ಲೈಫ್ ಸರ್ಟಿಫಿಕೇಟ್ ಸಲ್ಲಿಕೆಯಿಂದ ಎಫ್ಡಿ ದರ ಪರಿಷ್ಕರಣೆವರೆಗೆ ನವೆಂಬರ್ಲ್ಲಿ ಹಣಕಾಸು ಸ್ಥಿತಿ ಪ್ರಭಾವಿಸುವ ಡೆಡ್ಲೈನ್ಗಳು
ನವೆಂಬರ್ನಲ್ಲಿ ಹಣಕಾಸು ಸ್ಥಿತಿಯನ್ನು ಪ್ರಭಾವಿಸುವ ಕೆಲ ಪ್ರಮುಖ ಕಾರ್ಯಗಳಿವೆ. ಸರ್ಕಾರದ ಪಿಂಚಣಿ ಪಡೆಯುತ್ತಿರುವವರು ನವೆಂಬರ್ ತಿಂಗಳಲ್ಲಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೆಕಾಗುತ್ತದೆ. ಆಡಿಟಿಂಗ್ ಆಗಬೇಕಾದ ಅಕೌಂಟ್ಗಳಿರುವ ಇನ್ಕಮ್ ಟ್ಯಾಕ್ಸ್ ಪಾವತಿದಾರರು ಐಟಿಆರ್ ಸಲ್ಲಿಸಲು ನವೆಂಬರ್ 21ರವರೆಗೆ ಕಾಲಾವಕಾಶ ಹೊಂದಿದ್ದಾರೆ. ಇದೂ ಸೇರಿ ಇನ್ನೂ ಕೆಲ ಡೆಡ್ಲೈನ್ಗಳು ನವೆಂಬರ್ನಲ್ಲಿ ಇವೆ.

ಬೆಂಗಳೂರು, ಅಕ್ಟೋಬರ್ 27: ಪ್ರತೀ ತಿಂಗಳು ಹಣಕಾಸು ಪರಿಸ್ಥಿತಿ ಮೇಲೆ ಪ್ರಭಾವ ಬೀರುವಂತಹ ಕೆಲ ಘಟನೆಗಳು ಜರುಗುತ್ತವೆ. ಪಿಂಚಣಿದಾರರು ಲೈಫ್ ಸರ್ಟಿಫಿಕೇಟ್ ಸಲ್ಲಿಸುವುದು, ಎಲ್ಪಿಜಿ, ಎಟಿಎಫ್ ಇಂಧನ ದರ ಪರಿಷ್ಕರಣೆ, ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆ ಇತ್ಯಾದಿ ವಿವಿಧ ಕಾರ್ಯಗಳಿಗೆ ನವೆಂಬರ್ನಲ್ಲಿ ಡೆಡ್ಲೈನ್ ಇದೆ. ಈ ವಾಯಿದೆ ನಿರ್ಲಕ್ಷಿಸಿದರೆ ಕೆಲ ಅವಕಾಶ ಕೈತಪ್ಪಬಹುದು, ಅಥವಾ ಹಣಕಾಸು ಹಿನ್ನಡೆ ಆಗಬಹುದು. ಹೀಗಾಗಿ, ನವೆಂಬರ್ನಲ್ಲಿ ಯಾವುದೆಲ್ಲಾ ಪ್ರಮುಖ ಹಣಕಾಸು ಕಾರ್ಯಗಳಿವೆ ಎಂಬುದನ್ನು ತಿಳಿದು ಸೂಕ್ತ ಪ್ಲಾನ್ ಮಾಡಬಹುದು.
1. ಪಿಂಚಣಿದಾರರು ಜೀವ ಪ್ರಮಾಣಪತ್ರ ಸಲ್ಲಿಸಬೇಕು
ಸರ್ಕಾರಿ ಸೇವೆಯಿಂದ ನಿವೃತ್ತರಾಗಿ ಪಿಂಚಣಿ ಪಡೆಯುತ್ತಿರುವವರು ಪ್ರತೀ ವರ್ಷ ಲೈಫ್ ಸರ್ಟಿಫಿಕೇಟ್ ಅಥವಾ ಜೀವನ ಪ್ರಮಾಣಪತ್ರ ನೀಡಬೇಕು. ತಾವು ಸತ್ತಿಲ್ಲ, ಬದುಕಿದ್ದೇವೆ ಎಂದು ದೃಢಪಡಿಸಲು ಈ ಪ್ರಮಾಣಪತ್ರ ನೀಡಬೇಕಾಗುತ್ತದೆ. ಸಾಮಾನ್ಯವಾಗಿ ಪ್ರತೀ ವರ್ಷ ನವೆಂಬರ್ ತಿಂಗಳಲ್ಲಿ ಈ ಲೈಫ್ ಸರ್ಟಿಫಿಕೇಟ್ ಸಲ್ಲಿಸಲಾಗುತ್ತದೆ. ಅಂದರೆ, ನವೆಂಬರ್ 1ರಿಂದ 30ರವರೆಗೆ ಅವಕಾಶ ಇರುತ್ತದೆ. 80 ವರ್ಷ ಮೇಲ್ಪಟ್ಟ ವಯಸ್ಸಿನವರು ಅಕ್ಟೋಬರ 1ರಿಂದೇ ಲೈಫ್ ಸರ್ಟಿಫೀಕೇಟ್ ನೀಡಬಹುದು.
