Trade Deficit: ಭಾರತದ ಟ್ರೇಡ್ ಡೆಫಿಸಿಟ್ನಲ್ಲಿ ಗಣನೀಯ ಇಳಿಕೆ; ನಾಲ್ಕು ವರ್ಷದ ಕನಿಷ್ಠ ಮಟ್ಟ
India's merchandise trade deficit in 2025 February: ಭಾರತದ ಸರಕು ಆಮದು ಮತ್ತು ರಫ್ತು ನಡುವಿನ ಅಂತರ ಫೆಬ್ರುವರಿಯಲ್ಲಿ ಗಣನೀಯವಾಗಿ ಕಡಿಮೆ ಆಗಿದೆ. 19.51 ಬಿಲಿಯನ್ ಡಾಲರ್ನಷ್ಟಿದ್ದ ಅಂತರ 14.05 ಬಿಲಿಯನ್ ಡಾಲರ್ಗೆ ಇಳಿದಿದೆ. ಚಿನ್ನ ಮತ್ತು ಕಚ್ಛಾ ತೈಲದ ಆಮದು ಕಡಿಮೆ ಆಗಿದ್ದು ಈ ಅಂತರ ತಗ್ಗಲು ಕಾರಣವಾಗಿದೆ. ಸರಕು ಜೊತೆ ಸೇವಾ ವಲಯದ ಟ್ರೇಡಿಂಗ್ ಪರಿಗಣಿಸಿದರೆ, ಭಾರತದ ರಫ್ತು ಅದರ ಆಮದಿಗಿಂತ ಹೆಚ್ಚೇ ಇದೆ.

ನವದೆಹಲಿ, ಮಾರ್ಚ್ 17: ಭಾರತದ ಸರಕು ವ್ಯಾಪಾರ ಅಂತರ (Merchandise trade deficit) ಫೆಬ್ರುವರಿಯಲ್ಲಿ 14.05 ಬಿಲಿಯನ್ ಡಾಲರ್ಗೆ ಇಳಿಕೆ ಆಗಿದೆ. ಜನವರಿಯಲ್ಲಿ 23 ಬಿಲಿಯನ್ ಡಾಲರ್ನಷ್ಟು ಟ್ರೇಡ್ ಡೆಫಿಸಿಟ್ ಇತ್ತು. ಹಿಂದಿನ ವರ್ಷದ (2024) ಫೆಬ್ರುವರಿಯಲ್ಲಿ ಟ್ರೇಡ್ ಡೆಫಿಸಿಟ್ 19.51 ಬಿಲಿಯನ್ ಡಾಲರ್ ಇತ್ತು. ಮಾಸಿಕವಾಗಿಯೂ ಮತ್ತು ವಾರ್ಷಿಕವಾಗಿಯೂ ವ್ಯಾಪಾರ ಅಂತರ ಸಾಕಷ್ಟು ಕಡಿಮೆ ಆಗಿದೆ. 2021ರ ಆಗಸ್ಟ್ ಬಳಿಕ ಭಾರತದ ಕನಿಷ್ಠ ವ್ಯಾಪಾರ ಅಂತರ ಇದಾಗಿದೆ.
ಟ್ರೇಡ್ ಡೆಫಿಸಿಟ್ ಎಂದರೇನು?
ಮರ್ಚಾಂಡೈಸ್ ಟ್ರೇಡಿಂಗ್ನಲ್ಲಿ ಆಮದು ಮತ್ತು ರಫ್ತು ನಡುವಿನ ಅಂತರವೇ ಟ್ರೇಡ್ ಡೆಫಿಸಿಟ್. ರಫ್ತಿಗಿಂತ ಆಮದು ಹೆಚ್ಚಾದರೆ ಅದು ಟ್ರೇಡ್ ಡೆಫಿಸಿಟ್. ಆಮದಿಗಿಂತ ರಫ್ತು ಹೆಚ್ಚಾದರೆ ಅದು ಟ್ರೇಡ್ ಸರ್ಪ್ಲಸ್.
2025ರ ಫೆಬ್ರುವರಿಯಲ್ಲಿ ಟ್ರೇಡ್ ಡೆಫಿಸಿಟ್ ಕಡಿಮೆ ಆಗಲು ಪ್ರಮುಖ ಕಾರಣ ಎಂದರೆ ಆಮದುಗಳ ಪ್ರಮಾಣ ಕಡಿಮೆ ಆಗಿದ್ದು, ಮತ್ತು ರಫ್ತಿನಲ್ಲಿ ಇಳಿಕೆ ಆಗದೇ ಇದ್ದದ್ದು.
ಇದನ್ನೂ ಓದಿ: ಫೆಬ್ರುವರಿಯಲ್ಲಿ ಹೋಲ್ಸೇಲ್ ಹಣದುಬ್ಬರ ಶೇ. 2.38; ಜನವರಿಗೆ ಹೋಲಿಸಿದರೆ ಅಲ್ಪ ಹೆಚ್ಚಳ
ಫೆಬ್ರುವರಿ ತಿಂಗಳಲ್ಲಿ ಭಾರತದಿಂದ 36.91 ಬಿಲಿಯನ್ ಡಾಲರ್ನಷ್ಟು ಸರಕುಗಳ ರಫ್ತಾಗಿತ್ತು. ಜನವರಿಯಲ್ಲಿ ಇದರ ಪ್ರಮಾಣ 36.43 ಬಿಲಿಯನ್ ಡಾಲರ್ ಇತ್ತು.
