ಮೈಕ್ರೋಸಾಫ್ಟ್ ಸಿಇಒ ವಿರುದ್ಧ ಘೋಷಣೆ ಕೂಗಿ ಕೆಲಸ ಕಳೆದುಕೊಂಡ ಭಾರತೀಯ ಮಹಿಳೆ; ಏನಿದು ವಿವಾದ?
Microsoft fires 2 employees for disrupting company meet: ಮೈಕ್ರೋಸಾಫ್ಟ್ನ ಸ್ವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರತಿಭಟನೆ ನಡೆಸಿದ ಇಬ್ಬರು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗಿದೆ. ಇಸ್ರೇಲ್ ಸರ್ಕಾರಕ್ಕೆ ಮೈಕ್ರೋಸಾಫ್ಟ್ ತಂತ್ರಜ್ಞಾನ ನೆರವು ನೀಡುತ್ತಿರುವುದನ್ನು ಆಕ್ಷೇಪಿಸಿ ಇವರು ಪ್ರತಿಭಟಿಸಿದ್ದರು. ಇಬ್ದಿಹಾಲ್ ಅಬಸ್ಸಾದ್ ಮತ್ತು ಭಾರತ ಮೂಲದ ವಾಣಿಯಾ ಅಗರ್ವಾಲ್ ಅವರು ಪ್ರತಿಭಟಿಸಿದ ಆ ಇಬ್ಬರು ಉದ್ಯೋಗಿಗಳು.

ನವದೆಹಲಿ, ಏಪ್ರಿಲ್ 8: ಇಸ್ರೇಲ್ ಸರ್ಕಾರಕ್ಕೆ ಮೈಕ್ರೋಸಾಫ್ಟ್ ನೆರವು ನೀಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಇಬ್ಬರು ಉದ್ಯೋಗಿಗಳನ್ನು ಸಂಸ್ಥೆಯು ಕೆಲಸದಿಂದ ತೆಗೆದುಹಾಕಿದೆ. ವಾಷಿಂಗ್ಟನ್ನ ರೆಡ್ಮಾಂಡ್ನಲ್ಲಿ ಮೈಕ್ರೋಸಾಫ್ಟ್ನ 50ನೇ ಸಂಸ್ಥಾಪನಾ ದಿನದ (Microsoft 50th anniversary) ಕಾರ್ಯಕ್ರಮಗಳನ್ನು ಇಬ್ತಿಹಾಲ್ ಅಬಸ್ಸಾದ್ (Ibtihal Aboussad) ಮತ್ತು ವಾಣಿಯ ಅಗರ್ವಾಲ್ (Vaniya Agarwal) ಅವರಿಬ್ಬರು ಅಡ್ಡಿಪಡಿಸಲು ಯತ್ನಿಸಿದ್ದರು. ಇಬ್ಬರೂ ಕೂಡ ಮೈಕ್ರೋಸಾಫ್ಟ್ನಲ್ಲಿ ಸಾಫ್ಟ್ವೇರ್ ಎಂಜಿನಿಯರುಗಳಾಗಿದ್ದರು.
ವಾಣಿಯಾ ಅಗರ್ವಾಲ್ ಅಮೆರಿಕನ್ ಸಂಜಾತೆಯಾದರೂ ಭಾರತೀಯ ಮೂಲದವಳೆನ್ನಲಾಗಿದೆ. ಈಕೆ ಕಾರ್ಯಕ್ರಮದ ವೇಳೆ ಪ್ರತಿಭಟನೆ ನಡೆಸಿದ ಬಳಿಕ ರಾಜೀನಾಮೆ ನೀಡಿದರು. ಕಂಪನಿ ತಡಮಾಡದೇ ಈಕೆಯ ರಾಜೀನಾಮೆ ಅಂಗೀಕರಿಸಿದೆ. ಈಕೆ ಮೈಕ್ರೋಸಾಫ್ಟ್ ಅನ್ನು ಡಿಜಿಟಲ್ ಆಯುಧಗಳ ತಯಾರಕ ಎಂದು ಆರೋಪಿಸಿ ಟೀಕೆ ಮಾಡಿದ್ದಾರೆ.
ವಾಷಿಂಗ್ಟನ್ನ ರೆಡ್ಮಾಂಟ್ನಲ್ಲಿ ಮೈಕ್ರೋಸಾಫ್ಟ್ನ ಕಚೇರಿ ಇದೆ. ಅಲ್ಲೇ ಸಂಸ್ಥೆಯ ಸ್ವರ್ಣ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮೈಕ್ರೋಸಾಫ್ಟ್ ಎಐ ಮುಖ್ಯಸ್ಥ ಮುಸ್ತಫಾ ಸುಲೇಮಾನ್ ಅವರು ಭಾಷಣ ಮಾಡುವಾಗ ಇಬ್ತಿಹಾಲ್ ಅಬಸ್ಸಾದ್ ಅವರು ಪ್ರತಿಭಟನೆ ನಡೆಸಿದರು. ಇಸ್ರೇಲ್ ಸರ್ಕಾರದ ಜೊತೆ ಮೈಕ್ರೋಸಾಫ್ಟ್ ಕೆಲಸ ಮಾಡುವುದನ್ನು ನಿಲ್ಲಿಸಬೇಕು ಎನ್ನುವುದು ಅವರ ಆಗ್ರಹವಾಗಿತ್ತು.
