ಅತಿರಥ ಮಹಾರಥರಿಗೆ ಸಾಧ್ಯವಾಗಿಲ್ಲ: ರಜತ್ ಪಾಟಿದಾರ್ ಬೆಸ್ಟ್ ಕ್ಯಾಪ್ಟನ್ ಎನ್ನಲು ಇಷ್ಟೇ ಸಾಕು
IPL 2025 MI vs RCB: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 10 ವರ್ಷಗಳ ಬಳಿಕ ಗೆಲುವು ದಾಖಲಿಸಿದೆ. ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಚೆಪಾಕ್ ಮೈದಾನದಲ್ಲಿ ಆರ್ಸಿಬಿ 17 ವರ್ಷಗಳ ವರ್ಷಗಳ ಗೆಲುವಿನ ರುಚಿ ನೋಡಿತ್ತು.

IPL 2025: ಕೊಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಜಯ, ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಗೆಲುವು, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ (MI) ವಿರುದ್ಧ ವಿಜಯ. ಈ ಮೂರು ಅಮೋಘ ಗೆಲುವುಗಳನ್ನು RCB ತಂಡದ ನಾಯಕ ರಜತ್ ಪಾಟಿದಾರ್ ಕೇವಲ 4 ಪಂದ್ಯಗಳಲ್ಲೇ ನೋಡಿದ್ದಾರೆ.
ವಿಶೇಷ ಎಂದರೆ ಇಂತಹದೊಂದು ಗೆಲುವುಗಳು ಐಪಿಎಲ್ನಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದ ಬಹುತೇಕರ ಪಾಲಿಗೆ ಮರೀಚಿಕೆಯಾಗಿತ್ತು. ಅದರಲ್ಲೂ ಯಶಸ್ವಿ ನಾಯಕರು ಎನಿಸಿಕೊಂಡ ಕೆಲ ಕ್ಯಾಪ್ಟನ್ಗಳು ಈ ಮೂರು ಸ್ಟೇಡಿಯಂನಲ್ಲಿ ಒಂದೇ ಸೀಸನ್ನಲ್ಲಿ ಗೆಲುವಿನ ರುಚಿ ನೋಡಿರಲಿಲ್ಲ ಎಂಬುದೇ ಸತ್ಯ.
- ಚೆಪಾಕ್ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಾಯಕರಾಗಿ ಕಾಣಿಸಿಕೊಂಡ ಸೌರವ್ ಗಂಗೂಲಿ, ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ಕುಮಾರ್ ಸಂಗಾಕ್ಕರ, ಶ್ರೇಯಸ್ ಅಯ್ಯರ್, ಡೇನಿಯಲ್ ವೆಟ್ಟೋರಿ ಹಾಗೂ ದಿನೇಶ್ ಕಾರ್ತಿಕ್ ಎಂದಿಗೂ ಗೆಲುವಿನ ನಗೆ ಬೀರಲಿಲಿಲ್ಲ.
- ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಡೇವಿಡ್ ವಾರ್ನರ್, ಜಾರ್ಜ್ ಬೈಲಿ, ರಾಹುಲ್ ದ್ರಾವಿಡ್, ಪ್ಯಾಟ್ ಕಮಿನ್ಸ್, ಫಾಫ್ ಡುಪ್ಲೆಸಿಸ್, ಝಹೀರ್ ಖಾನ್ ಹಾಗೂ ಕೆಎಲ್ ರಾಹುಲ್ ನಾಯಕತ್ವದಲ್ಲಿ ಕಣಕ್ಕಿಳಿದ ತಂಡಗಳು ಕೆಕೆಆರ್ ತಂಡವನ್ನು ಒಮ್ಮೆಯೂ ಮಣಿಸಿಲ್ಲ.
- ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಾಯಕರಾಗಿ ಕಾಣಿಸಿಕೊಂಡಿದ್ದ ಡೇವಿಡ್ ವಾರ್ನರ್, ರಿಷಭ್ ಪಂತ್, ಫಾಫ್ ಡುಪ್ಲೆಸಿಸ್, ದಿನೇಶ್ ಕಾರ್ತಿಕ್, ಆ್ಯಡಂ ಗಿಲ್‌ಕ್ರಿಸ್ಟ್, ರವಿಚಂದ್ರನ್ ಅಶ್ವಿನ್, ಪ್ಯಾಟ್ ಕಮ್ಮಿನ್ಸ್ ಒಮ್ಮೆಯೂ ಗೆಲುವಿನೊಂದಿಗೆ ಮರಳಿಲ್ಲ.
ಅಂದರೆ ಐಪಿಎಲ್ನಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದ ಬಹುತೇಕ ಕ್ಯಾಪ್ಟನ್ಗಳ ಪಾಲಿಗೆ ಮರೀಚಿಕೆಯಾಗಿದ್ದ ಗೆಲುವುಗಳನ್ನು ರಜತ್ ಪಾಟಿದಾರ್ ಮೊದಲ 4 ಪಂದ್ಯಗಳಲ್ಲೇ ನೋಡಿದ್ದಾರೆ. ಅದು ಸಹ ಐಪಿಎಲ್ನ 3 ಚಾಂಪಿಯನ್ಸ್ ತಂಡಗಳನ್ನು ಅವರದ್ದೇ ತವರು ಮೈದಾನದಲ್ಲಿ ಸೋಲಿಸುವ ಮೂಲಕ ಎಂಬುದು ವಿಶೇಷ.
ಈ ಗೆಲುವುಗಳೊಂದಿಗೆ ರಜತ್ ಪಾಟಿದಾರ್ ಐಪಿಎಲ್ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಹೊಸ ಅಧ್ಯಾಯ ಬರೆಯಲು ಹೊರಟ್ಟಿದ್ದಾರೆ. ಹೀಗಾಗಿ ಈ ಬಾರಿ ಆರ್ಸಿಬಿ ಕಡೆಯಿಂದ ಚೊಚ್ಚಲ ಟ್ರೋಫಿ ನಿರೀಕ್ಷಿಸಬಹುದು.
ಹ್ಯಾಟ್ರಿಕ್ ಸಾಧಕರು:
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದ ಒಂದೇ ಸೀಸನ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳನ್ನು ತವರಿನಲ್ಲಿ ಸೋಲಿಸಿದ ಏಕೈಕ ನಾಯಕ ಡೇವಿಡ್ ಹಸ್ಸಿ.
ಇದನ್ನೂ ಓದಿ: IPL 2025: ಗೆಲುವಿನ ಬೆನ್ನಲ್ಲೇ RCB ನಾಯಕ ರಜತ್ ಪಾಟಿದಾರ್ಗೆ ದಂಡ ವಿಧಿಸಿದ ಬಿಸಿಸಿಐ
2012 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ತಂಡವನ್ನು ಮುನ್ನಡೆಸಿದ್ದ ಹಸ್ಸಿ ಈ ಮೂರು ಬಲಿಷ್ಠ ತಂಡಗಳನ್ನು ಅವರದ್ದೇ ತವರಿನಲ್ಲಿ ಸೋಲಿಸಿ ಇತಿಹಾಸ ನಿರ್ಮಿಸಿದ್ದರು. ಇದೀಗ ಈ ಸಾಧನೆ ಮಾಡಿದ ಮೊದಲ ಭಾರತೀಯ ನಾಯಕನಾಗಿ ರಜತ್ ಪಾಟಿದಾರ್ ಹೊರಹೊಮ್ಮಿದ್ದಾರೆ.