IIFL Securities: ಐಐಎಫ್ಎಲ್ ಸೆಕ್ಯೂರಿಟೀಸ್ ಮೇಲೆ ಸೆಬಿ ನಿರ್ಬಂಧ; ಷೇರುಬೆಲೆ ಶೇ. 18ಕ್ಕಿಂತ ಹೆಚ್ಚು ಕುಸಿತ
SEBI Action Against IIFL Securities: ಐಐಎಫ್ಎಲ್ ಸೆಕ್ಯೂರಿಟೀಸ್ ಮುಂದಿನ 2 ವರ್ಷ ಯಾವುದೇ ಹೊಸ ಕ್ಲೈಂಟ್ಗಳನ್ನು ಹೊಂದುವಂತಿಲ್ಲ ಎಂದು ಸೆಬಿ ನಿರ್ಬಂಧ ಹಾಕಿದೆ. ಇದರ ಬೆನ್ನಲ್ಲೇ ಅದರ ಷೇರುಬೆಲೆ ಜೂನ್ 20ರಂದು ಬೆಳಗ್ಗೆ ಶೇ. 18ರಷ್ಟು ಕುಸಿತಕಂಡಿದೆ.
ನವದೆಹಲಿ: ಗ್ರಾಹಕರ ಹಣವನ್ನು ದುರುಪಡಿಸಿಕೊಂಡ ಕಾರಣಕ್ಕೆ ಸೆಬಿ (SEBI) ನಿನ್ನೆ (ಜೂನ್ 19) ಐಐಎಫ್ಎಲ್ ಸೆಕ್ಯೂರಿಟೀಸ್ ಸಂಸ್ಥೆಯ (IIFL Securities) ಮೇಲೆ ಕ್ರಮ ಜಾರಿ ಮಾಡಿತು. ಇದರ ಬೆನ್ನಲ್ಲೇ ಈ ಷೇರು ಬ್ರೋಕರೇಜ್ ಕಂಪನಿಯ ಷೇರುಬೆಲೆ ಪ್ರಪಾತಕ್ಕೆ ಬೀಳುತ್ತಿದೆ. ಮಂಗಳವಾರದ ಬೆಳಗಿನ ವಹಿವಾಟಿನಲ್ಲಿ ಐಐಎಫ್ಎಲ್ ಸೆಕ್ಯೂರಿಟೀಸ್ನ ಷೇರುಬೆಲೆ ಶೇ. 18ಕ್ಕಿಂತಲೂ ಕುಸಿತ ಕಂಡಿತು. ಒಂದು ಹಂತದಲ್ಲಿ ಅದರ ಷೇರು ಬೆಲೆ 71.20 ರೂ ಇದ್ದದ್ದು 58 ರುಪಾಯಿಗೆ ಇಳಿದಿತ್ತು. ಬೆಳಗ್ಗೆ 10:30ರ ಹೊತ್ತಿನಲ್ಲಿ ಅದರ ಷೇರುಬೆಲೆ 61.75ಕ್ಕೆ ಹೋಗಿತ್ತು.
ಐಐಎಫ್ಎಲ್ ಸೆಕ್ಯೂರಿಟೀಸ್ ಮೇಲೆ ಸೆಬಿ ಕ್ರಮ ಯಾಕೆ?
ಐಐಎಫ್ಎಲ್ ಸೆಕ್ಯೂರಿಟೀಸ್ ಮುಂದಿನ 2 ವರ್ಷ ಯಾವುದೇ ಹೊಸ ಕ್ಲೈಂಟ್ಗಳನ್ನು ಹೊಂದುವಂತಿಲ್ಲ ಎಂದು ಸೆಬಿ ನಿರ್ಬಂಧ ಹಾಕಿತು. ತನ್ನ ಗ್ರಾಹಕರ ಹಣವನ್ನು ಅಕ್ರಮವಾಗಿ ಉಪಯೋಗಿಸಿಕೊಂಡಿದ್ದ ಕಂಡುಬಂದ ಹಿನ್ನೆಲೆಯಲ್ಲಿ ಸೆಬಿ ಈ ಕ್ರಮ ಕೈಗೊಂಡಿತ್ತು.
