ಸಾಲು ಸಾಲು ಲೇ ಆಫ್ಗಳು; ಬೆಂಗಳೂರಿನಲ್ಲಿ ಖಾಲಿ ಬೀಳುತ್ತಿರುವ ಪಿಜಿಗಳು
Rental market in Bengaluru shows less demand: ವಿವಿಧ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಟ್ರೆಂಡ್ ಮತ್ತೆ ಶುರುವಾಗಿದೆ. ಭಾರತದ ಸಿಲಿಕಾನ್ ಸಿಟಿ ಎನಿಸಿದ ಬೆಂಗಳೂರಿನಲ್ಲಿ ಸಾಕಷ್ಟು ಟೆಕ್ ಕಂಪನಿಗಳಿದ್ದು, ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಇದರ ಪರಿಣಾಮವಾಗಿ ಬೆಂಗಳೂರಿನ ಐಟಿ ವಲಯದ ಸುತ್ತಲಿನ ಪ್ರದೇಶಗಳಲ್ಲಿ ಭೂಮಿ ಬೆಲೆ ಕಡಿಮೆ ಆಗುತ್ತಿದೆ, ಪಿಜಿಗಳು ಖಾಲಿ ಬಿದ್ದಿವೆ ಎಂದು ವರದಿಯೊಂದು ಹೇಳುತ್ತಿದೆ.

ಬೆಂಗಳೂರು, ಮಾರ್ಚ್ 19: ಟೆಕ್ ಉದ್ಯಮ ವಲಯದಲ್ಲಿ ಮತ್ತೆ ಲೇ ಆಫ್ ಟ್ರೆಂಡ್ ಶುರುವಾಗಿದೆ. ಸಾಲು ಸಾಲಾಗಿ ಟೆಕ್ ಕಂಪನಿಗಳು ಉದ್ಯೋಗಿಗಳ ಸಂಖ್ಯೆ ಇಳಿಸುತ್ತಾ ಹೋಗುತ್ತಿವೆ. ಇದರ ಬೆನ್ನಲ್ಲೇ ಬೆಂಗಳೂರಿನ ರೆಂಟಲ್ ಮಾರುಕಟ್ಟೆ ಮತ್ತು ರಿಯಲ್ ಎಸ್ಟೇಟ್ ಮಾರುಕಟ್ಟೆ ಕಂಗಾಲಾಗಿ ಹೋಗಿದೆ. ಐಟಿ ವಲಯಗಳಿರುವ ಪ್ರದೇಶಗಳಲ್ಲಿ ಸಾಕಷ್ಟು ಪಿಜಿಗಳು (Paying Guests) ಖಾಲಿ ಬಿದ್ದಿವೆ. ಹಲವೆಡೆ ನಿವೇಶನ ಮತ್ತು ಮನೆಗಳ ಬೆಲೆ ಕುಸಿಯುತ್ತಿರುವುದು ಕಂಡು ಬಂದಿದೆ ಎಂದು ವರದಿಯೊಂದು ಹೇಳಿದೆ.
ಫ್ಯಾಮಿಲಿ ಇಲ್ಲದೇ ಒಂಟಿಯಾಗಿ ಹೊಸ ನಗರಕ್ಕೆ ಬರುವ ವ್ಯಕ್ತಿಗಳಿಗೆ ಸುಲಭ ಆಯ್ಕೆ ಪಿಜಿ ಅಥವಾ ಪೇಯಿಂಗ್ ಗೆಸ್ಟ್. ಸಾಮಾನ್ಯವಾಗಿ ಕಿರಿಯ ಸ್ತರದ ಉದ್ಯೋಗಿಗಳು ಪಿಜಿಗಳನ್ನು ಆಯ್ಕೆ ಮಾಡಿಕೊಳ್ಳುವುದುಂಟು. ಬೆಂಗಳೂರಿನಲ್ಲೂ ಹಲವು ಕಂಪನಿಗಳು ಲೇ ಆಫ್ ಮಾಡುತ್ತಿರುವುದು ಹೆಚ್ಚಾಗಿದೆ. ಇದರ ಪರಿಣಾಮವಾಗಿ ಖಾಲಿ ಉಳಿದಿರುವ ಪಿಜಿಗಳ ಸಂಖ್ಯೆಯೂ ಹೆಚ್ಚುತ್ತಿದೆ.
