Happy Birthday Rakesh Jhunjhunwala: 5000 ರೂಪಾಯಿಯಿಂದ 39,527 ಕೋಟಿ ತನಕ ಬೆಳೆದ ರಾಕೇಶ್​ ಜುಂಜುನ್​ವಾಲಾಗೆ ಹ್ಯಾಪಿ ಬರ್ತ್​ಡೇ

Rakesh Jhunjhunwala Birthday Special: ಜುಲೈ 5ನೇ ತಾರೀಕಿನಂದು ಭಾರತದ ಷೇರುಪೇಟೆಯ ಬಿಗ್ ಬುಲ್ ರಾಕೇಶ್​ ಜುಂಜುನ್​ವಾಲಾ ಅವರ ಜನ್ಮದಿನ ಈ ದಿನ ಅವರ ಬಗ್ಗೆ ಬಹಳ ಆಸಕ್ತಿಕರವಾದ ಸಂಗತಿಗಳನ್ನು ನಿಮ್ಮೆದುರಿಗೆ ಇಡಲಾಗಿದೆ.

Happy Birthday Rakesh Jhunjhunwala: 5000 ರೂಪಾಯಿಯಿಂದ 39,527 ಕೋಟಿ ತನಕ ಬೆಳೆದ ರಾಕೇಶ್​ ಜುಂಜುನ್​ವಾಲಾಗೆ ಹ್ಯಾಪಿ ಬರ್ತ್​ಡೇ
ರಾಕೇಶ್ ಜುಂಜುನ್​ವಾಲಾ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on:Jul 05, 2022 | 6:33 PM

ಭಾರತದ ಷೇರು ಮಾರುಕಟ್ಟೆಯ “ಬಿಗ್ ಬುಲ್” ರಾಕೇಶ್ ಜುಂಜುನ್​ವಾಲಾ (Rakesh Jhunjhunwala) ಅವರು ಇಂದು (5 ಜುಲೈ 2022) ತಮ್ಮ 62ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. “ಭಾರತದ ವಾರೆನ್ ಬಫೆಟ್” ಎಂದು ಕರೆಸಿಕೊಳ್ಳುವ ರಾಕೇಶ್ ಜುಂಜುನ್​ವಾಲಾ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವರು. ಅವರ ತಂದೆ ತೆರಿಗೆ ಅಧಿಕಾರಿ ಆಗಿದ್ದರು. ಷೇರು ಮಾರುಕಟ್ಟೆಗೆ ಜುಂಜುನ್​ವಾಲಾ ಅರಂಗೇಟ್ರಂ ಮಾಡುದ್ದು 1985ರಲ್ಲಿ, ತಮ್ಮ ಕಾಲೇಜು ಅಧ್ಯಯನದ ಸಮಯದಲ್ಲಿ. ಆ ಸಮಯದಲ್ಲಿ ಬಿಎಸ್‌ಇ ಸೆನ್ಸೆಕ್ಸ್ ಸುಮಾರು 150 ಪಾಯಿಂಟ್‌ಗಳಷ್ಟಿತ್ತು ಮತ್ತು ಅವರು 5,000 ರೂಪಾಯಿಯೊಂದಿಗೆ ಹೂಡಿಕೆ ಪ್ರಾರಂಭಿಸಿದರು. ಫೋರ್ಬ್ಸ್ ಪ್ರಕಾರ, ಜುಲೈ 5, 2022ರ ಹೊತ್ತಿಗೆ ರಾಕೇಶ್ ಜುಂಜುನ್‌ವಾಲಾ ಅವರ ನಿವ್ವಳ ಆಸ್ತಿ ಮೌಲ್ಯವು 5 ಶತಕೋಟಿ ಯುಎಸ್​ಡಿ (ಭಾರತದ ರೂಪಾಯಿ ಮೌಲ್ಯದಲ್ಲಿ 39,527 ಕೋಟಿ)ಗೂ ಹೆಚ್ಚಾಗಿದೆ.

ಒಂದು ವರ್ಷದ ಹಿಂದೆ ಅವರ ಸಂಪತ್ತು ಯುಎಸ್​ಡಿ 4.6 ಶತಕೋಟಿ (ರೂ. 34,387 ಕೋಟಿ) ಆಗಿತ್ತು. ಅಂದರೆ ಈಗ ಅದು ಶೇ 15ರಷ್ಟು ಹೆಚ್ಚಾಗಿದೆ. ರಾಕೇಶ್ ಜುಂಜುನ್‌ವಾಲಾ ಅವರ ಮೊದಲ ದೊಡ್ಡ ಗೆಲುವು ಟಾಟಾ ಟೀ ಷೇರುಗಳ ಮೂಲಕ ಸಿಕ್ಕಿದ್ದು. ಅದರಲ್ಲಿ ಅವರು 1986ರಲ್ಲಿ 5 ಲಕ್ಷ ರೂಪಾಯಿ ಲಾಭ ಗಳಿಸಿದರು. ಅವರು ಟಾಟಾ ಟೀ ಕಂಪೆನಿಯ 5,000 ಷೇರುಗಳನ್ನು 43 ರೂಪಾಯಿಗೆ ಖರೀದಿಸಿದ್ದರು, ಅದು ಕೇವಲ ಮೂರು ತಿಂಗಳೊಳಗೆ 143 ರೂಪಾಯಿಗೆ ಏರಿತು.

