648 ಬಿಲಿಯನ್ ಡಾಲರ್ ಗಡಿ ದಾಟಿದ ಫಾರೆಕ್ಸ್ ರಿಸರ್ವ್ಸ್; ಹೊಸ ದಾಖಲೆ ಮಟ್ಟದಲ್ಲಿ ನಿಧಿ
India forex reserves of 648.7 Billion dollar on May 17th: ಭಾರತದ ಫಾರೆಕ್ಸ್ ರಿಸರ್ವ್ಸ್ ಹೊಸ ಎತ್ತರಕ್ಕೆ ಏರಿದೆ. ಏಪ್ರಿಲ್ ತಿಂಗಳಲ್ಲಿ 648.56 ಬಿಲಿಯನ್ ಡಾಲರ್ನಷ್ಟು ಫಾರೆಕ್ಸ್ ರಿಸರ್ವ್ಸ್ ಮಟ್ಟ ತಲುಪಿ ದಾಖಲೆ ಬರೆದಿತ್ತು. ಈಗ ಮೇ 17ರಂದು ಅಂತ್ಯಗೊಂಡ ವಾರದಲ್ಲಿ ಆ ದಾಖಲೆಯನ್ನು ಮುರಿದು 648.7 ಬಿಲಿಯನ್ ಡಾಲರ್ ಮಟ್ಟಕ್ಕೆ ಏರಿದೆ. ಆರ್ಬಿಐ ಮೇ 24ರಂದು ಬಿಡುಗಡೆ ಮಾಡಿದ ವಾರದ ವರದಿ ಪ್ರಕಾರ ಒಂದು ವಾರದಲ್ಲಿ 4.54 ಬಿಲಿಯನ್ ಡಾಲರ್ನಷ್ಟು ನಿಧಿ ಹೆಚ್ಚಳವಾಗಿದೆ.
ನವದೆಹಲಿ, ಮೇ 26: ಭಾರತದ ಫಾರೀನ್ ಎಕ್ಸ್ಚೇಂಜ್ ರಿಸರ್ವ್ಸ್ (Forex reserves) ಮೊತ್ತ ಮೇ 17ರ ವಾರದಲ್ಲಿ 4.54 ಬಿಲಿಯನ್ ಡಾಲರ್ ಹೆಚ್ಚಾಗಿದೆ. ಇದರೊಂದಿಗೆ ಒಟ್ಟು ನಿದಿ 648.7 ಬಿಲಿಯನ್ ಡಾಲರ್ ಮಟ್ಟಕ್ಕೆ ಏರಿದೆ. ಇದು ಭಾರತದ ಇತಿಹಾಸದಲ್ಲೇ ಫಾರೆಕ್ಸ್ ರಿಸರ್ವ್ಸ್ ಏರಿದ ಗರಿಷ್ಠ ಎತ್ತರವಾಗಿದೆ. ಶುಕ್ರವಾರ (ಮೇ 24) ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ವರದಿ ಪ್ರಕಾರ ಸತತ ಎರಡು ವಾರ ಫಾರೆಕ್ಸ್ ರಿಸರ್ವ್ಸ್ ಹೆಚ್ಚಾಗಿದೆ. ಹಿಂದಿನ ವಾರದಲ್ಲಿ, ಅಂದರೆ ಮೇ 10ರಂದು ಅಂತ್ಯಗೊಂಡ ವಾರದಲ್ಲಿ ನಿಧಿಯಲ್ಲಿ 2.56 ಬಿಲಿಯನ್ ಡಾಲರ್ನಷ್ಟು ಹೆಚ್ಚಾಗಿತ್ತು. ಈಗ 644.15 ಬಿಲಿಯನ್ ಡಾಲರ್ ಇದ್ದ ಮೀಸಲು ನಿಧಿ 648.7 ಬಿಲಿಯನ್ ಡಾಲರ್ಗೆ ಏರಿಕೆ ಆಗಿದೆ. ಈ ಹಿಂದೆ ಏಪ್ರಿಲ್ 19ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ನಿಧಿ 648.56 ಬಿಲಿಯನ್ ಡಾಲರ್ ಮಟ್ಟಕ್ಕೆ ಹೋಗಿತ್ತು. ಅದು ಸಾರ್ವಕಾಲಿಕ ದಾಖಲೆಯಾಗಿತ್ತು. ಈಗ ಮೇ 17ರ ವಾರದಲ್ಲಿ ಆ ದಾಖಲೆಯನ್ನು ಮೀರಿ ಮೇಲೆ ಏರಿದೆ.
