
ನವದೆಹಲಿ, ಡಿಸೆಂಬರ್ 9: ಕೇಂದ್ರದ ಕೌಶಲ್ಯಾಭಿವೃದ್ಧಿ ಮತ್ತು ಉದ್ದಿಮೆದಾರಿಕೆ ಸಚಿವಾಲಯದಿಂದ ನಡೆಸಲಾಗುವ ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್ (SIDH) ಉಪಕ್ರಮ ಸಾಕಷ್ಟು ಪರಿಣಾಮಕಾರಿ ಎನಿಸುತ್ತಿದೆ. ಈ ಉಪಕ್ರಮದ ಅಡಿ ವಿವಿಧ ಕೌಶಲ್ಯಗಳ ಕಲಿಕೆಗೆ ವಿವಿಧ ಕೋರ್ಸ್ಗಳನ್ನು ಆಫರ್ ಮಾಡಲಾಗುತ್ತಿದೆ. ಸಾಕಷ್ಟು ಹಿರಿಯ ನಾಗರಿಕರು ಈ ಕೋರ್ಸ್ ಕಲಿಯುತ್ತಿರುವುದು ಗಮನ ಸೆಳೆಯುವಂತೆ ಮಾಡಿದೆ. ಮೆಷೀನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಡಾಟಾ ಸಂಸ್ಕರಣೆ ಮೊದಲಾದ ವಿಷಯಗಳಲ್ಲಿನ ಕೋರ್ಸ್ಗಳನ್ನು 4,799 ಹಿರಿಯ ನಾಗರಿಕರು ಕಲಿಯುಲು ಆರಂಭಿಸಿದ್ದಾರೆ ಎನ್ನಲಾಗಿದೆ. ಈ ಮಾಹಿತಿಯನ್ನು ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮದ ಸಿಇಒ ವೇದ್ ಮಣಿ ತಿವಾರಿ ಅವರು ನೀಡಿದ್ದಾರೆ.
‘50 ವರ್ಷಕ್ಕೂ ಹೆಚ್ಚು ವಯಸ್ಸಿನ ಹಿರಿಯ ನಾಗರಿಕರಿಗೆ ಇಂಡಸ್ಟ್ರಿ 4.0 ಕೋರ್ಸ್ಗಳನ್ನು ಎಸ್ಐಡಿಎಫ್ನಿಂದ ನಡೆಸಲಾಗುತ್ತಿದೆ. ವೆಬ್ ಡಿಸೈನ್, ಸೈಬರ್ ಸೆಕ್ಯೂರಿಟಿ, ಕಿಸಾನ್ ಡ್ರೋನ್ ನಿರ್ವಹಣೆಯ ಕೋರ್ಸ್ಗಳು ಈ ವಯಸ್ಕರಲ್ಲಿ ಜನಪ್ರಿಯವಾಗುತ್ತಿವೆ’ ಎಂದು ಎನ್ಎಸ್ಡಿಸಿ ಇಂಟರ್ನ್ಯಾಷನಲ್ನ ಎಂಡಿಯೂ ಆಗಿರುವ ಅವರು ಹೇಳಿದ್ದಾರೆ.
‘ಭವಿಷ್ಯಕ್ಕೆ ಸಿದ್ಧವಾಗಿರುವ ಭಾರತವನ್ನು ನಿರ್ಮಿಸಲು ಎಲ್ಲರೂ ಕೂಡ ಜೀವನಪರ್ಯಂತ ಕಲಿಕೆಯಲ್ಲಿ ಇರುವುದು ಅವಶ್ಯಕ’ ಎಂದು ಹೇಳಿದ ವೇದ್ ಮಣಿ ತಿವಾರಿ ಅವರು ಮೂವರು ಸಾಮಾನ್ಯ ಹಿರಿಯ ನಾಗರಿಕರ ನಿದರ್ಶನಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಭಾರತದಿಂದ ಹಾರ್ಡ್ವೇರ್ ರಫ್ತು ಗಣನೀಯ ಹೆಚ್ಚಳ: ಎಫ್ಐಇಒ ನಿರೀಕ್ಷೆ
ಅಸ್ಸಾಮ್ನ ಜೋರ್ಹತ್ನಲ್ಲಿ ಕೃಷಿಕನಾಗಿರುವ ಮತ್ತು ಟ್ರಾವಲ್ ಏಜೆನ್ಸಿ ಇಟ್ಟುಕೊಂಡಿರುವ ಪಾರ್ಥ ಬರುವಾ ಎನ್ನುವ 51 ವರ್ಷದ ವ್ಯಕ್ತಿಯು ಕಿಸಾನ್ ಡ್ರೋನ್ ಕೋರ್ಸ್ ಕಲಿತಿದ್ದಾರೆ. ಇದರಿಂದ ಕೃಷಿ ಕಾರ್ಯದಲ್ಲಿ ಪ್ರಗತಿ ಹೊಂದಲು ಸಾಧ್ಯವಾಗಿದೆ. ಹಾಗೆಯೇ, ಅಸ್ಸಾಮ್ನ ಸೌಂದರ್ಯವನ್ನು ಡ್ರೋನ್ನಲ್ಲಿ ಸೆರೆ ಹಿಡಿದು ಆ ವಿಡಿಯೋ ತುಣುಗಳನ್ನು ಬಳಸಿ ತಮ್ಮ ಟ್ರಾವೆಲ್ ಏಜೆನ್ಸಿಗೂ ಪುಷ್ಟಿ ನೀಡಲು ಅವರಿಗೆ ಸಾಧ್ಯವಾಗಿದೆ.