ಇದನ್ನೂ ಓದಿ: ಬ್ಯಾಂಕ್ ಮತ್ತು ರಿಯಲ್ ಎಸ್ಟೇಟ್ ಉದ್ಯಮ ಸೇರಿ ಜನರಿಗೆ ಉಂಡೆ ನಾಮ? ಸಿಬಿಐಗೆ ತನಿಖೆ ವಹಿಸಲು ಸುಪ್ರೀಂಕೋರ್ಟ್ ನಿರ್ಧಾರ
‘ಟೆಕ್ ಕಂಪನಿಗಳ ಲೇ ಆಫ್ ಕ್ರಮದ ಪರಿಣಾಮ ಈಗಾಗಲೇ ಬೆಂಗಳೂರಿನ ರೆಂಟಲ್ ಮಾರುಕಟ್ಟೆಯ ಮೇಲಾಗುತ್ತಿರುವುದು ಗೋಚರವಾಗುತ್ತಿದೆ. ಜೂನಿಯರ್ ಐಟಿ ಉದ್ಯೋಗಿಗಳಿಂದ ತುಂಬಿ ತುಳುಕುತ್ತಿದ್ದ ಪಿಜಿಗಳಿಗೆ ಈಗ ಬೇಡಿಕೆ ಕಡಿಮೆ ಆಗಿದೆ. ಔಟರ್ ರಿಂಗ್ ರೋಡ್ನಂತಹ ಟೆಕ್ ಪ್ರದೇಶಗಳಲ್ಲಿ ಮನೆ ಬಾಡಿಗೆ ದರ ಕುಸಿದಿದೆ. ಭೂಮಿ ಬೆಲೆಯೂ ತಗ್ಗಿದೆ. ಹೂಡಿಕೆಗೆಂದು ಇಲ್ಲಿ ನಿವೇಶನಗಳನ್ನು ಖರೀದಿಸಿದವರು ಆತಂಕಗೊಂಡಿದ್ದಾರೆ’ ಎಂದು ಮಾಧ್ಯಮವೊಂದರಲ್ಲಿ ಪ್ರಕಟವಾದ ವರದಿಯಲ್ಲಿ ಹೇಳಲಾಗಿದೆ.
2024-25ರ ಹಣಕಾಸು ವರ್ಷದಲ್ಲಿ 87 ಟೆಕ್ ಕಂಪನಿಗಳು 23,054 ಉದ್ಯೋಗಿಗಳನ್ನು ಲೇ ಆಫ್ ಮಾಡಿವೆ. 2023-24ರಲ್ಲಿ ಒಂದೂವರೆ ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು. ಅದಕ್ಕೂ ಹಿಂದಿನ ವರ್ಷದಲ್ಲಿ ಎರಡೂವೆಎ ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಲೇ ಆಫ್ ಮಾಡಲಾಗಿತ್ತು. ಕೋವಿಡ್ ಬಳಿಕ ಜಾಗತಿಕವಾಗಿ ಕಂಪನಿಗಳಿಂದ ಲೇ ಆಫ್ ಪ್ರವೃತ್ತಿ ಹೆಚ್ಚಾಗಿ ಹೋಗಿದೆ.
ಇದನ್ನೂ ಓದಿ: ಫ್ಯಾಮಿಲಿ ಪೆನ್ಷನ್ ನೀತಿಯಲ್ಲಿ ಸುಧಾರಣೆ; ವಿಚ್ಛೇದಿತೆಯರು, ವಿಧವೆಯರು, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ
ಅಮೇಜಾನ್, ಫೇಸ್ಬುಕ್, ಮೆಟಾ ಇತ್ಯಾದಿ ಹಲವು ಟೆಕ ಕಂಪನಿಗಳು ತಮ್ಮ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದವು. ಈಗ ಎಐ ಅಡಿ ಇಟ್ಟ ಬಳಿಕ ಲೇ ಆಫ್ ಆತಂಕ ಮತ್ತಷ್ಟು ಹೆಚ್ಚಾಗಿದೆ. ಕಳೆದ ವರ್ಷ 18,000 ಉದ್ಯೋಗಿಗಳನ್ನು ಲೇ ಆಫ್ ಮಾಡಿದ್ದ ಅಮೇಜಾನ್ ಇದೀಗ 14,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಾಗಿ ಘೋಷಿಸಿದೆ. ಬೆಂಗಳೂರಿನ ಕಚೇರಿಯಲ್ಲೂ ಹಲವು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಮ್ಯಾನೇಜರ್ ಸ್ತರದ ಉದ್ಯೋಗಿಗಳಲ್ಲಿ ಆತಂಕ ಶುರುವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