ನವದೆಹಲಿ, ಡಿಸೆಂಬರ್ 9: ಭಾರತದ ಬಗ್ಗೆ ಈ ವಿಶ್ವದ ನಿರೀಕ್ಷೆ ದೊಡ್ಡದಿದೆ. ಭಾರತದ ಸಾರ್ವಜನಿಕ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಹಾಗೂ ಅದರ ಸಮಗ್ರ ಬೆಳವಣಿಗೆ (inclusive growth) ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಆಗುತ್ತಿದೆ ಎಂದು ಖ್ಯಾತ ಆರ್ಥಿಕ ತಜ್ಞ ಹಾಗೂ ಐಎಂಎಫ್ನಲ್ಲಿ ಪ್ರಸಕ್ತ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ ಕೆ.ವಿ. ಸುಬ್ರಮಣಿಯನ್ ಹೇಳಿದ್ದಾರೆ.
‘ಭಾರತದ ಆರ್ಥಿಕತೆ ಒಟ್ಟಾರೆಯಾಗಿ ಬಹಳ ಚೆನ್ನಾಗಿ ಬೆಳೆಯುತ್ತಿದೆ. ಕೋವಿಡ್ ಬಳಿಕ ಆರ್ಥಿಕ ಬೆಳವಣಿಗೆ ಕನಿಷ್ಠ ಶೇ. 7ರ ದರ ದಾಖಲಿಸುತ್ತಿದೆ. ಈ ಕ್ವಾರ್ಟರ್ನಲ್ಲಿ ಸ್ವಲ್ಪ ಇಳಿಮುಖ ಆಗಿರುವುದು ಹೌದು. ಬಂಡವಾಳ ವೆಚ್ಚ (capital expenditure) ಕಡಿಮೆ ಆಗಿರುವುದು ಇದಕ್ಕೆ ಕಾರಣವಿರಬಹುದು. ಚುನಾವಣೆಗಳಿದ್ದರಿಂದ ಬಂಡವಾಳ ವೆಚ್ಚ ನಿರೀಕ್ಷಿತ ಪ್ರಮಾಣದಲ್ಲಿ ಬರಲಿಲ್ಲ ಎಂಬುದೂ ಹೌದು. ರಫ್ತುಗಳ ಮೇಲೆ ಪರಿಣಾಮ ಬಿದ್ದಿದೆ. ಈ ಹಿನ್ನಡೆ ತಾತ್ಕಾಲಿಕ ಅನ್ನೋದು ನನ್ನ ಭಾವನೆ’ ಎಂದು ಕೆ.ವಿ. ಸುಬ್ರಮಣಿಯನ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಅಗ್ಗದ ವಸತಿ, ಐಷಾರಾಮಿ ಅಪಾರ್ಟ್ಮೆಂಟ್, ಎರಡೂ ಭರ್ಜರಿ ಮಾರಾಟ; ಬೆಂಗಳೂರಿನಲ್ಲೂ ದಾಖಲೆ ಸೇಲ್ಸ್
‘ಐಎಂಎಫ್ ಬೋರ್ಡ್ನಲ್ಲಿದ್ದು ಎಲ್ಲವನ್ನೂ ಸ್ಪಷ್ಟವಾಗಿ ಕಾಣುವ ನನಗೆ ಭಾರತದ ಬಗ್ಗೆ ಈ ವಿಶ್ವದ ನಿರೀಕ್ಷೆ ಬಹಳ ಇದೆ ಎಂದು ಯಾವ ಅನುಮಾನ ಇಲ್ಲದೇ ಹೇಳಬಲ್ಲೆ. ಭಾರತದ ಪಬ್ಲಿಕ್ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಬಗ್ಗೆ ಐಎಂಎಫ್ ಬೋರ್ಡ್ನಲ್ಲಿರುವ ನನ್ನ ಪ್ರತಿಯೊಬ್ಬ ಸಹೋದ್ಯೋಗಿಯೂ ಪ್ರಸ್ತಾಪಿಸದೇ ಇರಲ್ಲ. ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಹಾಗೆಯೇ, ಕಳೆದ ದಶಕದಲ್ಲಿ ಭಾರತ ಕಂಡಿರುವ ಸಮಗ್ರ ಬೆಳವಣಿಗೆಯೂ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ,’ ಎಂದು ಭಾರತದ ಮುಖ್ಯ ಆರ್ಥಿಕ ಸಲಹೆಗಾರರಾಗಿಯೂ ಹಿಂದೆ ಕೆಲಸ ಮಾಡಿದ್ದ ಕೃಷ್ಣಮೂರ್ತಿ ವಿ ಸುಬ್ರಮಣಿಯನ್ ತಿಳಿಸಿದ್ದಾರೆ.
