ನವದೆಹಲಿ: ಹೂಡಿಕೆದಾರರು ಗಳಿಸಿದ ಬಡ್ಡಿ, ಡಿವಿಡೆಂಡ್ ಮತ್ತು ಕ್ಯಾಪಿಟಲ್ ಗೇಯ್ನ್ಸ್ ಬಗ್ಗೆ ವರದಿ ನೀಡುವಂತೆ ತೆರಿಗೆ ಇಲಾಖೆಯು ಕಳೆದ ಮಾರ್ಚ್ನಲ್ಲಿ ಬ್ಯಾಂಕ್ಗಳು, ಕಂಪೆನಿಗಳು ಮತ್ತು ಬ್ರೋಕರ್ಗಳು ಸೇರಿದಂತೆ ಕೆಲವು ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿದೆ. ಆದಾಯ ತೆರಿಗೆ ಕಾಯ್ದೆ 1961, ಸೆಕ್ಷನ್ 285BA ಮತ್ತು ನಿಯಮ 114E ಅಡಿಯಲ್ಲಿ ಹಣಕಾಸು ವಹಿವಾಟಿನ ಬಗ್ಗೆ ನಿರ್ದಿಷ್ಟ ವ್ಯಕ್ತಿಗಳು ವರದಿ ನೀಡಬೇಕು. ನೋಟಿಸ್ನಲ್ಲಿ ಆದಾಯ ತೆರಿಗೆ ಇಲಾಖೆ ಹೇಳಿರುವ ಪ್ರಕಾರ, ತೆರಿಗೆದಾರರಿಗೆ ಮುಂಚಿತವಾಗಿಯೇ ಮಾಹಿತಿ ಭರ್ತಿ ಮಾಡಿದ ತೆರಿಗೆ ಅರ್ಜಿಗಳನ್ನು ನೀಡಲು ಇದರಿಂದ ಅನುಕೂಲ ಆಗುತ್ತದೆ. ಇದರ ಜತೆಗೆ ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ನಲ್ಲಿ ಬಡ್ಡಿಯ ಮೂಲಕ ಬಂದ ಆದಾಯವನ್ನು ವರದಿ ಮಾಡಲು ಉತ್ತೇಜಿಸಿದಂತಾಗುತ್ತದೆ. ಏಕೆಂದರೆ, ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಈ ಆದಾಯವನ್ನು ವರದಿ ಮಾಡುವುದಕ್ಕೆ ಸಾಮಾನ್ಯವಾಗಿ ಅವರು ಮರೆಯುತ್ತಾರೆ ಎಂದು ಹೇಳಲಾಗಿದೆ.
ವರದಿಯ ಫಾರ್ಮಾಟ್ನಲ್ಲಿ ತಿಳಿಸುವಂತೆ ಬ್ಯಾಂಕ್ಗಳೂ ಸೇರಿ ಇತರ ಸಂಸ್ಥೆಗಳಿಗೆ ತೆರಿಗೆ ಇಲಾಖೆಯಿಂದ ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗಿದೆ. ಹೊಸ ಸುತ್ತೋಲೆ ಪ್ರಕಾರ, ಒಂದು ಹಣಕಾಸು ವರ್ಷದಲ್ಲಿ ಯಾವುದೇ ಠೇವಣಿ ಮೇಲಿನ ಬಡ್ಡಿ 5000 ರೂಪಾಯಿ ದಾಟಿದಲ್ಲಿ ಆ ಬಗ್ಗೆ ಬ್ಯಾಂಕ್ಗಳು ಅಥವಾ ಸಂಸ್ಥೆಗಳು ಮಾಹಿತಿ ನೀಡಬೇಕು. ಇನ್ನು ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ತೆರಿಗೆ ವಿನಾಯಿತಿ ಇರುವ ಪಿಪಿಎಫ್, ಎಫ್ಸಿಎನ್ಆರ್ ಖಾತೆ, ಸುಕನ್ಯಾ ಸಮೃದ್ಧಿ, ರೆಸಿಡೆಂಟ್ ಫಾರಿನ್ ಕರೆನ್ಸಿ ಅಕೌಂಟ್ ಇವುಗಳ ಮೇಲಿನ ಬಡ್ಡಿಯ ಬಗ್ಗೆ ವರದಿ ಮಾಡುವ ಅಗತ್ಯ ಇಲ್ಲ.
ಆದಾಯ ತೆರಿಗೆ ಇಲಾಖೆಯಿಂದ ಈಚೆಗೆ ಹೊರಡಿಸಲಾದ ಕೆಲ ಮುಖ್ಯ ಮಾರ್ಗದರ್ಶಿ ಸೂತ್ರಗಳು ಹೀಗಿವೆ:
1) ಉಳಿತಾಯ ಖಾತೆ (ಸೇವಿಂಗ್ಸ್ ಅಕೌಂಟ್), ಎಫ್ಡಿ, ಆರ್ಡಿ ಹೀಗೆ ಎಲ್ಲ ಠೇವಣಿಗಳ ಮೇಲಿನ ಬಡ್ಡಿ ದರದ ಆದಾಯವನ್ನು ಬ್ಯಾಂಕ್ಗಳು ವರದಿ ಮಾಡಬೇಕು.
2) ಒಟ್ಟು ಮೊತ್ತವನ್ನು ವರದಿ ಮಾಡಬೇಕಾಗುತ್ತದೆ. ಸೆಕ್ಷನ್ 80TTA ಅಡಿಯಲ್ಲಿ ಅವರು 10 ಸಾವಿರ ಕಡಿತ ನೀಡಲು ಸಾಧ್ಯವಿಲ್ಲ. ಆದರೆ ಆದಾಯ ತೆರಿಗೆದಾರರು ಐಟಿಆರ್ನಲ್ಲಿ ಬಡ್ಡಿ ಆದಾಯ ಎಂದು ತೋರಿಸುವ ಮೂಲಕ ವಿನಾಯಿತಿಗೆ ಕ್ಲೇಮ್ ಮಾಡಬಹುದು.
3) ಒಂದು ವೇಳೆ ಜಂಟಿ ಖಾತೆ ಇದ್ದಲ್ಲಿ ಬಡ್ಡಿ ಆದಾಯವು ಮೊದಲ ಅಥವಾ ಪ್ರಾಥಮಿಕ ಖಾತೆದಾರರಿಗೆ ಆ ಮೊತ್ತದ ಜವಾಬ್ದಾರಿ ಬೀಳುತ್ತದೆ.
4) ಒಂದು ವೇಳೆ ಅಪ್ರಾಪ್ತರ ಹೆಸರಲ್ಲಿ ಖಾತೆ ಇದ್ದರೆ ಮಾಹಿತಿಯು ಕಾನೂನು ಬದ್ಧವಾದ ಪೋಷಕರ ಹೆಸರು ಹಾಗೂ ಪರ್ಮನೆಂಟ್ ಅಕೌಂಟ್ ನಂಬರ್ಗೆ ಬರುತ್ತದೆ.
ಇದನ್ನೂ ಓದಿ: Income tax deductions: ಆರೋಗ್ಯ ವಿಮೆ ಮೂಲಕ ಎಷ್ಟು ಆದಾಯ ತೆರಿಗೆಯನ್ನು ಉಳಿತಾಯ ಮಾಡಬಹುದು?
(Income Tax department circular to entities to report about interest income on deposits)