೂವರೆಗಿನ ಯೋಜನೆಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಿದೆ. ನವರತ್ನ ವಿಭಾಗದ ಸಂಸ್ಥೆಗಳು ಈ ರೀತಿ 1,000 ಕೋಟಿ ರೂವರೆಗೆ ಮಾತ್ರ ಹೂಡಿಕೆಗೆ ಅವಕಾಶ ಇರುತ್ತದೆ.
ದೇಶದಲ್ಲಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮೂರು ಪ್ರಮುಖ ಶ್ರೇಣಿಗಳಾಗಿ ವರ್ಗೀಕರಿಸಲಾಗಿದೆ. ಮಹಾರತ್ನ, ನವರತ್ನ ಮತ್ತು ಮಿನಿರತ್ನ ಸ್ಥಾನಮಾನ ನೀಡಲಾಗುತ್ತದೆ. ಮಿನಿರತ್ನ ಪಟ್ಟಿಯನ್ನು ಎರಡು ಭಾಗವಾಗಿ ಮಾಡಲಾಗಿದೆ. ಮೊದಲ ಮಿನಿರತ್ನ ಪಟ್ಟಿಯಲ್ಲಿ 51 ಕಂಪನಿಗಳಿವೆ. ಬೆಮೆಲ್, ಬಿಎಸ್ಎನ್ಎಲ್, ಮಂಗಳೂರು ರಿಫೈನರಿ ಮೊದಲಾದ ಸಂಸ್ಥೆಗಳು ಈ ಪಟ್ಟಿಯಲ್ಲಿವೆ. ಎರಡನೆ ಮಿನಿರತ್ನ ಪಟ್ಟಿಯಲ್ಲಿ ಎಚ್ಎಂಟಿ ಸೇರಿದಂತೆ 11 ಸಂಸ್ಥೆಗಳಿವೆ.
ಇದನ್ನೂ ಓದಿ: ಎಲೆಕ್ಟ್ರಿಕ್ ದ್ವಿಚಕ್ರ ವಾಹಗಳಿಗೆ 10,000 ರೂ ಸಬ್ಸಿಡಿ; 2025ರ ಮಾರ್ಚ್ವರೆಗೂ ಮಾತ್ರ ಈ ಕೊಡುಗೆ
ಇದನ್ನೂ ಓದಿ: ಬೆಂಗಳೂರಿನ ಹೊಸಕೋಟೆಯಲ್ಲಿ ಬಿಸಿಡಿ ಟೌನ್ಶಿಪ್; ಮಹಿಳಾ ಫಾಕ್ಸ್ಕಾನ್ ಉದ್ಯೋಗಿಗಳಿಗೆ 900 ಅಪಾರ್ಟ್ಮೆಂಟ್ಸ್
ಈ ರೀತಿ ಒಂದೊಂದು ಸ್ಥಾನಮಾನಕ್ಕೂ ನಿರ್ದಿಷ್ಟ ಮಾನದಂಡಗಳನ್ನು ಇಡಲಾಗಿರುತ್ತದೆ. ಬಿಸಿನೆಸ್ ನಿರ್ವಹಣೆ, ಆಡಳಿತ ನಿರ್ವಹಣೆ, ಲಾಭ ಗಳಿಕೆ ಇತ್ಯಾದಿ ಮಾನದಂಡಗಳಿರುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