ಏರಿಕೆ ಆಗಿರುವ 4.54 ಬಿಲಿಯನ್ ಡಾಲರ್ ಫಾರೆಕ್ಸ್ ನಿಧಿಯಲ್ಲಿ ವಿದೇಶೀ ಕರೆನ್ಸಿ ಆಸ್ತಿಗಳ ಪಾಲೇ 3.361 ಬಿಲಿಯನ್ ಡಾಲರ್ನಷ್ಟು ಇದೆ. ಚಿನ್ನದ ಮೀಸಲು ನಿಧಿ 1.24 ಬಿಲಿಯನ್ ಡಾಲರ್ನಷ್ಟು ಹೆಚ್ಚಳವಾಗಿದೆ. ಎಸ್ಡಿಆರ್ಗಳು 113 ಮಿಲಿಯನ್ ಡಾಲರ್ ಏರಿಕೆ ಆಗಿದೆ. ಆದರೆ, ಐಎಂಎಫ್ನೊಂದಿಗೆ ಮೀಸಲು ಸ್ಥಿತಿ 168 ಮಿಲಿಯನ್ ಡಾಲರ್ನಷ್ಟು ಕಡಿಮೆ ಆಗಿದೆ.
ಇದನ್ನೂ ಓದಿ: ಕಂಪನಿ ಮಾರುವಂತೆ ಮಾಡಿದ್ರು… 2014ರ ಹಿಂದಿನ ದಿನಗಳನ್ನು ಸ್ಮರಿಸಿ ಮರುಗಿದ ಉದ್ಯಮಿ ಶಿವಶಂಕರನ್
ಮೇ 17ಕ್ಕೆ ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ
ಒಟ್ಟಾರೆ ಫಾರೆಕ್ಸ್ ರಿಸರ್ವ್ಸ್: 648.7 ಬಿಲಿಯನ್ ಡಾಲರ್
- ವಿದೇಶೀ ಕರೆನ್ಸಿ ಸಂಪತ್ತು: 569.01 ಬಿಲಿಯನ್ ಡಾಲರ್
- ಚಿನ್ನದ ಮೀಸಲು ನಿಧಿ: 57.19 ಬಿಲಿಯನ್ ಡಾಲರ್
- ಎಸ್ಡಿಆರ್ (ಸ್ಪೆಷಲ್ ಡ್ರಾಯಿಂಗ್ ರೈಟ್ಸ್): 18.16 ಬಿಲಿಯನ್ ಡಾಲರ್
- ಐಎಂಎಫ್ನೊಂದಿಗಿನ ಮೀಸಲು ಸ್ಥಾನ: 4.32 ಬಿಲಿಯನ್ ಡಾಲರ್
ಇಲ್ಲಿ ಫಾರೀನ್ ಕರೆನ್ಸಿ ಅಸೆಟ್ ಅಥವಾ ವಿದೇಶೀ ಕರೆನ್ಸಿ ಸಂಪತ್ತು ಎಂದರೆ ಡಾಲರೇತರ ಪ್ರಮುಖ ಕರೆನ್ಸಿಗಳ ಮೌಲ್ಯವಾಗಿರುತ್ತದೆ. ಇನ್ನು, ಐಎಂಎಫ್ನೊಂದಿಗಿನ ರಿಸರ್ವ್ ಪೊಸಿಶನ್ ಎಂದರೆ ರುಪಾಯಿ ಕರೆನ್ಸಿಯನ್ನು ಅದು ಎಷ್ಟು ಹೊಂದಿದೆ ಎನ್ನುವುದನ್ನು ಸೂಚಿಸುತ್ತದೆ.
ಇದನ್ನೂ ಓದಿ: ಮೋದಿ ಮಾಡಿದಷ್ಟು ಬದಲಾವಣೆ ಯಾವ ವಿಶ್ವನಾಯಕನಿಂದಲೂ ಆಗಿಲ್ಲ: ಕ್ರಿಸ್ಟೋಫರ್ ವುಡ್
ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಹೊಂದಿರುವ ದೇಶಗಳು
- ಚೀನಾ: 3,225 ಬಿಲಿಯನ್ ಡಾಲರ್
- ಜಪಾನ್: 1,290 ಬಿಲಿಯನ್ ಡಾಲರ್
- ಸ್ವಿಟ್ಜರ್ಲ್ಯಾಂಡ್: 868 ಬಿಲಿಯನ್ ಡಾಲರ್
- ಭಾರತ: 648 ಬಿಲಿಯನ್ ಡಾಲರ್
- ರಷ್ಯಾ: 603 ಬಿಲಿಯನ್ ಡಾಲರ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