Adani Row: ಅದಾನಿ-ಹಿಂಡನ್ಬರ್ಗ್ ಪ್ರಕರಣ; ತಜ್ಞರ ಸಮಿತಿ ರಚನೆಗೆ ಕೇಂದ್ರ ಸಮ್ಮತಿ
ಸಮಿತಿ ರಚನೆಗೆ ಸಂಬಂಧಿಸಿ ಪ್ರಸ್ತಾವಿತ ನಿಯಮಗಳ ಕುರಿತು ಬುಧವಾರದ ಒಳಗೆ ಟಿಪ್ಪಣಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಮುಂದಿನ ವಿಚಾರಣೆಯನ್ನು ಶುಕ್ರವಾಕ್ಕೆ ನಿಗದಿಪಡಿಸಿದೆ.
ನವದೆಹಲಿ: ಅದಾನಿ-ಹಿಂಡನ್ಬರ್ಗ್ ಪ್ರಕರಣಕ್ಕೆ ಸಂಬಂಧಿಸಿ ಮಾರುಕಟ್ಟೆ ನಿಯಂತ್ರಣವನ್ನು ಬಲಪಡಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ (Supreme Court) ನಿರ್ದೇಶನದಂತೆ ತಜ್ಞರ ಸಮಿತಿ ರಚಿಸುವುದಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ. ಆದರೆ, ಸಮಿತಿ ರಚನೆ ಪ್ರಕ್ರಿಯೆ ಹಣಕಾಸು ಹರಿವು ಮತ್ತು ಹೂಡಿಕೆ ಮೇಲೆ ಪರಿಣಾಮ ಬೀರದಂತೆ ಇರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ಸರ್ಕಾರದ ಪರ ಅಭಿಪ್ರಾಯ ವ್ಯಕ್ತಪಡಿಸಿದ ಸಾಲಿಸಿಟರ್ ಜನರಲ್ (Solicitor General) ತುಷಾರ್ ಮೆಹ್ತಾ (Tushar Mehta), ಭವಿಷ್ಯದಲ್ಲಿ ಹೂಡಿಕೆದಾರರನ್ನು ರಕ್ಷಿಸುವ ಉದ್ದೇಶದಿಂದ ಸಮಿತಿ ರಚಿಸುವುದಕ್ಕೆ ಸರ್ಕಾರದ ಆಕ್ಷೇಪವಿಲ್ಲ ಮತ್ತು ಇಂಥ ಪ್ರಕರಣಗಳನ್ನು ನಿಭಾಯಿಸಲು ಮಾರುಕಟ್ಟೆ ನಿಯಂತ್ರಕ ಸೆಬಿ (SEBI) ಸಮರ್ಥವಾಗಿದೆ ಎಂದು ಹೇಳಿದ್ದಾರೆ.
ಸಮಿತಿ ರಚನೆಗೆ ಸಂಬಂಧಿಸಿ ಪ್ರಸ್ತಾವಿತ ನಿಯಮಗಳ ಕುರಿತು ಬುಧವಾರದ ಒಳಗೆ ಟಿಪ್ಪಣಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಮುಂದಿನ ವಿಚಾರಣೆಯನ್ನು ಶುಕ್ರವಾಕ್ಕೆ ನಿಗದಿಪಡಿಸಿದೆ.
ಇದನ್ನೂ ಓದಿ: Adani Row: ಅದಾನಿ ಪ್ರಕರಣ; ಹೂಡಿಕೆದಾರರ ಹಿತದೃಷ್ಟಿಯಿಂದ ತಜ್ಞರ ಸಮಿತಿ ರಚಿಸಲು ಸುಪ್ರೀಂ ಕೋರ್ಟ್ ಸೂಚನೆ
ಅದಾನಿ ಸಮೂಹದ ವಿರುದ್ಧ ಕೇಳಿಬಂದಿರುಬವ ಅಕ್ರಮದ ಆರೋಪಗಳ ಬಗ್ಗೆ ಪರಿಶೀಲನೆ ನಡೆಸಲು ತಜ್ಞರ ಸಮಿತಿ ರಚಿಸಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸೂಚನೆ ನೀಡಿತ್ತು. ಹೂಡಿಕೆದಾರರ ಹಿತ ಕಾಯುವುದಕ್ಕಾಗಿ ಈ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ಹೇಳಿತ್ತು.
ಅದಾನಿ ಸಮೂಹವು ಷೇರು ಮೌಲ್ಯ ತಿರುಚುವುದರ ಜತೆಗೆ ಅಕ್ರಮ ಚಟುವಟಿಕೆಯಲ್ಲಿ ತೊಡಗಿತ್ತು ಎಂದು ಅಮೆರಿಕದ ಶಾರ್ಟ್ ಸೆಲ್ಲರ್ ಸಂಸ್ಥೆ ಹಿಂಡನ್ಬರ್ಗ್ ರಿಸರ್ಚ್ ಎರಡು ವಾರಗಳ ಹಿಂದೆ ಆರೋಪಿಸಿತ್ತು. ಪರಿಣಾಮವಾಗಿ ಅದಾನಿ ಸಮೂಹದ ಷೇರು ಮೌಲ್ಯದಲ್ಲಿ ಭಾರೀ ಕುಸಿತವಾಗಿತ್ತು. ಕೆಲವೇ ದಿನಗಳ ಅವಧಿಯಲ್ಲಿ ಅದಾನಿ ಸಮೂಹದ ಕಂಪನಿಗಳು 120 ಶತಕೋಟಿ ಡಾಲರ್ ಮೌಲ್ಯದ ಸಂಪತ್ತು ಕಳೆದುಕೊಂಡಿದ್ದವು. ಈ ವಿಚಾರವಾಗಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ಹೂಡಿಕೆದಾರರ ಹಿತ ಕಾಯುವುದಕ್ಕಾಗಿ ಜಡ್ಜ್ ಒಳಗೊಂಡಂತೆ ತಜ್ಞರ ಸಮಿತಿ ರಚಿಸಬೇಕೆಂದು ಹೇಳಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