SIDBI report: ವೆಚ್ಚ ಹೆಚ್ಚಳದಲ್ಲೂ ಲಾಭ ಹೆಚ್ಚಳದ ನಿರೀಕ್ಷೆಯಲ್ಲಿ ಭಾರತದ ಎಂಎಸ್ಎಂಇಗಳು: ಸಿಡ್ಬಿ ವರದಿ
SIDBI MSME quarterly survey report: ಮೂರನೇ ಒಂದು ಭಾಗದಷ್ಟು ಎಂಎಸ್ಎಂಇಗಳು ತಮ್ಮ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಹೊರಟಿವೆ. ಶೇ. 37ರಷ್ಟು ಎಂಎಸ್ಎಂಇಗಳು ಮತ್ತಷ್ಟು ಹೂಡಿಕೆ ಮಾಡಲು ಹೊರಟಿವೆ ಎಂದು ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕ್ ಆದ ಸಿಡ್ಬಿಯ ಎಂಎಸ್ಎಂಇ ಔಟ್ಲುಕ್ ಸಮೀಕ್ಷೆಯ ಎರಡನೆ ವರದಿಯಲ್ಲಿ ಹೇಳಲಾಗಿದೆ.

ಮುಂಬೈ, ಏಪ್ರಿಲ್ 8: ಭಾರತದಲ್ಲಿರುವ ಶೇ. 37ರಷ್ಟು ಎಂಎಸ್ಎಂಇಗಳು ತಮ್ಮ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಯೋಜಿಸುತ್ತಿವೆ ಎಂದು ಸಿಡ್ಬಿ ಎಂಎಸ್ಎಂಇ ಔಟ್ಲುಕ್ ಸರ್ವೆಯೊಂದು (SIDBI MSME Outlook Survey) ಹೇಳಿದೆ. ಹಾಗೆಯೇ, ಇಷ್ಟೇ ಪ್ರಮಾಣದ ಎಂಎಸ್ಎಂಇಗಳು ಮುಂದಿನ ವರ್ಷ ಹೆಚ್ಚುವರಿ ಹೂಡಿಕೆಗಳನ್ನು ಮಾಡಲು ಹೊರಟಿವೆ ಎಂದು ಎರಡನೇ ಆವೃತ್ತಿಯ ಈ ಸಮೀಕ್ಷೆಯಲ್ಲಿ ಹೇಳಲಾಗಿದೆ. ‘ಬಂಡವಾಳ ವೆಚ್ಚದ ಉದ್ದೇಶ ಕಾಣುತ್ತಿದೆ. ಶೇ. 37ರಷ್ಟು ಎಂಎಸ್ಎಂಇಗಳು ಪ್ರಸಕ್ತ ಅವದಿಯಲ್ಲಿ ತಮ್ಮ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದಾಗಿ ಹೇಳಿವೆ. ಇಷ್ಟೇ ಪ್ರಮಾಣದ ಸಂಸ್ಥೆಗಳು ಮುಂಬರುವ ವರ್ಷದಲ್ಲಿ ಹೆಚ್ಚುವರಿ ಹೂಡಿಕೆಗಳನ್ನು ಮಾಡಲು ಯೋಜಿಸುತ್ತಿವೆ,’ ಎಂದು ಸಿಡ್ಬಿ ವರದಿ ತಿಳಿಸಿದೆ.
ತಯಾರಿಕೆ ಮತ್ತು ಸೇವಾ ಸೆಕ್ಟರ್ನಲ್ಲಿರುವ ಮಧ್ಯಮ ಮತ್ತು ಸಣ್ಣ ಉದ್ದಿಮೆಗಳ ಪೈಕಿ ಶೇ. 40ರಷ್ಟು ಸಂಸ್ಥೆಗಳು ಸೌರಫಲಕ, ಎಲೆಕ್ಟ್ರಿಕ್ ವಾಹನ ಇತ್ಯಾದಿ ಪರಿಸರಸ್ನೇಹಿ ತಂತ್ರಜ್ಞಾನಗಳನ್ನು ಅಳವಡಿಸುವತ್ತ ಗಮನ ಹರಿಸುತ್ತಿವೆಯಂತೆ.
