
ನವದೆಹಲಿ, ಮೇ 5: ಜಾಗತಿಕ ಆರ್ಥಿಕ ಮಾರುಕಟ್ಟೆಯಲ್ಲಿ (Stock Market) ಭಾರತದ ಹವಾ ಜೋರಾಗಿದೆ. ಜಾಗತಿಕ ಹೂಡಿಕೆಯನ್ನು ಆಕರ್ಷಿಸುವ ರೇಸ್‌ನಲ್ಲಿ ಭಾರತವು ತನ್ನ ನೆರೆಯ ಬಲಿಷ್ಠ ದೇಶವಾದ ಚೀನಾವನ್ನು ಹಿಂದಿಕ್ಕಿ ಭಾರಿ ಪ್ರಮಾಣದ ವಿದೇಶಿ ಬಂಡವಾಳವನ್ನು ತನ್ನತ್ತ ಸೆಳೆಯುತ್ತಿದೆ ಎಂದು ಇತ್ತೀಚಿನ ಆರ್ಥಿಕ ವರದಿಗಳು ತಿಳಿಸಿವೆ. ಮಾರ್ಚ್ ತಿಂಗಳಿನ ಕುಸಿತದ ನಂತರ ಏಪ್ರಿಲ್‌ನಲ್ಲಿ ಜಾಗತಿಕ ಮಾರುಕಟ್ಟೆಗಳು ಚೇತರಿಸಿಕೊಂಡಿದ್ದು, ಹೂಡಿಕೆದಾರರು ಚೀನಾಕ್ಕಿಂತ ಭಾರತದ ಮಾರುಕಟ್ಟೆಯ ಮೇಲೆಯೇ ಹೆಚ್ಚು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಹೀಗೆಂದು ಕ್ವಾಂಟ್ ಮ್ಯೂಚುವಲ್ ಫಂಡ್‌ನ ವಿಶ್ಲೇಷಣಾ ವರದಿಯಲ್ಲಿ ಹೇಳಲಾಗಿದೆ.
ವರದಿಯ ಪ್ರಕಾರ, ಭಾರತದ ನಾಮಮಾತ್ರದ ಜಿಡಿಪಿ (Nominal GDP) ಬೆಳವಣಿಗೆಯು ಚೀನಾ ದೇಶಕ್ಕಿಂತ ಹೆಚ್ಚಿನ ವೇಗದಲ್ಲಿ ಮುನ್ನುಗ್ಗುತ್ತಿದೆ. ಇದು ಜಾಗತಿಕ ಹೂಡಿಕೆದಾರರನ್ನು ಭಾರತದ ಕಡೆಗೆ ಆಕರ್ಷಿಸಲು ಪ್ರಮುಖ ಕಾರಣವಾಗಿದೆ. ಏಪ್ರಿಲ್‌ನಲ್ಲಿ ಅಮೆರಿಕದ ಷೇರು ಮಾರುಕಟ್ಟೆ ಶೇ. 9 ರಷ್ಟು ಬೆಳವಣಿಗೆ ಕಂಡಿತು. ಈ ವೇಳೆ ಭಾರತದ ನಿಫ್ಟಿ (Nifty) ಶೇ. 6.7 ರಷ್ಟು ಬೆಳೆದಿದೆ. ಅಮೆರಿಕದ ಈಕ್ವಿಟಿಗಳಿಗೆ ಹೋಲಿಸಿದರೆ ಭಾರತದ ಈಕ್ವಿಟಿ ಬೆಳವಣಿಗೆ ಕಡಿಮೆ ಎನಿಸಿದರೂ ವಿಶ್ವದ ಹೆಚ್ಚಿನ ಮಾರುಕಟ್ಟೆಗಳಿಗಿಂತ ಹೆಚ್ಚು ಉಬ್ಬಿರುವುದು ವೇದ್ಯವಾಗಿದೆ. ಚೀನಾದ ಶಾಂಘೈ ಸೂಚ್ಯಂಕವು ಅತ್ಯಂತ ಸಾಧಾರಣ ಬೆಳವಣಿಗೆಯನ್ನು ಮಾತ್ರ ದಾಖಲಿಸಿದೆ.
