ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 17.5ರಷ್ಟು ಏರಿಕೆಯಾಗಿ ಸೆಪ್ಟೆಂಬರ್ ತ್ರೈಮಾಸಿಕಕ್ಕೆ 8834 ಕೋಟಿ ನಿವ್ವಳ ಲಾಭ
ಎಚ್‌ಡಿಎಫ್‌ಸಿ ಬ್ಯಾಂಕ್ನ 2021-22ನೇ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಲಾಭವು ಶೇ 17.5ಯಷ್ಟು ಏರಿಕೆ ಆಗಿದ್ದು, ರೂ. 8834 ಕೋಟಿ ರೂಪಾಯಿಯನ್ನು ತಲುಪಿದೆ.
ಹಣಕಾಸು ವರ್ಷ 2022ರ ಎರಡನೇ ತ್ರೈಮಾಸಿಕದಲ್ಲಿ (ಜುಲೈನಿಂದ ಸೆಪ್ಟೆಂಬರ್) ಎಚ್‌ಡಿಎಫ್‌ಸಿ ಬ್ಯಾಂಕ್ ನಿವ್ವಳ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ ಶೇ 17.5ರಷ್ಟು ಬೆಳವಣಿಗೆಯನ್ನು ವರದಿ ಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 7,513.11 ಕೋಟಿ ರೂಪಾಯಿಗೆ ಹೋಲಿಸಿದರೆ ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಬ್ಯಾಂಕ್ನ ನಿವ್ವಳ ಲಾಭ 8,834.31 ಕೋಟಿ ರೂಪಾಯಿಯಷ್ಟಿದೆ. ನಿವ್ವಳ ಬಡ್ಡಿ ಆದಾಯ, ಅಥವಾ ಮೂಲ ಆದಾಯ ವರ್ಷದಿಂದ ವರ್ಷಕ್ಕೆ ಶೇ 12ರಷ್ಟು ಏರಿಕೆಯಾಗಿದ್ದು, 17,684 ಕೋಟಿಗೆ ತಲುಪಿದೆ. ಇತರ ಆದಾಯವು ಕೂಡ ಒಂದು ವರ್ಷದ ಹಿಂದಿನ ಮಟ್ಟಕ್ಕಿಂತ ಶೇ 21.5ರಷ್ಟು ಹೆಚ್ಚಳವಾಗಿ, 7,401 ಕೋಟಿ ರೂಪಾಯಿಗೆ ಮುಟ್ಟಿದೆ. ಬ್ಯಾಂಕ್ನ ಆಸ್ತಿಯ ಗುಣಮಟ್ಟವು ಅನುಕ್ರಮವಾಗಿ ಸುಧಾರಿಸಿದೆ. ಒಟ್ಟಾರೆ ಅನುತ್ಪಾದಕ ಆಸ್ತಿ ಅನುಪಾತವು ಜೂನ್ 30ರ ವೇಳೆಗೆ ಶೇ 1.47 ರೊಂದಿಗೆ ಹೋಲಿಸಿದರೆ ಈಗ ಶೇ 1.35 ಇದೆ. ನಿವ್ವಳ ಎನ್‌ಪಿಎ ಅನುಪಾತವು ಸಹ 8 ಬೇಸಿಸ್ ಪಾಯಿಂಟ್ ಕಡಿಮೆಯಾಗಿ, ತ್ರೈಮಾಸಿಕದಿಂದ ತ್ರೈಮಾಸಿಕದಿಂದ ಶೇ 0.4ಕ್ಕೆ ಇಳಿದಿದೆ.
ಬ್ಯಾಂಕಿನ ಒಟ್ಟು ಪ್ರಾವಿಷನ್ಗಳು ವರ್ಷದಿಂದ ವರ್ಷಕ್ಕೆ ಶೇ. 6 ರಷ್ಟು ಏರಿಕೆಯಾಗಿ, ರೂ. 3,925 ಕೋಟಿಗೆ ತಲುಪಿದೆ. ಬ್ಯಾಂಕ್ ಹಂಚಿಕೊಂಡ ತ್ರೈಮಾಸಿಕ ಮಾಹಿತಿಯ ಪ್ರಕಾರ, ಕೊವಿಡ್ ಪೀಡಿತ ಸಾಲಗಾರರಿಗಾಗಿ ರಿಸರ್ವ್ ಬ್ಯಾಂಕ್ ಚೌಕಟ್ಟಿನ ಅಡಿಯಲ್ಲಿ ಪುನರ್ರಚಿಸಿದ, 5,647.5 ಕೋಟಿ ಮೌಲ್ಯದ ಚಿಲ್ಲರೆ ಸಾಲಗಳಲ್ಲಿ, ಸೆಪ್ಟೆಂಬರ್ 30ರ ವೇಳೆಗೆ ಸುಮಾರು ಶೇ 25ರಷ್ಟು ಅಥವಾ 1,283 ಕೋಟಿ ರೂಪಾಯಿ ನಾನ್ ಪರ್ಫಾರ್ಮಿಂಗ್ ಆಗಿದೆ. ಎರಡನೇ ತ್ರೈಮಾಸಿಕದಲ್ಲಿ 808.5 ಕೋಟಿ ರೂಪಾಯಿ ಮೌಲ್ಯದ ಚಿಲ್ಲರೆ ಸಾಲಗಳನ್ನು ಸಹ ಎಚ್‌ಡಿಎಫ್‌ಸಿ ಬ್ಯಾಂಕ್ ರೈಟ್ ಆಫ್ ಮಾಡಿದೆ. ಆರ್‌ಬಿಐನ ವಿಶೇಷ ವಿಂಡೋದ ಅಡಿಯಲ್ಲಿ ಒಟ್ಟು ಪುನರ್ರಚಿಸಲಾದ ಸಾಲಗಳು 7,829.48 ಕೋಟಿ ರೂಪಾಯಿಗಳಷ್ಟಿದ್ದು, ಅದರಲ್ಲಿ 1,687 ಕೋಟಿ ರೂಪಾಯಿಗಳು ಎನ್‌ಪಿಎ ಆಗಿ ಮಾರ್ಪಟ್ಟಿವೆ ಮತ್ತು 856.7 ಕೋಟಿ ರೂಪಾಯಿಗಳನ್ನು ರೈಟ್ ಆಫ್ ಮಾಡಲಾಗಿದೆ.