ಇದನ್ನೂ ಓದಿ: ಸೌರಶಕ್ತಿ ಮತ್ತು ವಾಯುಶಕ್ತಿ ಉತ್ಪಾದನೆಯಲ್ಲಿ ಜರ್ಮನಿಯನ್ನು ಹಿಂದಿಕ್ಕಿದ ಭಾರತ; ಈಗ ನಾವೇ ವಿಶ್ವದ ನಂ. 3
‘ಜಾಗತಿಕ ಅನಿಶ್ಚಿತತೆಯ ಸಂದರ್ಭದಲ್ಲಿ ಎಂಎಸ್ಎಂಇಗಳು ಗಮನಾರ್ಹವೆನಿಸುವ ಪ್ರತಿರೋಧ ಶಕ್ತಿ ತೋರಿವೆ, ಅಭಿವೃದ್ಧಿಪರ ಧೋರಣೆ ಹೊಂದಿವೆ. ಬಂಡವಾಳ ವೆಚ್ಚ, ಉದ್ಯೋಗ ಹೆಚ್ಚಿಸುವ, ಮತ್ತು ಸುಸ್ಥಿರ ತಂತ್ರಜ್ಞಾನಗಳನ್ನು ಅಳವಡಿಕೆ ಮಾಡಲು ಅವುಗಳು ಯೋಜಿಸಿರುವುದು ದೇಶದ ಆರ್ಥಿಕತೆಗೆ ಶುಭ ಸೂಚನೆಯಾಗಿದೆ’ ಎಂದು ಸಿಡ್ಬಿ ಛೇರ್ಮನ್ ಮತ್ತು ಎಂಡಿ ಮನೋಜ್ ಮಿಟ್ಟಲ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಈ ಸಿಡ್ಬಿಯ ತ್ರೈಮಾಸಿಕ ಸಮೀಕ್ಷಾ ವರದಿಯ ಪ್ರಕಾರ ಎಂಎಸ್ಎಂಇಗಳು ಬ್ಯುಸಿನೆಸ್ ಬೆಳವಣಿಗೆ ಬಗ್ಗೆ ಆಶಾದಾಯಕವಾಗಿವೆ. ಬೇಡಿಕೆ ಹೆಚ್ಚಳ, ಉತ್ಪಾದನೆ ಹೆಚ್ಚಳ, ಹೆಚ್ಚಿನ ಮಾರಾಟ ದರದಿಂದಾಗಿ ಬ್ಯುಸಿನೆಸ್ ಸಾಕಷ್ಟು ಏರಿಕೆಯಾಗುವ ನಿರೀಕ್ಷೆಯಲ್ಲಿ ಎಂಎಸ್ಎಂಇಗಳಿವೆ. ನಾಲ್ಕನೇ ಕ್ವಾರ್ಟರ್ನಲ್ಲಿ (2025ರ ಜನವರಿಯಿಂದ ಮಾರ್ಚ್) ಹೆಚ್ಚಿನ ಎಂಎಸ್ಎಂಇಗಳು ಲಾಭ ಹೆಚ್ಚಳದ ನಿರೀಕ್ಷೆಯಲ್ಲಿವೆ. ಉತ್ಪಾದನೆಯ ವೆಚ್ಚ ಮತ್ತು ಸಂಬಳ ವೆಚ್ಚ ಹೆಚ್ಚಾಗಿದ್ದರೂ ಕೂಡ ಲಾಭ ಹೆಚ್ಚಳದ ನಿರೀಕ್ಷೆ ಇರುವುದು ಗಮನಾರ್ಹ ಸಂಗತಿ.
ಇದನ್ನೂ ಓದಿ: ಆರ್ಬಿಐನಿಂದ 25 ಪಾಯಿಂಟ್ ಬಡ್ಡಿದರ ಇಳಿಕೆ ಆಗುತ್ತಾ? ಎಂಪಿಸಿ ಸಭೆ ನಿರ್ಧಾರದತ್ತ ಎಲ್ಲರ ಚಿತ್ತ
ಈ ಸಮೀಕ್ಷೆಯ ಮತ್ತೊಂದು ಗಮನಾರ್ಹ ಸಂಗತಿ ಎಂದರೆ, ದೇಶದ ಹೆಚ್ಚಿನ ಎಂಎಸ್ಎಂಇಗಳು ಉದ್ಯೋಗಾವಕಾಶ ಹೆಚ್ಚಿಸಲು ನಿರ್ಧರಿಸಿವೆ. ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ನ ಶೇ. 40 ಎಂಎಸ್ಎಂಇಗಳು, ಹಾಗೂ ಸರ್ವಿಸ್ ಸೆಕ್ಟರ್ನ ಶೇ. 37ರಷ್ಟು ಎಂಎಸ್ಎಂಇಗಳು ಹೆಚ್ಚಿನ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿವೆಯಂತೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:04 pm, Tue, 8 April 25