ಇದನ್ನೂ ಓದಿ: ಕೇವಲ 16 ತಿಂಗಳಲ್ಲಿ 23 ಪಟ್ಟು ಜಿಗಿದ ಷೇರುಬೆಲೆ: 92 ಲಕ್ಷ ರೂ ಆದಾಯಕ್ಕೆ 95 ಲಕ್ಷ ರೂ ತೆರಿಗೆ ಹಾಗೂ ದಂಡ
2. ಆದಾಯ ತೆರಿಗೆ ಪಾವತಿದಾರರಿಗೆ ರಿಟರ್ನ್ಸ್ ಸಲ್ಲಿಸಲು ಹೆಚ್ಚಿನ ಕಾಲಾವಕಾಶ
ಅಕೌಂಟ್ಗಳನ್ನು ಆಡಿಟ್ ಮಾಡಬೇಕಾದ ಅಗತ್ಯ ಇರುವ ಆದಾಯ ತೆರಿಗೆ ಪಾವತಿದಾರರು 2025-26ರ ವರ್ಷಕ್ಕೆ ಐಟಿಆರ್ ಸಲ್ಲಿಸಲು ಅಕ್ಟೋಬರ್ 31ಕ್ಕೆ ಇದ್ದ ಡೆಡ್ಲೈನ್ ಅನ್ನು ನವೆಂಬರ್ 21ಕ್ಕೆ ವಿಸ್ತರಿಸಲಾಗಿದೆ.
3. ಎಲ್ಪಿಜಿ ದರ ಪರಿಷ್ಕರಣೆ
ಇಂಡಿಯನ್ ಆಯಿಲ್ ಇತ್ಯಾದಿ ತೈಲ ಮಾರುಕಟ್ಟೆ ಕಂಪನಿಗಳು ಗೃಹಬಳಕೆ ಮತ್ತು ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರಗಳನ್ನು ಪ್ರತೀ ತಿಂಗಳ ಮೊದಲ ದಿನ ಪರಿಷ್ಕರಿಸುತ್ತವೆ. ಎಟಿಎಫ್ ಇಂಧನ ದರವೂ ಇದೇ ವೇಳೆ ಪರಿಷ್ಕರಣೆ ಆಗುತ್ತದೆ. ನವೆಂಬರ್ 1ರಂದು ಹೊಸ ದರಗಳನ್ನು ನಿರೀಕ್ಷಿಸಬಹುದು. ಕಮರ್ಷಿಯಲ್ ಎಲ್ಪಿಜಿ ದರಗಳು ಹೆಚ್ಚು ಬಾರಿ ಪರಿಷ್ಕರಿತಗೊಂಡಿವೆ. ಗೃಹ ಬಳಕೆ ಎಲ್ಪಿಜಿ ದರ ಹೆಚ್ಚು ಸ್ಥಿರವಾಗಿದೆ.
ಇದನ್ನೂ ಓದಿ: ಚಿನ್ನ ಖರೀದಿಸುವ ಮುನ್ನ ಹಾಲ್ಮಾರ್ಕ್ ಗಮನಿಸಿದರೆ ಸಾಕಾ? ಬಂಗಾರದ ಶುದ್ಧತೆ ಪತ್ತೆ ಮಾಡುವ ವಿಧಾನ ತಿಳಿದಿರಿ
4. ಫಿಕ್ಸೆಡ್ ಡೆಪಾಸಿಟ್ ದರಗಳ ಪರಿಷ್ಕರಣೆ
ಆರ್ಬಿಐ ರೆಪೋ ದರ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಕೆಲ ಬ್ಯಾಂಕುಗಳು ತಮ್ಮ ಫಿಕ್ಸೆಡ್ ಡೆಪಾಸಿಟ್ ದರಗಳನ್ನು ಪರಿಷ್ಕರಿಸಿವೆ. ಐಸಿಐಸಿಐ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಮೊದಲಾದ ಬ್ಯಾಂಕುಗಳಲ್ಲಿ ಕೆಲ ಠೇವಣಿ ದರಗಳು ನವೆಂಬರ್ನಲ್ಲಿ ಬದಲಾಗುತ್ತಿವೆ. ಒಮ್ಮೆ ಬ್ಯಾಂಕುಗಳ ಅಧಿಕೃತ ವೆಬ್ಸೈಟ್ಗೆ ಹೋಗಿ ದರಗಳನ್ನು ಪರಿಶೀಲಿಸುವುದು ಉತ್ತಮ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




