Most Valuable Banks: ಎಚ್ಡಿಎಫ್ಸಿಗಳ ವಿಲೀನದ ಬಳಿಕ ಸೃಷ್ಟಿಯಾಗಲಿದೆ ವಿಶ್ವದ ಅಗ್ರಗಣ್ಯ ಬ್ಯಾಂಕ್; ಜರ್ಮನಿ ಜನಸಂಖ್ಯೆಗಿಂತಲೂ ಹೆಚ್ಚಿನ ಗ್ರಾಹಕರು, ಅಗಾಧ ಷೇರುಸಂಪತ್ತು
HDFC Bank Becomes World Giant After Merger: ಎಚ್ಡಿಎಫ್ಸಿ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಸಂಸ್ಥೆಗಳು ವಿಲೀನಗೊಳ್ಳುತ್ತಿದ್ದು, ಇದರಿಂದ ವಿಶ್ವದ ನಾಲ್ಕನೇ ಅತಿದೊಡ್ಡ ಬ್ಯಾಂಕ್ ಅಗಿ ಬೆಳೆಯಲಿದೆ ಎಚ್ಡಿಎಫ್ಸಿ. ಗ್ರಾಹಕರ ಸಂಖ್ಯೆ 12 ಕೋಟಿಗೆ ಏರಲಿದ್ದು ಇದು ಜರ್ಮನಿ, ಬ್ರಿಟನ್ ಇತ್ಯಾದಿ ದೇಶಗಳ ಜನಸಂಖ್ಯೆಗಿಂತಲೂ ಹೆಚ್ಚು.
ಹೌಸಿಂಗ್ ಡೆವಲಪ್ಮೆಂಟ್ ಕಾರ್ಪೊರೇಷನ್ ಕಾರ್ಪೊರೇಷನ್ (HDFC) ಮತ್ತು ಎಚ್ಡಿಎಫ್ಸಿ ಬ್ಯಾಂಕ್ನ ವಿಲೀನದ ಬಳಿಕ ಭಾರತದ ಅತಿದೊಡ್ಡ ಬ್ಯಾಂಕ್ ಆಗಿ ರೂಪುಗೊಳ್ಳಲಿದೆ. ವಿಲೀನದ ಬಳಿಕ ಎಚ್ಡಿಎಫ್ಸಿ ಬ್ಯಾಂಕ್ ವಿಶ್ವದ ಅಗ್ರಗಣ್ಯ ಬ್ಯಾಂಕುಗಳ ಸಾಲಿನಲ್ಲಿ ನಿಲ್ಲಲಿದೆ. ವಿಶ್ವದ ಟಾಪ್-5 ಬ್ಯಾಂಕುಗಳಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ಇರಲಿದೆ. ಅಮೆರಿಕ ಮತ್ತು ಚೀನಾದ ಬ್ಯಾಂಕಿಂಗ್ ದೈತ್ಯರಿಗೆ ಸವಾಲೆಸೆಯುವ ಮಟ್ಟಕ್ಕೆ ಎಚ್ಡಿಎಫ್ಸಿ ಬೆಳೆಯಲಿದೆ. ಷೇರುಸಂಪತ್ತಿನ ಪ್ರಮಾಣದಲ್ಲಿ ಜೆಪಿ ಮಾರ್ಗನ್ ಚೇಸ್, ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ (ICBC) ಮತ್ತು ಬ್ಯಾಂಕ್ ಆಫ್ ಅಮೆರಿಕ ಕಾರ್ಪೊರೇಷನ್ ನಂತರದ ಸ್ಥಾನ ಎಚ್ಡಿಎಫ್ಸಿಯದ್ದಾಗಿರಲಿದೆ. ಈ ಮಟ್ಟಕ್ಕೆ ಬೆಳೆದ ಮೊದಲ ಭಾರತೀಯ ಬ್ಯಾಂಕ್ ಎಚ್ಡಿಎಫ್ಸಿಯಾಗಿದೆ. ಮಾರ್ಗನ್ ಸ್ಟಾನ್ಲೀ, ಎಚ್ಎಸ್ಬಿಸಿ, ಸಿಸಿಬಿ ಇತ್ಯಾದಿ ಬ್ಯಾಂಕಿಂಗ್ ದೈತ್ಯರಿಗಿಂತಲೂ ಎಚ್ಡಿಎಫ್ಸಿ ಬೃಹತ್ತಾಗಿರಲಿದೆ.
