HDFC: ‘ಪ್ರತೀ 4 ವರ್ಷಕ್ಕೆ ಹೊಸ ಎಚ್ಡಿಎಫ್ಸಿ ಬ್ಯಾಂಕ್’- ವಿಲೀನದ ಬಳಿಕ ಮಹತ್ವಾಕಾಂಕ್ಷೆ ಬಿಚ್ಚಿಟ್ಟ ಸಿಇಒ
HDFC Bank Aims For Superfast Growth: ಮುಂಬರುವ ವರ್ಷಗಳಲ್ಲಿ ತಮ್ಮ ಬ್ಯಾಂಕ್ ಅದ್ವಿತೀಯ ವೇಗದಲ್ಲಿ ಬೆಳೆಯಲಿದೆ. ಪ್ರತೀ ವರ್ಷವೂ 1,500ಕ್ಕೂ ಹೆಚ್ಚು ಹೊಸ ಶಾಖೆಗಳನ್ನು ಸೇರಿಸುತ್ತಾ ಹೋಗುತ್ತೇವೆ ಎಂದು ಎಚ್ಡಿಎಫ್ಸಿ ಬ್ಯಾಂಕ್ ಸಿಇಒ ಶಶಿಧರ್ ಜಗದೀಶನ್ ಹೇಳಿದ್ದಾರೆ.
ನವದೆಹಲಿ: ಎಚ್ಡಿಎಫ್ಸಿ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ನಿನ್ನೆ (ಜುಲೈ 1) ವಿಲೀನಗೊಂಡ (HDFC merger) ಬೆನ್ನಲ್ಲೇ ಜಾಗತಿಕ ಬ್ಯಾಂಕಿಂಗ್ ದೈತ್ಯವೊಂದು ಭಾರತದಿಂದ ಸಿದ್ಧಗೊಂಡಿದೆ. ವಿಲೀನದ ಬಳಿಕ ಮಾತನಾಡಿದ ಎಚ್ಡಿಎಫ್ಸಿ ಬ್ಯಾಂಕ್ ಸಿಇಒ ಶಶಿಧರ್ ಜಗದೀಶನ್, ಮುಂಬರುವ ವರ್ಷಗಳಲ್ಲಿ ತಮ್ಮ ಬ್ಯಾಂಕ್ ಅದ್ವಿತೀಯ ವೇಗದಲ್ಲಿ ಬೆಳೆಯಲಿದೆ ಎಂದು ಹೇಳಿಕೊಂಡಿದ್ದಾರೆ. ದೇಶದ ಹಲವು ಭಾಗಗಳಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ಸೇವೆಗಳು ತಲುಪುವ ನಿಟ್ಟಿನಲ್ಲಿ ಪ್ರತೀ ವರ್ಷವೂ 1,500ಕ್ಕೂ ಹೆಚ್ಚು ಹೊಸ ಶಾಖೆಗಳನ್ನು ಸೇರಿಸುತ್ತಾ ಹೋಗುತ್ತೇವೆ. ಪ್ರತೀ ನಾಲ್ಕು ವರ್ಷಕ್ಕೆ ಹೊಸ ಎಚ್ಡಿಎಫ್ಸಿ ಬ್ಯಾಂಕ್ ಸೃಷ್ಟಿಯಾಗುತ್ತಿರುತ್ತದೆ ಎಂದು ಅವರು ತಮ್ಮ ಸಂಸ್ಥೆಯ ವಿಚಾರದಲ್ಲಿ ಮಹತ್ವಾಕಾಂಕ್ಷೆಗಳನ್ನು ತೋಡಿಕೊಂಡಿದ್ದಾರೆ.