ಇದನ್ನೂ ಓದಿ: ಸಾಲು ಸಾಲು ಲೇ ಆಫ್ಗಳು; ಬೆಂಗಳೂರಿನಲ್ಲಿ ಖಾಲಿ ಬೀಳುತ್ತಿರುವ ಪಿಜಿಗಳು
ನಂತರ, ಮಾಜಿ ಸಿಇಒಗಳಾದ ಬಿಲ್ ಗೇಟ್ಸ್ ಮತ್ತು ಸ್ಟೀವ್ ಬಾಲ್ಮರ್ ಜೊತೆ ಹಾಲಿ ಸಿಇಒ ಸತ್ಯ ನಾದೆಲ್ಲ ಅವರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಗ ವಾಣಿಯ ಅಗರ್ವಾಲ್ ಅವರು ಪ್ರತಿಭಟನೆ ಮಾಡಿದ್ದರು. ಇಬ್ತಿಹಾಲ್ ಅಬಸ್ಸಾದ್ ಮತ್ತು ವಾಣಿಯಾ ಅಗರ್ವಾಲ್ ಅವರಿಬ್ಬರೂ ಕೂಡ ಇಸ್ರೇಲ್ಗೆ ಮೈಕ್ರೋಸಾಫ್ಟ್ ನೆರವು ನೀಡುತ್ತಿರುವುದನ್ನು ಬಲವಾಗಿ ಆಕ್ಷೇಪಿಸಿದ್ದಾರೆ.
‘ದುಷ್ಟ ಶಕ್ತಿಗೆ ತಂತ್ರಜ್ಞಾನ ಮಾರಬೇಡಿ…’
ಮೈಕ್ರೋಸಾಫ್ಟ್ ಅಜುರೆ ಮತ್ತು ಎಐ ಟೆಕ್ನಾಲಜಿಗಳನ್ನು ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳುತ್ತಿದೆ. ಮೈಕ್ರೋಸಾಫ್ಟ್ನಲ್ಲಿ ನಾವು ಮಾಡುವ ಕೆಲಸವು ನರಮೇಧಕ್ಕೆ ಎಡೆ ಮಾಡಿಕೊಡುತ್ತಿದೆ. ಮಾನವ ಹಕ್ಕುಗಳಿಗೆ ಬದ್ಧವಾಗಿರಬೇಕೆಂಬ ತನ್ನದೇ ನಿಯಮವನ್ನು ಸಂಸ್ಥೆ ಉಲ್ಲಂಘನೆ ಮಾಡುತ್ತಿದೆ. ಮೈಕ್ರೋಸಾಫ್ಟ್ ಸಂಸ್ಥೆ ಇಸ್ರೇಲ್ ಸಹವಾಸದಿಂದ ದೂರವಾಗಬೇಕು. ದುಷ್ಟ ಶಕ್ತಿಗೆ ಅಪಾಯಕಾರಿ ತಂತ್ರಜ್ಞಾನ ಮಾರುವುದನ್ನು ನಿಲ್ಲಿಸಬೇಕು ಎಂದು ಅಗರ್ವಾಲ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮಾದರಿ ನಾರಿ ರುಕ್ಮಿಣಿ; ಕೂಲಿ ಕೆಲಸ ಮಾಡುತ್ತಿದ್ದ ಈ ಮಹಿಳೆ ಇವತ್ತು ಸಿಇಒ
ಹಾಗೆಯೇ, ಮೈಕ್ರೋಸಾಫ್ಟ್ನಲ್ಲಿರುವ ಇತರ ಉದ್ಯೋಗಿಗಳಿಗೆ ಈ ವಿಚಾರದಲ್ಲಿ ಎಚ್ಚರದಿಂದಿರುವಂತೆಯೂ ಅವರು ಕರೆ ನೀಡಿದ್ದಾರೆ. ಮೈಕ್ರೋಸಾಫ್ಟ್ ಕಂಪನಿಯಲ್ಲೇ ಕೆಲಸ ಮುಂದುವುರಿಸುವುದಾದರೆ ತಮ್ಮ ಸ್ಥಾನಮಾನಗಳನ್ನು ಬಳಸಿ ಕಂಪನಿಯ ನಾಯಕತ್ವಕ್ಕೆ ಬಿಸಿ ತಾಕಿಸಬೇಕು ಎಂದೂ ಕರೆ ಕೊಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