ಅಮೆರಿಕದಲ್ಲಿ ಬಡ್ಡಿದರ ಯಥಾಸ್ಥಿತಿ; 2025ರೊಳಗೆ 50 ಮೂಲಾಂಕಗಳಷ್ಟು ದರ ಕಡಿತಕ್ಕೆ ಇಂಗಿತ
US Fed Rates remains 4.25-5.50pc in 2025 March: ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಿನ ಮಟ್ಟದಲ್ಲಿ ಇರುವ ಹಿನ್ನೆಲೆಯಲ್ಲಿ ಬಡ್ಡಿದರ ಕಡಿತಗೊಳಿಸುವ ಸಾಹಸಕ್ಕೆ ಕೈಹಾಕಲಾಗಿಲ್ಲ. ಫೆಡರ್ ರಿಸರ್ವ್ಸ್ ಛೇರ್ಮನ್ ಜಿರೋಮ್ ಪೋವೆಲ್ ನೇತೃತ್ವದ ಎಫ್ಒಎಂಸಿ ಸಭೆಯಲ್ಲಿ, ಬಡ್ಡಿದರ ಯಥಾಸ್ಥಿತಿ ಮುಂದುವರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ, ಈ ಕ್ಯಾಲಂಡರ್ ವರ್ಷದೊಳಗೆ 50 ಮೂಲಾಂಕಗಳಷ್ಟು ಬಡ್ಡಿದರ ಕಡಿತ ಮಾಡಲಿರುವ ಸುಳಿವನ್ನು ನೀಡಲಾಗಿದೆ.

ನವದೆಹಲಿ, ಮಾರ್ಚ್ 20: ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ (US Federal Reserve) ತನ್ನ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ. ಹೊಸ ಸರ್ಕಾರದ ವಿವಾದಾತ್ಮಕ ಆಮದು ಸುಂಕ ನೀತಿಯಿಂದಾಗಿ ಫೆಡರಲ್ ರಿಸರ್ವ್ ನಿರ್ಧಾರದ ಬಗ್ಗೆ ಸಾಕಷ್ಟು ಕುತೂಹಲ ಇತ್ತು. ಆದರೆ, ಅಂತಿಮವಾಗಿ ಶೇ. 4.25ರಿಂದ ಶೇ. 4.50ರ ಶ್ರೇಣಿಯಲ್ಲಿ ಬಡ್ಡಿದರ ಮುಂದುವರಿಸಲು ನಿಶ್ಚಯಿಸಲಾಗಿದೆ. ಮಾರುಕಟ್ಟೆ ಕೂಡ ಇದೇ ನಿರ್ಧಾರವನ್ನು ಅಪೇಕ್ಷಿಸಿತ್ತು ಮತ್ತು ನಿರೀಕ್ಷಿಸಿತ್ತು. ಎರಡು ದಿನಗಳ ಕಾಲ ಫೆಡರಲ್ ರಿಸರ್ವ್ ಸಭೆ (FOMC meeting) ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅದರ ಛೇರ್ಮನ್ ಜಿರೋಮ್ ಪೋವೆಲ್, ತಾವು ದೇಶದ ಆರ್ಥಿಕ ಚಟುವಟಿಕೆಯನ್ನು ಪರಾಮರ್ಶಿಸಿದ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ತಿಳಿಸಿದರು.
