ಫುಟ್ಬಾಲ್ನ ಇಂಗ್ಲಿಷ್ ಪ್ರೀಮಿಯರ್ ಲೀಗ್ಗಿಂತಲೂ ಐಪಿಎಲ್ ಬ್ರ್ಯಾಂಡ್ ದೊಡ್ಡದು; ಏನು ಕಾರಣ?
How IPL is bigger brand than EPL: ಇಂಗ್ಲೀಷ್ ಪ್ರೀಮಿಯರ್ ಲೀಗ್ ವಿಶ್ವದಲ್ಲೇ ಅತ್ಯಂತ ಜನಪ್ರಿಯವಾಗಿರುವ ಫುಟ್ಬಾಲ್ ಲೀಗ್ ಎನಿಸಿದೆ. ಆದರೆ, ಇಪಿಎಲ್ ಅನ್ನೂ ಮೀರಿಸುವ ದೊಡ್ಡ ಬ್ರ್ಯಾಂಡ್ ಐಪಿಎಲ್ ಆಗಿದೆ. ಕಡಿಮೆ ವೀಕ್ಷಕರು ಇದ್ದರೂ ಇಂಡಿಯನ್ ಪ್ರೀಮಿಯರ್ ಲೀಗ್ ಅಷ್ಟು ದೊಡ್ಡ ಬ್ರ್ಯಾಂಡ್ ಎನಿಸುವುದು ಹೇಗೆ? ಅದಕ್ಕೆ ಕೆಲ ಪ್ರಮುಖ ಕಾರಣಗಳನ್ನು ಗುರುತಿಸಬಹುದು.

2008ರಲ್ಲಿ ಶುರುವಾದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ವಿಶ್ವದಲ್ಲೇ ಅತ್ಯುತ್ತಮವಾಗಿ ನಿರ್ವಹಣೆಯಾಗುತ್ತಿರುವ ಕ್ರೀಡಾಕೂಟ ಎನಿಸಿದೆ. ಅತ್ಯಂತ ಜನಪ್ರಿಯ ಕ್ರಿಕೆಟ್ ಟೂರ್ನಿ ಎನಿಸಿದೆ. ವಿಶ್ವದ ಯಾವುದೇ ಕ್ಲಬ್ ಫುಟ್ಬಾಲ್ ಟೂರ್ನಿಗಿಂತಲೂ ಐಪಿಎಲ್ ಬೃಹತ್ ಎನಿಸುತ್ತದೆ. ಇದು ಅಚ್ಚರಿ ಎನಿಸಿದರೂ ನಿಜ. ಅಚ್ಚರಿ ಯಾಕೆಂದರೆ, ಫುಟ್ಬಾಲ್ ಆಟವನ್ನು ವಿಶ್ವಾದ್ಯಂತ 400 ಕೋಟಿ ಜನರು ವೀಕ್ಷಿಸುತ್ತಾರೆ. ಕ್ರಿಕೆಟ್ ವೀಕ್ಷಕರ ಸಂಖ್ಯೆ ಗರಿಷ್ಠ ಎಂದರೆ 200 ಕೋಟಿ ದಾಟದು. ಇಂಗ್ಲೀಷ್ ಪ್ರೀಮಿಯರ್ ಲೀಗ್ ಫುಟ್ಬಾಲ್ ಪಂದ್ಯಗಳನ್ನು ಅತಿಹೆಚ್ಚು ಸಂಖ್ಯೆಯಲ್ಲಿ ಜನರು ವೀಕ್ಷಿಸುತ್ತಾರೆ. ಆದರೂ ಕೂಡ ಐಪಿಎಲ್ ಬ್ರ್ಯಾಂಡ್ ಯಾಕೆ ದೊಡ್ಡದು?
ಬೇರೆಲ್ಲಾ ಸ್ಪೋರ್ಟಿಂಗ್ ಇವೆಂಟ್ಗಳಿಗಿಂತಲೂ ಐಪಿಎಲ್ ಬ್ರ್ಯಾಂಡ್ ಯಾಕೆ ದೊಡ್ಡದು ಎನ್ನುವುದಕ್ಕೆ ಪ್ರಮುಖ ಸಾಕ್ಷಿ ಬ್ರಾಡ್ಕ್ಯಾಸ್ಟಿಂಗ್ ಹಣ. ಒಂದು ಪಂದ್ಯದ ಪ್ರಸಾರ ಹಕ್ಕಿಗೆ ಇರುವ ಬೆಲೆ ಐಪಿಎಲ್ನದ್ದು ಅತಿ ಹೆಚ್ಚು. ಇಪಿಎಲ್ ಪಂದ್ಯಗಳಿಗಿಂತಲೂ ಐಪಿಎಲ್ ಪಂದ್ಯಗಳ ಪ್ರಸಾರ ಹಕ್ಕು ಬೆಲೆ ಹೆಚ್ಚಿದೆ.