ಇದನ್ನೂ ಓದಿ: ಲೈವ್ ವೆದರ್ನಿಂದ ಹಿಡಿದು ವಿವಿಧ ಅಲರ್ಟ್ಗಳವರೆಗೆ ಹಲವು ಫೀಚರ್ಗಳನ್ನು ಹೊಂದಿರುವ ಮೌಸಮ್ ಆ್ಯಪ್
ಕಳೆದ ಮಾರ್ಚ್ ತಿಂಗಳಿನಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ, ವಿಶೇಷವಾಗಿ ಸ್ಮಾಲ್-ಕ್ಯಾಪ್ (Smal-cap) ಮತ್ತು ಮಿಡ್-ಕ್ಯಾಪ್ ಷೇರುಗಳಲ್ಲಿ ಕಂಡುಬಂದಿದ್ದ ಮಾರ್ಕೆಟ್ ಕರೆಕ್ಷನ್ (Correction) ಅಥವಾ ಕುಸಿತವು ಈಗ ಸ್ಥಿರತೆಗೆ ಮರಳಿದೆ. ಕಂಪನಿಗಳ ಉತ್ತಮ ಆರ್ಥಿಕ ಗಳಿಕೆ (Corporate Earnings) ಮತ್ತು ದೇಶದ ಸದೃಢ ಆರ್ಥಿಕತೆಯು ಮಾರುಕಟ್ಟೆಯ ಮುಂದಿನ ಬೆಳವಣಿಗೆಗೆ ದಾರಿದೀಪವಾಗಿದೆ ಎಂದು ಕ್ವಾಂಟ್ ಮ್ಯೂಚುವಲ್ ಫಂಡ್‌ನ ವರದಿ ಎತ್ತಿ ತೋರಿಸಿದೆ.
ಇದನ್ನೂ ಓದಿ: ಎಐ ಹೆಸರಲ್ಲಿ ಲೇ ಆಫ್; ಉದ್ಯೋಗಿಗಳಿಗೆ ಆಶಾಕಿರಣವಾದ ಚೀನೀ ಕೋರ್ಟ್ ತೀರ್ಪು
ಭಾರತದ ಈ ಐತಿಹಾಸಿಕ ಆರ್ಥಿಕ ಬೆಳವಣಿಗೆಗೆ ಪ್ರಮುಖವಾಗಿ ಇಂಧನ (Energy), ಮೂಲಸೌಕರ್ಯ (Infrastructure), ಟೆಲಿಕಾಂ (Telecom) ಮತ್ತು ಫಾರ್ಮಾಸ್ಯುಟಿಕಲ್ಸ್ (Pharmaceuticals – ಔಷಧ ವಲಯ) ಕ್ಷೇತ್ರಗಳು ಭಾರಿ ಕೊಡುಗೆ ನೀಡುತ್ತಿವೆ. ಜಾಗತಿಕ ಮಟ್ಟದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು (Geopolitical Tensions) ಸ್ವಲ್ಪ ಮಟ್ಟಿಗೆ ತಿಳಿಯಾಗುತ್ತಿರುವುದು ಸಹ ಮಾರುಕಟ್ಟೆಯ ಹೂಡಿಕೆಗೆ ಪೂರಕ ವಾತಾವರಣ ಸೃಷ್ಟಿಸಿದೆ.
ಒಟ್ಟಾರೆಯಾಗಿ ತಿಳಿಸುವುದಾದರೆ, ಏಷ್ಯಾದಲ್ಲಿ ಆರ್ಥಿಕ ಚೇತರಿಕೆಯ ರೇಸ್‌ನಲ್ಲಿ ಚೀನಾವನ್ನು ಮಣಿಸಿ ಭಾರತವು ಜಾಗತಿಕ ಹೂಡಿಕೆದಾರರ ಪಾಲಿಗೆ ಅತ್ಯಂತ ಸುರಕ್ಷಿತ ಮತ್ತು ಲಾಭದಾಯಕ ತಾಣವಾಗಿ ಹೊರಹೊಮ್ಮುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