ಎಲ್ಲೂ ಓಡಿಹೋಗುತ್ತಿಲ್ಲ, ಸಂಕಷ್ಟಗಳಿಗೆ ಜಗ್ಗಲ್ಲ, ನಿಮ್ಮನ್ನು ಕೈಬಿಡಲ್ಲ: ಬೈಜುಸ್ ಉದ್ಯೋಗಿಗಳಿಗೆ ಸಿಇಒ ಬೈಜು ರವೀಂದ್ರನ್ ಅಭಯ

Byju Raveendran's email: ಬೈಜುಸ್ ಸಂಸ್ಥಾಪಕ ಮತ್ತು ಸಿಇಒ ಬೈಜು ರವೀಂದ್ರನ್ ತಮ್ಮ ಉದ್ಯೋಗಿಗಳಿಗೆ ಸರಿಯಾದ ಸಮಯಕ್ಕೆ ಸಂಬಳದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಬೈಜುಸ್​ನಲ್ಲಿ ಜುಲೈನ ಸಂಬಳ ಇನ್ನೂ ಹಾಕಲಾಗಿಲ್ಲ. ಇದರಿಂದ ಉದ್ಯೋಗಿಗಳಿಗೆ ಅನಿಶ್ಚಿತತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಮೇಲ್ ಮೂಲಕ ಬೈಜು ಅಭಯ ನೀಡಿದ್ದಾರೆ. ತಾನು ವೈಯಕ್ತಿಕವಾಗಿ ಇನ್ನಷ್ಟು ಸಾಲ ಮಾಡಿಯಾದರೂ ಸಂಬಳದ ವ್ಯವಸ್ಥೆ ಮಾಡುವುದಾಗಿ ಅವರು ಹೇಳಿದ್ದಾರೆ.

ಎಲ್ಲೂ ಓಡಿಹೋಗುತ್ತಿಲ್ಲ, ಸಂಕಷ್ಟಗಳಿಗೆ ಜಗ್ಗಲ್ಲ, ನಿಮ್ಮನ್ನು ಕೈಬಿಡಲ್ಲ: ಬೈಜುಸ್ ಉದ್ಯೋಗಿಗಳಿಗೆ ಸಿಇಒ ಬೈಜು ರವೀಂದ್ರನ್ ಅಭಯ
ಬೈಜು ರವೀಂದ್ರನ್

Updated on: Aug 21, 2024 | 11:37 AM

ಬೆಂಗಳೂರು, ಆಗಸ್ಟ್ 21: ಸಂಕಷ್ಟದ ಸ್ಥಿತಿಯಲ್ಲಿರುವ ಬೈಜುಸ್ ಸಂಸ್ಥೆಯಲ್ಲಿ ಉಳಿದಿರುವ ಉದ್ಯೋಗಿಗಳಿಗೆ ಇನ್ನೂ ಕೂಡ ಸಂಬಳ ಆಗಿಲ್ಲ. ಕಾನೂನು ಸಂಕೋಲೆಗಳ ಕಾರಣಕ್ಕೆ ಫಂಡಿಂಗ್ ಫ್ರೀಜ್ ಆಗಿರುವ ಹಿನ್ನೆಲೆಯಲ್ಲಿ ಜುಲೈ ಸಂಬಳ ಇನ್ನೂ ಬಿಡುಗಡೆ ಆಗಿಲ್ಲ. ಆಗುತ್ತೋ ಇಲ್ಲವೋ ಎಂದು ಗೊಂದಲದಲ್ಲಿರುವ ಉದ್ಯೋಗಿಗಳಿಗೆ ಬೈಜುಸ್​ನ ಸಂಸ್ಥಾಪಕ ಮತ್ತು ಸಿಇಒ ಬೈಜು ರವೀಂದ್ರನ್ ಅಭಯ ನೀಡಿದ್ದಾರೆ. ಹೇಗಾದರೂ ಮಾಡಿ ಆದಷ್ಟೂ ಬೇಗ ಸಂಬಳಕ್ಕೆ ವ್ಯವಸ್ಥೆ ಮಾಡುವುದಾಗಿ ಉದ್ಯೋಗಿಗಳಿಗೆ ಬರೆದ ಇಮೇಲ್​ನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

ದಿವಾಳಿತಡೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಕಂಪನಿಯ ಫಂಡಿಂಗ್ ಅನ್ನು ಫ್ರೀಜ್ ಮಾಡಲಾಗಿರುವ ವಿಚಾರವನ್ನು ತಿಳಿಸಿದ ಅವರು, ವೈಯಕ್ತಿಕವಾಗಿ ಇನ್ನಷ್ಟು ಸಾಲ ಮಾಡಿಯಾದರೂ ಸರಿಯಾದ ಸಮಯಕ್ಕೆ ಸಂಬಳ ನೀಡಲಾಗುತ್ತದೆ. ಇದು ಕೇವಲ ಭರವಸೆಯಲ್ಲ, ಬದ್ಧತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸೆಂಟ್ರಲ್ ಬ್ಯಾಂಕ್ ಒಲಿಂಪಿಕ್ಸ್​ನಲ್ಲಿ ಆರ್​ಬಿಐ ಗವರ್ನರ್​ಗೆ ಚಿನ್ನದ ಪದಕ; ಪ್ರಧಾನಿ ಶ್ಲಾಘನೆ; ಶಕ್ತಿಕಾಂತ್ ಹೆಸರಲ್ಲೇ ಇದೆ ಶಕ್ತಿ ಎಂದ ಮಹೀಂದ್ರ

ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವದ ಸಂಬಂಧ ಬೈಜುಸ್ ಸಂಸ್ಥೆಯಿಂದ ಬಿಸಿಸಿಐಗೆ 158 ಕೋಟಿ ರೂ ಬರಬೇಕಿತ್ತು. ಬ್ಯಾಂಕ್ರಪ್ಸಿ ಕ್ರಮ ಜರುಗಿಸಲಾಯಿತು. ಬೈಜು ರವೀಂದ್ರನ್ ಸಹೋದರ ರಿಜಿ ರವೀಂದ್ರನ್ ವೈಯಕ್ತಿಕವಾಗಿ ಈ ಹಣದ ವ್ಯವಸ್ಥೆ ಮಾಡಿದರು. ಇದೇ ವೇಳೆ, ಬೈಜುಸ್​ಗೆ ಸಾಲ ಕೊಟ್ಟಿದ್ದ ಅಮೆರಿಕದ ಗ್ಲಾಸ್ ಟ್ರಸ್ಟ್ ಸಂಸ್ಥೆ ಈ ಬ್ಯಾಂಕ್ರಪ್ಸಿ ಕ್ರಮವನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿತು. ಸದ್ಯಕ್ಕೆ ಕೋರ್ಟ್ ಇದಕ್ಕೆ ತಡೆ ನೀಡಿದೆ. ಬಿಸಿಸಿಗೆ ನೀಡಿದ್ದ 158 ಕೋಟಿ ರೂ ಹಣವನ್ನು ಎಸ್​​ಕ್ರೋ ಖಾತೆಯಲ್ಲಿ ಇಡಲಾಗಿದೆ.

ನಾನೆಲ್ಲೂ ತಪ್ಪಿಸಿಕೊಂಡು ಹೋಗುತ್ತಿಲ್ಲ: ಬೈಜು

ಬೈಜುಸ್ ಸಂಸ್ಥೆಯ ಸಮಸ್ಯೆಗಳನ್ನು ಸರಿಪಡಿಸಲು ಸಂಸ್ಥಾಪಕರು ಯತ್ನಿಸುತ್ತಿಲ್ಲ. ದೇಶ ಬಿಟ್ಟುಹೋಗಲು ಯತ್ನಿಸುತ್ತಿದ್ದಾರೆ ಎಂದು ಕೇಳಿಬರುತ್ತಿರುವ ಟೀಕೆಯನ್ನು ಬೈಜು ರವೀಂದ್ರನ್ ತಳ್ಳಿಹಾಕಿದ್ದಾರೆ. ‘ನಾನೆಲ್ಲೂ ಓಡಿ ಹೋಗುತ್ತಿಲ್ಲ. ಬ್ಯುಸಿನೆಸ್ ಮತ್ತು ಕುಟುಂಬ ಕಾರಣಗಳಿಗೆ ಪ್ರಯಾಣಿಸುತ್ತಿರುತ್ತೇನೆ. ತಂದೆಯ ಆರೋಗ್ಯ ಸಮಸ್ಯೆಯಿಂದಾಗಿ ಅಮೆರಿಕದಲ್ಲಿ ಕೆಲ ದಿನ ಇದ್ದೆ. ನಾನೆಲ್ಲಿದ್ದೇನೆ, ಏನು ಮಾಡುತ್ತಿದ್ದೇನೆ ಎಂಬುದನ್ನು ಯಾವಾಗಲೂ ಮುಚ್ಚಿಟ್ಟಿಲ್ಲ. ಯಾವುದೇ ಕಾನೂನು ಅಥವಾ ಹಣಕಾಸು ಹೊಣೆಗಾರಿಕೆಗಳನ್ನು ಕೈಚೆಲ್ಲಲು ಯಾವತ್ತೂ ಯತ್ನಿಸಿಲ್ಲ’ ಎಂದು ಸಿಇಒ ಹೇಳಿದ್ದಾರೆ.

ಇದನ್ನೂ ಓದಿ: ಸಿಕ್ಕಾಪಟ್ಟೆ ಇರುವ ಮ್ಯೂಚುವಲ್ ಫಂಡ್​ಗಳಲ್ಲಿ ಯಾವುದನ್ನು ಆರಿಸುವುದು? ರಾಧಿಕಾ ಗುಪ್ತಾ ಸಲಹೆ ಇದು

ವೈಯಕ್ತಿಕವಾಗಿ 7,500 ಕೋಟಿ ರೂ ಹೊಂದಿಸಿದ್ದೇವೆ

ಬೈಜುಸ್ ಸಂಸ್ಥೆ ಚಾಲೂ ಇರುವಂತೆ ನೋಡಿಕೊಳ್ಳಲು ಅದರ ಸಂಸ್ಥಾಪಕರು 7,500 ಕೋಟಿ ರೂಗೂ ಹೆಚ್ಚು ಹಣವನ್ನು ಹಾಕಿದ್ದಾರೆ. ಬೈಜು ರವೀಂದ್ರನ್ ಸಹೋದರ ರಿಜು ಅವರು ಎರಡು ವರ್ಷ ಉದ್ಯೋಗಿಗಳಿಗೆ ಸಂಬಳಕ್ಕಾಗಿ ವೈಯಕ್ತಿಕವಾಗಿ 1,600 ಕೋಟಿ ರೂ ನೀಡಿದ್ದಾರೆ ಎಂಬುದನ್ನು ಆ ಇಮೇಲ್​ನಲ್ಲಿ ವಿವರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