ತಂಡಕ್ಕಿಂತ ಟೂರ್ನಿ ದೊಡ್ಡದು
ರಾಜ್ಯಕ್ಕಿಂತ ದೇಶ ದೊಡ್ಡದು, ವ್ಯಕ್ತಿಗಿಂತ ತಂಡ ದೊಡ್ಡದು ಎನ್ನುವುದು ಐಪಿಎಲ್ಗೂ ಅನ್ವಯ ಆಗುತ್ತದೆ. ಇಲ್ಲಿ ಆರ್ಸಿಬಿ, ಸಿಎಸ್ಕೆ ಇತ್ಯಾದಿ ತಂಡಗಳಿಗಿಂತ ಐಪಿಎಲ್ ಬ್ರ್ಯಾಂಡ್ ಬಹಳ ದೊಡ್ಡದು. ಆದರೆ, ಫುಟ್ಬಾಲ್ನಲ್ಲಿ ಇದು ಉಲ್ಟಾ ಇದೆ. ಮ್ಯಾಂಚೆಸ್ಟರ್ ಸಿಟಿ, ಮ್ಯಾಂಚೆಸ್ಟರ್ ಯುನಿಟೆಡ್, ಚೆಲ್ಸೀ ಇತ್ಯಾದಿ ಕ್ಲಬ್ ತಂಡಗಳು ಇಪಿಎಲ್ಗಿಂತ ದೊಡ್ಡ ಬ್ರ್ಯಾಂಡ್ ಹೊಂದಿವೆ. ಬೇರೆ ಜನಪ್ರಿಯ ಫುಟ್ಬಾಲ್ ಲೀಗ್ ತೆಗೆದುಕೊಂಡರೂ ಹೆಚ್ಚೂ ಕಡಿಮೆ ಇದೇ ಟ್ರೆಂಡ್ ಇದೆ. ಉದಾಹರಣೆಗೆ, ರಿಯಲ್ ಮ್ಯಾಡ್ರಿಡ್, ಬಾರ್ಸಿಲೋನಾ ತಂಡಗಳು ಸ್ಪೇನ್ನ ಅಗ್ರಮಾನ್ಯ ಲಾ ಲಿಗಾ ಟೂರ್ನಿಗಿಂತಲೂ ದೊಡ್ಡ ಬ್ರ್ಯಾಂಡ್ ಹೊಂದಿವೆ. ಫ್ರಾನ್ಸ್, ಇಟಲಿ ಇತ್ಯಾದಿ ದೇಶಗಳ ಫುಟ್ಬಾಲ್ ಕ್ಲಬ್ಗಳು ಅವು ಆಡುವ ಟೂರ್ನಿಗಿಂತಲೂ ಹೆಚ್ಚು ಜನಪ್ರಿಯತೆ ಹೊಂದಿವೆ.
ಇದನ್ನೂ ಓದಿ: Rags to CEO: ಮಾದರಿ ನಾರಿ ರುಕ್ಮಿಣಿ; ಕೂಲಿ ಕೆಲಸ ಮಾಡುತ್ತಿದ್ದ ಈ ಮಹಿಳೆ ಇವತ್ತು ಸಿಇಒ
ಐಪಿಎಲ್ನಲ್ಲಿ ಆರ್ಸಿಬಿ ಅತಿ ಪ್ರಬಲ ಬ್ರ್ಯಾಂಡ್ ಹೊಂದಿದ್ದರೂ ಐಪಿಎಲ್ ಎಲ್ಲ ತಂಡಗಳ ಜನಪ್ರಿಯತೆಯನ್ನೂ ಮೀರಿಸುತ್ತದೆ.
ಆಟಗಾರರ ಹರಾಜು ಪ್ರಕ್ರಿಯೆ
ಫುಟ್ಬಾಲ್ ಕ್ಲಬ್ ಟೂರ್ನಿಗಳಿಗಿಂತ ಐಪಿಎಲ್ ವಿಭಿನ್ನವಾಗಿ ನಿಲ್ಲುವ ಮತ್ತೊಂದು ಕಾರಣವೆಂದರೆ ಅದು ಆಟಗಾರರ ಹರಾಜು. ಫುಟ್ಬಾಲ್ನಲ್ಲಿ ತಂಡಕ್ಕೆ ಖರ್ಚಿನ ಮಿತಿ ಇರುವುದಿಲ್ಲ. ಪ್ರತಿಭಾನ್ವಿತ ಆಟಗಾರ ಕಂಡಲ್ಲಿ ಅವರನ್ನು ಎಷ್ಟು ದುಡ್ಡಿಗೆ ಬೇಕಾದರೂ ತಂದು ಆಡಿಸಲು ಸಾಧ್ಯ. ಹೀಗಾಗಿ, ಹಣಕಾಸು ಬಲ ಹೆಚ್ಚು ಇರುವ ತಂಡಗಳು ಪ್ರಬಲ ಆಟಗಾರರನ್ನು ತಂದಿಟ್ಟುಕೊಳ್ಳಬಹುದು. ಇದರಿಂದ ತಂಡಗಳ ಮಧ್ಯೆ ಅಸಮತೋಲನ ಉಂಟಾಗುತ್ತದೆ.
