ಬ್ಯಾಂಕ್ ಮತ್ತು ರಿಯಲ್ ಎಸ್ಟೇಟ್ ಉದ್ಯಮ ಸೇರಿ ಜನರಿಗೆ ಉಂಡೆ ನಾಮ? ಸಿಬಿಐಗೆ ತನಿಖೆ ವಹಿಸಲು ಸುಪ್ರೀಂಕೋರ್ಟ್ ನಿರ್ಧಾರ
Supreme Court wants CBI to investigate real estate builder and bank nexus: ರಿಯಲ್ ಎಸ್ಟೇಟ್ ಡೆವಲಪರ್ಗಳು ಸರಿಯಾದ ಸಮಯಕ್ಕೆ ಪ್ರಾಜೆಕ್ಟ್ ಪೂರ್ಣಗೊಳಿಸದೆ ಗ್ರಾಹಕರಿಗೆ ವಂಚನೆ ಎಸಗುತ್ತಿರುವ ಪ್ರಕರಣಗಳು ಹಲವು ಬೆಳಕಿಗೆ ಬಂದಿವೆ. ಪ್ರಾಜೆಕ್ಟ್ಗಳನ್ನು ಪರಿಶೀಲನೆ ಮಾಡದೆಯೇ ರಿಯಲ್ ಎಸ್ಟೇಟ್ ಡೆವಲಪರ್ಗಳಿಗೆ ಬ್ಯಾಂಕುಗಳು ಸಾಲ ನೀಡುತ್ತಿವೆ. ಈ ಹಣವನ್ನು ಡೆವಲಪರ್ಗಳು ಬೇರೆಡೆ ವರ್ಗಾಯಿಸಿ ಪ್ರಾಜೆಟ್ಗಳನ್ನು ಪೂರ್ಣಗೊಳಿಸುತ್ತಿಲ್ಲ. ಈ ಮಾಫಿಯಾ ವಿರುದ್ಧ ಸಿಬಿಐ ತನಿಖೆ ಆಗಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

ನವದೆಹಲಿ, ಮಾರ್ಚ್ 19: ಸ್ವಂತ ಮನೆಯ ಕನಸಿನೊಂದಿಗೆ ಬ್ಯುಲ್ಡರ್ಗಳ (Real estate developers) ಬಳಿ ಮನೆ ಬುಕಿಂಗ್ ಮಾಡಿದ ಅದೆಷ್ಟೋ ಜನರು ಅದೆಷ್ಟೋ ವರ್ಷವಾದರೂ ಸೂರು ದಕ್ಕುವುದೇ ಇಲ್ಲ. ಇಂಥ ಬಹಳಷ್ಟು ಪ್ರಕರಣಗಳು ಪ್ರಮುಖ ನಗರಗಳಲ್ಲಿ ಸಾಮಾನ್ಯವಾಗಿ ಹೋಗಿದೆ. ಸುಪ್ರೀಂಕೋರ್ಟ್ ಈ ಪ್ರಕರಣಗಳ ಬಗ್ಗೆ ಗಂಭೀರವಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಬ್ಯಾಂಕುಗಳ ಮಧ್ಯೆ ಅಪಮೈತ್ರಿ ಮಾಡಿಕೊಂಡು ಜನಸಾಮಾನ್ಯರನ್ನು ವಂಚಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಬ್ಯಾಂಕ್ ಮತ್ತು ರಿಯಲ್ ಎಸ್ಟೇಟ್ ಮಾಫಿಯಾ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ಕರೆ ನೀಡಿದೆ. ಈ ಪ್ರಕರಣಗಳನ್ನು ಯಾವ ರೀತಿಯಲ್ಲಿ ತನಿಖೆ ನಡೆಸುತ್ತೀರಿ ಎಂದು ಎರಡು ವಾರದೊಳಗೆ ತಮಗೆ ಒಂದು ವರದಿ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿರುವ ಸುಪ್ರೀಂಕೋರ್ಟ್ ನ್ಯಾಯಪೀಠವು ಸಿಬಿಐಗೆ ಆದೇಶಿಸಿದೆ.
