
ನವದೆಹಲಿ, ಏಪ್ರಿಲ್ 10: ಡಿಜಿಟಲ್ ಕ್ರಾಂತಿಯಲ್ಲಿ ಬೇರೆ ದೇಶಗಳ ಜೊತೆ ಭಾರತ ಪೈಪೋಟಿ ನಡೆಸುತ್ತಿಲ್ಲ. ಆದರೆ ಭಾರತವೇ ಮುಂಚೂಣಿಯಲ್ಲಿದೆ. ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ನಲ್ಲಿ ಭಾರತಕ್ಕೆ ಭಾರತವೇ ಸಾಟಿಯಾಗಿದೆ. ಹಾಗಂತ ಅಮೆರಿಕನ್ ಭಾರತೀಯ ಉದ್ಯಮಿ ವಿವೇಕ್ ವಾಧವಾ (Vivek Wadhwa) ಅವರು ಹೇಳಿದ್ದಾರೆ. ಅವರ ಪ್ರಕಾರ ಡಿಜಿಟಲ್ ಸೌಕರ್ಯದಲ್ಲಿ ಸಿಲಿಕಾನ್ ವ್ಯಾಲಿಗಿಂತಲೂ ಭಾರತ ಬಹಳ ಮುಂದಿದೆಯಂತೆ. ಖಾಸಗಿ ವಾಹಿನಿಯೊಂದರ ರೈಸಿಂಗ್ ಭಾರತ್ ಶೃಂಗಸಭೆಯಲ್ಲಿ ನಡೆದ ಚರ್ಚಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ವಿವೇಕ್ ವಾಧವಾ, ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ವಿಚಾರದಲ್ಲಿ ಅಮೆರಿಕ ಮತ್ತು ಭಾರತದ ಮಧ್ಯೆ ಇರುವ ಅಂತರವನ್ನು ಎತ್ತಿ ತೋರಿಸಿದ್ದಾರೆ.
ಕ್ಯಾಲಿಫೋರ್ನಿಯಾದಲ್ಲಿರುವ ಸಿಲಿಕಾನ್ ವ್ಯಾಲಿಯಲ್ಲಿ ವಿವೇಕ್ ವಾಧವಾ ವಾಸಿಸುತ್ತಿದ್ದಾರೆ. ಅಲ್ಲಿ ಅವರಿಗೆ ಸರಿಯಾದ ಇಂಟರ್ನೆಟ್ ಸಿಗೋದಿಲ್ಲವಂತೆ. ಮೊಬೈಲ್ ಸರ್ವಿಸ್ ಸಿಕ್ಕರೂ ಅದು ಬಹಳ ದುಬಾರಿ. ಅಲ್ಲಿರುವ ಡಿಜಿಟಲ್ ಸೌಕರ್ಯದ ಸಮಸ್ಯೆಗಳು ಭಾರತದಲ್ಲಿ ಅಪ್ಪಿತಪ್ಪಿಯೂ ಸುಳಿಯುವುದಿಲ್ಲ ಎಂದನ್ನುತ್ತಾರೆ ಅವರು.
ಇದನ್ನೂ ಓದಿ: 2024-25ರಲ್ಲಿ ಭಾರತದ ರಫ್ತು ದಾಖಲೆ; 820 ಬಿಲಿಯನ್ ಡಾಲರ್ ದಾಟಿದ ಸರಕು ಮತ್ತು ಸೇವಾ ರಫ್ತು
‘ಬೆಲ್ಮಾಂಟ್ನಲ್ಲಿರುವ ನನ್ನ ಮನೆಗೆ ಫೈಬರ್ ಆಪ್ಟಿಕ್ ಕೂಡ ಸಿಗೋದಿಲ್ಲ. ಆದರೆ, ಭಾರತದಲ್ಲಿ ಭಿಕ್ಷುಕರು ಕೂಡ ಕ್ಯುಆರ್ ಕೋಡ್ ಬಳಸಿ ಹಣ ಪಾವತಿಸುತ್ತಾರೆ. ಭಾರತ ಬಹಳ ವೇಗವಾಗಿ ಡಿಜಿಟಲ್ ಪೇಮೆಂಟ್, ಮೊಬೈಲ್ ಡಾಟಾ ಮತ್ತು ಕನೆಕ್ಟಿವಿಟಿ ಪಡೆದಿದೆ’ ಎಂದು ವಿಯೋನಿಕ್ಸ್ ಬಯೋಸೈಸ್ಸಸ್ ಎನ್ನುವ ಕಂಪನಿಯ ಸಿಇಒ ಕೂಡ ಆಗಿರುವ ವಾಧವಾ ತಿಳಿಸಿದ್ದಾರೆ.