ಕೋವಿಡ್ ವೇಳೆ ಭಾರತದ ಆರ್ಥಿಕ ನೀತಿ ಹೇಗೆ ವಿಭಿನ್ನವಾಗಿತ್ತು ಎಂಬುದನ್ನೂ ಸುಬ್ರಮಣಿಯನ್ ವಿಶ್ಲೇಷಿಸಿದ್ದಾರೆ. ‘ಕೋವಿಡ ವೇಳೆ ಭಾರತದ ಆರ್ಥಿಕ ನೀತಿ ಬೇರೆ ದೇಶಗಳಿಗಿಂತ ಭಿನ್ನವಾಗಿತ್ತು. ಕೋವಿಡ್ ಸಂದರ್ಭವನ್ನು ಬೇಡಿಕೆ ಆಘಾತ ಎಂದೇ ಬಹುತೇಕ ದೇಶಗಳು ಪರಿಗಣಿಸಿದ್ದವು. ಕೋವಿಡ್ ಅನ್ನು ಬೇಡಿಕೆ ಆಘಾತ (demand-side shocks) ಮತ್ತು ಪೂರೈಕೆ ಆಘಾತ (supply-side shocks) ಎಂದು ಎರಡನ್ನೂ ಪರಿಗಣಿಸಿದ್ದು ಭಾರತ ಮಾತ್ರವೇ. ಹೀಗಾಗಿ, ಕೋವಿಡ್ ಸಂದರ್ಭದಲ್ಲಿ ಭಾರತ ಸರ್ಕಾರವು ಬೇಡಿಕೆ ಮತ್ತು ಪೂರೈಕೆಯನ್ನು ಸರಿದೂಗಿಸುವ ನೀತಿಗಳನ್ನು ಅಳವಡಿಸಿತು’ ಎಂದಿದ್ದಾರೆ.
ಇದನ್ನೂ ಓದಿ; ಕೇಂದ್ರದಿಂದ ‘ಅನ್ನ ಚಕ್ರ’ ಆರಂಭ; ಆಹಾರ ಸಂಸ್ಕರಣಾ ವಲಯಕ್ಕೆ 368 ಮಿಲಿಯನ್ ಡಾಲರ್ ಎಫ್ಡಿಐ
ಭಾರತದ ಈ ದ್ವಿಮುಖ ನೀತಿಯೇ ಆರ್ಥಿಕತೆಗೆ ಕವಚದಂತೆ ಕೆಲಸ ಮಾಡಿತು ಎನ್ನುವ ಕುತೂಹಲಕಾರಿ ಸಂಗತಿಯನ್ನು ಸುಬ್ರಮಣಿಯನ್ ಎತ್ತಿ ತೋರಿಸಿದ್ದಾರೆ.
‘ಯೂರೋಪ್ನಲ್ಲಿ ಯುದ್ಧ ಆರಂಭವಾದಾಗ ಪೂರೈಕೆ ಕ್ಷೇತ್ರದಲ್ಲಿ ಸಮಸ್ಯೆಗಳು ಕಾಣಿಸಿಕೊಂಡವು. ಇದರಿಂದ ವಿಶ್ವದ ಇತರೆಡೆ ಸಾಕಷ್ಟು ಹಣದುಬ್ಬರ ಹೆಚ್ಚಳಕ್ಕೆ ಎಡೆ ಮಾಡಿಕೊಟ್ಟಿದೆ. ಆದರೆ, ಇದು ಭಾರತದಲ್ಲಿ ಅಂಥ ದೊಡ್ಡ ಪರಿಣಾಮ ಬೀರಲಿಲ್ಲ. ಇದಕ್ಕೆ ಭಾರತದ ಈ ಆರ್ಥಿಕ ನೀತಿಯೇ ಕಾರಣ’ ಎಂದು ಪಿಟಿಐ ಸಂದರ್ಶನದಲ್ಲಿ ಕೆ.ವಿ. ಸುಬ್ರಮಣಿಯನ್ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:07 pm, Mon, 9 December 24