Senior Citizens Income Tax Benefits: ಹಿರಿಯ ನಾಗರಿಕರಿಗಾಗಿ ಆದಾಯ ತೆರಿಗೆಯ 7 ಅನುಕೂಲಗಳಿವು

| Updated By: Srinivas Mata

Updated on: Jul 05, 2022 | 5:24 PM

ಹಿರಿಯ ನಾಗರಿಕರಿಗಾಗಿ ಆದಾಯ ತೆರಿಗೆ ಇಲಾಖೆಯಿಂದ ದೊರೆಯುವ 7 ವಿಶೇಷ ಅನುಕೂಲಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

Senior Citizens Income Tax Benefits: ಹಿರಿಯ ನಾಗರಿಕರಿಗಾಗಿ ಆದಾಯ ತೆರಿಗೆಯ 7 ಅನುಕೂಲಗಳಿವು
ಸಾಂದರ್ಭಿಕ ಚಿತ್ರ
Follow us on

ಹಿರಿಯ ನಾಗರಿಕರು, ಅಂದರೆ 60 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಕೆಲವು ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು. ತೆರಿಗೆ ಪ್ರಯೋಜನಗಳ ಹೊರತಾಗಿ ಆದಾಯ ತೆರಿಗೆ (Income Tax) ಇ-ಫೈಲಿಂಗ್ ಪ್ರಕ್ರಿಯೆಯನ್ನು ನಿರ್ದಿಷ್ಟವಾಗಿ ಅವರಿಗೆ ಬಹಳ ಸರಳಗೊಳಿಸಲಾಗಿದೆ. ಅಂದಹಾಗೆ ಹಿರಿಯ ನಾಗರಿಕರಿಗಾಗಿ ಇರುವ ತೆರಿಗೆ ಅನುಕೂಲಗಳೇನು ಎಂಬ ಬಗ್ಗೆ ಮಾಹಿತಿಯನ್ನು ತಿಳಿಯುವುದಕ್ಕೆ ಮುಂದೆ ಓದಿ.

ವಿವಿಧ ತೆರಿಗೆ-ಸ್ಲ್ಯಾಬ್ ದರಗಳು

ಜನ ಸಾಮಾನ್ಯರಿಗೆ ಹೋಲಿಸಿದರೆ ಹಿರಿಯ ನಾಗರಿಕರ ತೆರಿಗೆ ಸ್ಲ್ಯಾಬ್ ಬೇರೆ. ಜನ ಸಾಮಾನ್ಯರಿಗೆ 2.5 ಲಕ್ಷ ರೂಪಾಯಿ ತನಕ ತೆರಿಗೆ ಇಲ್ಲ. 2.5ರಿಂದ 5 ಲಕ್ಷ ರೂಪಾಯಿ ತನಕ ಶೇ 5ರಷ್ಟು ತೆರಿಗೆ. ಇನ್ನು ಹಿರಿಯ ನಾಗರಿಕರಿಗೆ (60 ವರ್ಷದಿಂದ 80 ವರ್ಷದೊಳಗೆ) 3 ಲಕ್ಷದ ಒಳಗಿನ ಆದಾಯಕ್ಕೆ ತೆರಿಗೆ ಇಲ್ಲ. 3ರಿಂದ 5 ಲಕ್ಷ ರೂಪಾಯಿಗೆ ಶೇ 5ರಷ್ಟು ತೆರಿಗೆ. ಸೂಪರ್ ಸೀನಿಯರ್ ಸಿಟಿಜನ್, ಅಂದರೆ 80 ವರ್ಷ ಮೇಲ್ಪಟ್ಟವರಿ 5 ಲಕ್ಷದ ತನಕ ತೆರಿಗೆ ಇಲ್ಲ.