ರಾಜಸ್ಥಾನದ ಝುನಝುನುವಿನಲ್ಲಿ ಐಟಿಐನಲ್ಲಿ ಇನ್ಸ್ಟ್ರಕ್ಟರ್ ಹಾಗೂ ಫೀಲ್ಡ್ ಟೆಕ್ನೀಶಿಯನ್ ಆಗಿರುವ 55 ವರ್ಷದ ಪ್ರಫುಲ್ಲಾ ರಾವತ್ ಅವರು ಉದ್ದಿಮೆದಾರಿಕೆ ಕೌಶಲ್ಯದ ಕೋರ್ಸ್ ಕಲಿತಿದ್ದಾರೆ. ಇದರಿಂದ ಐಟಿಐ ವಿದ್ಯಾರ್ಥಿಗಳಿಗೆ ಪಾಠ ಮಾಡುವ ವಿಚಾರದಲ್ಲಿ ಅವರಿಗೆ ಸಹಾಯಕವಾಗಿದೆ.
ನವದೆಹಲಿಯ ಅಶೋಕ್ ವಿಹಾರ್ನಲ್ಲಿ ಹಿರಿಯ ಶಿಕ್ಷಕರಾಗಿರುವ 54 ವರ್ಷದ ಸಂಜೀವ್ ನಿಗಮ್ ಅವರು ಗೂಗಲ್ ಕ್ಲೌಡ್ ಜನರೇಟಿವ್ ಎಐ ಕೋರ್ಸ್ ಕಲಿತಿದ್ದಾರೆ. ಇದರಿಂದ ಅವರ ಪಾಠಗಳಿಗೆ ಸಹಾಯವಾಗುತ್ತಿದೆ.
2023ರ ಸೆಪ್ಟೆಂಬರ್ 13ರಂದು ಆರಂಭವಾದ ಎಸ್ಐಡಿಎಚ್ನಿಂದ ಹಿರಿಯ ನಾಗರಿಕರಿಗೆ ಬಹಳ ಅನುಕೂಲವಾಗಿದೆ. ನಿರಂತರ ಕಲಿಕೆ ಇವತ್ತಿನ ದಿನದ ಅನಿವಾರ್ಯ ಮತ್ತು ಅವಶ್ಯಕತೆಯೂ ಹೌದು.
ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್ ಉಪಕ್ರಮದಲ್ಲಿ ಸಾವಿರಾರು ವಿವಿಧ ಕೋರ್ಸ್ಗಳಿವೆ. ಇಲ್ಲಿಯವರೆಗೆ ಒಂದು ಕೋಟಿಗೂ ಅಧಿಕ ಜನರು ಇದಕ್ಕೆ ನೊಂದಾಯಿಸಿಕೊಂಡಿದ್ದಾರೆ. ಏರೋಸ್ಪೇಸ್, ಕೃಷಿ, ಜವಳಿ, ವಾಹನ, ಬ್ಯಾಂಕಿಂಗ್, ಬ್ಯೂಟಿ, ಕಟ್ಟಡ ನಿರ್ಮಾಣ, ಎಲೆಕ್ಟ್ರಾನಿಕ್ಸ್, ಪ್ಲಂಬಿಂಗ್, ಮೀಡಿಯಾ, ಸೆಕ್ಯೂರಿಟಿ, ಮ್ಯಾನುಫ್ಯಾಕ್ಚರಿಂಗ್ ಹೀಗೆ ವಿವಿಧ ಕ್ಷೇತ್ರಗಳಲ್ಲಿ ವಿವಿಧ ಕೌಶಲ್ಯಗಳನ್ನು ಕಲಿಸಿಕೊಡುವ ಕೋರ್ಸ್ಗಳಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