
ನವದೆಹಲಿ, ಜುಲೈ 11: ಬ್ರಿಟನ್ ಮೂಲದ ಎಫ್ಎಂಸಿಜಿ ಸಂಸ್ಥೆಯಾದ ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ಗೆ ಪ್ರಿಯಾ ನಾಯರ್ (Priya Nair) ನೂತನ ಸಿಇಒ ಆಗಿ ನೇಮಕವಾದ ಬೆನ್ನಲ್ಲೇ ಅದರ ಷೇರುಗಳಿಗೆ ಬೇಡಿಕೆ ಹೆಚ್ಚಾಗಿದೆ. 2,408 ರೂ ಇದ್ದ ಅದರ ಷೇರುಬೆಲೆ ಇವತ್ತು ಈ ಸುದ್ದಿ ಬಂದ ಕೂಡಲೇ ಶೇ. 5ರಷ್ಟು ಏರಿತ್ತು. ಇವತ್ತಿನ ಟ್ರೇಡಿಂಗ್ನಲ್ಲಿ ಒಂದು ಹಂತದಲ್ಲಿ ಬೆಲೆ 2,525 ರೂವರೆಗೂವರೆಗೂ ಏರಿತ್ತು. ಈ ವರದಿ ಬರೆಯುವ ಸಂದರ್ಭದಲ್ಲಿ ಎಚ್ಯುಎಲ್ನ ಷೇರುಬೆಲೆ 2,521.80 ರೂ ಇತ್ತು.
ಪ್ರಿಯಾ ನಾಯರ್ ಅವರು ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಕಂಪನಿಯ 92 ವರ್ಷದ ಇತಿಹಾಸದಲ್ಲೇ ಸಿಇಒ ಆದ ಮೊದಲ ಮಹಿಳೆ ಎನಿಸಿದ್ದಾರೆ. ಇದೇ ಅಂಶ ಆಗಿದ್ದರೆ ಮಾರುಕಟ್ಟೆ ಇಷ್ಟು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿರಲಿಲ್ಲ. ಪ್ರಿಯಾ ನಾಯರ್ ಅವರು ಅಪ್ರತಿಮ ವ್ಯವಹಾರ ಚತುರೆ ಎಂದು ಹೆಸರುವಾಸಿಯಾಗಿದ್ದಾರೆ.
ಇದನ್ನೂ ಓದಿ: Priya Nair: HULನ ಮೊದಲ ಮಹಿಳಾ CEO ಆಗಿ ಪ್ರಿಯಾ ನಾಯರ್ ನೇಮಕ; ಇವರ ಸಂಬಳ ಎಷ್ಟಿದೆ ಗೊತ್ತಾ?
ಹಿಂದೂಸ್ತಾನ್ ಯುನಿಲಿವರ್ ಸಂಸ್ಥೆಯಲ್ಲಿ ಮೂರು ದಶಕಗಳಿಂದ ಇರುವ 53 ವರ್ಷದ ಪ್ರಿಯಾ ನಾಯರ್ ಅವರು ಬ್ಯುಸಿನೆಸ್ ವಿಭಾಗಗಳನ್ನು ಚಾಣಾಕ್ಷ್ಯತೆಯಿಂದ ನಿಭಾಯಿಸಿದ್ದಾರೆ. 2023ರಿಂದ ಅವರು ಬ್ಯೂಟಿ ಅಂಡ್ ವೆಲ್ಬೀಯಿಂಗ್ ವಿಭಾಗದಲ್ಲಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲಿ ಡೊವ್, ಸನ್ಸಿಲ್ಕ್, ಕ್ಲಿಯರ್, ವ್ಯಾಸಲಿನ್ ಇತ್ಯಾದಿ ಬ್ರ್ಯಾಂಡ್ಗಳಿಂದ 13.2 ಬಿಲಿಯನ್ ಯೂರೋ ಬ್ಯುಸಿನೆಸ್ ನಿಭಾಯಿಸಿದ್ದಾರೆ.