ಪೋರ್ಟ್‌ಫೋಲಿಯೋದಲ್ಲಿ 25,000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ 33 ಷೇರುಗಳು

ಇತ್ತೀಚಿನ ಕಾರ್ಪೊರೇಟ್ ಷೇರುದಾರರ ಪ್ರಕಾರ, ರಾಕೇಶ್ ಜುಂಜುನ್‌ವಾಲಾ ಮತ್ತು ಅಸೋಸಿಯೇಟ್ಸ್ ಸಾರ್ವಜನಿಕವಾಗಿ ಲಭ್ಯ ಇರುವ ಮಾಹಿತಿಯಂತೆ 33 ಕಂಪೆನಿಯ ಷೇರುಗಳನ್ನು ಹೊಂದಿದ್ದಾರೆ. ಇದರ ಮೌಲ್ಯ 25,842.3 ಕೋಟಿ ರೂಪಾಯಿ. ಟ್ರೆಂಡ್‌ಲೈನ್ ಪ್ರಕಾರ, ಇವುಗಳಲ್ಲಿ ಟೈಟಾನ್ ಕಂಪನಿ, ಟಾಟಾ ಮೋಟಾರ್ಸ್, ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಷೂರೆನ್ಸ್ ಕಂಪೆನಿ, ಮೆಟ್ರೋ ಬ್ರಾಂಡ್‌ಗಳು, ಫೋರ್ಟಿಸ್ ಹೆಲ್ತ್‌ಕೇರ್, ನಜ್ರಾ ಟೆಕ್ನಾಲಜೀಸ್, ಫೆಡರಲ್ ಬ್ಯಾಂಕ್, ಡೆಲ್ಟಾ ಕಾರ್ಪ್, ಡಿಬಿ ರಿಯಾಲ್ಟಿ ಮತ್ತು ಟಾಟಾ ಕಮ್ಯುನಿಕೇಷನ್ಸ್ ಮುಂತಾದ ಷೇರುಗಳು ಸೇರಿವೆ. ಅವರ ಅತ್ಯಂತ ಬೆಲೆಬಾಳುವ ಪಟ್ಟಿಯಲ್ಲಿರುವ ಹೋಲ್ಟಿಂಗ್ ಅಂದರೆ ಗಡಿಯಾರ ಮತ್ತು ಆಭರಣ ತಯಾರಕ ಟೈಟಾನ್ ಆಗಿದೆ. ಇದರ ಮೌಲ್ಯ 8,830.9 ಕೋಟಿ ರೂಪಾಯಿ. ಆ ನಂತರದ ಸ್ಥಾನದಲ್ಲಿ ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಷೂರೆನ್ಸ್ ಕಂಪೆನಿ 4,957.1 ಕೋಟಿ ರೂ. ಮತ್ತು ಮೆಟ್ರೋ ಬ್ರಾಂಡ್ಸ್ 2,391.3 ಕೋಟಿ ರೂಪಾಯಿಯದಾಗಿದೆ.

