ಒಬ್ಬ ವ್ಯಕ್ತಿಯ ಆದಾಯವು ತೆರಿಗೆಯಿಂದ ಮುಕ್ತವಾಗಿದ್ದರೂ ಅದಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡುವುದು ಉತ್ತಮ. ಬಹಳ ಜನರ ನಂಬಿಕೆ ಅಥವಾ ತಮಗೆ ತಾವೇ ಏನಂದು ಕೊಳ್ತಾರೆ ಅಂದರೆ, ಆದಾಯವು ತೆರಿಗೆ ಮಿತಿಯೊಳಗೆ ಬರುವುದಿಲ್ಲ. ಹಾಗಿದ್ದ ಮೇಲೆ ಐ.ಟಿ. ರಿಟರ್ನ್ಸ್ ಯಾಕೆ ಫೈಲ್ ಮಾಡಬೇಕು? ಆದರೆ ಇದು ತಪ್ಪು ಆಲೋಚನೆ. ಸರ್ಕಾರಕ್ಕೆ ನೀವು ಯಾವುದೇ ಆದಾಯ ತೆರಿಗೆ ಪಾವತಿಸುವ ಅಗತ್ಯ ಇಲ್ಲದಿದ್ದರೂ ಐಟಿಆರ್ ಫೈಲಿಂಗ್ ಮಾತ್ರ ಕಡ್ಡಾಯವಾಗಿ ಮಾಡಿ. ಒಬ್ಬ ವ್ಯಕ್ತಿಗೆ ತೆರಿಗೆ ವಿನಾಯಿತಿ ಮಿತಿಯನ್ನು ಮೀರಿದ ಒಟ್ಟಾರೆ ಆದಾಯ (ಗ್ರಾಸ್ ಟೋಟಲ್ ಇನ್ಕಮ್) ಹೊಂದಿದ್ದರೆ ಅಂಥವರು ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಬೇಕು. ಒಂದು ವೇಳೆ ವ್ಯಕ್ತಿಯ ಒಟ್ಟಾರೆ ಆದಾಯವು ವಿನಾಯಿತಿಯ ಮೊತ್ತವನ್ನು ಮೀರುವುದಿಲ್ಲ ಅಂತಾದಾಗ ಅಂಥವರು ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವುದು ಬೇಕಿಲ್ಲ.
ವ್ಯಕ್ತಿಯ ಆದಾಯವು ತೆರಿಗೆ ವಿನಾಯಿತಿಯ ಒಳಗೇ ಇದ್ದರೂ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದರಿಂದ ಅನೇಕ ಅನುಕೂಲಗಳಿವೆ. ಆ ಪೈಕಿ 6 ಅನುಕೂಲಗಳನ್ನು ಈ ಲೇಖನದಲ್ಲಿ ತಿಳಿಸಲಾಗುತ್ತಿದೆ.
1. ವಿಳಾಸ ಪುರಾವೆಯಾಗಿ ಬಳಸಿ:
ಆದಾಯ ತೆರಿಗೆ ಅಸೆಸ್ಮೆಂಟ್ ಆದೇಶವನ್ನು ವಿಳಾಸ ಪುರಾವೆಯಾಗಿ ಬಳಸಬಹುದು. ಇದನ್ನು ಆಧಾರ್ ಕಾರ್ಡ್‌ಗೂ ಬಳಸಬಹುದು. ಎಲ್ಲ ಮಾನ್ಯತೆ ಪಡೆದ ದಾಖಲೆಗಳನ್ನು ಪರಿಶೀಲಿಸಿಕೊಳ್ಳಿ.
2. ಬ್ಯಾಂಕ್ಗಳಿಂದ ಸಾಲ ಪಡೆಯಿರಿ:
ಬ್ಯಾಂಕ್ಗಳು ತನ್ನ ಗ್ರಾಹಕರಿಗೆ ಸಾಲ ನೀಡುವ ಪ್ರೊಸೆಸಿಂಗ್ ಮಾಡುವಾಗ ಮೂರು ವರ್ಷಗಳ ಐಟಿಆರ್ ಕೇಳುತ್ತವೆ. ಮನೆ ಖರೀದಿಸಲು ಯೋಜಿಸುತ್ತಿದ್ದರೆ ಅಥವಾ ವೈಯಕ್ತಿಕ ಸಾಲಕ್ಕಾಗಿ ಎದುರು ನೋಡುತ್ತಿದ್ದಲ್ಲಿ ಐಟಿಆರ್ ತುಂಬಾ ಸಹಾಯಕವಾದ ದಾಖಲೆಯಾಗಿದೆ.
3. ವೀಸಾ ಮಂಜೂರಾತಿ ಪಡೆಯಿರಿ:
ಒಬ್ಬ ವ್ಯಕ್ತಿಗೆ ವೀಸಾ ನೀಡಲು, ಹೆಚ್ಚಿನ ದೇಶಗಳು ದಾಖಲೆಗಳಲ್ಲಿ ಐಟಿಆರ್ ಅನ್ನು ಕೇಳುತ್ತವೆ. ಒಬ್ಬ ವ್ಯಕ್ತಿಯು ದೇಶದ ತೆರಿಗೆ ಕಟ್ಟುವ ಪ್ರಜೆಯಾಗಿದ್ದರೆ ಅದು ಸಹಾಯ ಮಾಡುತ್ತದೆ. ಇದು ನಿಮ್ಮ ಪ್ರಸ್ತುತ ಆರ್ಥಿಕ ಸ್ಥಿತಿ ಮತ್ತು ಆದಾಯದ ಮಟ್ಟಗಳ ಬಗ್ಗೆ ವೀಸಾ ಪ್ರೊಸೆಸಿಂಗ್ ಅಧಿಕಾರಿಗಳಿಗೆ ಅಭಿಪ್ರಾಯವನ್ನು ನೀಡುತ್ತದೆ.
