RBI MPC meeting: ಆರ್ಬಿಐನಿಂದ 25 ಪಾಯಿಂಟ್ ಬಡ್ಡಿದರ ಇಳಿಕೆ ಆಗುತ್ತಾ? ಎಂಪಿಸಿ ಸಭೆ ನಿರ್ಧಾರದತ್ತ ಎಲ್ಲರ ಚಿತ್ತ
Reserve Bank of India Monetary Policy Committee meeting: ಆರ್ಬಿಐನ ಎಂಪಿಸಿ ಸಭೆ ಚಾಲನೆಯಲ್ಲಿದ್ದು, ಫೆಬ್ರುವರಿಯಂತೆ ಈ ಬಾರಿಯೂ ಬಡ್ಡಿದರ ಇಳಿಸುವ ನಿರೀಕ್ಷೆ ಇದೆ. ರಿಪೋ ದರವನ್ನು ಆರ್ಬಿಐ 25 ಮೂಲಾಂಕಗಳಷ್ಟು ಇಳಿಸಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಅಮೆರಿಕದಲ್ಲಿ ಬಡ್ಡಿದರ ಕಡಿಮೆ ಆಗಿರುವುದು, ಭಾರತದಲ್ಲಿ ಹಣದುಬ್ಬರ ಕಡಿಮೆ ಆಗಿರುವುದು, ಡಾಲರ್ ಎದುರು ರುಪಾಯಿ ಬಲಗೊಂಡಿರುವುದು ಆರ್ಬಿಐನ ಗಟ್ಟಿ ನಿರ್ಧಾರಕ್ಕೆ ಎಡೆ ಮಾಡಿಕೊಡಬಹುದು.

ನವದೆಹಲಿ, ಏಪ್ರಿಲ್ 8: ರಿಸರ್ವ್ ಬ್ಯಾಂಕ್ ಮಾನಿಟರಿ ಪಾಲಿಸಿ ಕಮಿಟಿ ಸಭೆ (RBI MPC meeting) ನಿನ್ನೆ ಆರಂಭವಾಗಿದ್ದು, ನಾಳೆ ಸಭೆಯ ನಿರ್ಧಾರಗಳು ಪ್ರಕಟಗೊಳ್ಳಲಿವೆ. ಎಲ್ಲರ ಚಿತ್ತ ರಿಪೋ ರೇಟ್ ಅಥವಾ ಬಡ್ಡಿದರದತ್ತ ನೆಟ್ಟಿದೆ. ಕಳೆದ ಬಾರಿ ನಡೆದ (ಫೆಬ್ರುವರಿ) ಆರ್ಬಿಐ ಎಂಪಿಸಿ ಸಭೆಯಲ್ಲಿ 25 ಮೂಲಾಂಕಗಳಷ್ಟು ಬಡ್ಡಿದರ ಇಳಿಸಲಾಗಿತ್ತು. ಈ ಬಾರಿಯೂ 25 ಬೇಸಿಸ್ ಪಾಯಿಂಟ್ನಷ್ಟು ಬಡ್ಡಿ ದರ ಇಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೆಲವರು ಈ ಬಾರಿ 50 ಮೂಲಾಂಕಗಳಷ್ಟು ದರ ಇಳಿಕೆ ಆದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.
ಆರ್ಬಿಐನ ಹೊಸ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದಲ್ಲಿ ನಡೆಯುತ್ತಿರುವ ಎರಡನೇ ಎಂಪಿಸಿ ಸಭೆಯಲ್ಲಿ ಗಮನಾರ್ಹ ನಿರ್ಧಾರಗಳು ಬರಬಹುದು ಎಂದು ನಿರೀಕ್ಷಿಸಲಾಗಿದೆ. ಅಮೆರಿಕ ಶುರುವಿಟ್ಟಿರುವ ಸುಂಕ ಸಮರದಿಂದ ಉದ್ಭವವಾಗಿರುವ ಮತ್ತು ಉದ್ಭವವಾಗಲಿರುವ ಪರಿಸ್ಥಿತಿಯನ್ನು ಎದುರಿಸಲು ಆರ್ಬಿಐ ಯಾವ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬಹುದು ಎನ್ನುವ ಕುತೂಹಲ ಇದೆ.
ಇದನ್ನೂ ಓದಿ: ಪಿಎಂ ಕಿಸಾನ್: ಅರ್ಹರಲ್ಲದ ರೈತರು ಯಾರು? 20ನೇ ಕಂತು ಯಾವಾಗ? ಇಲ್ಲಿದೆ ಡೀಟೇಲ್ಸ್
ಟ್ಯಾರಿಫ್ ಹೇರಿಕೆಯಿಂದ ಜಾಗತಿಕವಾಗಿ ಅನಿಶ್ಚಿತ ಸ್ಥಿತಿ ನಿರ್ಮಾಣವಾಗಿದೆ. ಭಾರತದ ಮೇಲೆ ಅಮೆರಿಕ ಶೇ. 27ರಷ್ಟು ತೆರಿಗೆ ಹೇರಿದೆ. ಇದರಿಂದ ಭಾರತದ ಜಿಡಿಪಿ ಬೆಳವಣಿಗೆ ಕೆಲ ಮೂಲಾಂಕಗಳಷ್ಟು ಇಳಿಕೆ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಡ್ಡಿದರ ಇಳಿಕೆಯಿಂದ ಬೆಳವಣಿಗೆಗೆ ಒಂದಷ್ಟು ಪುಷ್ಟಿ ಕೊಡಬಹುದು ಎನ್ನುವ ಅಭಿಪ್ರಾಯಗಳಿವೆ.
