ED Raids: ಚೀನಾ ಮೂಲದ ಮೊಬೈಲ್ ಕಂಪೆನಿಗೆ ಸೇರಿದ 44 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ದಾಳಿ

ಚೀನಾ ಮೂಲದ ಮೊಬೈಲ್ ಫೋನ್ ಕಂಪೆನಿಯಾದ ವಿವೋ ಹಾಗೂ ಅದಕ್ಕೆ ಸಂಬಂಧಿಸಿದ ಇತರ ಸಂಸ್ಥೆಗಳಿಗೆ ಸೇರಿದ 44 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ಜುಲೈ 5ನೇ ತಾರೀಕು ಮಂಗಳವಾರ ದಾಳಿ ನಡೆಸಿದೆ.

ED Raids: ಚೀನಾ ಮೂಲದ ಮೊಬೈಲ್ ಕಂಪೆನಿಗೆ ಸೇರಿದ 44 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ದಾಳಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jul 05, 2022 | 1:06 PM

ಚೀನಾ ಮೂಲದ ಮೊಬೈಲ್ ಫೋನ್ ತಯಾರಕ ಕಂಪೆನಿಯಾದ ವಿವೋ ಹಾಗೂ ಅದಕ್ಕೆ ಸಂಬಂಧಿಸಿದ ಹಲವು ಸಂಸ್ಥೆಗಳ ಮೇಲೆ ಜುಲೈ 5ನೇ ತಾರೀಕಿನ ಮಂಗಳವಾರದಂದು ದೇಶದಾದ್ಯಂತ 44 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದಿಂದ (Enforcement Directorate) ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ನೆರೆಯ ದೇಶಗಳೊಂದಿಗೆ ನಂಟು ಹೊಂದಿರುವ ಉದ್ಯಮಗಳ ಮೂಲವನ್ನು ಹುಡುಕುತ್ತಿರುವ ಸರ್ಕಾರದ ನಡೆಯ ಮಧ್ಯೆ ಈಗಿನ ಕುತೂಹಲಕಾರಿ ಬೆಳವಣಿಗೆ ವರದಿ ಆಗಿದೆ. ಮೇ ತಿಂಗಳಲ್ಲಿ ZTE ಕಾರ್ಪೊರೇಷನ್​ ಮತ್ತು ವಿವೋ ಮೊಬೈಲ್ ಕಮ್ಯುನಿಕೇಷನ್ಸ್ ಕಂಪೆನಿಯು ಹಣಕಾಸು ಅವ್ಯವಹಾರದ ಆರೋಪದ ಮೇಲೆ ತನಿಖೆಯನ್ನು ಎದುರಿಸಿದ್ದವು. ಅಂದ ಹಾಗೆ ಮತ್ತೊಂದು ಚೀನೀ ಕಂಪೆನಿ ಶಿಯೋಮಿ ಕಾರ್ಪೊರೇಷನ್ ಕೂಡ ತನಿಖಾ ಸಂಸ್ಥೆಯ ನಿಗಾ ವ್ಯಾಪ್ತಿಯಲ್ಲಿದೆ. ಮಾಲೀಕತ್ವ ಮತ್ತು ಹಣಕಾಸು ವರದಿಗೆ ಸಂಬಂಧಿಸಿದಂತೆ ವಿವೋದಲ್ಲಿ ಪ್ರಮುಖವಾದ ಅವ್ಯವಹಾರ ನಡೆದಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಏಪ್ರಿಲ್ ತಿಂಗಳಲ್ಲಿ ಕೇಳಲಾಗಿತ್ತು ಎಂದು ಬ್ಲೂಮ್​ಬರ್ಗ್ ತಿಳಿಸಿದೆ. ZTE ಹಣಕಾಸಿನ ಪುಸ್ತಕಗಳ ಮೇಲೆ ಸಹ ಕಣ್ಣಿಡಲಾಗಿದೆ.

