Startup Eco System: ಸ್ಟಾರ್ಟ್ಅಪ್ಗಳಿಗೆ ಅತ್ಯುತ್ತಮ ರಾಜ್ಯ ಎಂಬ ಪ್ರಮಾಣಪತ್ರ ಮುಖ್ಯಮಂತ್ರಿಗೆ ಹಸ್ತಾಂತರಿಸಿದ ಸಚಿವ ಅಶ್ವತ್ಥನಾರಾಯಣ್
ಸ್ಟಾರ್ಟ್ಅಪ್ಗಳಿಗೆ ನೀಡುವ ಉತ್ತಮ ಎಕೋಸಿಸ್ಟಮ್ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಸ್ಥಾನ ಪಡೆದಿದ್ದು, ಈ ಸಂಬಂಧವಾಗಿ ಅಗತ್ಯ ಮಾಹಿತಿ ಇಲ್ಲಿದೆ.
ಭಾರತ ಸರ್ಕಾರದ ಅಡಿ ಕಾರ್ಯ ನಿರ್ವಹಿಸುವ ಕೈಗಾರಿಕೆ ಮತ್ತು ಉತ್ತೇಜನ ಇಲಾಖೆಯು ಬಿಡುಗಡೆ ಮಾಡಿರುವ ಸ್ಟಾರ್ಟ್ ಅಪ್ (Startups) ಶ್ರೇಯಾಂಕದಲ್ಲಿ ಕರ್ನಾಟಕವು “ಎ” ವರ್ಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಅಗ್ಗಳಿಕೆಗೆ ಭಾಜನ ಆಗಿದೆ. ಈ ಸಂಬಂಧವಾಗಿ ಪ್ರಮಾಣಪತ್ರವನ್ನು ಮಾಹಿತಿ ತಂತ್ರಜ್ಞಾನ/ ಜೈವಿಕ ತಂತ್ರಜ್ಞಾನ, ಉನ್ನತ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಖಾತೆ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಹಸ್ತಾಂತರ ಮಾಡಿದರು. ಅಂದಹಾಗೆ ಈ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಇಲಾಖೆಯ ನಿರ್ದೇಶಕರಾದ ಮೀನಾ ನಾಗರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶ್ರೇಯಾಂಕದ ಕುರಿತು ಟ್ವೀಟ್ ಮಾಡಿದ್ದು, ಡಿಪಿಐಐಟಿ ರಾಜ್ಯಗಳ ಸ್ಟಾರ್ಟ್ಅಪ್ ಶ್ರೇಯಾಂಕ 2021ರ ಬೆಸ್ಟ್ ಪರ್ಫಾರ್ಮರ್ ಕೆಟಗರಿ ಎ ಬಂದಿರುವುದು ಕರ್ನಾಟಕದ ಪಾಲಿಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಮತ್ತೊಂದು ಸಲ ತನ್ನ ಹೆಸರಾದ ಭಾರತದ ಸ್ಟಾರ್ಟ್ಅಪ್ಗಳ ರಾಜಧಾನಿ ಎಂಬ ಮಾತಿಗೆ ತಕ್ಕಂತೆ ಕೀರ್ತಿಗೆ ಭಾಜನವಾಗಿದೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಇನ್ನೂ ಮುಂದುವರಿದು, ನೀತಿಗಳು, ಯೋಜನೆಗಳು, ಹಣಕಾಸು ಮತ್ತು ಹಣಕಾಸೇತರ ಪ್ರೋತ್ಸಾಹಕಗಳ ಮೂಲಕವಾಗಿ ಉದ್ಯಮಿಗಳಿಗೆ ಸಮಗ್ರವಾದ ಸ್ಟಾರ್ಟ್ಅಪ್ ಎಕೋಸಿಸ್ಟಮ್ ಅನ್ನು ಒದಗಿಸುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.
ಯಾವ ರಾಜ್ಯಗಳು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ?
ಉದ್ಯಮಿಗಳಿಗಾಗಿ ಸ್ಟಾರ್ಟ್-ಅಪ್ ಎಕೋ ಸಿಸ್ಟಮ್ ಅಭಿವೃದ್ಧಿಪಡಿಸುವಲ್ಲಿ ದೆಹಲಿಯ ಎನ್‌ಸಿಟಿಯನ್ನು ಒಳಗೊಂಡಿರುವ ರಾಜ್ಯಗಳ ವಿಭಾಗದಲ್ಲಿ ಗುಜರಾತ್ ಮತ್ತು ಕರ್ನಾಟಕ ಅತ್ಯುತ್ತಮ ರಾಜ್ಯಗಳಾಗಿ ಹೊರಹೊಮ್ಮಿವೆ. ಕೇಂದ್ರಾಡಳಿತ ಪ್ರದೇಶಗಳು ಮತ್ತು ಈಶಾನ್ಯ (NE) ರಾಜ್ಯಗಳಲ್ಲಿ ಮೇಘಾಲಯವು ಉನ್ನತ ಸ್ಥಾನ ಪಡೆದಿದೆ. ಕೇರಳ, ಮಹಾರಾಷ್ಟ್ರ, ಒಡಿಶಾ ಮತ್ತು ತೆಲಂಗಾಣ ರಾಜ್ಯಗಳು ಟಾಪ್ ಪರ್ಫಾರ್ಮರ್ಸ್ ಪ್ರಶಸ್ತಿ ಪಡೆದಿವೆ. ಜಮ್ಮು ಮತ್ತು ಕಾಶ್ಮೀರವು ಕೇಂದ್ರಾಡಳಿತ ಮತ್ತು ಈಶಾನ್ಯ ರಾಜ್ಯಗಳಲ್ಲಿ ಟಾಪ್ ಪರ್ಫಾರ್ಮರ್ ಆಗಿ ಹೊರಹೊಮ್ಮಿದೆ.