ಇದಕ್ಕಿಂತ ಹೆಚ್ಚಾಗಿ ಮಾರುಕಟ್ಟೆಯು ಪ್ರಿಯಾ ನಾಯರ್ ಆಗಮನದಿಂದ ಖುಷಿಪಡಲು ಮತ್ತೊಂದು ಬಲವಾದ ಕಾರಣ ಇದೆ. ಅದು ಪ್ರಿಯಾ ಅವರ ಟ್ರ್ಯಾಕ್ ರೆಕಾರ್ಡ್. ಹಿಂದೂಸ್ತಾನ್ ಯುನಿಲಿವರ್ನಲ್ಲಿ ಕಳಪೆ ಸಾಧನೆ ಮಾಡುತ್ತಿದೆ ಎನ್ನಲಾದ ಬ್ಯುಸಿನೆಸ್ಗಳನ್ನು ಇವರು ಹೈ ಮಾರ್ಜಿನ್ ಬ್ಯುಸಿನೆಸ್ ಆಗಿ ಬೆಳೆಸಿದ್ದು ಗಮನಾರ್ಹ ಸಂಗತಿ. ಇದಕ್ಕೆ ಉದಾಹರಣೆ, ಹೋಮ್ ಕೇರ್ನದ್ದು.
ಇದನ್ನೂ ಓದಿ: ಮಾವನ ಕಂಪನಿಯಲ್ಲಿ ಯಾಕೆ ಸೇರಲಿಲ್ಲ? ಕಾರ್ಪೊರೇಟ್ ಉದ್ಯೋಗಕ್ಕೆ ಸೇರಿದ ಮಾಜಿ ಪ್ರಧಾನಿ ಬಗ್ಗೆ ತಮಾಷೆ
2014ರಿಂದ 2020ರವರೆಗೆ ಇವರು ಎಚ್ಯುಎಲ್ನ ಹೋಮ್ ಕೇರ್ ವಿಭಾಗದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದರು. ಇವರು ಆ ಹುದ್ದೆಗೆ ಬಂದ ಸಂದರ್ಭದಲ್ಲಿ ಹೋಮ್ ಕೇರ್ನ ಲಾಭದ ಮಾರ್ಜಿನ್ (EBIT margin) ಶೇ. 13.1 ಇತ್ತು. 2020ರಲ್ಲಿ ಅದು ಶೇ. 18.8ಕ್ಕೆ ಏರಿತ್ತು. ಈ ಹಂತದಲ್ಲಿ ಹಿಂದೂಸ್ತಾನ್ ಯುನಿಲಿವರ್ ಕಂಪನಿಯ ಒಟ್ಟಾರೆ ಲಾಭದ ಮಾರ್ಜಿನ್ ಶೇ. 15ರಿಂದ ಶೇ. 22.3ಕ್ಕೆ ಏರಿತ್ತು. ಇದಕ್ಕೆ ಕಾರಣವಾಗಿದ್ದು ಹೋಮ್ ಕೇರ್ನ ಲಾಭದ ಅಂತರ ಗಣನೀಯವಾಗಿ ಹೆಚ್ಚಿದ್ದು.
ಈ ಮೇಲಿನ ಕಾರಣಗಳಿಂದಾಗಿ ಪ್ರಿಯಾ ನಾಯರ್ ಬಗ್ಗೆ ಮಾರುಕಟ್ಟೆ ಹೆಚ್ಚು ವಿಶ್ವಾಸ ಇಟ್ಟಂತಿದೆ. ಹಲವು ದೇಶಗಳ ಮಾರುಕಟ್ಟೆಗಳನ್ನು ಬಲ್ಲ ಪ್ರಿಯಾ ಅವರ ನೇತೃತ್ವದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಎಚ್ಯುಎಲ್ ಉತ್ಪನ್ನಗಳು ರಾರಾಜಿಸಬಹುದು ಎನ್ನುವ ನಂಬಿಕೆಯಿಂದ ಹೂಡಿಕೆದಾರರು ಮುಗಿಬೀಳುತ್ತಿರುವಂತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