ನವದೆಹಲಿ, ಆಗಸ್ಟ್ 16: ವೇದಾಂತ ಗ್ರೂಪ್ಗೆ ಸೇರಿದ ಹಿಂದೂಸ್ತಾನ್ ಜಿಂಕ್ ಸಂಸ್ಥೆ ಈ ಹಣಕಾಸು ವರ್ಷಕ್ಕೆ ತನ್ನ ಷೇರುದಾರರಿಗೆ 8,000 ಕೋಟಿ ರೂ ವಿಶೇಷ ಲಾಭಾಂಶ ನೀಡಲು ಯೋಜಿಸುತ್ತಿದೆ. ಇದು ವಾರ್ಷಿಕವಾಗಿ ನೀಡುವ 6,000 ಕೋಟಿ ರೂ ಡಿವಿಡೆಂಡ್ಗೆ ಹೊರತಾಗಿ ಕೊಡಲಿರುವ ಹೆಚ್ಚುವರಿ ಪ್ಯಾಕೇಜ್ ಆಗಿದೆ. ಇತ್ತೀಚೆಗಷ್ಟೇ ಅದು ತನ್ನ ಷೇರುದಾರರಿಗೆ ಪ್ರತೀ ಷೇರಿಗೆ 10 ರೂನಂತೆ ಮಧ್ಯಂತರ ಲಾಭಾಂಶವನ್ನು ಘೋಷಿಸಿತ್ತು. ಇದೇ ಮಂಗಳವಾರದಂದು (ಆ. 20) ಹಿಂದೂಸ್ತಾನ್ ಜಿಂಕ್ನ ಮಂಡಳಿ ಸಭೆ ನಡೆಯಲಿದ್ದು, ಅಲ್ಲಿ 8,000 ಕೋಟಿ ರೂ ಮೊತ್ತದ ಸ್ಪೆಷಲ್ ಡಿವಿಡೆಂಡ್ ಹಂಚಿಕೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಈ ಎಂಟು ಸಾವಿರ ಕೋಟಿ ರೂ ಡಿವಿಡೆಂಡ್ನಲ್ಲಿ ಶೇ. 30ರಷ್ಟು, ಅಂದರೆ 2,400 ಕೋಟಿ ರೂ ಮೊತ್ತವು ಕೇಂದ್ರಕ್ಕೆ ಸಲ್ಲಿಕೆಯಾಗಲಿದೆ. ಹಿಂದೂಸ್ತಾನ್ ಜಿಂಕ್ನಲ್ಲಿ ಮಾಲೀಕರ ಷೇರುಪಾಲು ಶೇ. 65ರಷ್ಟಿದೆ. ಸರ್ಕಾರ ಹೊಂದಿರುವ ಷೇರುಪಾಲು ಶೇ. 30ಕ್ಕೆ ಸನಿಹದಷ್ಟಿದೆ. ಈ ಎಂಟು ಸಾವಿರ ಕೋಟಿ ರೂ ವಿಶೇಷ ಲಾಭಾಂಶದಲ್ಲಿ ಮಾಲೀಕ ಸಂಸ್ಥೆಯಾದ ವೇದಾಂತ ಗ್ರೂಪ್ಗೆ ಸುಮಾರು 5,100 ಕೋಟಿ ರೂನಷ್ಟು ಹಣ ವರ್ಗಾವಣೆ ಆಗಲಿದೆ. ಇದು ವೇದಾಂತ ಸಂಸ್ಥೆಯ ಸಾಲದ ಹೊರೆ ಕಡಿಮೆ ಮಾಡಲು ಸಹಾಯವಾಗಲಿದೆ.
ಇದನ್ನೂ ಓದಿ: 22 ವರ್ಷಗಳಿಂದ ಒಂದೇ ಸಂಬಳ ಕೊಡುತ್ತಿರುವ ಈ ಐಟಿ ಕಂಪನಿಯಲ್ಲಿ ಈ ವರ್ಷ ಆದ ಸ್ಯಾಲರಿ ಹೈಕ್ ಶೇ. 1 ಮಾತ್ರ
ಈ ವಿಶೇಷ ಡಿವಿಡೆಂಡ್ ಪ್ರತೀ ಷೇರಿಗೆ 14.20 ರೂನಂತೆ ವಿತರಣೆ ಆಗುತ್ತದೆ. ವಾರ್ಷಿಕ ಡಿವಿಡೆಂಡ್ ಜೊತೆಗೆ ಇದು ಹೆಚ್ಚುವರಿಯಾಗಿ ನೀಡುವ ಲಾಭಾಂಶವಾಗಿದೆ.
ಹಿಂದೂಸ್ತಾನ್ ಜಿಂಕ್ನಲ್ಲಿ ಶೇ. 65ರಷ್ಟು ಷೇರುಪಾಲು ಹೊಂದಿರುವ ವೇದಾಂತ ಸಂಸ್ಥೆ, ಇದರಲ್ಲಿ ಶೇ. 3.31ರಷ್ಟು ಪಾಲಿನ ಷೇರುಗಳನ್ನು ಮಾರಲು ಹೊರಟಿದೆ. ವರದಿಗಳ ಪ್ರಕಾರ, ಇಂದಿನಿಂದ, ಅಂದರೆ ಆಗಸ್ಟ್ 16ರಿಂದ 19ರವರೆಗೂ ಆಫರ್ ಫಾರ್ ಸೇಲ್ ಮೂಲಕ ಷೇರುಗಳ ಬಿಕರಿಯಾಗಲಿದೆ.
ಇದನ್ನೂ ಓದಿ: ಹಣಕಾಸು ಸ್ವಾತಂತ್ರ್ಯ ಕಲ್ಪಿಸುವ FIRE ಪ್ಲಾನ್; ಜೀವನ ಆನಂದಿಸಲು ಇದು ಸೂಪರ್ ಸೂತ್ರವಾ?
ಒಟ್ಟು ಸುಮಾರು 14 ಕೋಟಿ ಷೇರುಗಳು ಮಾರಾಟಕ್ಕಿರಲಿವೆ. ಪ್ರತೀ ಷೇರಿಗೆ 486 ರೂ ಬೆಲೆ ನಿಗದಿ ಮಾಡಲಾಗಿದೆ. ಅಂದರೆ ನಿನ್ನೆಯ ದಿನಾಂತ್ಯದಲ್ಲಿದ್ದ ಷೇರುಬೆಲೆಗಿಂತ ಶೇ. 15ರ ರಿಯಾಯಿತಿ ದರದಲ್ಲಿ ಇವುಗಳನ್ನು ಮಾರಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