ಹಣದುಬ್ಬರದ ಸಮಸ್ಯೆ ಇರದಿದ್ದರೆ ದರ ಕಡಿತ ಸಾಧ್ಯತೆ ಇತ್ತು
ಅಮೆರಿಕದಲ್ಲಿ ಹಣದುಬ್ಬರ ಶೇ. 2ರಷ್ಟು ಇರಬೇಕೆಂದು ಗುರಿ ಇಡಲಾಗಿದೆ. ಆದರೆ, ಈ ಮಟ್ಟಕ್ಕಿಂತ ದರ ಹೆಚ್ಚಿದೆ. ಆಮದು ಸುಂಕ ನೀತಿಯು ಹಣದುಬ್ಬರವನ್ನು ಮೇಲ್ಮುಖಕ್ಕೆ ನೂಕುತ್ತಿದೆ. ಈ ಅಂಶಗಳನ್ನು ಫೆಡರಲ್ ರಿಸರ್ವ್ನ ಮಾನಿಟರಿ ಕಮಿಟಿ ಸಭೆಯಲ್ಲಿ ಪರಿಗಣಿಸಲಾಯಿತು. ಹಣದುಬ್ಬರ ನಿರೀಕ್ಷಿತ ರೀತಿಯಲ್ಲಿ ನಿಯಂತ್ರಣದಲ್ಲಿದ್ದಿದ್ದರೆ ಈ ಬಾರಿಯೂ ಬಡ್ಡಿದರ ಕಡಿಮೆಗೊಳಿಸುವ ಸಾಧ್ಯತೆ ಇತ್ತು. ಆದರೆ, ಅಂತಿಮವಾಗಿ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರಕ್ಕೆ ಬರಲಾಯಿತು.
ಈ ವರ್ಷ 50 ಮೂಲಾಂಕಗಳಷ್ಟು ದರ ಕಡಿತ
ಎಫ್ಒಎಂಸಿ ಸಭೆಯಲ್ಲಿ ಬಂದ ಮತ್ತೊಂದು ಮಹತ್ವದ ಸಂಗತಿ ಎಂದರೆ, ಈ ವರ್ಷ 50 ಮೂಲಾಂಕಗಳಷ್ಟು ಬಡ್ಡಿದರ ಕಡಿತ ಮಾಡಲು ಇಂಗಿತ ವ್ಯಕ್ತವಾಗಿದೆ. 2025ರ ಡಿಸೆಂಬರ್ನೊಳಗೆ ಎರಡು ಬಾರಿ ದರ ಕಡಿತಗೊಳಿಸಬಹುದು. ಈಗ ಶೇ. 4.25-4.50ರ ಶ್ರೇಣಿಯಲ್ಲಿರುವ ಬಡ್ಡಿದರ 2025ರ ಡಿಸೆಂಬರ್ನಲ್ಲಿ ಶೇ. 3.75-4.0ರಷ್ಟಾಗಬಹುದು.
ಇದನ್ನೂ ಓದಿ: ಫ್ಯಾಮಿಲಿ ಪೆನ್ಷನ್ ನೀತಿಯಲ್ಲಿ ಸುಧಾರಣೆ; ವಿಚ್ಛೇದಿತೆಯರು, ವಿಧವೆಯರು, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ
ಕೋವಿಡ್ ಬಳಿಕ ಅಮೆರಿಕದಲ್ಲಿ ಹಣದುಬ್ಬರ ದರ ಶೇ. 7ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿತ್ತು. ಅದನ್ನು ನಿಯಂತ್ರಿಸಲು ಫೆಡರಲ್ ರಿಸರ್ವ್ ಸತತವಾಗಿ ಬಡ್ಡಿದರ ಹೆಚ್ಚಿಸಿತ್ತು. ಶೇ. 5.25-5.50ರಷ್ಟು ಬಡ್ಡಿದ ಇತ್ತು. ನಾಲ್ಕು ವರ್ಷದ ಬಳಿಕ 2024ರ ಸೆಪ್ಟೆಂಬರ್್ನಲ್ಲಿ ಮೊದಲ ರೇಟ್ ಕಟ್ ನಿರ್ಧಾರ ತೆಗೆದುಕೊಳ್ಳಲಾಯಿತು. ಸತತ ಮೂರು ಬಾರಿ ದರ ಕಡಿತ ಮಾಡಲಾಯಿತು. ಸೆಪ್ಟೆಂಬರ್ನಲ್ಲಿ 50, ನವೆಂಬರ್ನಲ್ಲಿ 25, ಮತ್ತು ಡಿಸೆಂಬರ್ನಲ್ಲಿ 25 ಮೂಲಾಂಕಗಳಷ್ಟು ಬಡ್ಡಿದರ ಕಡಿಮೆಗೊಳಿಸಲಾಯಿತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:13 am, Thu, 20 March 25