2020ರಲ್ಲಿ ಭಾರತ- ಚೀನಾ ಗಡಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾದ ಮೇಲೆ ಚೀನೀ ಸಂಸ್ಥೆಗಳ ಮೇಲೆ ಕಣ್ಗಾವಲು ಬಿಗಿಯಾಯಿತು. ಆ ನಂತರದಲ್ಲಿ ಟಿಕ್ ಟಾಕ್ ಸೇರಿದಂತೆ 200ಕ್ಕೂ ಹೆಚ್ಚು ಚೀನೀ ಮೊಬೈಲ್ ಆ್ಯಪ್​ಗಳನ್ನು ನಿಷೇಧಿಸಲಾಯಿತು. ಕಳೆದ ತಿಂಗಳು ಭಾರತವು ಅಂಕಿ-ಅಂಶವೊಂದನ್ನು ಬಿಡುಗಡೆ ಮಾಡಿ, ಜಗತ್ತಿನ ಬೇರೆಲ್ಲ ದೇಶಕ್ಕಿಂತ ಅಮೆರಿಕದ ಜತೆಗೆ ನಮ್ಮ ವಾಣಿಜ್ಯ ವಹಿವಾಟು ಜಾಸ್ತಿ ಇದೆ ಎಂದು ಹೇಳಿತ್ತು. ಆದರೆ ಈಗಲೂ ಭಾರತದ ಅತಿದೊಡ್ಡ ವಾಣಿಜ್ಯ ಸಹಭಾಗಿತ್ವ ನಮ್ಮ ಜತೆಗಿದೆ ಎಂದು ಚೀನಾ ಹೇಳಿತ್ತು. ಚೀನಾ ಮತ್ತು ಭಾರತದ ಮಧ್ಯೆ ದ್ವಿಪಕ್ಷೀಯ ವಾಣಿಜ್ಯ ವ್ಯವಹಾರ 125.66 ಬಿಲಿಯನ್ ಯುಎಸ್​ಡಿ ಇದ್ದು, ಇದು ಭಾರತದ ಜತೆಗೆ ಸಹಜ ವ್ಯವಹಾರ ನಡೆಸುವ ಸಾಧ್ಯತೆಯನ್ನು ತೋರಿತ್ತು.

ZTE ಮತ್ತು ವಿವೋ ವಿರುದ್ಧದ ತನಿಖೆ ಆದೇಶಕ್ಕೆ ಚೀನಾದ ವಿದೇಶಾಂಗ ಸಚಿವಾಲಯ ವಕ್ತಾರ ಮಾತನಾಡಿ, ಚೀನಾ ಸರ್ಕಾರವು ಸನ್ನಿವೇಶವನ್ನು ಹತ್ತಿರದಿಂದ ಗಮನಿಸುತ್ತಿದೆ. ವಿದೇಶದಲ್ಲಿ ವ್ಯವಹಾರ ನಡೆಸುವಾಗ ಆ ದೇಶದ ಕಾನೂನು ನಿಯಮಾವಳಿಗಳಿಗೆ ಬದ್ಧವಾಗಿರುವಂತೆ ನಾವು ತಿಳಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಭಾರತ ಸರ್ಕಾರವು ಕಾನೂನು ಪ್ರಕಾರವಾಗಿ ನಡೆದುಕೊಳ್ಳಬೇಕು. ಮತ್ತು ಚೀನಾ ಕಂಪೆನಿಗಳ ಬಗ್ಗೆ ನ್ಯಾಯಸಮ್ಮತವಾಗಿ ನಡೆದುಕೊಳ್ಳಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: Enforcement Directorate: ಜಾರಿ ನಿರ್ದೇಶನಾಲಯದಿಂದ ಶಿಯೋಮಿ ಇಂಡಿಯಾದ 5,551 ಕೋಟಿ ರೂಪಾಯಿ ವಶಕ್ಕೆ

Published On - 1:06 pm, Tue, 5 July 22