ತಂತ್ರಜ್ಞಾನ ವಿಚಾರದಲ್ಲಿ ಭಾರತೀಯರು ಅನವಶ್ಯಕವಾಗಿ ಕೀಳರಿಮೆ ಹೊಂದಿದ್ದಾರೆ. ಇದನ್ನು ಮನಸ್ಸಿನಿಂದ ತೆಗೆದುಹಾಕಬೇಕು ಎಂದು ಬರಹಗಾರರೂ ಆದ ವಿವೇಕ್ ವಾಧವಾ ಕರೆ ನೀಡಿದ್ದಾರೆ.
‘ಜಿಯೋ ಸ್ಪೀಡ್ ಕಡಿಮೆ ಆಯಿತು ಅಂತ ಭಾರತೀಯರು ಅಲವತ್ತುಕೊಳ್ಳುತ್ತಾರೆ. ನನ್ನ ಪ್ರಕಾರ ಅಮೆರಿಕದಕ್ಕೆ ಹೋಲಿಸಿದರೆ ಇದು ಲೈಟ್ನಿಂಗ್ ಫಾಸ್ಟ್ ಆಗಿದೆ. ಭಾರತದ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಮುಂದುವರಿದ ದೇಶಗಳೇ ಕರುಬುವಂತಿದೆ’ ಎಂದು ಅವರು ವಾದಿಸಿದ್ದಾರೆ.
ಇದನ್ನೂ ಓದಿ: ವಿಶ್ವದ ಅತಿಮೌಲ್ಯಯುತ ಏರ್ಲೈನ್ಸ್ ಕಂಪನಿ ಎನಿಸಿದ ಭಾರತದ ಇಂಡಿಗೋ
ಡೀಪ್ ಟೆಕ್ ಕ್ಷೇತ್ರದಲ್ಲಿ ಭಾರತ ಹಿಂದುಳಿದಿದೆ ಎನ್ನುವ ಆತಂಕವನ್ನು ವಿವೇಕ್ ವಾಧವಾ ಅಲ್ಲಗಳೆದಿದ್ದಾರೆ. ‘ಮೆಷಿನ್ ಲರ್ನಿಂಗ್ ಟ್ಯಾಲೆಂಟ್ನಲ್ಲಿ ಅಮೆರಿಕನ್ನರಿಗಿಂತ ಭಾರತೀಯರು ಉತ್ತಮ. ಭಾರತೀಯರಿಗೆ ಅಹಂಕಾರ ಇರೋದಿಲ್ಲ. ಸಿಲಿಕಾನ್ ವ್ಯಾಲಿಯವರಿಗಿಂತ ಭಾರತೀಯ ಎಂಜಿನಿಯರುಗಳು ಹೆಚ್ಚಿನ ಕೆಚ್ಚು ಮತ್ತು ಆಕಾಂಕ್ಷೆ ಹೊಂದಿರುತ್ತಾರೆ. ಅಲ್ಲಿ ಸ್ಟಾನ್ಫೋರ್ಡ್ನಿಂದ ಬಂದ ವ್ಯಕ್ತಿ ಅಪೇಕ್ಷಿಸುವ ಸ್ಟಾರ್ಟಿಂಗ್ ಸ್ಯಾಲರಿ 2 ಲಕ್ಷ ಡಾಲರ್. ಆದರೆ, ಭಾರತೀಯ ಯುವ ಗ್ರಾಜುಯೇಟ್ಗಳು ವಾರಕ್ಕೆ 70 ಗಂಟೆ ಶ್ರಮಿಸಲು ಸಿದ್ಧರಿರುತ್ತಾರೆ’ ಎಂದು ವಿವೇಕ್ ವಾಧವಾ ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