100 ಮೂಲಾಂಕಗಳಷ್ಟು ದರ ಕಡಿತ ಸಾಧ್ಯತೆ?
2026ರ ಫೆಬ್ರುವರಿಯಲ್ಲಿ 25 ಮೂಲಾಂಕಗಳಷ್ಟು ಬಡ್ಡಿದರ ಇಳಿಸಲಾಗಿತ್ತು. ಕೋವಿಡ್ ಬಳಿಕ ಬಡ್ಡಿದರ ಇಳಿಕೆ ಆಗಿದ್ದು ಅದೇ ಮೊದಲು. ಅಂದು ಆರಂಭವಾದ ದರ ಕಡಿತದ ಚಕ್ರದಲ್ಲಿ ಒಟ್ಟು 100 ಮೂಲಾಂಕಗಳಷ್ಟು ಕಡಿಮೆ ಆಗಬಹುದು ಎಂದು ಹಲವು ತಜ್ಞರು ಹೇಳುತ್ತಿದ್ದಾರೆ.
ಇದನ್ನೂ ಓದಿ: ಹೊಸ 100 ರೂ ಮತ್ತು 200 ರೂ ಬ್ಯಾಂಕ್ ನೋಟುಗಳ ಬಿಡುಗಡೆ; ಹೀಗಿವೆ ಈ ನೋಟುಗಳು
ಶೇ. 6.50ರಷ್ಟಿದ್ದ ರಿಪೋ ದರ ಈಗ ಶೇ. 6.25ಕ್ಕೆ ಇಳಿದಿದೆ. ಈ ತಜ್ಞರ ಅಂದಾಜು ನಿಜವೇ ಆದಲ್ಲಿ ಈ ವರ್ಷ ಇನ್ನೂ 75 ಮೂಲಾಂಕಗಳಷ್ಟು ದರ ಇಳಿಕೆ ಆಗಬಹುದು. ಈ ವರ್ಷಾಂತ್ಯದಲ್ಲಿ ಬಡ್ಡಿದರ ಶೇ. 5.50ಕ್ಕೆ ಇಳಿಕೆ ಆಗಬಹುದು. ಈ ಬಾರಿ (ಏಪ್ರಿಲ್) ದರ ಕಡಿತ ಮಾಡಿದರೆ, ಜೂನ್ನಲ್ಲಿ ನಡೆಯುವ ಎಂಪಿಸಿ ಸಭೆಯಲ್ಲಿ ದರ ಕಡಿತ ಮಾಡಲಾಗುವುದಿಲ್ಲ. ನಂತರದ ಸಭೆಗಳಲ್ಲಿ ಬಡ್ಡಿ ಇಳಿಕೆಯ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ.
ಎಂಪಿಸಿ ಸಮಿತಿಯಲ್ಲಿ ಏನು ಚರ್ಚೆ?
ಆರ್ಬಿಐನ ಹಣಕಾಸು ನೀತಿ ಸಮಿತಿ ಪ್ರತೀ ಎರಡು ತಿಂಗಳಿಗೊಮ್ಮೆ ಸಭೆ ನಡೆಸುತ್ತದೆ. ಈ ಕಮಿಟಿಯಲ್ಲಿ ಆರ್ಬಿಐ ಗವರ್ನರ್ ಸೇರಿ ಆರು ಸದಸ್ಯರಿರುತ್ತಾರೆ. ಸಭೆಯಲ್ಲಿ ವಿವಿಧ ದರಗಳ ಪರಿಷ್ಕರಣೆ ಮಾಡಲಾಗುತ್ತದೆ. ಜಿಡಿಪಿ, ಹಣದುಬ್ಬರ ಎಷ್ಟಿರಬಹುದು ಎಂದು ಅಂದಾಜನ್ನೂ ಮಾಡಲಾಗುತ್ತದೆ. ಮೂರು ದಿನಗಳ ಕಾಲ ಸಭೆ ನಡೆಯುತ್ತದೆ. ಈ ಬಾರಿಯ ಸಭೆ ನಿನ್ನೆ ಆರಂಭವಾಗಿದ್ದು, ನಾಳೆ ಬೆಳಗ್ಗೆ ಮುಗಿಯುತ್ತದೆ. ನಾಳೆ ಬುಧವಾರ ಬೆಳಗ್ಗೆ 10 ಗಂಟೆಗೆ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಸಭೆಯ ನಿರ್ಧಾರಗಳನ್ನು ಮತ್ತು ವಿಚಾರಗಳನ್ನು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಳ್ಳುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