
ದುಬೈ, ಜೂನ್ 19: ಭಾರತದ ಮಹತ್ವಾಕಾಂಕ್ಷಿ ಅಂತಾರಾಷ್ಟ್ರೀಯ ಸಹಭಾಗಿತ್ವ ಯೋಜನೆಗಳಲ್ಲಿ ಒಂದಾದ IMEC ಕಾರಿಡಾರ್ ಬಗ್ಗೆ ನ್ಯೂಸ್9 ಗ್ಲೋಬಲ್ ಸಮಿಟ್ನಲ್ಲಿ (News9 Global Summit 2025) ಚರ್ಚೆ ಆಗಿದೆ. ದುಬೈನಲ್ಲಿ ನಡೆಯುತ್ತಿರುವ ಎರಡನೇ ಆವೃತ್ತಿಯ ನ್ಯೂಸ್9 ಜಾಗತಿಕ ಶೃಂಗಸಭೆಯಲ್ಲಿ ಭಾರತದಿಂದ ಮಧ್ಯಪ್ರಾಚ್ಯ ಮೂಲಕ ಯೂರೋಪ್ ಮತ್ತು ಅಮೆರಿಕಕ್ಕೆ ಸಂಪರ್ಕ ಮಾಡುವ ಈ ಕಾರಿಡಾರ್ ಪ್ರಾಜೆಕ್ಟ್ನ ಅವಶ್ಯಕತೆ ಮತ್ತು ಮಹತ್ವದ ಬಗ್ಗೆ ತಜ್ಞರು ಮಾತನಾಡಿದ್ದಾರೆ.
ಟ್ರಾನ್ಸ್ವರ್ಲ್ಡ್ ಗ್ರೂಪ್ ಛೇರ್ಮನ್ ರಮೇಶ್ ಎಸ್ ರಾಮಕೃಷ್ಣನ್, ಯುಎಸ್ಐಎಸ್ಪಿಎಫ್ ಸಿಇಒ ಮುಕೇಶ್ ಆಘಿ ಮತ್ತು ಈ ಸೆಕ್ಟರ್ನ ತಜ್ಞ ಅಮ್ಜದ್ ತಾಹ ಅವರು ಈ ಕಾರಿಡಾರ್ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಈಗಿರುವ ಟ್ರೇಡಿಂಗ್ ರೂಟ್ಗಳು ಅನಿಶ್ಚಿತ ಸ್ಥಿತಿಯಲ್ಲಿವೆ. ಪರ್ಯಾಯ ವ್ಯಾಪಾರ ಮಾರ್ಗಗಳ ಅವಶ್ಯಕತೆ ಇವತ್ತಿನ ಕಾಲಘಟ್ಟದಲ್ಲಿ ಹೆಚ್ಚಿದೆ ಎಂಬುದು ತಜ್ಞರ ಅನಿಸಿಕೆ.
ಇದನ್ನೂ ಓದಿ: ಭಾರತ-ಯುಎಇ ಸಂಬಂಧದಲ್ಲಿ ‘ಸಿಇಪಿಎ’ ಗೇಮ್ ಚೇಂಜರ್: ಸತೀಶ್ ಕುಮಾರ್ ಸಿವನ್
2023ರಲ್ಲಿ ಭಾರತದಲ್ಲಿ ನಡೆದ ಜಿ20 ಶೃಂಸಭೆಯ ವೇಳೆ IMEC ಕಾರಿಡಾರ್ (India Middle-east Europe Corridor) ಸ್ಥಾಪನೆಗೆ ವಿವಿಧ ದೇಶಗಳು ಎಂಒಯುಗೆ ಸಹಿಹಾಕಿದವು. ಭಾರತದಿಂದ ಪಶ್ಚಿಮ ಏಷ್ಯಾ ಮೂಲಕ ಯೂರೋಪ್ ಹಾಗೂ ಅಮೆರಿಕಕ್ಕೆ ಟ್ರೇಡಿಂಗ್ ಸಂಪರ್ಕ ಮಾಡುವ ಕಾರಿಡಾರ್ ಇದು. ಭಾರತ, ಯುಎಇ, ಸೌದಿ ಅರೇಬಿಯಾ, ಫ್ರಾನ್ಸ್, ಇಟಲಿ, ಜರ್ಮನಿ, ಯೂರೋಪ್ ಯೂನಿಯನ್ ಮತ್ತು ಅಮೆರಿಕ ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ.
