2022ನೇ ಇಸವಿಯ ಎರಡನೇ ತಿಂಗಳಾದ ಫೆಬ್ರವರಿಯಲ್ಲೂ ಒಂದು ದಿನ ಕಳೆದು ಹೋಗಿದೆ. ಹೊಸ ತಿಂಗಳ ಆರಂಭ ಅಂದರೆ, ಸಹಜವಾಗಿಯೇ ಕೆಲವು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಬದಲಾವಣೆಗಳು ಭಾರತದಲ್ಲಿ ಆಗುತ್ತವೆ. ಅದಕ್ಕೆ ಫೆಬ್ರವರಿ ತಿಂಗಳೇನೂ ಹೊರತಾಗಿಲ್ಲ. ವೈಯಕ್ತಿಕ ಹಣಕಾಸು ವಲಯದಲ್ಲಿ ಕೆಲವು ಬದಲಾವಣೆಗಳನ್ನು ಕಾಣಬೇಕಾಗಬಹುದು. ಐಎಂಪಿಎಸ್ (IMPS) ವಹಿವಾಟಿನ ಅಪ್ಡೇಟ್ಸ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಬಂದಿರುವುದರಿಂದ ಆರಂಭಗೊಂಡು, ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ನ ಬೆಲೆ ಬದಲಾವಣೆ ತನಕ ಹೊಸ ಹೊಸ ನಿಯಮಗಳು ಪರಿಚಯ ಆಗಿವೆ. ಈ ಹೊಸ ನಿಯಮಾವಳಿಗಳು ಜನ ಸಾಮಾನ್ಯರ ಮೇಲೆ ಪ್ರಭಾವ ಬೀರುತ್ತವೆ. ಈ ಬದಲಾವಣೆಗಳನ್ನು ವಿವರವಾಗಿ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಫೆಬ್ರವರಿ 1ನೇ ತಾರೀಕಿನಿಂದ ಜಾರಿಗೆ ಬಂದಿರುವ ಕೆಲವು ಪ್ರಮುಖ ಬದಲಾವಣೆಗಳಿವು:
ಎಸ್ಬಿಐ ಐಎಂಪಿಎಸ್ ಮಿತಿ ಏರಿಕೆ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ದೇಶದ ಅತಿ ದೊಡ್ಡ ಬ್ಯಾಂಕ್. ಐಎಂಪಿಎಸ್ (ಇಮಿಡಿಯೆಟ್ ಪೇಮೆಂಟ್ ಸರ್ವೀಸ್) ವಹಿವಾಟು ಮಿತಿಯನ್ನು ಹೆಚ್ಚಳ ಮಾಡಿದೆ. ಇದರ ಅಡಿಯಲ್ಲಿ ಎಸ್ಬಿಐ ಖಾತೆದಾರರು 5 ಲಕ್ಷ ರೂಪಾಯಿ ತನಕ ವಹಿವಾಟು ಮಾಡಬಹುದು. ಈ ಹಿಂದೆ ಅದು 2 ಲಕ್ಷ ರೂಪಾಯಿ ಇತ್ತು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಒಂದು ವೇಳೆ ಐಎಂಪಿಎಸ್ ವಹಿವಾಟನ್ನು ಡಿಜಿಟಲ್ ಆಗಿ ಮಾಡಿದಲ್ಲಿ ರೂ. 5 ಲಕ್ಷದ ತನಕ ಮೊತ್ತಕ್ಕೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಅಂತಲೂ ಈಚಿನ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಯೋನೋ ಮೂಲಕ ವಹಿವಾಟು ನಡೆಸಿದರೆ ಯಾವುದೇ ಶುಲ್ಕ ಆಗುವುದಿಲ್ಲ. ಅದೇ ರೀತಿ ಬ್ಯಾಂಕ್ ಶಾಖೆ ಮೂಲಕವಾಗಿ 1000 ರೂಪಾಯಿ ಮೇಲ್ಪಟ್ಟು 5 ಲಕ್ಷದ ತನಕ ವ್ಯವಹಾರವನ್ನು ಆಫ್ಲೈನ್ ವಿಧಾನದಲ್ಲಿ ಮಾಡಿದರೆ ಅದಕ್ಕೆ ಸರ್ವೀಸ್ ಶುಲ್ಕ ಮತ್ತು ಜಿಎಸ್ಟಿ ಅನ್ವಯ ಆಗುತ್ತದೆ ಎಂದು ಬ್ಯಾಂಕ್ ತಿಳಿಸಿದೆ.