‘ಕರಡಿ’ಯಿಂದ ‘ಗೂಳಿ’ಯ ತನಕ ರಾಕೇಶ್ ಜುಂಜುನ್‌ವಾಲಾ ಪ್ರಯಾಣ

ಹರ್ಷದ್ ಮೆಹ್ತಾ ಷೇರು ಮಾರುಕಟ್ಟೆಯಲ್ಲಿ ಸುದ್ದಿಯಲ್ಲಿದ್ದ ದಿನಗಳಲ್ಲಿ ರಾಕೇಶ್ ಜುಂಜುನ್​ವಾಲಾ ಅವರನ್ನು ‘ಕರಡಿ’ (ಷೇರು ಮಾರುಕಟ್ಟೆಯಲ್ಲಿ ಷೇರುಗಳ ಬೆಲೆ ಇಳಿಕೆ ಆಗುತ್ತದೆ ಎಂಬ ದೃಷ್ಟಿಕೋನದಲ್ಲೇ ಇರುವವರನ್ನು ಹೀಗೆ ಕರೆಯಲಾಗುತ್ತದೆ) ಎಂದು ಕರೆಯಲಾಗುತ್ತಿತ್ತು. ವಿಡಿಯೋ ಸಂದರ್ಶನವೊಂದರ ವೇಳೆ ರಾಕೇಶ್​ ಜುಂಜುನ್​ವಾಲಾ, ಹರ್ಷದ್ ಮೆಹ್ತಾ ಹಗರಣ 1992ರ ಸಮಯದಲ್ಲಿ ಕರಡಿಗಳ ಗುಂಪಿನ ಭಾಗವಾಗಿದ್ದೆ ಎಂಬುದನ್ನು ಒಪ್ಪಿಕೊಂಡರು. ಆಗ ಸಾಕಷ್ಟು ಶಾರ್ಟ್ ಸೆಲ್ಲಿಂಗ್ ಮಾಡಿ ಲಾಭ ಗಳಿಸುತ್ತಿದ್ದಾಗಿಯೂ ಹೇಳಿದ್ದರು. 1990ರ ದಶಕದಲ್ಲಿ ಅಂಥ ಗುಂಪು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದವು. ಅಂತಹ ಒಂದು ಕರಡಿ ಗುಂಪಿನ ನೇತೃತ್ವ ಮನು ಮಾನೆಕ್ ವಹಿಸಿದ್ದರು. ಇದನ್ನು ಬ್ಲ್ಯಾಕ್ ಕೋಬ್ರಾ ಎಂದು ಕರೆಯಲಾಗುತ್ತದೆ. ಪತ್ರಕರ್ತೆ ಸುಚೇತಾ ದಲಾಲ್ ಅವರು 1992ರ ಹರ್ಷದ್ ಮೆಹ್ತಾ ಹಗರಣವನ್ನು ಬಹಿರಂಗಪಡಿಸಿದರು, ಆ ನಂತರ ಷೇರು ಮಾರುಕಟ್ಟೆ ಭಾರೀ ಮಟ್ಟದಲ್ಲಿ ಕುಸಿಯಿತು.

‘ರಾ’ದಿಂದ ರಾಕೇಶ್ ಮತ್ತು ‘ರೇ’ದಿಂದ ರೇಖಾ

1987ರಲ್ಲಿ ರಾಕೇಶ್ ಜುಂಜುನ್​ವಾಲಾ ಅವರು ಸ್ಟಾಕ್ ಮಾರುಕಟ್ಟೆ ಹೂಡಿಕೆದಾರರೂ ಆಗಿರುವ ರೇಖಾ ಅವರನ್ನು ವಿವಾಹವಾದರು. 2003ರಲ್ಲಿ ರಾಕೇಶ್ ಜುಂಜುನ್​ವಾಲಾ ಅವರು ತಮ್ಮದೇ ಆದ ಸ್ಟಾಕ್ ಟ್ರೇಡಿಂಗ್ ಸಂಸ್ಥೆ ರೇರ್ ಎಂಟರ್‌ಪ್ರೈಸಸ್ ಅನ್ನು ಪ್ರಾರಂಭಿಸಿದರು. ಅದಕ್ಕೆ ಅವರು ತಮ್ಮ ಮತ್ತು ಪತ್ನಿಯ ಇಂಗ್ಲಿಷಿನ ಮೊದಲಕ್ಷರಗಳನ್ನು ಹೆಸರಿಸಿದ್ದರು.

ಬಿಗ್ ಬುಲ್‌ನ ಆಕಾಶ ಏರ್ ಶೀಘ್ರದಲ್ಲೇ ಹಾರಲಿದೆ

ಬಿಗ್ ಬುಲ್ ರಾಕೇಶ್​ ಜುಂಜುನ್​ವಾಲಾ ಅವರ ಕನಸಿನ ಆಕಾಶ ಏರ್‌ಲೈನ್ಸ್‌ನೊಂದಿಗೆ ವಾಯುಯಾನ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಇದು ಭಾರತದಲ್ಲಿ ತನ್ನ ಮೊದಲ ಬೋಯಿಂಗ್ 737 MAX ವಿಮಾನವನ್ನು ಜೂನ್ 21ರಂದು ಡೆಲಿವರಿ ಪಡೆದಿದೆ. ಕಂಪೆನಿಯು ಈ ವಾರ ಪರೀಕ್ಷಾ ವಿಮಾನಗಳನ್ನು ನಡೆಸಲು ಯೋಜಿಸಿದೆ. ಇದರ ನಂತರ, ಅವರು ವಾಣಿಜ್ಯ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಏರ್ ಆಪರೇಟರ್ ಪರವಾನಗಿಯನ್ನು ಪಡೆಯುತ್ತಾರೆ. ಈ ತಿಂಗಳ ಅಂತ್ಯದ ವೇಳೆಗೆ “ಆಕಾಶ” ವಿಮಾನ ಯಾನ ಸಂಸ್ಥೆಯಿಂದ ಹಾರಾಟ ನಡೆಸಬಹುದು.

ಇದನ್ನೂ ಓದಿ: Rakesh Jhunjhunwala: 70 ಸಾವಿರ ಚದರಡಿ ವ್ಯಾಪ್ತಿಯಲ್ಲಿ ಎದ್ದು ನಿಲ್ಲಲಿದೆ ಬಿಲಿಯನೇರ್​ ರಾಕೇಶ್​ ಜುಂಜುನ್​ವಾಲಾ ಒಡೆತನದ 13 ಅಂತಸ್ತಿನ ಕಟ್ಟಡ

Published On - 6:33 pm, Tue, 5 July 22