4. ಆದಾಯದ ಪುರಾವೆಯಾಗಿ ಬಳಸಿ:
ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ಫಾರ್ಮ್ 16 ಅನ್ನು ನೀಡುತ್ತಾರೆ. ಇದು ವ್ಯಕ್ತಿಯ ಆದಾಯದ ಪುರಾವೆ ಆಗಿರುತ್ತದೆ. ಐಟಿಆರ್ ಫೈಲಿಂಗ್ ದಾಖಲೆಯು ಸ್ವಯಂ ಉದ್ಯೋಗ ಮಾಡುವವರಿಗೂ ಅಧಿಕೃತ ಆದಾಯ ಪುರಾವೆಯಾಗಿ ಕಾರ್ಯ ನಿರ್ವಹಿಸುತ್ತದೆ. ಒಂದು ಹಣಕಾಸಿನ ವರ್ಷದಲ್ಲಿ ವ್ಯಕ್ತಿಯ ಆದಾಯ ಮತ್ತು ವೆಚ್ಚಗಳ ವಿವರವಾದ ಬ್ರೇಕ್ ಅಪ್ ಅದರಲ್ಲಿ ನೀಡಲಾಗಿರುತ್ತದೆ.
5. ತೆರಿಗೆ ಮರುಪಾವತಿ ಕ್ಲೇಮ್:
ಒಬ್ಬ ವ್ಯಕ್ತಿಯು ಐಟಿಆರ್ ಅನ್ನು ಸಲ್ಲಿಸಿದರೆ ಅವರು ಟರ್ಮ್ ಠೇವಣಿಗಳಂತಹ ಉಳಿತಾಯ ಸಾಧನಗಳಿಂದ ಆದಾಯದ ಮೇಲಿನ ತೆರಿಗೆಯನ್ನು ಉಳಿಸಬಹುದು ಮತ್ತು ಲಾಭಾಂಶದ ಆದಾಯದ ಮೇಲೆ ತೆರಿಗೆಯನ್ನು ಉಳಿಸಬಹುದು. ಈ ಇನ್ಸ್ಟ್ರುಮೆಂಟ್ಗಳ ಮೂಲಕ ಬರುವ ತೆರಿಗೆಗೆ ಹೊಣೆಗಾರಿಕೆಯನ್ನು ಸೂಕ್ತ ದಾಖಲೆಗಳನ್ನು ಸಲ್ಲಿಸಿ, ಐಟಿಆರ್ ಮರುಪಾವತಿಯ ಮೂಲಕ ತೆರಿಗೆ ಹೊರಹೋಗುವುದನ್ನು ಪಡೆಯಬಹುದು. ಒಬ್ಬ ವ್ಯಕ್ತಿಯು ತೆರಿಗೆ ಮರುಪಾವತಿಯನ್ನು ಪಡೆಯಬಹುದು ಮತ್ತು ವಿವಿಧ ಮೂಲಗಳಿಂದ ಒಟ್ಟು ಆದಾಯವು 2,50,000 ರೂಪಾಯಿಗಿಂತ ಹೆಚ್ಚಿದ್ದರೆ ಮೂಲದಲ್ಲಿ ಕಡಿತಗೊಳಿಸಿದ ಹಣವನ್ನು (ಟಿಡಿಎಸ್) ಮರಳಿ ಪಡೆಯಬಹುದು. ನಿವ್ವಳ ಆದಾಯವು ವರ್ಷದಲ್ಲಿ 2,50,000 ರೂ.ಗಿಂತ ಕಡಿಮೆ ಇರುವ ರೀತಿಯಲ್ಲಿ ಹೂಡಿಕೆ ಮಾಡಿದ್ದೀರಿ ಎಂದಾದರೆ ಹಿಂಪಡೆಯಬಹುದು.
6. ನಷ್ಟಗಳನ್ನು ಕ್ಲೇಮ್ ಮಾಡಬಹುದು:
ಒಬ್ಬ ವೈಯಕ್ತಿಕ ತೆರಿಗೆದಾರರು ನಿಗದಿತ ನಷ್ಟವನ್ನು ಕ್ಲೇಮ್ ಮಾಡಲು ನಿಗದಿತ ದಿನಾಂಕದೊಳಗೆ ತೆರಿಗೆ ರಿಟರ್ನ್ ಸಲ್ಲಿಸುವುದು ಕಡ್ಡಾಯವಾಗಿದೆ. ಈ ನಷ್ಟವು ಬಂಡವಾಳ ಲಾಭ, ವ್ಯವಹಾರ ಅಥವಾ ವೃತ್ತಿಯ ರೂಪದಲ್ಲಿ ಇರಬಹುದಾಗಿದೆ.
ಇದನ್ನೂ ಓದಿ: ITR Filing: ಇಂದಿನಿಂದ ಆದಾಯ ತೆರಿಗೆ ಹೊಸ ಇ ಪೋರ್ಟಲ್; ಆದಾಯ ತೆರಿಗೆ ಪಾವತಿದಾರರಿಗೆ ಗೊತ್ತಿರಬೇಕಾದ 6 ವೈಶಿಷ್ಟ್ಯಗಳು
(If an individual income exempt from tax, it is better to file ITR. Here are the 6 benefits of ITR filing)
Published On - 9:11 pm, Wed, 14 July 21