ಆದರೆ, ಐಪಿಎಲ್ನಲ್ಲಿ ಇರುವ ಸ್ಥಿತಿ ಭಿನ್ನ. ಇಲ್ಲಿ ನಿಯಮಿತವಾಗಿ ಆಟಗಾರರ ಹರಾಜು ಮಾಡಲಾಗುತ್ತದೆ. ಅಲ್ಲದೇ ಪ್ರತೀ ತಂಡಕ್ಕೂ ವೆಚ್ಚಕ್ಕೆ ಮಿತಿ ನಿಗದಿ ಮಾಡಲಾಗಿರುತ್ತದೆ. ಆ ಮಿತಿಯೊಳಗೆ ಆಟಗಾರರ ಖರೀದಿ ಆಗಬೇಕು. ಹೀಗಾಗಿ, ಬೇಡಿಕೆ ಆಟಗಾರರನ್ನು ಪಡೆಯುವ ಅವಕಾಶ ಎಲ್ಲಾ ತಂಡಗಳಿಗೂ ಸಮಾನವಾಗಿರುತ್ತದೆ. ಎಲ್ಲಾ ತಂಡಗಳು ಬಹುತೇಕ ಸಮಾನ ಬಲ ಹೊಂದಿರುತ್ತವೆ. ಇದು ಟೂರ್ನಿಯಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಅತಿರಥ ಮಹಾರಥರಿಗೆ ಸಾಧ್ಯವಾಗಿಲ್ಲ: ರಜತ್ ಪಾಟಿದಾರ್ ಬೆಸ್ಟ್ ಕ್ಯಾಪ್ಟನ್ ಎನ್ನಲು ಇಷ್ಟೇ ಸಾಕು
ಐಪಿಎಲ್ ಉತ್ತಮ ಬ್ಯುಸಿನೆಸ್ ಮಾಡಲ್
ಜಾಗತಿಕವಾಗಿ ಫುಟ್ಬಾಲ್ ಕ್ಲಬ್ಗಳನ್ನು ನಿರ್ವಹಿಸಲು ಬಹಳ ವೆಚ್ಚವಾಗುತ್ತದೆ. ತಳಮಟ್ಟದಿಂದ ಆಟಗಾರರನ್ನು ಬೆಳೆಸುವ ಜವಾಬ್ದಾರಿ ಇರುತ್ತದೆ. ಇವು ಲಾಭ ಮಾಡಲು ಇರುವ ಅವಕಾಶ ಸೀಮಿತವಾಗಿರುತ್ತದೆ. ಮತ್ತೊಂದು ಅಂಶ ಎಂದರೆ, ಟೂರ್ನಿಗಳ ಪ್ರಮುಖ ನಿರ್ಧಾರಗಳಲ್ಲಿ ದೊಡ್ಡದೊಡ್ಡ ಫುಟ್ಬಾಲ್ ಕ್ಲಬ್ಗಳ ಮಾತು ಪ್ರಧಾನವಾಗಿರುತ್ತದೆ.
ಇಲ್ಲಿ ಐಪಿಎಲ್ ವಿಭಿನ್ನವಾಗಿ ನಿಲ್ಲುತ್ತದೆ. ಇದು ಫ್ರಾಂಚೈಸಿ ಮಾಡಲ್ ಆಗಿದ್ದು, ತಂಡಗಳು ಗ್ರ್ಯಾಸ್ರೂಟ್ನಲ್ಲಿ ಆಟಗಾರರನ್ನು ಬೆಳೆಸುವ ಜವಾಬ್ದಾರಿ ಹೊಂದಿರುವುದಿಲ್ಲ. ಟೂರ್ನಿಯ ಪ್ರಮುಖ ನಿರ್ಧಾರಗಳಲ್ಲಿ ತಂಡಗಳ ಅನಿಸಿಕೆ ಹೆಚ್ಚು ಪ್ರಾಮುಖ್ಯತೆ ಹೊಂದಿರುವುದಿಲ್ಲ. ಆದರೆ, ಸಿದ್ಧ ಬ್ಯುಸಿನೆಸ್ ಮಾಡಲ್ನ ಅವಕಾಶವು ಎಲ್ಲಾ ತಂಡಗಳಿಗೆ ಇರುತ್ತದೆ. ಇದರಿಂದ ಐಪಿಎಲ್ನ ಪ್ರಾಮುಖ್ಯತೆ ಮುಂದುವರಿಯುತ್ತದೆ. ಫ್ರಾಂಚೈಸಿಗಳೂ ಕೂಡ ಸಂತುಷ್ಟವಾಗಿರುತ್ತವೆ.
(ಮಾಹಿತಿ ನೆರವು: Finfloww)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:19 pm, Tue, 8 April 25