ಇನ್ನು, ಜನವರಿಯಲ್ಲಿ 59.42 ಬಿಲಿಯನ್ ಡಾಲರ್ ಇದ್ದ ಆಮದು ಪ್ರಮಾಣ ಫೆಬ್ರುವರಿಯಲ್ಲಿ 50.96 ಬಿಲಿಯನ್ ಡಾಲರ್ಗೆ ಇಳಿಕೆ ಆಗಿದೆ. ಹೀಗಾಗಿ, 23 ಬಿಲಿಯನ್ ಡಾಲರ್ ಇದ್ದ ಟ್ರೇಡ್ ಡೆಫಿಸಿಟ್ 14 ಬಿಲಿಯನ್ ಡಾಲರ್ಗೆ ಇಳಿದಿದೆ.
ಚಿನ್ನ ಮತ್ತು ಕಚ್ಛಾ ತೈಲಗಳ ಆಮದು ಇಳಿಕೆ
ಪ್ರಮುಖ ಸರಕುಗಳ ಆಮದು ಫೆಬ್ರುವರಿಯಲ್ಲಿ ಗಣನೀಯವಾಗಿ ಇಳಿಕೆ ಆಗಿದ್ದು, ಒಟ್ಟಾರೆ ಟ್ರೇಡ್ ಡೆಫಿಸಿಟ್ ಕಡಿಮೆ ಆಗಲು ಸಹಾಯಕವಾಗಿದೆ. ಜನವರಿಯಲ್ಲಿ 2.68 ಬಿಲಿಯನ್ ಡಾಲರ್ನಷ್ಟು ಇದ್ದ ಚಿನ್ನದ ಆಮದು ಫೆಬ್ರುವರಿಯಲ್ಲಿ 2.3 ಬಿಲಿಯನ್ ಡಾಲರ್ಗೆ ಇಳಿದಿದೆ. ಕಚ್ಛಾ ತೈಲದ ಆಮದು 13.4 ಬಿಲಿಯನ್ ಡಾಲರ್ನಿಂದ 11.8 ಬಿಲಿಯನ್ ಡಾಲರ್ಗೆ ಇಳಿದಿದೆ.
ಇದನ್ನೂ ಓದಿ: Forex Reserves: 654 ಬಿಲಿಯನ್ ಡಾಲರ್ ಮುಟ್ಟಿದ ಫಾರೆಕ್ಸ್ ರಿಸರ್ವ್ಸ್; ಎರಡು ವರ್ಷದಲ್ಲೇ ಅತಿಹೆಚ್ಚು ಏರಿಕೆ
ಸರ್ವಿಸ್ ಸೆಕ್ಟರ್ನಲ್ಲಿ ಎಷ್ಟಿದೆ ರಫ್ತು, ಅಮದು
ಭಾರತದ ಸೇವಾ ವಲಯವು ಆಮದಿಗಿಂತ ರಫ್ತು ಹೆಚ್ಚು ಮಾಡುತ್ತದೆ. ಹೀಗಾಗಿ, ಅದು ಟ್ರೇಡ್ ಸರ್ಪ್ಲಸ್ ಎನಿಸಿದೆ. ಫೆಬ್ರುವರಿಯಲ್ಲಿ ಸರ್ವಿಸ್ ಸೆಕ್ಟರ್ನಿಂದ ಆದ ರಫ್ತು 35.03 ಬಿಲಿಯನ್ ಡಾಲರ್. ಇನ್ನು ಆಮದು 16.55 ಬಿಲಿಯನ್ ಡಾಲರ್ ಇದೆ. ವ್ಯಾಪಾರ ಅಂತರ 18.50 ಬಿಲಿಯನ್ ಡಾಲರ್ನಷ್ಟಿದೆ. ಜನವರಿ ತಿಂಗಳಲ್ಲಿ 20.30 ಬಿಲಿಯನ್ ಡಾಲರ್ನಷ್ಟು ಟ್ರೇಡ್ ಸರ್ಪ್ಲಸ್ ಇತ್ತು.
ಸರಕು ಮತ್ತು ಸೇವಾ ವಲಯದ ರಫ್ತು ಮತ್ತು ಆಮದುಗಳನ್ನು ಪರಿಗಣಿಸಿದರೆ, ಭಾರತದ ರಫ್ತು ಅದರ ಆಮದಿಗಿಂತ ಹೆಚ್ಚೇ ಇದೆ. ಅಂದಾಜು 4.43 ಬಿಲಿಯನ್ ಡಾಲರ್ನಷ್ಟು ಅಂತವನ್ನು ಫೆಬ್ರುವರಿಯಲ್ಲಿ ಕಾಣಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