ಎಚ್ಡಿಎಫ್ಸಿ ಎಂಬುದು ಮೂಲ ಕಂಪನಿ. ಗೃಹ ನಿರ್ಮಾಣಕ್ಕೆ ಸಾಲ ಒದಗಿಸುವ ಕಂಪನಿಯಾಗಿ ಬೆಳೆದ ಎಚ್ಡಿಎಫ್ಸಿಯ ಬ್ಯಾಂಕಿಂಗ್ ಅಂಗವಾಗಿ ಎಚ್ಡಿಎಫ್ಸಿ ಬ್ಯಾಂಕ್ ಸ್ಥಾಪನೆಯಾಗಿತ್ತು. ಈಗ ಅಂಗಸಂಸ್ಥೆಯೊಂದಿಗೆ ಎಚ್ಡಿಎಫ್ಸಿ ವಿಲೀನಗೊಂಡಿದೆ. ಬಿಎಸ್ಇ ಮತ್ತು ಎನ್ಎಸ್ಇ ಎರಡೂ ಷೇರುಪೇಟೆಗಳಲ್ಲಿ ಈ ಎರಡೂ ಕೂಡ ಲಿಸ್ಟ್ ಆಗಿದ್ದವು. ಈಗ ವಿಲೀನದ ಬಳಿಕ ಎಚ್ಡಿಎಫ್ಸಿಯ ಷೇರುಸಂಪತ್ತು ಎಚ್ಡಿಎಫ್ಸಿ ಬ್ಯಾಂಕ್ಗೆ ಜೋಡಿತಗೊಳ್ಳಲಿದೆ. ಎಚ್ಡಿಎಫ್ಸಿ ಬದಲು ಎಚ್ಡಿಎಫ್ಸಿ ಬ್ಯಾಂಕ್ ಮಾತ್ರ ಇರಲಿದೆ. ಎರಡೂ ಸೇರಿ ಒಟ್ಟು ಷೇರುಸಂಪತ್ತು 172 ಬಿಲಿಯನ್ ಡಾಲರ್ ಆಗಲಿದೆ. ಅಂದರೆ ಸುಮಾರು 14 ಲಕ್ಷ ಕೋಟಿ ರೂನಷ್ಟು ಷೇರುಸಂಪತ್ತು ಎಚ್ಡಿಎಫ್ಸಿ ಬ್ಯಾಂಕ್ನದ್ದಾಗಿರಲಿದೆ.
ಅಲ್ಲದೇ ವಿಲೀನದ ಬಳಿಕ ಎಚ್ಡಿಎಫ್ಸಿ ಬ್ಯಾಂಕ್ನ ಗ್ರಾಹಕರ ಸಂಖ್ಯೆ 12 ಕೋಟಿಗೆ ಏರಲಿದೆ. ಇದು ಜರ್ಮನಿ, ಇರಾನ್ ಇತ್ಯಾದಿ ದೇಶಗಳ ಜನಸಂಖ್ಯೆಗಿಂತಲೂ ದೊಡ್ಡ ಸಂಖ್ಯೆ. ಜನಸಂಖ್ಯೆಯಲ್ಲಿ ವಿಶ್ವದ 13ನೇ ಸ್ಥಾನದಲ್ಲಿರುವ ಫಿಲಿಪ್ಪೈನ್ಸ್ ದೇಶದಲ್ಲಿರುವ ಒಟ್ಟು ಜನರ ಸಂಖ್ಯೆಗಿಂತಲೂ ಹೆಚ್ಚು ಗ್ರಾಹಕರನ್ನು ಎಚ್ಡಿಎಫ್ಸಿ ಬ್ಯಾಂಕ್ ಹೊಂದಿರಲಿದೆ.