ರೂ. 50,000ವರೆಗೆ ಬಡ್ಡಿ ಆದಾಯ ವಿನಾಯಿತಿ

ಹಣಕಾಸು ವರ್ಷ 2018-19ರಿಂದ ರೂ. 50,000 ಬಡ್ಡಿಗೆ ಕಡಿತವನ್ನು ಅನುಮತಿಸುವ ಸೆಕ್ಷನ್ 80 TTB ಬಂದಿದೆ ಎಂದು ಎಸ್‌ಎಜಿ ಇನ್ಫೋಟೆಕ್ ಎಂಡಿ ಸಿಎ ಅಮಿತ್ ಗುಪ್ತಾ ಹೇಳಿದ್ದಾರೆ. ರೂ. 50,000ಕ್ಕಿಂತ ಹೆಚ್ಚು ಗಳಿಸಿದ ಮೊತ್ತವನ್ನು ಹಿರಿಯ ನಾಗರಿಕರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸ್ಲ್ಯಾಬ್ ದರಗಳ ಪ್ರಕಾರ ತೆರಿಗೆ ವಿಧಿಸಲಾಗುತ್ತದೆ. ಆದರೆ ಅಂತಹ ಸಂದರ್ಭಗಳಲ್ಲಿ ಉಳಿತಾಯ ಖಾತೆಯ ಮೇಲಿನ ಬಡ್ಡಿಗೆ ರೂ. 10,000 ಮೊತ್ತಕ್ಕೆ ಸೆಕ್ಷನ್ 80TTA ಅಡಿಯಲ್ಲಿ ಕಡಿತವನ್ನು ಪಡೆಯುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ.

ವೈದ್ಯಕೀಯ ವಿಮಾ ಪ್ರೀಮಿಯಂ ಪಾವತಿಗಳಿಗೆ ಸೆಕ್ಷನ್ 80D ಅಡಿಯಲ್ಲಿ ಕಡಿತ

ಸೆಕ್ಷನ್ 80D ಹಿರಿಯ ನಾಗರಿಕರಲ್ಲದವರಿಗೆ ವೈದ್ಯಕೀಯ ವಿಮಾ ಪ್ರೀಮಿಯಂ ಪಾವತಿಗಳಲ್ಲಿ ರೂ. 25,000 ಕಡಿತವನ್ನು ಅನುಮತಿಸುತ್ತದೆ. ಆದರೆ ಹಿರಿಯ ನಾಗರಿಕರಿಗೆ ಇದು ರೂ. 50,000ಕ್ಕೆ ಹೆಚ್ಚಾಗುತ್ತದೆ. ಈ ಮಿತಿಯು ಮೊದಲು ರೂ. 30,000 ಆಗಿತ್ತು. ಆದರೆ 2018ರ ಬಜೆಟ್‌ನಲ್ಲಿ ಅದನ್ನು ರೂ. 50,000ಕ್ಕೆ ಹೆಚ್ಚಿಸಲಾಗಿದೆ. ಇದಲ್ಲದೆ, ಸೆಕ್ಷನ್ 80D ವೈದ್ಯಕೀಯ ವಿಮಾ ಪ್ರೀಮಿಯಂ ಪಾವತಿಗೆ ಮಾತ್ರವಲ್ಲದೆ ಹಿರಿಯ ನಾಗರಿಕರ ಚಿಕಿತ್ಸೆಗೆ ತಗಲುವ ವಾಸ್ತವಿಕ ವೆಚ್ಚಕ್ಕೂ ಕಡಿತವನ್ನು ಅನುಮತಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ಬಡ್ಡಿಯ ಮೇಲೆ ಟಿಡಿಎಸ್ ಅನ್ನು ಕಡಿತಗೊಳಿಸದಿರುವುದು

ಹಿರಿಯ ನಾಗರಿಕರ ಒಟ್ಟು ಆದಾಯವು ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿದ್ದರೆ ಮತ್ತು ಆ ಹಣಕಾಸು ವರ್ಷದಲ್ಲಿ ಶೂನ್ಯ ತೆರಿಗೆಯನ್ನು ಪಾವತಿಸಿದರೆ ಫಿಕ್ಸೆಡ್ ಡೆಪಾಸಿಟ್​ ಮೇಲಿನ ಬಡ್ಡಿಗೆ ಟಿಡಿಎಸ್ ಅನ್ನು ಕಡಿತಗೊಳಿಸದಿರಲು ಫಾರ್ಮ್ 15H ಅನ್ನು ಸಲ್ಲಿಸಬಹುದು.

ಹೆಚ್ಚುವರಿಯಾಗಿ, 2018ರ ಬಜೆಟ್ ಮೂಲಕ ಮಾಡಿದ ತಿದ್ದುಪಡಿಗಳೊಂದಿಗೆ ಹಿರಿಯ ನಾಗರಿಕರಿಗೆ ಸೆಕ್ಷನ್ 194A ಅಡಿಯಲ್ಲಿ ತೆರಿಗೆ ಕಡಿತದ ಮಿತಿಯನ್ನು ರೂ. 10,000ದಿಂದ ರೂ. 50,000 ಕ್ಕೆ ಹೆಚ್ಚಿಸಲಾಗಿದೆ.