ಇದನ್ನೂ ಓದಿ: IndiGo: ಏರ್ಬಸ್ನಿಂದ 500 ವಿಮಾನ ಖರೀದಿಸಲಿದೆ ಇಂಡಿಗೋ; ದಾಖಲೆಯ ಒಪ್ಪಂದ
ಸ್ಟಾಕ್ ಬ್ರೋಕರೇಜ್ ಸಂಸ್ಥೆ ಎನಿಸಿದ ಐಐಎಫ್ಎಲ್ ಸೆಕ್ಯೂರಿಟೀಸ್ ವಿರುದ್ಧದ ಪ್ರಕರಣ ಸುದೀರ್ಘ 8-9 ವರ್ಷಗಳ ಹಿಂದಿನದ್ದು. 2014ರಲ್ಲಿ ಐಐಎಫ್ಎಲ್ ಸೆಕ್ಯೂರಿಟೀಸ್ನ ಬುಕ್ ಆಫ್ ಅಕೌಂಟ್ಗಳನ್ನು ಪರಿಶೀಲನೆ ನಡೆಸಿದಾಗ ಸೆಬಿಗೆ ಕೆಲವೊಂದಿಷ್ಟು ಅಕ್ರಮದ ಸುಳಿವು ಸಿಕ್ಕಿತ್ತು. ಗ್ರಾಹಕರ ನಿಧಿ ಹಾಗೂ ಸಂಸ್ಥೆಯ ನಿಧಿ ಎರಡನ್ನೂ ಪ್ರತ್ಯೇಕವಾಗಿಟ್ಟಿರಲಿಲ್ಲ. ಗ್ರಾಹಕರ ಹಣದ ದುರುಪಯೋಗ ಮಾಡಿಕೊಳ್ಳಲಾಗಿದ್ದುದು ಕಂಡು ಬಂದಿತ್ತು.
ಇದರ ಬಳಿಕ ಸೆಬಿ ಹಲವು ಬಾರಿ ಪರಿಶೀಲನೆಗಳನ್ನು ನಡೆಸಿತು. ಐಐಎಫ್ಎಲ್ ಸೆಕ್ಯೂರಿಟೀಸ್ ವಿರುದ್ಧ ಎರಡು ತನಿಖೆಗಳನ್ನೂ ಕೈಗೊಳ್ಳಲಾಯಿತು. 2017 ಮತ್ತು 2021ರಲ್ಲಿ ಎರಡು ಬಾರಿ ಶೋಕಾಸ್ ನೋಟೀಸ್ ಕೊಡಲಾಗಿತ್ತು. 6 ವರ್ಷದಷ್ಟು ಸುದೀರ್ಘ ಕಾಲ ತನಿಖೆ ನಡೆದಿತ್ತು. ಇದರಲ್ಲಿ ಐಐಎಫ್ಎಲ್ ಸೆಕ್ಯೂರಿಟೀಸ್ನಿಂದ ಅಕ್ರಮ ನಡಾವಳಿ ಆಗಿದ್ದುದು ಮತ್ತು ಷೇರುಪೇಟೆ ಬ್ರೋಕರೇಜ್ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿರುವುದು ಸೆಬಿಗೆ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಐಐಎಎಫ್ಎಲ್ಗೆ 2 ವರ್ಷ ಹೊಸ ಗ್ರಾಹಕರನ್ನು ಒಳಗೊಳ್ಳದಂತೆ ನಿರ್ಬಂಧ ಹಾಕಲಾಗಿದೆ.
ಇದನ್ನೂ ಓದಿ: Modinomics: ತಲೆತಲೆಮಾರುಗಳಿಗೆ ಲಾಭ ಕೊಡುವ ದೂರದೃಷ್ಟಿಕೋನದೊಂದಿಗೆ ಹೂಡಿಕೆ ಮಾಡುವುದು ಮೋದಿನಾಮಿಕ್ಸ್
ಐಐಎಫ್ಎಲ್ ಸೆಕ್ಯೂರಿಟೀಸ್ ಸಂಸ್ಥೆ ಮೇಲೆ ಏನು ಪರಿಣಾಮ?
ಸೆಬಿ ನಿರ್ಬಂಧವು ಐಐಎಫ್ಎಲ್ ಹೊಸ ಗ್ರಾಹಕರನ್ನು ಒಳಗೊಳ್ಳಬಾರದು ಎಂಬುದಾಗಿದೆ. ಅದು ಪ್ರಸ್ತುತ ಹೊಂದಿರುವ ಗ್ರಾಹಕರಿಗೆ ಸೇವೆ ಮುಂದುವರಿಸಬಹುದು. ಅಲ್ಲದೇ ಐಐಎಫ್ಎಲ್ ಸೆಕ್ಯೂರಿಟೀಸ್ನಿಂದ ಗ್ರಾಹಕರಿಗೆ ವಂಚನೆ ಆಗಿರುವುದು ಕಂಡುಬಂದಿಲ್ಲ. ಇದರಿಂದ ಐಎಎಫ್ಎಲ್ ಸೆಕ್ಯೂರಿಟೀಸ್ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಪ್ರಯತ್ನಿಸಬಹುದು.
ತಾನು ಸೆಬಿ ಆದೇಶವನ್ನು ಪ್ರಶ್ನಿಸಿ ಸೆಕ್ಯೂರಿಟೀಸ್ ಮೇಲ್ಮನವಿ ನ್ಯಾಯಾಲಯದ ಮೊರೆ ಹೋಗುವುದಾಗಿ ಐಐಎಫ್ಎಲ್ ಸೆಕ್ಯೂರಿಟೀಸ್ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