.@DPIITGoIನ States Startup Ranking-2021 ಪಟ್ಟಿಯಲ್ಲಿ ನಮ್ಮ ರಾಜ್ಯಕ್ಕೆ ದೊರಕಿರುವ Best Performer ಪ್ರಶಸ್ತಿಯನ್ನು ಸ್ವೀಕರಿಸಿದ ನಮ್ಮ ಇಲಾಖೆಯ ಅಧಿಕಾರಿಗಳಾದ ಡಾ. ಇ.ವಿ. ರಮಣ ರೆಡ್ಡಿ ಹಾಗೂ ಶ್ರೀಮತಿ ಮೀನಾ ನಾಗರಾಜ್ ಅವರ ಜತೆ ಮುಖ್ಯಮಂತ್ರಿ @BSBommai ಅವರನ್ನು ಭೇಟಿಯಾಗಿ ಈ ಬಗ್ಗೆ ಸಂತಸ ಹಂಚಿಕೊಳ್ಳಲಾಯಿತು. pic.twitter.com/cUYTsrRq3d
— Dr. Ashwathnarayan C. N. (@drashwathcn) July 5, 2022
ರಾಜ್ಯಗಳ ಪೈಕಿ ನಾಯಕರ ವಿಭಾಗದಲ್ಲಿ ಅಸ್ಸಾಂ, ಪಂಜಾಬ್, ತಮಿಳುನಾಡು, ಉತ್ತರಾಖಂಡ ಮತ್ತು ಉತ್ತರ ಪ್ರದೇಶಗಳನ್ನು ವಿಜೇತರೆಂದು ಗುರುತಿಸಲಾಗಿದೆ; ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ ಮತ್ತು ಗೋವಾ- ಇವುಗಳು ಕೇಂದ್ರಾಡಳಿತ ಪ್ರದೇಶಗಳು ಮತ್ತು ಈಶಾನ್ಯ ರಾಜ್ಯಗಳಲ್ಲಿ ನಾಯಕರ ಗೌರವವನ್ನು ಪಡೆದುಕೊಂಡಿವೆ. ಛತ್ತೀಸ್‌ಗಢ, ದೆಹಲಿ, ಮಧ್ಯಪ್ರದೇಶ ಮತ್ತು ರಾಜಸ್ಥಾನವನ್ನು ರಾಜ್ಯಗಳನ್ನು ಆಸ್ಪೈರಿಂಗ್ ಲೀಡರ್ಸ್ ಎಂದು ಘೋಷಿಸಲಾಯಿತು. ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಮತ್ತು ಡಾಮನ್ ಮತ್ತು ದಿಯು, ಹಿಮಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್, ಪುದುಚೇರಿ ಮತ್ತು ತ್ರಿಪುರಾ ಹೀಗೆ ಕೇಂದ್ರಾಡಳಿತ ಪ್ರದೇಶಗಳು ಮತ್ತು ಈಶಾನ್ಯ ರಾಜ್ಯಗಳಿಂದ ಆಸ್ಪೈರಿಂಗ್ ಲೀಡರ್ ಆಗಿವೆ. ರಾಜ್ಯಗಳ ವರ್ಗದಿಂದ ಆಂಧ್ರಪ್ರದೇಶ ಹಾಗೂ ಬಿಹಾರ ಮತ್ತು ಕೇಂದ್ರಾಡಳಿತ ಪ್ರದೇಶ/ಈಶಾನ್ಯ ರಾಜ್ಯಗಳಿಂದ ಮಿಜೋರಾಂ ಮತ್ತು ಲಡಾಖ್ ಅನ್ನು ಉದಯೋನ್ಮುಖ ಸ್ಟಾರ್ಟ್-ಅಪ್ ಎಕೋಸಿಸ್ಟಮ್ ಅಡಿಯಲ್ಲಿ ಸೇರಿಸಲಾಗಿದೆ.
ಇದನ್ನೂ ಓದಿ: Basavaraj Bommai Budget 2022: ಮಹಿಳಾ ಉದ್ದಿಮೆದಾರರು, ಮಹಿಳೆ ನೇತೃತ್ವದ ಸ್ಟಾರ್ಟ್ಅಪ್ಗಳಿಗೆ 10 ಲಕ್ಷದ ತನಕ ಸಾಲ