ಇಂಡಿಯಾ ಮಿಡಲ್ ಈಸ್ಟ್ ಯೂರೋಪ್ ಎಕನಾಮಿಕ್ ಕಾರಿಡಾರ್ ಎನ್ನಲಾಗುವ ಈ ವ್ಯಾಪಾರ ಮಾರ್ಗವು ಭಾರತದಿಂದ ಆರಂಭಿಸಿ ಯುಎಇ, ಸೌದಿ ಅರೇಬಿಯಾ, ಜೋರ್ಡಾನ್, ಇಸ್ರೇಲ್ ಮೂಲಕದ ಮಧ್ಯಪ್ರಾಚ್ಯ ಪ್ರದೇಶಗಳನ್ನು ಹಾದು ಯೂರೋಪ್ ಸಂಪರ್ಕಿಸುತ್ತದೆ. ಯೂರೋಪ್ನಲ್ಲಿ ಮಾರ್ಗದ ಆರಂಭ ಯಾವ ದೇಶದಿಂದ ಎಂಬುದು ಸ್ಪಷ್ಟವಾಗಿಲ್ಲ. ಗ್ರೀಸ್, ಇಟಲಿ ಮತ್ತು ಫ್ರಾನ್ಸ್ ದೇಶಗಳು ಈ ಕಾರಿಡಾರ್ಗೆ ಯೂರೋಪ್ನ ಬಾಗಿಲುಗಳಾಗಲು ಬಯಸುತ್ತಿವೆ.
ಇದನ್ನೂ ಓದಿ: ಭಾರತ-ಯುಎಇ ಸಂಬಂಧಕ್ಕೆ ವಿಶ್ವಾಸದ ತಳಹದಿ: ನ್ಯೂಸ್9 ಸಮಿಟ್ನಲ್ಲಿ ರಾಯಭಾರಿ ಸಂಜಯ್ ಸುಧೀರ್ ಹೇಳಿಕೆ
ಚೀನಾದ ಬಹಳ ಮಹತ್ವಾಕಾಂಕ್ಷಿ ಎನ್ನಲಾದ ಬೆಲ್ಟ್ ಅಂಡ್ ರೋಡ್ ಪ್ರಾಜೆಕ್ಟ್ಗೆ ಪರ್ಯಾಯವಾಗಿ ಐಎಂಇಸಿ ಕಾರಿಡಾರ್ ಅನ್ನು ರೂಪಿಸಲಾಗುತ್ತಿದೆ. ಐತಿಹಾಸಿಕವಾಗಿ ಇದ್ದ ಗೋಲ್ಡನ್ ರೋಡ್ ರೂಟ್ನ ನವೀನ ರೂಪವೇ ಐಮಿಕ್ ಕಾರಿಡಾರ್. ತನ್ನ ಬೆಲ್ಟ್ ರೋಡ್ ಅಥವಾ ಸಿಲ್ಕ್ ರೋಡ್ ಯೋಜನೆ ಮೂಲಕ ವಿಶ್ವದ ವ್ಯಾಪಾರ ಪಾರಮ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಹೊರಟಿದ್ದ ಚೀನಾಗೆ ಇದು ಇರಿಸುಮುರುಸು ತಂದಿದೆ.
ಇನ್ನು, ಟರ್ಕಿ ದೇಶ ಕೂಡ ಈ ಕಾರಿಡಾರ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಈ ಯೋಜನೆಯಲ್ಲಿ ತನ್ನನ್ನು ಒಳಗೊಂಡಿಲ್ಲದಿರುವುದು ಟರ್ಕಿಯ ಆಕ್ರೋಶಕ್ಕೆ ಕಾರಣವಾಗಿದೆ. ಐಮಿಕ್ಗೆ ಪರ್ಯಾಯವಾಗಿ ಇರಾಕ್ ಮಾರ್ಗದ ಮೂಲಕ ಪ್ರತ್ಯೇಕ ಕಾರಿಡಾರ್ ರೂಪಿಸುವುದಾಗಿ ಟರ್ಕಿ ಪಣತೊಟ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