‘ಸಿಬಿಐಗೆ ತನಿಖೆ ವಹಿಸಬೇಕೆನ್ನುವ ನಮ್ಮ ನಿಲುವು ಸ್ಪಷ್ಟ ಇದೆ. ಸಾವಿರಾರು ಜನರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಅವರ ಕಣ್ಣೀರು ಒರೆಸಲು ನಮಗೆ ಆಗದು. ಆದರೂ ಕೂಡ ಅವರ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಯತ್ನಿಸಬಹುದು’ ಎಂದು ಸುಪ್ರೀಂ ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ: ಫ್ಯಾಮಿಲಿ ಪೆನ್ಷನ್ ನೀತಿಯಲ್ಲಿ ಸುಧಾರಣೆ; ವಿಚ್ಛೇದಿತೆಯರು, ವಿಧವೆಯರು, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ
ರಿಯಲ್ ಎಸ್ಟೇಟ್ ಪ್ರಾಜೆಕ್ಟ್ಗಳನ್ನು ಸರಿಯಾಗಿ ಪರಿಶೀಲನೆ ಮಾಡದೆಯೇ, ನಿಯಮಗಳನ್ನು ಗಾಳಿಗೆ ತೂರಿ ಬ್ಯಾಂಕುಗಳು ಸಾಲ ನೀಡುತ್ತವೆ. ಬ್ಯುಲ್ಡರ್ಗಳು ಈ ಸಾಲದ ಹಣವನ್ನು ಬೇರೆಲ್ಲಿಗೋ ವರ್ಗಾಯಿಸಿಕೊಂಡು ರಿಯಲ್ ಎಸ್ಟೇಟ್ ಪ್ರಾಜೆಟ್ಗಳನ್ನು ವಿಳಂಬಗೊಳಿಸುತ್ತಲೇ ಹೋಗುತ್ತಾರೆ. ಆದರೆ, ಮನೆ ಬರುತ್ತದೆಂಬ ಆಸೆಯಿಂದ ಜನರು ಇಎಂಐ ಕಟ್ಟುವುದು ಮಾತ್ರ ತಪ್ಪುವುದಿಲ್ಲ. ಹಲವು ಪ್ರಕರಣಗಳಲ್ಲಿ ಮನೆ ಎಷ್ಟು ವರ್ಷವಾದರೂ ನಿರ್ಮಾಣವಾಗಿರುವುದೇ ಇಲ್ಲ. ಈ ಅಂಶಗಳನ್ನು ಸುಪ್ರೀಂಕೋರ್ಟ್ ಇಂದಿನ ವಿಚಾರಣೆ ವೇಳೆ ಎತ್ತಿ ತೋರಿಸಿತು.
ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಈ ರೀತಿಯ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ರಿಯಲ್ ಎಸ್ಟೇಟ್ ನಿಯಂತ್ರಕ ಸಂಸ್ಥೆಯಾದ ರೇರಾ ಪ್ರಾಧಿಕಾರಕ್ಕೆ ಅಸಂಖ್ಯ ದೂರುಗಳು ದಾಖಲಾಗಿವೆ. ಪ್ರಾಜೆಕ್ಟ್ಗಳು ವಿಳಂಬವಾಗಿರುವುದು, ಹಣಕಾಸು ಅವ್ಯವಹಾರ ಆಗಿರುವುದು ಇತ್ಯಾದಿ ದೂರುಗಳು ಹಲವು ರಿಯಲ್ ಎಸ್ಟೇಟ್ ಡೆವಲಪರ್ಗಳ ವಿರುದ್ಧ ದಾಖಲಾಗಿವೆ.
ಇದನ್ನೂ ಓದಿ: ಷೇರು ಟಿಪ್ಸ್; ಸಮಯ ಬಂದಾಗ ಮಾರಿಬಿಡಿ; ಕಂಪನಿ ಚೆನ್ನಾಗಿದೆ ಅಂತ ಕೊನೆ ತನಕ ಇಟ್ಕೋಬೇಡಿ
ಬೆಂಗಳೂರಿನಲ್ಲಿ ಒಂದೇ ನಿವೇಶನವನ್ನು ಹಲವು ಮಂದಿಗೆ ಮಾರಿರುವ ಘಟನೆಗಳು ಹೇರಳ ಉಂಟು. ನಕಲಿ ದಾಖಲೆಗಳನ್ನು ಸೃಷ್ಟಿಸುವ ಜಾಲಗಳೇ ಇವೆ. 2016ರಲ್ಲಿ ಬೆಂಗಳೂರಿನಲ್ಲಿ ಇಂಥ 400 ಕೋಟಿ ಹಗರಣ ಬೆಳಕಿಗೆ ಬಂದಿತ್ತು.
ಇದೀಗ ಸುಪ್ರೀಂಕೋರ್ಟ್ ರಿಯಲ್ ಎಸ್ಟೇಟ್ ಮಾಫಿಯಾಗೆ ಕೊಕ್ಕೆ ಹಾಕಲು ಸಿಬಿಐ ಕುಣಿಕೆ ತಯಾರಿಸುತ್ತಿದೆ. ಇದರಿಂದ ಈ ಉದ್ಯಮದಲ್ಲಿ ಒಂದಷ್ಟು ಪಾರದರ್ಶಕತೆ ನಿರ್ಮಾಣವಾಗಬಹುದಾ ಎನ್ನುವ ನಿರೀಕ್ಷೆ ಇಟ್ಟುಕೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:20 pm, Wed, 19 March 25