ಅಷ್ಟೇ ಅಲ್ಲ, ಎಚ್ಡಿಎಫ್ಸಿ ಬ್ಯಾಂಕ್ನ ಶಾಖೆಗಳ ಸಂಖ್ಯೆ 8,300 ಹಾಗೂ ಉದ್ಯೋಗಿಗಳ ಸಂಖ್ಯೆ 1,77,000ಕ್ಕೂ ಹೆಚ್ಚಿರಲಿದೆ.
ವಿಶ್ವದ ಅತ್ಯಂತ ಮೌಲ್ಯಯುತ ಬ್ಯಾಂಕುಗಳು
- ಜೆಪಿ ಮಾರ್ಗನ್ ಚೇಸ್: 416.5 ಬಿಲಿಯನ್ ಡಾಲರ್
- ಐಸಿಬಿಸಿ: 228.3 ಬಿಲಿಯನ್ ಡಾಲರ್
- ಬ್ಯಾಂಕ್ ಆಫ್ ಅಮೇರಿಕಾ: 227.7 ಬಿಲಿಯನ್ ಡಾಲರ್
- ಎಚ್ಡಿಎಫ್ಸಿ ಬ್ಯಾಂಕ್: 171.8 ಬಿಲಿಯನ್ ಡಾಲರ್
- ಅಗ್ರಿಕಲ್ಚರಲ್ ಬ್ಯಾಂಕ್ ಆಫ್ ಚೀನಾ: 168.9 ಬಿಲಿಯನ್ ಡಾಲರ್
- ಚೀನಾ ಕನ್ಸ್ಟ್ರಕ್ಷನ್ ಬ್ಯಾಂಕ್: 162.8 ಬಿಲಿಯನ್ ಡಾಲರ್
- ಎಚ್ಎಸ್ಬಿಸಿ: 156.6 ಬಿಲಿಯನ್ ಡಾಲರ್
- ವೆಲ್ಸ್ ಫಾರ್ಗೋ: 156.2 ಬಿಲಿಯನ್ ಡಾಲರ್
- ಬ್ಯಾಂಕ್ ಆಫ್ ಚೀನಾ: 147.3 ಬಿಲಿಯನ್ ಡಾಲರ್
- ಮಾರ್ಗನ್ ಸ್ಟಾನ್ಲೀ: 144.2 ಬಿಲಿಯನ್ ಡಾಲರ್
ಇದನ್ನೂ ಓದಿ: Deepak Parekh: ಷೇರು ಬೇಡ, ಸಂಬಳ ಸಾಕು ಎನ್ನುವ ಮಾಲೀಕ; 5 ಲಕ್ಷ ಕೋಟಿ ಮೌಲ್ಯದ ಕಂಪನಿ ಛೇರ್ಮನ್ನ ಸರಳತೆ ಎಲ್ಲರಿಗೂ ಮಾದರಿ
ಭಾರತೀಯ ಬ್ಯಾಂಕುಗಳ ಒಟ್ಟು ಷೇರುಸಂಪತ್ತಿನಲ್ಲಿ ಎಚ್ಡಿಎಫ್ಸಿ ನಂಬರ್ ಒನ್
- ಎಚ್ಡಿಎಫ್ಸಿ ಬ್ಯಾಂಕ್: 9.47 ಲಕ್ಷ ಕೋಟಿ ರೂ
- ಐಸಿಐಸಿಐ ಬ್ಯಾಂಕ್: 6.53 ಲಕ್ಷ ಕೋಟಿ ರೂ
- ಎಸ್ಬಿಐ: 5.09 ಲಕ್ಷ ಕೋಟಿ ರೂ
- ಕೋಟಕ್ ಮಹೀಂದ್ರ: 3.64 ಲಕ್ಷ ಕೋಟಿ ರೂ
- ಆ್ಯಕ್ಸಿಸ್ ಬ್ಯಾಂಕ್: 3 ಲಕ್ಷ ಕೋಟಿ ರೂ
- ಇಂಡಸ್ಇಂಡ್ ಬ್ಯಾಂಕ್: 1.05 ಲಕ್ಷ ಕೋಟಿ ರೂ
- ಐಡಿಬಿಐ: 59,000 ಕೋಟಿ ರೂ
- ಬ್ಯಾಂಕ್ ಆಫ್ ಬರೋಡಾ: 56,000 ಕೋಟಿ ರೂ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