ನಿರ್ದಿಷ್ಟ ಕಾಯಿಲೆಗೆ ಸೆಕ್ಷನ್ 80DDB ಅಡಿಯಲ್ಲಿ ಹೆಚ್ಚಿನ ಕಡಿತ

ಸೆಕ್ಷನ್ 80DDB ತೆರಿಗೆದಾರರಿಗೆ ನಿರ್ದಿಷ್ಟ ರೋಗಗಳ ವೈದ್ಯಕೀಯ ಚಿಕಿತ್ಸೆಯ ವೆಚ್ಚದ ಸಂದರ್ಭದಲ್ಲಿ ತೆರಿಗೆ ಕಡಿತ ಒದಗಿಸುತ್ತದೆ. ಈ ಹಿಂದೆ ಅನುಮತಿಸಲಾದ ಕಡಿತಗಳು ಹಿರಿಯ ನಾಗರಿಕರಿಗೆ ರೂ. 60,000 ಆಗಿತ್ತು. ಆದರೆ 2018ರ ಬಜೆಟ್ ಅದನ್ನು ರೂ. 1,00,000ಕ್ಕೆ ಹೆಚ್ಚಿಸಿದೆ.

ಮುಂಗಡ ತೆರಿಗೆ ಪಾವತಿ ಅಗತ್ಯವಿಲ್ಲ

ಯಾವುದೇ ವ್ಯಾಪಾರ ಆದಾಯವಿಲ್ಲದ ಹಿರಿಯ ನಾಗರಿಕರಿಗೆ ಮುಂಗಡ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿದೆ ಮತ್ತು ಅವರು ತಮ್ಮ ಒಟ್ಟು ಆದಾಯದ ಮೇಲೆ ಸ್ವಯಂ ಮೌಲ್ಯಮಾಪನ ತೆರಿಗೆಯನ್ನು ಮಾತ್ರ ಪಾವತಿಸಬೇಕಾಗುತ್ತದೆ.

ರಿವರ್ಸ್ ಮಾರ್ಟ್​ಗೇಜ್ ಯೋಜನೆಯಡಿ ಪಡೆದ ಮೊತ್ತಕ್ಕೆ ತೆರಿಗೆ ಇಲ್ಲ

ರಿವರ್ಸ್ ಮಾರ್ಟ್​ಗೇಜ್ ಯೋಜನೆಯೊಂದಿಗೆ ಹಿರಿಯ ನಾಗರಿಕರು ತಮ್ಮ ಮನೆಯನ್ನು ಜೀವನಕ್ಕಾಗಿ ಅಡಮಾನವಿಡುವ ಮೂಲಕ ನಿಯಮಿತ ಪಾವತಿಗಳನ್ನು ಪಡೆಯುತ್ತಾರೆ. ಆದರೆ ಮಾಲೀಕತ್ವ ಮತ್ತು ಸ್ವಾಧೀನವು ಹಿರಿಯ ನಾಗರಿಕರಿಗೆ ಇರುತ್ತದೆ. ಈ ಯೋಜನೆಯೊಂದಿಗೆ ಸಾಲಗಾರರ ಮರಣದ ನಂತರ ಸಾಲವನ್ನು ಆಸ್ತಿಯ ಮಾರಾಟದ ಮೂಲಕ ಗಳಿಸಿದ ಬಡ್ಡಿಯೊಂದಿಗೆ ಮರುಪಾವತಿ ಮಾಡಲಾಗುತ್ತದೆ ಮತ್ತು ಮಾರಾಟದಲ್ಲಿ ಪಡೆದ ಬಾಕಿ ಮೊತ್ತವನ್ನು ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ವರ್ಗಾಯಿಸಲಾಗುತ್ತದೆ. ಈ ಯೋಜನೆಯಡಿ, ಹಿರಿಯ ನಾಗರಿಕರಿಗೆ ಕಂತುಗಳಲ್ಲಿ ಪಾವತಿಸುವ ಮೊತ್ತವು ಆದಾಯ ತೆರಿಗೆಯಿಂದ ಸಂಪೂರ್ಣವಾಗಿ ವಿನಾಯಿತಿ ಪಡೆದಿದೆ.

ಇದನ್ನೂ ಓದಿ: ITR Filing: ಎರಡು ಫಾರ್ಮ್ 16 ಇದ್ದಾಗ ಆದಾಯ ತೆರಿಗೆ ರಿಟರ್ನ್ ಫೈಲ್ ಹೇಗೆ? ಇಲ್ಲಿದೆ ಹಂತಹಂತವಾದ ವಿವರ

Published On - 5:21 pm, Tue, 5 July 22