‘ಹಣಕಾಸು ಸೇವೆ ಮತ್ತು ಅಡಮಾನ ಸಾಲಗಳಿಗೆ ಬಹಳ ದೊಡ್ಡ ಅವಕಾಶ ಇದೆ. ಎರಡೂ ಸಂಸ್ಥೆಗಳು ಸೇರಿರುವ ಎಚ್ಡಿಎಫ್ಸಿ ಬ್ಯಾಂಕ್ಗೆ ದೊಡ್ಡ ಗ್ರಾಹಕ ಸಮೂಹ ಇದೆ. ಸಾಕಷ್ಟು ಬಂಡವಾಳ ಇದೆ. ಒಳ್ಳೆಯ ಸಾಲಗಳಿವೆ. ಲಾಭ ಕೂಡ ಇದೆ. ಬೆಳವಣಿಗೆ ಸಾಧಿಸಲು ಎಚ್ಡಿಎಫ್ಸಿ ಬ್ಯಾಂಕ್ ಸಮರ್ಥವಾಗಿದೆ. ನಾವು ಅಂದುಕೊಂಡಿರುವ ಗುರಿ ಪ್ರಕಾರ ಬೆಳವಣಿಗೆ ಸಾಧಿಸುತ್ತಾ ಹೋದರೆ ಪ್ರತೀ 4 ವರ್ಷಗಳಿಗೆ ಹೊಸ ಎಚ್ಡಿಎಫ್ಸಿ ಬ್ಯಾಂಕ್ವೊಂದನ್ನೇ ತಯಾರಿಸುತ್ತಾ ಹೋಗುತ್ತೇವೆ’ ಎಂದು ಬ್ಯಾಂಕ್ನ ಎಂಡಿ ಮತ್ತು ಸಿಇಒ ತಮ್ಮ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ನಾವು ಮಾಡುವ ವ್ಯವಹಾರದ ಸ್ವರೂಪವೇ ಗಮನಾರ್ಹವಾಗಿ ಬದಲಾಗಲಿದೆ. ಸೇಲ್ಸ್ ಮ್ಯಾನೇಜ್ಮೆಂಟ್ನಿಂದ ನಾವು ರಿಲೇಶನ್ಶಿಪ್ ಮ್ಯಾನೇಜ್ಮೆಂಟ್ ಕಡೆಗೆ ಹೋಗಲಿದ್ದೇವೆ. ಗ್ರಾಹಕರಿಗೆ ಸೇವೆ ನೀಡುವ ಕ್ರಮದಲ್ಲಿ ಕ್ಷಿಪ್ರತೆ ಇತ್ಯಾದಿ ಅಂಶಗಳು ಗೇಮ್ ಚೇಂಜರ್ ಆಗಲಿವೆ ಎಂದು ಶಶಿಧರ್ ಜಗದೀಶನ್ ವಿವರಿಸಿದ್ದಾರೆ.
ಗೃಹಸಾಲ ವೃದ್ಧಿಗೆ ಎಚ್ಡಿಎಫ್ಸಿ ಬ್ಯಾಂಕ್ ಕಣ್ಣು
ವಿಲೀನಗೊಳ್ಳುವ ಮುನ್ನ ಎಚ್ಡಿಎಫ್ಸಿ ಗೃಹ ಸಾಲ ಕೊಡುವ ಹಣಕಾಸು ಸಂಸ್ಥೆಯಾಗಿತ್ತು. ಆದರೆ, ಅದರ ಗ್ರಾಹಕರ ಸಂಖ್ಯೆ ತೀರಾ ಹೆಚ್ಚೇನೂ ಇಲ್ಲ. ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಗೃಹಸಾಲಗಳನ್ನು ಹೆಚ್ಚಿಸುವ ಅವಕಾಶ ಇದೆ. ಈ ನಿಟ್ಟಿನಲ್ಲಿ ಗಮನ ವಹಿಸಲಾಗುತ್ತದೆ ಎಂದೂ ಎಚ್ಡಿಎಫ್ಸಿ ಬ್ಯಾಂಕ್ ಸಿಇಒ ತಿಳಿಸಿದ್ದಾರೆ.
ಇದನ್ನೂ ಓದಿ: Apple Card: ಭಾರತಕ್ಕೆ ಬರಲಿದೆಯೇ ಆ್ಯಪಲ್ ಕ್ರೆಡಿಟ್ ಕಾರ್ಡ್? ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಆ್ಯಪಲ್ ಸಿಇಒ ಮಾತುಕತೆ?
ಎಚ್ಡಿಎಫ್ಸಿ ವಿಲೀನದ ಬಳಿಕ ಎಚ್ಡಿಎಫ್ಸಿ ಬ್ಯಾಂಕ್ ವಿಶ್ವದ ಟಾಪ್-5 ಬ್ಯಾಂಕುಗಳಲ್ಲಿ ಒಂದೆನಿಸಿದೆ. ಹಲವು ಅಮೆರಿಕನ್ ಮತ್ತು ಚೀನೀ ಬ್ಯಾಂಕಿಂಗ್ ದೈತ್ಯರಿಗಿಂತ ಎಚ್ಡಿಎಫ್ಸಿ ಮೇಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