ರೆಸಲ್ಯೂಶನ್ ಫ್ರೇಮ್‌ವರ್ಕ್ 2.0 ಅಡಿಯಲ್ಲಿ ಪುನರ್ರಚನೆಯು 14,100 ಕೋಟಿ ರೂಪಾಯಿ ವೈಯಕ್ತಿಕ ಸಾಲಗಳು, 1500 ಕೋಟಿ ವೈಯಕ್ತಿಕ uದ್ಯಮ ಸಾಲಗಳು ಮತ್ತು 1,780 ಕೋಟಿ ರೂಪಾಯಿಗಳು ಸಣ್ಣ ಉದ್ಯಮ ಸಾಲಗಳಿಗೆ ಬಂದಿತು. ಒಟ್ಟಾಗಿ ಬ್ಯಾಂಕ್ ಈ ಚೌಕಟ್ಟಿನ ಅಡಿಯಲ್ಲಿ ಶೇ 1.45ರಷ್ಟು ಅಡ್ವಾನ್ಸಸ್ ಪುನರ್ರಚಿಸಿತು ಮತ್ತು ಈ ನಿಟ್ಟಿನಲ್ಲಿ 2000 ಕೋಟಿ ರೂಪಾಯಿ ಪ್ರಾವಿಷನ್ಸ್ ಸೃಷ್ಟಿಸಲಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕಿನ ಒಟ್ಟು ಮುಂಗಡಗಳು ವರ್ಷದಿಂದ ವರ್ಷಕ್ಕೆ ಶೇ 15.4ರಷ್ಟು ಏರಿಕೆಯಾಗಿ, 11.98 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಇದರಲ್ಲಿ ರೀಟೇಲ್ ಮುಂಗಡಗಳು ಶೇ 12.9, ವಾಣಿಜ್ಯ ಮತ್ತು ಗ್ರಾಮೀಣ ಬ್ಯಾಂಕಿಂಗ್ ಸಾಲಗಳು ಶೇ 27.6ರಷ್ಟು ಏರಿಕೆಯಾಗಿದ್ದು, ಸಗಟು ಸಾಲಗಳು ಒಂದು ವರ್ಷದ ಹಿಂದಿನ ಮಟ್ಟಕ್ಕಿಂತ ಶೇ 6ರಷ್ಟು ಹೆಚ್ಚಾಗಿದೆ. ಒಟ್ಟು ಠೇವಣಿಗಳು ವರ್ಷದಿಂದ ವರ್ಷಕ್ಕೆ ಶೇ 14.4ರಷ್ಟು ಏರಿಕೆಯಾಗಿದ್ದು, 14.06 ಲಕ್ಷ ಕೋಟಿ ರೂಪಾಯಿಯಾಗಿದೆ.
ಕರೆಂಟ್ ಅಕೌಂಟ್ (ಚಾಲ್ತಿ ಖಾತೆ) ಸೇವಿಂಗ್ಸ್ ಅಕೌಂಟ್ (ಉಳಿತಾಯ ಖಾತೆ) ಠೇವಣಿಗಳು ಒಂದು ವರ್ಷದ ಹಿಂದಿನದಕ್ಕಿಂತ ಶೇ 28.7ರಷ್ಟು ಹೆಚ್ಚಾಗಿದೆ. CASA (ಕರೆಂಟ್ ಅಕೌಂಟ್ ಮತ್ತು ಸೇವಿಂಗ್ಸ್ ಅಕೌಂಟ್) ಠೇವಣಿಗಳು ಈಗ ಒಟ್ಟು ಠೇವಣಿಗಳಲ್ಲಿ ಶೇ 46.8ರಷ್ಟಿದೆ.
ಇದನ್ನೂ ಓದಿ: HDFC Bank Credit Card: ಕ್ರೆಡಿಟ್ ಕಾರ್ಡ್ ವಿತರಣೆಗೆ ಎಚ್‌ಡಿಎಫ್‌ಸಿ ಬ್ಯಾಂಕ್ಗೆ ಇದ್ದ ನಿರ್ಬಂಧ ತೆಗೆದ ಆರ್ಬಿಐ