ಎಲ್ಪಿಜಿ ದರ ಪರಿಷ್ಕರಣೆ:
ಸರ್ಕಾರಿ ಸ್ವಾಮ್ಯದ ತೈಲ ಮಾರ್ಕೆಟಿಂಗ್ ಕಂಪೆನಿಗಳು 19 ಕೇಜಿ ತೂಕದ ವಾಣಿಜ್ಯ ಸಿಲಿಂಡರ್ಗಳ ಶುಲ್ಕವನ್ನು 91.50 ರೂಪಾಯಿ ಕಡಿತ ಮಾಡಿ, ಫೆಬ್ರವರಿ 1ನೇ ತಾರೀಕಿನಂದು ಅಧಿಸೂಚನೆ ಹೊರಡಿಸಿವೆ. ಈ ದರ ಫೆಬ್ರವರಿ 1ರಿಂದಲೇ ಜಾರಿಗೂ ಬಂದಿದೆ ಎಂದು ಸುದ್ಧಿ ಸಂಸ್ಥೆಯೊಂದು ವರದಿ ಮಾಡಿದೆ. ಇದೀಗ ದೆಹಲಿಯಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ರೂ. 1907 ಇದೆ. ಅಂದ ಹಾಗೆ ಡಿಸೆಂಬರ್ 1ನೇ ತಾರೀಕಿನಂದು 19 ಕೇಜಿ ಎಲ್ಪಿಜಿ ಸಿಲಿಂಡರ್ ಬೆಲೆ 100 ರೂಪಾಯಿ ಹೆಚ್ಚಿಸಲಾಗಿತ್ತು. ಕೋಲ್ಕತ್ತಾದಲ್ಲಿ 89 ರೂ. ಕಡಿತವಾಗಿ 1987 ರೂಪಾಯಿ ಮುಟ್ಟಿದೆ. ಇನ್ನು ಮುಂಬೈನಲ್ಲಿ 91.50 ರೂಪಾಯಿ ಇಳಿದು 1857 ರೂಪಾಯಿ ಆಗಿದೆ. ಚೆನ್ನೈನಲ್ಲಿ 50.50 ರೂಪಾಯಿ ದರ ಕೆಳಗೆ ಇಳಿದು ವಾಣಿಜ್ಯ ಸಿಲಿಂಡರ್ ದರ 2080.50 ರೂಪಾಯಿ ಇದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಕನಿಷ್ಠ ಬ್ಯಾಲೆನ್ಸ್:
ಬ್ಯಾಂಕ್ ಖಾತೆಯಲ್ಲಿ ಅಗತ್ಯ ಪ್ರಮಾಣದ ಬ್ಯಾಲೆನ್ಸ್ ಇಲ್ಲದೆ ಯಾವುದಾದರೂ ಕಂತು ಪಾವತಿ ತಪ್ಪಿಸಿದಲ್ಲಿ ದಂಡವಾಗಿ 250 ರೂಪಾಯಿ ವಿಧಿಸುವುದಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೇಳಿದೆ. ಈ ಹಿಂದೆ ದಂಡದ ಮೊತ್ತ ಪಿಎನ್ಬಿಯಲ್ಲಿ ರೂ. 100 ಇತ್ತು.
ಬ್ಯಾಂಕ್ ಆಫ್ ಬರೋಡ ಪಾಸಿಟಿವ್ ಪೇ:
ಫೆಬ್ರವರಿ 1, 2022ರಿಂದ ಅನ್ವಯ ಆಗುವಂತೆ ಬ್ಯಾಂಕ್ ಆಫ್ ಬರೋಡದಿಂದ ಚೆಕ್ ಪಾವತಿ ವಿಧಾನದಲ್ಲಿ ಬದಲಾವಣೆ ಆಗಿದೆ. “ಬೆನಿಫಿಷಿಯರಿಗಳಿಗೆ ವಿತರಿಸಿದ ಚೆಕ್ಗಳ ಮಾಹಿತಿಯನ್ನು ಮುಂಚಿತವಾಗಿಯೇ ನೀಡುವಂತೆ ಬ್ಯಾಂಕ್ ಆಫ್ ಬರೋಡ ಗ್ರಾಹಕರಿಗೆ ಮನವಿ ಮಾಡುತ್ತೇವೆ. ಹೀಗೆ ಮಾಡುವುದರಿಂದ ಹೆಚ್ಚಿನ ಮೊತ್ತದ ಹಣ ಪಾವತಿ ಮಾಡುವಾಗ ಸಿಟಿಎಸ್ ಕ್ಲಿಯರಿಂಗ್ ವೇಳೆ ನಿಮ್ಮ ಮೂಲ ಬ್ಯಾಂಕ್ ಶಾಖೆಗೆ ಕರೆ ಮಾಡಿ ಖಾತ್ರಿ ಮಾಡಿಕೊಳ್ಳಬೇಕಾದ ಅಗತ್ಯ ಬೀಳುವುದಿಲ್ಲ,” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Tokenisation: ಟೋಕನೈಸೇಷನ್ ಗಡುವನ್ನು ಜೂನ್ 30, 2022ಕ್ಕೆ ಮುಂದೂಡಿದ ಆರ್ಬಿಐ
Published On - 2:33 pm, Wed, 2 February 22